ಕೊರೋನಾ ಸೋಂಕಿತ ವೈದ್ಯ ಸಾವು ವದಂತಿ: ಸ್ಪಷ್ಟನೆ ನೀಡಿದ ಕಲಬುರಗಿ ವೈದ್ಯ; ಸಂಪರ್ಕದಲ್ಲಿದ್ದವರ ಮೇಲೆ ತೀವ್ರ ನಿಗಾ!

ಕಲಬುರಗಿಯಲ್ಲಿ ಕೊರೋನಾದಿಂದ ಮೃತ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಸಾವನ್ನಪ್ಪಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿಯೊಂದು ಹರಿದಾಡುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಲಬುರಗಿ: ಕಲಬುರಗಿಯಲ್ಲಿ ಕೊರೋನಾದಿಂದ ಮೃತ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಸಾವನ್ನಪ್ಪಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿಯೊಂದು ಹರಿದಾಡುತ್ತಿದೆ. 

ಈ ಕುರಿತು ನಗರ ಹೊರವಲಯದ ಇಎಸ್‌‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೈದ್ಯ ಪ್ರತಿಕ್ರಿಯಿಸಿ, ನನಗೆ ಕೊರೊನಾ ಕಾಯಿಲೆ ಬಂದಿರಬಹುದು. ಆದರೆ, ನಾನು ಸಾವನ್ನಪ್ಪಿದ್ದೀನಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬರುವುದೆಲ್ಲ ಸುಳ್ಳು ಸುದ್ದಿ. ನಾನು ಜೀವಂತವಾಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೊರೊನಾ ಕಾಯಿಲೆ ಬಂದ ತಕ್ಷಣ ಯಾರು ಸಾವನ್ನಪ್ಪುವುದಿಲ್ಲ. ಚೀನಾದಲ್ಲಿ ಲಕ್ಷಾಂತರ ಜನರಿಗೆ ಕೊರೊನಾ ವೈರಸ್ ಬಂದರೂ ಶೇ. 4 ಪ್ರತಿಶತ ಜನ ಮಾತ್ರ ಸಾವನ್ನಪ್ಪಿದ್ದಾರೆ. ಜಿಲ್ಲಾಡಳಿತ ಕೂಡ ಸಾಮಾಜಿಕ ಜಾಲಾತಾಣದಲ್ಲಿ ವದಂತಿ ಹರಡಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದರು.

ಸುಳ್ಳು ಸುದ್ದಿ ಪ್ರಸಾರ ಮಾಡಿ ಜನರಲ್ಲಿ ಭಯ, ಅಶಾಂತಿಗೆ ಕಾರಣರಾದ ಡೈಲಿ ಹಂಟ್ ಉರ್ದು ನ್ಯೂಸ್ ಸಾಮಾಜಿಕ ಜಾಲತಾಣದ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್ ಅವರು ನಗರದ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಸೋಂಕಿತ ವೈದ್ಯನ ಸಂಪರ್ಕದಲ್ಲಿದ್ದವರ ಮೇಲೆ ತೀವ್ರ ನಿಗಾ

ಇನ್ನು ಕಲಬುರಗಿಯಲ್ಲಿ ಕೊರೋನಾ ಸೋಂಕಿಗೆ ಸಾವನ್ನಪ್ಪಿದ ವೃದ್ಧರೊಬ್ಬರಿಗೆ ಚಿಕಿತ್ಸೆ ನೀಡಿದ್ದ ವೈದ್ಯರೊಬ್ಬರಿಗೂ ಕೊರೊನಾ ವೈರಸ್ ತಗುಲಿರುವ ಹಿನ್ನೆಲೆಯಲ್ಲಿ ಅವರ ಮನೆಯ 7 ಮಂದಿ ಸದಸ್ಯರಿಗೆ ಹೋಮ್‌ ಐಸೋಲೇಷನ್ ನಡೆಸಲಾಗುತ್ತಿದೆ. ಅಲ್ಲದೇ, ವೈದ್ಯನ ಜೊತೆ ನೇರ ಸಂಪರ್ಕದಲ್ಲಿದ್ದ 50 ಜನರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ಇಟ್ಟಿದ್ದು, ಮುಂದಿನ‌ 14 ದಿನಗಳ ಕಾಲ ಅವರು ಮನೆಯಿಂದ ಹೊರ ಬರದಂತೆ ಹದ್ದಿನ ಕಣ್ಣಿಟ್ಟಿದೆ‌. ವೈದ್ಯನ ಜೊತೆ ಸಂಪರ್ಕದಲ್ಲಿದ್ದ ಮತ್ತಷ್ಟು ಜನರ ಹುಡುಕಾಟಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಸದ್ಯ ಕಲಬುರಗಿ ಜಿಲ್ಲೆಯ 450 ಜನರನ್ನು ಹೋಮ್ ಐಸೋಲೇಷನ್ ನಲ್ಲಿ ಇಡಲಾಗಿದೆ. ಇನ್ನು ವೈದ್ಯನ ಮನೆ ಸುತ್ತಮುತ್ತ ಪೊಲೀಸ್ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಮನೆ ಸುತ್ತಮುತ್ತ ಯಾರು ಸುಳಿದಾಡದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.

ಅಲ್ಲದೇ, ಕೊರೊನಾ ವೈರಸ್‌ನಿಂದ ಮೃತಪಟ್ಟ ವೃದ್ಧನ ಮಗಳ ಮನೆಯ ಸುತ್ತಮುತ್ತ ಬ್ಯಾರಿಕೇಡ್ ಅಳವಡಿಸಿ ನಿಗಾವಹಿಸಲಾಗಿದೆ. ವೈದ್ಯನ ಮಕ್ಕಳು ಯಾರ ಜೊತೆಗೆ ಸಂಪರ್ಕ ಹೊಂದಿದ್ದರು ಎಂಬುದರ ಕುರಿತು ಜಿಲ್ಲಾಡಳಿತ ಮಾಹಿತಿ ಕಲೆ ಹಾಕುತ್ತಿದ್ದು, ಅವರ ಮಕ್ಕಳು ನಗರದ ವಿವಿಧೆಡೆ ಸಂಚರಿಸಿ ಸ್ನೇಹಿತರನ್ನು ಭೇಟಿಯಾಗಿರುವ ಮಾಹಿತಿ ಲಭ್ಯವಾಗಿದೆ. ವೈದ್ಯರ ಮಕ್ಕಳನ್ನು ಮನೆಯಲ್ಲಿ ನಿಗಾ ವಹಿಸಿ ಅವರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ವೈದ್ಯರ ಮನೆ, ವೃದ್ಧನ ಮಗಳ ಮನೆ ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಲಾಗಿದ್ದು, ಅವರ ಮನೆಯ ಸುತ್ತಮುತ್ತಲಿನ ಐದು ಕಿ.ಮೀ.ವರೆಗೆ ಯಾರೂ ಸಂಚರಿಸುವಂತಿಲ್ಲ. ಅಲ್ಲದೇ, ಇಬ್ಬರ ಮನೆಯ ಓಣಿಯ ಜನರು ಯಾರು ಕೂಡ ಹೊರಬಾರದು ಎಂದು ಸೂಚಿಸಲಾಗಿದ್ದು, ಓಣಿಯಲ್ಲೇ ಆರೋಗ್ಯ ಅಧಿಕಾರಿಗಳನ್ನು ನೇಮಕ ಮಾಡಿ ಅಲ್ಲೇ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಶರತ್ ಬಿ ಆರೋಗ್ಯ ಇಲಾಖೆಗೆ ಖಡಕ್ ಸೂಚನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com