ಕೊರೋನಾ ಭೀತಿ: ಕರ್ನಾಟಕ ಹೈ ಕೋರ್ಟ್ ನಲ್ಲಿ ಲೈವ್ ವಿಡಿಯೋ ಮೂಲಕ ವಾದ ಮಂಡನೆಗೆ ಅವಕಾಶ!

ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಹಿನ್ನಲೆಯಲ್ಲಿ ಸೋಂಕು ತಡೆಯಲು ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ಣಯ ಕೈಗೊಂಡಿದ್ದು, ಲೈವ್ ವಿಡಿಯೋ ಮೂಲಕ ವಾದ ಮಂಡನೆಗೆ ಅವಕಾಶ ಕಲ್ಪಿಸಿದೆ.

Published: 22nd March 2020 03:30 PM  |   Last Updated: 22nd March 2020 03:30 PM   |  A+A-


Karnataka High Court

ಸಂಗ್ರಹ ಚಿತ್ರ

Posted By : Srinivasamurthy VN
Source : Online Desk

ನವದೆಹಲಿ: ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಹಿನ್ನಲೆಯಲ್ಲಿ ಸೋಂಕು ತಡೆಯಲು ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ಣಯ ಕೈಗೊಂಡಿದ್ದು, ಲೈವ್ ವಿಡಿಯೋ ಮೂಲಕ ವಾದ ಮಂಡನೆಗೆ ಅವಕಾಶ ಕಲ್ಪಿಸಿದೆ.

ಇದಕ್ಕಾಗಿ ಸ್ಕೈಪ್ ಮತ್ತು ಇತರೆ ವಿಡಿಯೋ ಚಾಟಿಂಗ್ ಆ್ಯಪ್ ಗಳ ಮೂಲಕ ವಾದ ಮಂಡನೆಗೆ ಕೋರ್ಟ್ ಅವಕಾಶ ನೀಡಿದೆ. ಆ ಮೂಲಕ ಕಕ್ಷಿದಾರರು ದೈಹಿಕವಾಗಿ ಕೋರ್ಟ್ ಗೆ ಹಾಜರಾಗುವುದನ್ನು ಕೋರ್ಟ್ ತಡೆದಿದೆ. ಅಲ್ಲದೆ ಕೋರ್ಟ್ ನಲ್ಲಿ ಹೆಚ್ಚು ಜನಸಂದಣಿ ನಿಯಂತ್ರಿಸಲು ಕೋರ್ಟ್ ಇಂತಹ ನಿರ್ಣಯ ಕೈಗೊಂಡಿದೆ ಎಂದು ಹೇಳಲಾಗಿದೆ.

ಅಲ್ಲದೆ ತುರ್ತು ಪ್ರಕರಣಗಳನ್ನು ಮಾತ್ರವೇ ವಿಚಾರಣೆ ನಡೆಸುವುದು, ಕೋರ್ಟ್ ಸಿಬ್ಬಂದಿ, ಕಕ್ಷಿದಾರರು ಮತ್ತು ಸಂದರ್ಶಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುವುದು ಸೇರಿದಂತೆ ಕೊರೋನಾ ವೈರಸ್ ಹರಡುವಿಕೆ ತಡೆಯಲು ಕರ್ನಾಟಕ ಹೈಕೋರ್ಟ್ ಅನೇಕ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಈ ಸಂಬಂಧ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ಅವರ ಆದೇಶದಂತೆ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ ಅವರು, ಭಾನುವಾರ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳಿಗೆ ಅನ್ವಯವಾಗುವಂತೆ ಎರಡು ಪ್ರತ್ಯೇಕ ಅಧಿಸೂಚನೆ ಹೊರಡಿಸಿದ್ದು, ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರ್ಗಿ ಪೀಠಗಳು ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಬೇಕು ಎಂದು ಹೇಳಿದೆ.

ಇದಲ್ಲದೆ ಕೋರ್ಟ್ ಪ್ರಕರಣಗಳನ್ನು ಎಂದಿನಂತೆ ವಿಚಾರಣಾ ಪಟ್ಟಿಯಲ್ಲಿ ಪ್ರಕಟಿಸಲಾಗುತ್ತದೆ. ಅದರಲ್ಲಿ ನಿಗದಿಪಡಿಸಿರುವ ಪೈಕಿ ತುರ್ತು ಪ್ರಕರಣಗಳೆಂದು ವಕೀಲರು ಹಾಗೂ ಅರ್ಜಿದಾರರು ತಿಳಿಸಿದ ಸಂದರ್ಭದಲ್ಲಿ ಕೋರ್ಟ್‌ಗಳು ವಿವೇಚನೆ ಮೇರೆಗೆ ವಿಚಾರಣೆ ನಡೆಸುವ ನಿರ್ಧಾರ ಕೈಗೊಳ್ಳಲಿವೆ. ಇತರೆ ಪ್ರಕರಣಗಳನ್ನು ಎರಡೂ ಕಡೆಯ ಕಕ್ಷಿದಾರರ ಒಪ್ಪಿಗೆ ಮೇರೆಗೆ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು. ಉಳಿದ ಪ್ರಕರಣಗಳ ಕುರಿತಂತೆ ನ್ಯಾಯಾಲಯ ತನ್ನ ವಿವೇಚನೆ ಮೇರೆಗೆ ಮುಂದಿನ ವಿಚಾರಣಾ ದಿನಾಂಕ ನಿಗದಿಪಡಿಸಲಿದೆ.  ಅಂತೆಯೇ ಆರೋಗ್ಯ ಇಲಾಖೆ ಅಧಿಕಾರಿಗಳು ಒದಗಿಸಿರುವ ಸುರಕ್ಷಿತ ಹಾಗೂ ಸಲಹೆ-ಸೂಚನಾ ಫಲಕಗಳನ್ನು ನ್ಯಾಯಾಲಯ ಆವರಣದ ಮುಖ್ಯ ಸ್ಥಳಗಳಲ್ಲಿ ಪ್ರದರ್ಶಿಸಬೇಕು. ಅವುಗಳಲ್ಲಿ ಸೂಚಿಸಿರುವ ಮುಂಜಾಗ್ರತಾ ಕ್ರಮಗಳನ್ನು ಕೋರ್ಟ್ ಸಿಬ್ಬಂದಿ ಹಾಗೂ ವಕೀಲರು ಪಾಲಿಸಬೇಕು. ಯಾರಿಗಾದರೂ ಕೊರೋನಾ ವೈರಸ್ ಲಕ್ಷಣಗಳು ಕಂಡುಬಂದರೆ ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬೇಕು.  ತುರ್ತು ಪ್ರಕರಣಗಳಲ್ಲಿ ಕೂಡಲೇ ಸಹಾಯವಾಣಿ ಸಂಖ್ಯೆ ೧೦೪ ಅನ್ನು ಸಂಪರ್ಕಿಸಬೇಕು. 

ಮಂಗಳವಾರ (ಮಾ. ೧೭ರಿಂದ) ಹೈಕೊರ್ಟ್‌ಗೆ ಭೇಟಿ ನೀಡಲು ಸಂದರ್ಶಕರು (ವಕೀಲರನ್ನು ಹೊರತುಪಡಿಸಿ) ಆರೋಗ್ಯ ಇಲಾಖೆ ಅಧಿಕಾರಿಗಳು ನಡೆಸುವ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಬೇಕು.  ಕೋರ್ಟ್ ಸಿಬ್ಬಂದಿಗೆ ಹೈಕೋರ್ಟ್ ಕಚೇರಿಗಳಲ್ಲಿ ಥರ್ಮಲ್ ಸ್ಕೀನಿಂಗ್ ಮಾಡಲಾಗುತ್ತದೆ. ಜಿಲ್ಲಾ ನ್ಯಾಯಾಲಯಗಳು ಹಾಗೂ ವಿಚಾರಣಾ ನ್ಯಾಯಾಲಯಗಳು ತುರ್ತು ಪ್ರಕರಣಗಳನ್ನು ಮಾತ್ರವವೇ ವಿಚಾರಣೆ ನಡೆಸಬೇಕು. ಕಡ್ಡಾಯವಿದ್ದರೆ ಮಾತ್ರ ಕಕ್ಷಿದಾರರನ್ನು ವಿಚಾರಣೆಗೆ ಹಾಜರಾಗಲು ಸೂಚಿಸಬೇಕು. ಇಲ್ಲವಾದರೆ ಕಕ್ಷಿದಾರರ ಹಾಜರಾತಿಗೆ ವಿನಾಯಿತಿ ನೀಡಬೇಕು. ಸರ್ಕಾರದ ಸಲಹೆಯಂತೆ ಕೋರ್ಟ್ ಅಥವಾ ಕಾನೂನು ಸೇವೆಗಳ ಪ್ರಾಧಿಕಾರ ಯಾವುದೇ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಜನರು ಜಮೆಯಾಗುವ ಕಾರ್ಯಕ್ರಮಗಳಿಂದ ದೂರ ಇರಬೇಕು. ನೂತನ ಮತ್ತು ಕಾರ್ಯ ನಿರ್ವಹಣೆಗೆ ಸಿದ್ಧವಾಗಿರುವ ಕೋರ್ಟ್ ಕಟ್ಟಡಗಳಲ್ಲಿ ಉದ್ಘಾಟನೆಯಂತಹ ಯಾವುದೇ ಕಾರ್ಯಕ್ರಮಗಳನ್ನು ನಡೆಸಬಾರದು.  ಅಂತಹ ಕಾರ್ಯಕ್ರಮ ನಡೆಸದೇ ಕೋರ್ಟ್‌ನಲ್ಲಿ ಕೆಲಸ ಕಾರ್ಯ ಆರಂಭಿಸಬೇಕು. ಕಾರ್ಯಕ್ರಮ ನಡೆಸುವುದು ಅಗತ್ಯವಾಗಿದ್ದರೆ ಮುಂದಿನ ನಿರ್ದೇಶನದ ನಂತರವೇ ಆಯೋಜಿಸಬೇಕು ಎಂದು ಕೋರ್ಟ್ ಹೇಳಿದೆ.

Stay up to date on all the latest ರಾಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp