ಕೊರೋನಾ ತಡೆಗೆ ಸ್ವಯಂ ದಿಗ್ಬಂಧನ ಹಾಕಿಕೊಂಡು ಮಾದರಿಯಾದ ಮಂಡ್ಯದ ಗ್ರಾಮಸ್ಥರು.!

ದಿನೇ ದಿನೇ ಹೆಚ್ಚುತ್ತಿರುವ ಮಹಾಮಾರಿ ಕೊರೋನಾ ವೈರಸ್ ತಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ  ಲಾಕ್‌ಡೌನ್ ಆದೇಶ ಜಾರಿಗೊಳಿಸಿದರೂ ನಗರಪ್ರದೇಶಗಳಲ್ಲಿ ಎಗ್ಗಿಲ್ಲದೆ ತಿರುಗಾಡೋ ಜನರನ್ನ ನಿಯಂತ್ರಿಸಲು
ರಸ್ತೆ ಅಪಘಾತ
ರಸ್ತೆ ಅಪಘಾತ

ಮಂಡ್ಯ: ದಿನೇ ದಿನೇ ಹೆಚ್ಚುತ್ತಿರುವ ಮಹಾಮಾರಿ ಕೊರೋನಾ ವೈರಸ್ ತಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ  ಲಾಕ್‌ಡೌನ್ ಆದೇಶ ಜಾರಿಗೊಳಿಸಿದರೂ ನಗರಪ್ರದೇಶಗಳಲ್ಲಿ ಎಗ್ಗಿಲ್ಲದೆ ತಿರುಗಾಡೋ ಜನರನ್ನ ನಿಯಂತ್ರಿಸಲು ಪೊಲೀಸರ ಲಾಠಿ ಮೂಲಕ ಹರಸಾಹಸ ಪಡುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಹಳ್ಳಿಯ ಜನರೇ ತಮ್ಮ ಗ್ರಾಮಕ್ಕೆ ಸ್ವಯಂ ದಿಗ್ಬಂಧನ ವಿಧಿಸಿಕೊಳ್ಳುವ ಮೂಲಕ ಮಾದರಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ವಿವಿಧೆಡೆ ನಡೆದಿದೆ.

ಮದ್ದೂರು ತಾಲೂಕಿನ ಕೊಂಗಬೋರನ ದೊಡ್ಡಿ(ಕೆಬಿದೊಡ್ಡಿ) ಮತ್ತು ಮಳವಳ್ಳಿ ತಾಲ್ಲೂಕಿನ ಬಸವಬೆಟ್ಟದ ಗ್ರಾಮದಲ್ಲೇ ಈ ತೀರ್ಮಾನ ಕೈಗೊಳ್ಳಲಾಗಿದೆ. 

ದಿನೇ ದಿನೇ ಕೊರೋನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವೈರಸ್‌ನಿಂದ ಗ್ರಾಮವನ್ನು ರಕ್ಷಿಸಿಕೊಳ್ಳಲು ಗ್ರಾಮಸ್ತರು ಮುಂದಾಗಿದ್ದು, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಿ, ಗ್ರಾಮದಿಂದ ಹೊರಗೆ ಯಾರೂ ಹೋಗದಂತೆ ಮತ್ತು ಹೊರಗಿನಿಂದಲೂ ಒಳಗೆ ಯಾರೂ ಬರದಂತೆಯೂ ಬೇಲಿಯನ್ನೇ ಹಾಕಿಕೊಂಡಿದ್ದಾರೆ, ಆ ಮೂಲಕ ಯಾರು ಕೂಡ ಗ್ರಾಮದೊಳಕ್ಕೆ ಬರದಂತೆ ದಿಗ್ಬಂಧನ ವಿಧಿಸಿಕೊಂಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಸುಮಾರು ೨೧ ದಿನಗಳ ಕಾಲ ಗ್ರಾಮದಿಂದ ಯಾರೂ ಹೊರ ಹೋಗದಂತೆ, ಹೊರಗಿನಿಂದ ಗ್ರಾಮಕ್ಕೆ ಯಾರೂ ಬರದಂತೆಯೂ ತೀರ್ಮಾನ ಕೈಗೊಂಡಿದ್ದಾರೆ.

