ಕೊರೋನಾ ವೈರಸ್: ಆತಂಕ ಪಡುವ ಅಗತ್ಯವಿಲ್ಲ, ಆದರೆ ಮುಂಜಾಗ್ರತೆ ಕಡ್ಡಾಯ: ಸಚಿವ ಸುಧಾಕರ್

ಕೋವಿಡ್​​ 19 ಸೋಂಕು ಕಾಣಿಸಿಕೊಂಡ ಕೂಡಲೇ ರೋಗಿ ಸಾಯುವುದಿಲ್ಲ, ಹಾಗಾಗಿ ಯಾರಿಗೂ ಆತಂಕ ಬೇಡ. ಆದರೆ ಮುಂಜಾಗ್ರತೆ ಅತ್ಯಗತ್ಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್​​​ ಹೇಳಿದ್ದಾರೆ. 
ಸಚಿವ ಸುಧಾಕರ್
ಸಚಿವ ಸುಧಾಕರ್

ಬೆಂಗಳೂರು: ಕೋವಿಡ್​​ 19 ಸೋಂಕು ಕಾಣಿಸಿಕೊಂಡ ಕೂಡಲೇ ರೋಗಿ ಸಾಯುವುದಿಲ್ಲ, ಹಾಗಾಗಿ ಯಾರಿಗೂ ಆತಂಕ ಬೇಡ. ಆದರೆ ಮುಂಜಾಗ್ರತೆ ಅತ್ಯಗತ್ಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್​​​ ಹೇಳಿದ್ದಾರೆ. 

ಇಂದು ವಿಧಾನಸಭೆಯಲ್ಲಿ ಮಾತಾಡಿದ ಸಚಿವ ಡಾ. ಸುಧಾಕರ್, 'ಕೊರೋನಾಗೆ ಯಾರು ಹೆದರಬೇಕಿಲ್ಲ, ಆದರೆ ಮುನ್ನೆಚ್ಚರಿಕೆ ಅಗತ್ಯ ಇದೆ. ಇಲ್ಲಿಯವರೆಗೂ ಒಟ್ಟು 1,17,306 ಪ್ರಯಾಣಿಕರ ತಪಾಸಣೆಯಾಗಿದ್ದು, ವಿಶ್ವದಲ್ಲಿ 80,881 ಕೋವಿಡ್​ ಪ್ರಕರಣ ದಾಖಲಾಗಿವೆ. ಇದರಲ್ಲಿ 68 ಸಾವಿರ ಜನರು ಗುಣಮುಖರಾಗಿದ್ದು, ಕೇವಲ 3 ಸಾವಿರ ಜನ ಮಾತ್ರ ಸಾವನ್ನಪ್ಪಿದ್ದಾರೆ. ಸಾವಿನ ಪ್ರಮಾಣ ಶೇ.0.5 - 3.4 ಮಾತ್ರ ಇದೆ. ಹೀಗಾಗಿ ಜನ ಆತಂಕಪಡಬೇಕಿಲ್ಲ. ಸೋಂಕು ಕಾಣಿಸಿಕೊಂಡ ತಕ್ಷಣ ಯಾರು ಸಾಯುವುದಿಲ್ಲ. ಆದರೆ ಸೂಕ್ತ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. 

'ರಾಜ್ಯದ 14 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ 11 ಜನ ವಿದೇಶದಿಂದ ಬಂದವರು. ಇನ್ನು ಮೂವರು ಸಂಪರ್ಕದಿಂದ ಸೋಂಕಿತರಾಗಿದ್ದಾರೆ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಮಾದರಿಯಾಗುತ್ತಿದ್ದೇವೆ. ಬೇರೆ ರಾಜ್ಯಗಳು ನಾವು ಕೈಗೊಂಡ ಕ್ರಮಗಳನ್ನು ಅನುಸರಿಸುತ್ತಿವೆ. ನಮ್ಮ ಜನತೆಗೆ ನಾವು ಧೈರ್ಯ ತುಂಬಬೇಕಿದೆ. ಕೊರೊನಾ ಸಾವಿನ ಪ್ರಮಾಣ ಕಡಿಮೆ ಇದೆ. ಯಾರು ಕೂಡ ಆತಂಕಕ್ಕೆ ಒಳಗಾಗಬಾರದು. 42, 500 ಮಂದಿ ವಿದೇಶಗಳಿಂದ ಬೆಂಗಳೂರಿಗೆ ಬಂದಿದ್ದಾರೆ. ಸಾಮಾಜಿಕ ಅಂತರವನ್ನ ನಾವು ಕಾಪಾಡಿಕೊಳ್ಳಬೇಕಿದೆ. 

ಇಟಲಿಯಲ್ಲಿ 2158 ಮಂದಿ ಸಾವನ್ನಪ್ಪಿದ್ದಾರೆ, ಇರಾನ್​ನಲ್ಲಿ ಸಾವಿರ ಮಂದಿ ಮೃತಪಟ್ಟಿದ್ದಾರೆ. ಇಟಲಿ, ಇರಾನ್, ಸ್ಪೇನ್​​ನಲ್ಲಿ ಕೊರೊನಾ ಸಾವಿನ ಸಂಖ್ಯೆ ಹೆಚ್ಚಿದೆ. ಆದರೆ ಚೀನಾ, ಅಮೆರಿಕದಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ. ದೇಶದಲ್ಲಿ ಒಟ್ಟು 154 ಸೋಂಕು ಜನರಿಗೆ ಬಂದಿದೆ. ಮಹಾರಾಷ್ಟ್ರದಲ್ಲಿ 33 ಪ್ರಕರಣಗಳು ಪತ್ತೆಯಾಗಿವೆ. ಎರಡನೇ ಸ್ಥಾನದಲ್ಲಿ ಕೇರಳ, ಮೂರನೇ ಸ್ಥಾನದಲ್ಲಿ ಉತ್ತರಪ್ರದೇಶ, ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ‌ ಇದೆ ಎಂದು ಹೇಳಿದರು. ಕೊರೊನಾ ಬಗ್ಗೆ ಮಾಹಿತಿ ನೀಡಲು 104 ಸಂಖ್ಯೆಯ ಸಹಾಯವಾಣಿ ಪ್ರಾರಂಭಿಸಲಾಗಿದೆ. ಹೌಸ್ ಕ್ವಾರಂಟೈನ್​​ನಲ್ಲಿ ಇರುವವರ ಜತೆಗೂ ನಿರಂತರ ಫೋನ್ ಸಂಪರ್ಕದಲ್ಲಿದ್ದು ಟ್ರಾಕಿಂಗ್ ಮಾಡಲಾಗುತ್ತದೆ. ಮುಂದಿನ ಮೂರು ವಾರಗಳ ಕಾಲ ಕೊರೋನಾ ನಿಯಂತ್ರಣ ಸಾಧ್ಯವಾದರೆ, ನಮ್ಮ ರಾಜ್ಯದ ಜನರನ್ನು ಅತ್ಯಂತ ದೊಡ್ಡ ಆಪತ್ತಿನಿಂದ ಪಾರು ಮಾಡಿದಂತಾಗುತ್ತದೆ ಎಂದು ತಿಳಿಸಿದರು.

ಪ್ರೊಟೊಕಾಲ್ ಮಾರ್ಗಸೂಚಿ ಅನ್ವಯ ಮಾತ್ರ ನಾವು ತಪಾಸಣೆ ಮಾಡುತ್ತಿದ್ದೇವೆ. ಹೀಗಾಗಿ ನಾವು ಸುಮಾರು ಸಾವಿರ ಮಂದಿಯನ್ನ ಮಾತ್ರ ತಪಾಸಣೆಗೆ ಒಳಪಡಿಸಿದ್ದೇವೆ. ಅವರಲ್ಲಿ 14 ಮಂದಿಗೆ ಕೊರೊನಾ ಕಾಣಿಸಿಕೊಂಡಿದೆ. ಅವರಲ್ಲಿ 11 ಮಂದಿ ವಿದೇಶಗಳಿಂದ ಬಂದವರಾಗಿದ್ದಾರೆ. ಈ 14 ಮಂದಿ ಸೋಂಕಿತರಿಂದ  ಬೇರೆಯವರಿಗೆ ಹರಡಬಾರದು ಅನ್ನೋದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಕರ್ನಾಟಕದಲ್ಲಿ ಒಟ್ಟು 5 ಲ್ಯಾಬ್​ ಇವೆ. ಇಡೀ ದೇಶದಲ್ಲಿ ಒಟ್ಟು 54 ಲ್ಯಾಬ್​ಗಳಿವೆ. ರಾಜ್ಯದ ಪ್ರತೀ ಜಿಲ್ಲೆಗಳಲ್ಲೂ ತಪಾಸಣೆ ಮಾಡುವ ಲ್ಯಾಬ್​ಗಳನ್ನ ತೆರೆಯಲಾಗುತ್ತದೆ. ಇವರೆಲ್ಲರಿಗೂ ನೈತಿಕ ಧೈರ್ಯ ನೀಡುವ ಕೆಲಸವನ್ನ ನಮ್ಮ ಸರ್ಕಾರ ಮಾಡಲಿದೆ. ICMR ಒಂದಿಷ್ಟು ಗೈಡ್​ಲೈನ್​ ನೀಡಿದೆ, ಜೊತೆಗೆ ನಾಲ್ಕು ಸ್ಟೇಜ್​ಗಳನ್ನ ನೀಡಿದೆ. ಮೊದಲ ಸ್ಟೇಜ್​ ಪ್ರೈಮರಿ, ಎರಡನೇಯದು ಒಬ್ಬ ಮನುಷ್ಯರಿಂದ ಮತ್ತೊಬ್ಬರಿಗೆ ಹರಡಿದರೆ, ಮೂರನೇಯದು ಕಮ್ಯೂನಿಟಿಯಿಂದ (ಕುಟುಂಬದಿಂದ) ಹರಡಿದಾಗ ಇಡೀ ದೇಶಕ್ಕೆ, ರಾಷ್ಟ್ರಕ್ಕೆ ಹೋದಾಗ ಅದು ನಾಲ್ಕನೇಯ ಸ್ಟೇಜ್​​ ಆಗಿದೆ. ನಮ್ಮ ರಾಜ್ಯ ಎರಡನೇ ಸ್ಟೇಜ್​​ನಲ್ಲಿದೆ. 

ಕೊರೊನಾ ಸೋಂಕು ಮುಕ್ತಮಾಡಲು ನಾವೆಲ್ಲರೂ ಪಕ್ಷಾತೀತವಾಗಿ, ಜ್ಯಾತ್ಯಾತೀತವಾಗಿ ಹೋರಾಟ ಮಾಡೋಣ. ಕೊರೊನಾ ಬಗ್ಗೆ ಜನರು ಕೂಡ ಜಾಗೃತಿ ನೀಡುತ್ತಿದ್ದಾರೆ. ಮಾಧ್ಯಮಗಳೂ ಸಹ ಸಹಕಾರ ನೀಡುತ್ತಿವೆ. ಆರೋಗ್ಯ ಇಲಾಖೆಯ ನೌಕರರು, ಎನ್​​ಜಿಒಗಳೂ ಕೂಡ ಕೈಜೋಡಿಸಿದ್ದಾರೆ. ಇವರೆಲ್ಲರಿಗೂ ಧನ್ಯವಾದಗಳು.. ಎಂದು ಸುಧಾಕರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com