ನಮ್ಮ ಆಸ್ತಿಗೆ ನಾವೇ ಲಂಚ‌ ಕೊಡಬೇಕಾಗಿದೆ: ಮೇಲ್ಮನೆಯಲ್ಲಿ ಕಾಂಗ್ರೆಸ್ ಮುಖ್ಯ ಸಚೇತಕ ನಾರಾಯಣಸ್ವಾಮಿ

ಡಿಸಿ ಎಸಿ ಕಚೇರಿಗಳಲ್ಲಿ ಅಧಿಕಾರಿಗಳು ಮಾಡಿದ ತಪ್ಪಿಗೆ ನಾವು ಮಾಡದ ತಪ್ಪಿಗೆ ನಮ್ಮ ಆಸ್ತಿಪತ್ರಕ್ಕೆ ದಾಖಲೆಗಳಿಗೆ ಲಂಚ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೇಲ್ಮನೆ ಕಾಂಗ್ರೆಸ್ ಮುಖ್ಯ ಸಚೇತಕ ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

Published: 18th March 2020 01:53 PM  |   Last Updated: 18th March 2020 01:53 PM   |  A+A-


Vidhana soudha

ಸಂಗ್ರಹ ಚಿತ್ರ

Posted By : Srinivasamurthy VN
Source : UNI

ಬೆಂಗಳೂರು: ಡಿಸಿ ಎಸಿ ಕಚೇರಿಗಳಲ್ಲಿ ಅಧಿಕಾರಿಗಳು ಮಾಡಿದ ತಪ್ಪಿಗೆ ನಾವು ಮಾಡದ ತಪ್ಪಿಗೆ ನಮ್ಮ ಆಸ್ತಿಪತ್ರಕ್ಕೆ ದಾಖಲೆಗಳಿಗೆ ಲಂಚ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೇಲ್ಮನೆ ಕಾಂಗ್ರೆಸ್ ಮುಖ್ಯ ಸಚೇತಕ ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಮೇಲ್ಮನೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚೆಗೆ ನಿವೃತ್ತರಾದ ಸುಪ್ರೀಂಕೋರ್ಟಿನ ನ್ಯಾಯಾಧೀಶರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಾಗಿದೆ. ಅವರು ನಿವೃತ್ತಿಯಾಗುವ ಮುನ್ನ ನೀಡಿದ ತೀರ್ಪುಗಳಿಗಾಗಿ ಅವರಿಗೆ ರಾಜ್ಯಸಭಾ ಸ್ಥಾನ ನೀಡಲಾಗಿದೆ ಎಂದು ಆರೋಪಿಸಿದರು.

ಮೊದಲು ಎಲೆಅಡಿಕೆ ಕೊಟ್ಟು ಮತ ಹಾಕಿ ಎನ್ನುವುದಿತ್ತು. ಈಗ ಮತದಾರರೇ ಎಷ್ಟು ಕೊಡುತ್ತೀರಾ ಎಂದು ಕೇಳುವ ಸ್ಥಿತಿಗೆ ನಾವು ತಲುಪಿದ್ದೇವೆ. ಇತ್ತೀಚಿಗಿನ ಉಪಚುನಾವಣೆಯಲ್ಲಿ ಒಂದೊಂದು ಕ್ಷೇತ್ರದಲ್ಲಿ ನೂರಾರು ಕೋಟಿ ರೂ.ಖರ್ಚು ಮಾಡಲಾಗಿದೆ. ಪ್ರಸ್ತುತ ಮಧ್ಯಪ್ರದೇಶದ ಶಾಸಕರನ್ನು ಹೈಜಾಕ್ ಮಾಡಿ ಹೊಟೇಲ್ ‌ನಲ್ಲಿ ಬಂಧಿಸಿಡಲಾಗಿದೆ ಎಂದಾಗ ಇದಕ್ಕೆ ಬಿಜೆಪಿಯ ಮಹಾಂತೇಶ ಕವಟಗಿಮಠ ಆಕ್ಷೇಪ ವ್ಯಕ್ತಪಡಿಸಿ, ಸಂವಿಧಾನದ ಬಗ್ಗೆ ಮಾತನಾಡುವುದನ್ನು ಬಿಟ್ಟು ರಾಜಕಾರಣ ಮಾಡುತ್ತಿದ್ದಾರೆ ಎಂದರು. 

ಇದಕ್ಕೆ ನಾರಾಯಣಸ್ವಾಮಿ ಇದು ರಾಜಕಾರಣವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು. ಸಿವಿಲ್ ನ್ಯಾಯಾಲಯದಲ್ಲಿ ಒತ್ತಡ ಶಿಫಾರಸು ಮೇಲೆ ವಿರುದ್ಧ ತೀರ್ಪು ಬಂದಾಗ ಹೈಕೋರ್ಟಿನಲ್ಲಿ ನಮ್ಮ ಪರವಾಗಿ ತೀರ್ಪು ಬಂದಾಗ ಕೆಳನ್ಯಾಯಾಲಯದ ನ್ಯಾಯಾಧೀಶರ ತಪ್ಪಿಗೆ ಶಿಕ್ಷೆ ಏನು? ಆ ನ್ಯಾಯಾಧೀಶರನ್ನು ಕೇಳುವವರು ಯಾರು? ಸದನದಲ್ಲಿ ನ್ಯಾಯಾಲಯ ಮತ್ತು ನ್ಯಾಯಾಧೀಶರ ಬಗ್ಗೆ ಮಾತನಾಡಬೇಕು. ನ್ಯಾಯಾಧೀಶರ ಬಗ್ಗೆ ಮಾತನಾಡದಂತಹ ಸ್ಥಿತಿ ಏಕೆ ಎಂದು ನಾರಾಯಣಸ್ವಾಮಿ ಪ್ರಶ್ನಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಗೋವಿಂದ್ ಕಾರಜೋಳ, ಉಳುವವನೆ ಭೂಮಿಯ ಒಡೆಯ ದೇಶಾದ್ಯಂತ ಜಾರಿಯಾಯಿತು‌. ಆದರೆ ಕರ್ನಾಟಕದಲ್ಲಿ ಮಾತ್ರ ಇದು ಪರಿಣಾಮಕಾರಿಯಾಗಿ ಜಾರಿಯಾಯಿತೇ ವಿನಃ ದೇಶಾದ್ಯಂತ ಏಕೆ ಆಗಿಲ್ಲ ಎಂದು ಪ್ರಶ್ನಿಸಿದರು.  ಆಗ ನಾರಾಯಣಸ್ವಾಮಿ ಪರವಾಗಿ ಹೆಚ್‌.ಎಂ.ರೇವಣ್ಣ ಉತ್ತರ ನೀಡಿ, ಕರ್ನಾಟಕದಲ್ಲಿ ಪರಿಣಾಮಕಾರಿಯಾಗಿ ಈ ಕಾಯಿದೆ ಜಾರಿಯಾಗಲು ದೇವರಾಜ ಅರಸು ಅವರು ಕಾರಣರು ಎಂದಾಗ ಗೋವಿಂದ ಕಾರಜೋಳ ಸಹ ದೇವರಾಜ ಅರಸು ಅವರನ್ನು ಅವರ ಸಾಧನೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಮುಂದುವರೆದು ಮಾತನಾಡಿದ ಕಾಂಗ್ರೆಸ್‌ನ ನಾರಾಯಣಸ್ವಾಮಿ, ಅಂತರಜಾತಿ ವಿವಾಹಕ್ಕೆ ಈಗಲೂ ಅಡ್ಡಿಪಡಿಸಲಾಗುತ್ತಿದೆ ಎಂದಾಗ ಮಧ್ಯಪ್ರವೇಶಿಸಿದ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ನೀವು ಹಣವಂತರ ಬಳಿ ಹೋಗಬೇಡಿ. ನಮ್ಮ ಸರ್ಕಾರದಿಂದ ಹಣವಿಲ್ಲದೇ ಸಪ್ತಪದಿ ದೇವಸ್ಥಾನದ ಸರಳ ಮದುವೆ ಮಾಡಿ ಎಂದರು. ಆಗ ಕಾಂಗ್ರೆಸಿನ ಸಿ‌.ಎಂ. ಇಬ್ರಾಹಿಂ ಮಾತನಾಡಿ, ಸಲಹೆಗಳನ್ನು ಕೊಡಿ ಎಂದರು. ಇದಕ್ಕೆ ನಮ್ಮ ನಮ್ಮಲ್ಲಿ ಪರಿವರ್ತನೆಯಾಗಬೇಕು ಇದೇ ಸಲಹೆ ಎಂದು ನಾರಾಯಣಸ್ವಾಮಿ ಉತ್ತರಿಸಿದರು.

Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp