ಕೊರೋನಾ ವೈರಸ್ ಎಫೆಕ್ಟ್: ವುಹಾನ್ ರೀತಿ ಕಲಬುರಗಿಗೂ ದಿಗ್ಭಂಧನ!

ಮಹಾಮಾರಿ ಕೊರೋನಾಗೆ ದೇಶದಲ್ಲೇ ಮೊದಲ ಸಾವು ಕಂಡಿದ್ದ ಕಲಬುರಗಿಯಲ್ಲಿ ಈಗ ಮತ್ತೊಬ್ಬ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ ಘೋಷಿಸಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಲಬುರಗಿ: ಮಹಾಮಾರಿ ಕೊರೋನಾಗೆ ದೇಶದಲ್ಲೇ ಮೊದಲ ಸಾವು ಕಂಡಿದ್ದ ಕಲಬುರಗಿಯಲ್ಲಿ ಈಗ ಮತ್ತೊಬ್ಬ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ ಘೋಷಿಸಲಾಗಿದೆ. 

ಈಗಾಗಲೇ ಕೊರೋನಾದಿಂದ ಮೃತ ವೃದ್ಧನ ಪುತ್ರಿಗೆ ಸೋಂಕು ತಗುಲಿದ್ದು, ಇದೀಗ ವೃದ್ದನಿಗೆ ಆರಂಭದಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯರ ವೈದ್ಯಕೀಯ ವರದಿಯೂ ಪಾಸಿಟಿವ್ ಎಂದು ಬಂದಿರುವ ಹಿನ್ನೆಲಯಲ್ಲಿ ಜಿಲ್ಲಾಡಳಿತ ಕಲಬುರಗಿಯಾದ್ಯಂತ ನಿಲ್ಬಂಧಗಳನ್ನು ಹೇರಲಾಗಿದೆ. 

ಸೋಂಕಿತ ವೈದ್ಯ ವಾಸಿಸುವ ನಿವಾಸದ ಸುತ್ತ 300 ಮೀ ವರೆಗೂ ಜನ ಸಂಚಾರ ನಿಷೇಧಿಸಿದೆ. ಚೀನಾದಲ್ಲಿ ಮೊದಲ ಬಾರಿಗೆ ಸೋಂಕು ಪತ್ತೆಯಾದಾಗ ವುಹಾನ್ ನಲ್ಲಿ ನಿರ್ಬಂಧ ಹೇರಲಾಗಿತ್ತು. ಇದೀಗ ಇದೇ ಮಾದರಿಯಲ್ಲಿ ನಿಯಂತ್ರಣ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. 

ಕೊರೋನಾದಿಂದ ಮಾ.10ರಂದು ಸಾವಿಗೀಡಾದ ಕಲಬುರಗಿಯ 76 ವರ್ಷದ ವ್ಯಕ್ತಿಗೆ ಕೆಮ್ಮು-ಜ್ವರ ಬಂದಾಗ ಆರಂಭದಲ್ಲಿ ಅವರ ಮನೆಗೆ ತೆರಳಿ ಚಿಕಿತ್ಸೆ ನೀಡಿದ್ದ 65 ವರ್ಷದ ಕುಟುಂಬ ವೈದ್ಯರಿಗೂ ಇದೀಗ ಸೋಂಕು ತಗುಲಿದೆ. ಇದಕ್ಕೂ ಮೊದಲು ಮೃತ ವ್ಯಕ್ತಿಯ ಪುತ್ರಿಗೂ ಕೊರೋನಾ ವೈರಸ್ ತಗುಲಿರುವುದು ಖಚಿತವಾಗಿತ್ತು. ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಮೂರಕ್ಕೇರಿದೆ. 

ಸೋಂಕು ಪತ್ತೆಯಾಗಿರುವ ವೈದ್ಯರು ಸರ್ಕಾರದ ಸೇವೆಯಲ್ಲಿದ್ದರು. ನಿವೃತ್ತಿ ನಂತರ ಖಾಸಗಿಯಾಗಿ ವೈದ್ಯ ವೃತ್ತಿ ಆರಂಭಿಸಿದ್ದರು. ಇವರಿಗೆ ಸೋಂಕು ಕಂಡಿದ್ದರಿಂದ ಚಿಕಿತ್ಸೆ ಮುಂದುವರೆಸಲಾಗಿದೆ. ಈ ವೈದ್ಯರು ನೆಲೆಸಿರುವ ಮನೆಯ ಸುತ್ತಮುತ್ತ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಆರೋಗ್ಯ ಇಲಾಖೆ ತಂಡಗಳು ಅವಿರತವಾಗಿ ಕೆಲಸ ಮಾಡುತ್ತಿವೆ. 

ಜಿಲ್ಲೆಯಲ್ಲಿ ಮೂರನೇ ಕೊರೋನಾ ಪ್ರಕರಣ ಪತ್ತೆಯಾಗುತ್ತಿದ್ದಂತೆ ಜನ ಮನೆಯಿಂದ ಹೊರಬರುವುದಕ್ಕೆ ಹೆದರುವಂತಾಗಿದೆ. ವಾಣಿಜ್ಯ ಮಳಿಗೆಗಳು, ಹೋಟೆಲ್, ರಸ್ತೆ ಬದಿ ಅಂಗಡಿಗಳನ್ನೂ ಜಿಲ್ಲಾಡಳಿ ಸಂಪೂರ್ಣ ಬಂದ್ ಮಾಡಿಸಿದೆ. ಅಗತ್ಯ ಕೆಲಸಗಳಿಗೆ ಮಾತ್ರ ಜನ ಹೊರಗಡೆ ಬರುತ್ತಿರುವುದರಿಂದ ನಗರದಲ್ಲಂತೂ ಬಂದ್ ವಾತಾವರಣ ನಿರ್ಮಾಣವಾಗಿದೆ. ಹೊರ ರಾಜ್ಯ ಹೊರ ಜಿಲ್ಲಗಳಿಗೆ ಕಲಬುರಗಿಯಿಂದ ಸಂಚರಿಸುವ ಬಸ್ ಗಳ ಸಂಖ್ಯೆಯನ್ನುು ಭಾರೀ ಕಡಿತಗೊಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com