ಅಂದು ನೆರೆಯ ರೌದ್ರಾವತಾರ, ಇಂದು ಕೊರೋನಾ ಮರಣ ಮೃದಂಗ; ಸರ್ಕಾರದ ಕ್ರಮಗಳಿಗೆ ಬಗ್ಗದ ಜನ

ಕಳೆದ ಆಗಸ್ಟ್ ನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಉಂಟಾಗಿದ್ದ ಪ್ರವಾಹ ಸಾಲು ಸಾಲು ಹಬ್ಬಗಳ ನಗುವನ್ನು ಕಸಿದುಕೊಂಡಿದ್ದು ಜನ ಮಾನಸದಿಂದ ದೂರವಾಗುವ ಮೊದಲೇ ಯುಗಾದಿ ಹಬ್ಬದ ಮೇಲೆ ಕರಾಳ ಛಾಯೆ ಮೂಡಿಸಿರುವ ಕೊರೊನಾ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಮರಣ ಮೃದಂಗ ಬಾರಿಸುತ್ತಿದೆ.
ಬಾಗಲಕೋಟೆಯಲ್ಲಿ ಜನರಿಂದ ತುಂಬಿರುವ ಮಾರುಕಟ್ಟೆ
ಬಾಗಲಕೋಟೆಯಲ್ಲಿ ಜನರಿಂದ ತುಂಬಿರುವ ಮಾರುಕಟ್ಟೆ

ಬಾಗಲಕೋಟೆ: ಕಳೆದ ಆಗಸ್ಟ್ ನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಉಂಟಾಗಿದ್ದ ಪ್ರವಾಹ ಸಾಲು ಸಾಲು ಹಬ್ಬಗಳ ನಗುವನ್ನು ಕಸಿದುಕೊಂಡಿದ್ದು ಜನ ಮಾನಸದಿಂದ ದೂರವಾಗುವ ಮೊದಲೇ ಯುಗಾದಿ ಹಬ್ಬದ ಮೇಲೆ ಕರಾಳ ಛಾಯೆ ಮೂಡಿಸಿರುವ ಕೊರೊನಾ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಮರಣ ಮೃದಂಗ ಬಾರಿಸುತ್ತಿದೆ.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೇಲಂಗಾಣ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸತತ ಮಳೆಯಿಂದಾಗಿ ಉಂಟಾಗಿದ್ದ ಪ್ರವಾಹ ನದಿ ತೀರದ ಜನತೆಯ ಬದುಕನ್ನೇ ಕೊಚ್ಚಿಕೊಂಡು ಹೋಗಿತ್ತು. ನದಿ ತೀರದ ಜಮೀನುಗಳಲ್ಲಿ ಬಿತ್ತಿ ಬೆಳೆದಿದ್ದ ಲಕ್ಷಾಂತರ ಎಕರೆ ಬೆಳೆ, ಸಾವಿರಾರು ಗ್ರಾಮಗಳು ನೀರು ಜಲಾವೃತಗೊಂಡಿದ್ದವು. ಜಮೀನು, ಮನೆ, ಬೆಳೆ, ಗುಡಿಕೈಗಾರಿಕೆಯನ್ನು ನೆರೆ ಸರ್ವ ನಾಶ ಮಾಡಿತ್ತು. ಇಂತಹ ಸ್ಥಿತಿಯಿಂದ ಮೇಲೆಳಲು ಇಂದಿಗೂ ಜನತೆಗೆ ಸಾಧ್ಯವಾಗುತ್ತಿಲ್ಲ. ವಾಸಿಸಲು ಸೂರುಗಳಿಲ್ಲದೇ ಅದೆಷ್ಟೋ ಜನ ಇಂದಿಗೂ ಬಾಡಿಗೆ ಮನೆ, ದೇವಸ್ಥಾನ, ಸಮುದಾಯ ಭವನಗಳಲ್ಲೇ ವಾಸಿಸುತ್ತಿದ್ದಾರೆ. 

ಅಂದು ಕೃಷಿಕರು ಬಿತ್ತಿದ ಬೆಳೆ ನೀರು ಪಾಲಾಗಿ ಕಣ್ಣೀರಲ್ಲಿ ಕೈ ತೊಳೆಯುವಂತಾಗಿತ್ತು. ಇಂದು ಬೆಳೆದ ಬೆಳೆ ನೋಡಿಕೊಂಡು ಖುಷಿ ಪಡುವ ಸ್ಥಿತಿಯೂ ಇಲ್ಲ. ಕೊರೊನಾ ಮಹಾಮಾರಿಯಿಂದಾಗಿ ಬೆಳೆದು ನಿಂತ ಬೆಳೆಯನ್ನು ಮಾರುಕಟ್ಟೆಗೆ ತರಲಾಗುತ್ತಿಲ್ಲ.  ರಾಜ್ಯಾದ್ಯಂತ ಸರ್ಕಾರ ಕಠಿಣ ಮುಂಜಾಗೃತಾ ಕ್ರಮಗಳಿಗೆ ಮುಂದಾಗಿದ್ದರೂ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿದೆಯಾದರೂ ಸಾರಿಗೆ ವ್ಯವಸ್ಥೆ ಸಂಪೂರ್ಣ ನಿಲ್ಲಿಸಲಾಗಿದೆ. ಒಂದೊಮ್ಮೆ ರೈತರು ತರಕಾರಿಗಳನ್ನು ತಂದರೂ ಜನ ಅವುಗಳ ಖರೀದಿಗೆ ಮುಗಿಬೀಳುವುದರಿಂದ ಅನಿವಾರ್ಯವಾಗಿ ಪೊಲೀಸರು ತರಕಾರಿ ಮಾರಾಟಕ್ಕೆ ಅವಕಾಶ ನೀಡದಂತಾಗಿದೆ. ಬೆಳೆದ ಬೆಳೆಯನ್ನು ಹೊಲದಲ್ಲೇ ಬಿಟ್ಟರೂ ಹಾನಿ, ಹಾಗಂತ ಮಾರಲು ಮಾರುಕಟ್ಟೆಗೆ ತಂದರೂ ನಷ್ಟ ಎನ್ನುವ ಇಬ್ಬಂದಿ ಸ್ಥಿತಿ ನಿರ್ಮಾಣವಾಗಿದೆ. 

ನೇಕಾರರ ಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ. ನೆರೆಯಿಂದ ಗ್ರಾಮ,ಪಟ್ಟಣಗಳು ಜಲಾವೃತಗೊಂಡಾಗ ಮನೆಯಲ್ಲಿನ ಕೈಮಗ್ಗ, ಪಾವರಲೂಮ್‌ಗಳು ನೀರಲ್ಲಿ ನಿಂತಿದ್ದವು. ಮಗ್ಗಗಳ ಮೇಲಿನ ಬಂಡವಾಳ,ಮನೆಯಲ್ಲಿ ಉತ್ಪಾದಿಸಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಸಾರಿಗಳು ನೀರು ಪಾಲಾಗಿದ್ದವು. ಪ್ರವಾಹದ ನೀರಿನಲ್ಲಿ ನಿಂತಿದ್ದ ಬಹುತೇಕ ಮಗ್ಗಗಳು ಇಂದಿಗೂ ಜಂಗು(ತುಕ್ಕು) ಹಿಡಿದು ನಿಂತಿವೆ. ಅಷ್ಟರ ಮಧ್ಯೆಯೂ ಸಾಲಸೋಲ ಮಾಡಿ ಕೆಲವರು ಮಗ್ಗಗಳನ್ನು ಆರಂಭಿಸಿದ್ದರು. ಮದುವೆ ಸೀಸನ್‌ನಲ್ಲಾದರೂ ಒಂದಿಷ್ಟು ಲಾಭವಾಗಿ ಜೀವನಕ್ಕೆ ಅನುಕೂಲವಾಗಬಹುದು ಎನ್ನುವ ನಂಬಿಕೆ ಇಟ್ಟುಕೊಂಡು ಆ ನಂಬಿಕೆಯಲ್ಲೇ ಸೀರೆ, ಖಣಗಳ ಉತ್ಪಾದನೆ ಆರಂಭಿಸಿದ್ದರು. ಒಂದಿಷ್ಟು ಲಾಭದ ನಂಬಿಕೆಯನ್ನು ಮಹಾಮಾರಿ ಕೊರೊನೆ ನುಂಗಿ ಹಾಕಿದೆ. ಮದುವೆ,ಮುಂಜಿವೆ ಸೀಸನ್‌ನಲ್ಲೆ ಕೊರೊನಾ ವಿಶ್ವದಾದ್ಯಂತ ಒಕ್ಕರಿಸಿಕೊಂಡು ಮರಣಕೇಕೆ ಹಾಕುತ್ತಿದೆ. ಪರಿಣಾಮವಾಗಿ ಇಡೀ ಜವಳಿ ಉದ್ಯಮ ಭಾರಿ ಹೊಡೆತಕ್ಕೆ ಸಿಲುಕಿಕೊಂಡಿದೆ. ನೇಕಾರರು ಉತ್ಪಾದಿಸಿ ಮನೆಯಲ್ಲಿ ಸಂಗ್ರಹಿಸಿಟ್ಟಿರುವ ಉತ್ಪನ್ನಗಳನ್ನು ಮಾರಾಟ ಮಾಡಲಾಗದೇ ಅವುಗಳನ್ನು ನೋಡುತ್ತ ಮನೆಯಲ್ಲಿ ಕಾಲ ಕಳೆಯಬೇಕಾಗಿದೆ. 

ನೆರೆಯೆಂಬ ಗಾಯದ ಮೇಲೆ ಮರಣಕೇಕೆ ಹಾಕುತ್ತಿರುವ ಕೊರೊನಾ ಮೇಲಕ್ಕೆಳದಂತೆ ಬರೆ ಎಳೆದಿದೆ. ಪರಿಣಾಮವಾಗಿ ಇಡೀ ಸಮಾಜದ ವ್ಯವಸ್ಥೆಗೆ ಪ್ರಕೃತಿ ಕಲ್ಲುಚಪ್ಪಡಿ ಎಳೆದಂತಾಗಿದೆ. ಇಷ್ಟಾಗಿಯೂ ಜನಸಾಮಾನ್ಯರು ಎಚ್ಚೆತ್ತುಕೊಳ್ಳುತ್ತಿಲ್ಲ. ಇಡೀ ದೇಶ ಲಾಕ್‌ಡೌನ್ ಆಗಿದ್ದರೂ ಕೆಲವರು ತಕರಾರರು ಎತ್ತುತ್ತಿದ್ದಾರೆ. ಸರ್ಕಾರ ಏನೇ ಕ್ರಮ ಕೈಗೊಂಡಿದ್ದರೂ ಅದು ಮನುಕೂಲದ ಒಳತಿಗಾಗಿ ಎಂದು ಭಾವಿಸುತ್ತಿಲ್ಲ. ಬಾಗಲಕೋಟೆ ಜಿಲ್ಲೆಯ ಜನತೆಯೂ ನೆರೆ ಮತ್ತು ಕೊರೊನಾ ಭೀತಿಯಿಂದ ಹೊರತಾಗಿಲ್ಲ. ನೆರೆಯಲ್ಲಿ ಕೋಟ್ಯಂತರ ರೂ. ಹಾನಿ ಅನುಭವಿಸಿರುವ ಜಿಲ್ಲೆಯ ಜನತೆ ಇದೀಗ ಕೊರೊನಾ ಭೀತಿಯಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಸವಾಲಾಗಿ ಎದುರಿಸಬೇಕು. ಸರಕಾರದ ಜತೆಗೆ ಕೈ ಜೋಡಿಸುವ ಮೂಲಕ ಮಹಾಮಾರಿ ತೊಲಗಿಸಲು ಕಂಕಣ ಬದ್ದರಾಗಬೇಕಿದೆ. ಇದು ಅನಿವಾರ್ಯ ಕೂಡ. ಬೇರೆ ಮಾರ್ಗವೇ ಇಲ್ಲ ಎನ್ನುವುದು ಜಿಲ್ಲಾಡಳಿತದ ಕೋರಿಕೆ ಆಗಿದೆ.

ಲಾಕ್‌ಡೌನ್ ನಡುವೆಯೂ ಕಪಿಚೇಷ್ಟೆ ಎನ್ನುವಂತೆ ಜನತೆ ಅನಗತ್ಯವಾಗಿ ದ್ವಿಚಕ್ರ ವಾಹನಗಳ ಮೇಲೆ, ಕಾರುಗಳನ್ನು ಓಡಾಡಿಸಿಕೊಂಡಿದ್ದಾರೆ. ಪೊಲೀಸರ ಎಚ್ಚರಿಕೆಗೂ ಬಗ್ಗುತ್ತಿಲ್ಲ ಎನ್ನುವುದು ದುರದೃಷ್ಟಕರ. ಜನತೆಯ ಮನೆಯಲ್ಲೇ ಉಳಿದುಕೊಳ್ಳಲು ಇನ್ನಾವ ಕ್ರಮ ಸರ್ಕಾರ ಮುಂದಾಗಬೇಕು ಎನ್ನುವುದು ಯಕ್ಷಪ್ರಶ್ನೆಯಾಗಿದೆ.

-ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com