ಕೊರೋನಾ ಎಫೆಕ್ಟ್: ಕರ್ನಾಟಕ ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿಕೆ?

ರಾಜ್ಯದಲ್ಲಿ ಬರುವ ಮೇ ನಲ್ಲಿ ನಡೆಯಬೇಕಾಗಿರುವ ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಲು ರಾಜ್ಯ ಚುನಾವಣಾ ಆಯೋಗ ಗಂಭೀರ ಚಿಂತನೆ ನಡೆಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ರಾಜ್ಯದಲ್ಲಿ ಬರುವ ಮೇ ನಲ್ಲಿ ನಡೆಯಬೇಕಾಗಿರುವ ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಲು ರಾಜ್ಯ ಚುನಾವಣಾ ಆಯೋಗ ಗಂಭೀರ ಚಿಂತನೆ ನಡೆಸಿದೆ. 

ರಾಜ್ಯದಲ್ಲಿ ಕೊರೋನಾ ವೈರಸ್ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಸಧ್ಯಕ್ಕೆ ಚುನಾವಣೆ ಮುಂದೂಡುವುದು ಸೂಕ್ತ ಎಂಬ ನಿಲುವಿಗೆ ಆಯೋಗ ಬಂದಿದೆ. 

ಮಹಾರಾಷ್ಟ್ರದಲ್ಲಿ ನಡೆಯಬೇಕಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗ ಮುಂದೂಡಿದ್ದು, ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಚುನಾವಣೆ ಮುಂದಕ್ಕೆ ಹೋಗುವ ಸಂಭವವಿದೆ.

ರಾಜ್ಯದ ಆರು ಸಾವಿರ ಗ್ರಾಮ ಪಂಚಾಯತ್ ಗಳ ಸಾರ್ವತ್ರಿಕ ಚುನಾವಣೆಯನ್ನು ಮೇ ನಲ್ಲಿ ನಡೆಸಲು ರಾಜ್ಯ ಚುನಾವಣಾ ಆಯೋಗ ಪೂರ್ವ ಸಿದ್ಧತೆ ನಡೆಸುತ್ತಿದೆ. ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆಯೋಗ ಪತ್ರ ಬರೆದು ಸಿದ್ಧತೆಯಲ್ಲಿ ತೊಡಗುವಂತೆ ಸೂಚಿಸಿತ್ತು. 

ರಾಜ್ಯದ ಗ್ರಾಮ ಪಂಚಾಯತ್ ಗಳ ಅವಧಿ 2020 ರ ಜೂನ್-ಜುಲೈನಲ್ಲಿ ಮುಕ್ತಾಯಗೊಳ್ಳಲಿದೆ. ಗ್ರಾಮ ಪಂಚಾಯತ್ ಗಳ ಕ್ಷೇತ್ರ ಪುನರ್ ವಿಂಗಡಣೆ, ಕ್ಷೇತ್ರವಾರು ಮೀಸಲಾತಿ ಮತ್ತಿತರ ಪ್ರಕ್ರಿಯೆಯಲ್ಲಿ ಆಯೋಗ ತೊಡಗಿಕೊಂಡಿತ್ತು. 

ಇದೀಗ ಚುನಾವಣಾ ಪ್ರಕ್ರಿಯೆಗೆ ಕೊರೋನಾ ವೈರಸ್ ಅಡ್ಡಿಯಾಗಿದ್ದು, ಸಧ್ಯಕ್ಕೆ ಚುನಾವಣೆ ಮುಂದೂಡುವುದೇ ಸೂಕ್ತ ಎಂಬ ನಿಲುವಿಗೆ ಆಯೋಗ ಬಂದಿದೆ. 

ಜೂನ್ ಮತ್ತು ಜುಲೈನಲ್ಲಿ ಮುಂಗಾರು ಆರಂಭವಾಗಲಿದ್ದು, ಕೃಷಿ ಚಟುವಟಿಕೆ ನಡೆಯಲಿರುವ ಹಿನ್ನೆಲೆಯಲ್ಲಿ ಸ್ಥಳೀಯ ಮಟ್ಟವಾದ ಗ್ರಾಮ ಪಂಚಾಯತ್ ಚುನಾವಣೆ ನಡೆಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯವಿದೆ. ಹೀಗಾಗಿ ಆಗಸ್ಟ್ ನಂತರ ಚುನಾವಣೆ ನಡೆಯುವ ಸಂಭವವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com