ಮದ್ದೂರು ತಾಲ್ಲೂಕಿನ ಕೆ.ಬಿ.ದೊಡ್ಡಿ ಗ್ರಾಮವು ಬೆಂಗಳೂರು ಹಾಗೂ ಮೈಸೂರು ಹೆದ್ದಾರಿಗೆ ಹೊಂದಿಕೊಂಡೇ ಇದೆ. ಇಡೀ ರಾಜ್ಯವೇ ಲಾಕ್‌ಡೌನ್ ಆದ ಮೇಲೆ ಗ್ರಾಮದ ಸಮೀಪವೇ ಪೊಲೀಸ್ ಚೆಕ್ ಪೋಸ್ಟ್ ಕೂಡ ಹಾಕಲಾಗಿದೆ. ಈ ಚೆಕ್ ಪೋಸ್ಟ್ ನಿಂದ ತಪ್ಪಿಸಿಕೊಳ್ಳೋ ದೃಷ್ಠಿಯಿಂದ ಬೆಂಗಳೂರು-ಮೈಸೂರು ಮಾರ್ಗದ ಎರಡೂ ಕಡೆಗಳಿಂದ ಹೆದ್ದಾರಿಯಲ್ಲಿ ಕದ್ದು ಹೋಗುವ ಬೈಕ್, ಇತರೆ ವಾಹನಗಳ ಸವಾರರು ಗ್ರಾಮದ ಮಾರ್ಗವಾಗಿ ನುಗ್ಗಿ ಬಂದರೆ ಕೊರೋನಾ ಸೋಂಕು ಹರಡಿ ತೊಂದರೆ ಅನುಭವಿಸಬೇಕಾಗುತ್ತದೆ ಎಂಬ ಉದ್ದೇಶದಿಂದ ಗ್ರಾಮಸ್ಥರು ಈ ರೀತಿಯ ದಿಗ್ಬಂಧನ ವಿಧಿಸಿಕೊಂಡಿದ್ದಾರೆ.

ಹೊರಗಿನವರು ಮಾತ್ರವಲ್ಲ ನಮ್ಮ ಊರಿನ ಜನ ಬೆಂಗಳೂರು ಇತರೇ ಕಡೆ ವಾಸ ಮಾಡುತ್ತಿರುವವರಾದರೂ ಅಷ್ಟೆ, ಊರೊಳಕ್ಕೆ ಬರೋದು ಬೇಡ ಅಂತಾ ತೀರ್ಮಾನಕೈಗೊಂಡಿದ್ದೀವಿ, ಹೊರಗಿನಿಂದ ಬರುವರಲ್ಲಿ ಯಾರಿಗಾದರೂ ಸೋಂಕು ಇದ್ದು ಅಂತವರು ನಮ್ಮ ಗ್ರಾಮಕ್ಕೆ ಬಂದರೆ ಕೊರೊನಾ ಸೋಂಕು ಹರಡುವ ಭೀತಿ ನಮಗಿದೆ, ಸರ್ಕಾರದ ಮುಂದಿನ ಆದೇಶದವರೆಗೂ ಯಾರೂ ಸಹ ಒಳಗೆ ಬರೋದು ಬೇಡ ಅಂತ  ಊರಿನ ರಸ್ತೆಯನ್ನು ಬಂದ್ ಮಾಡಿದ್ದೀವಿ, ಊರಿನ ಪ್ರವೇಶ ದ್ವಾರದಲ್ಲೆ ಮುಖ್ಯ ರಸ್ತೆಯನ್ನು ಮುಳ್ಳಿನ ಬೇಲಿಯಿಂದ ಮುಚ್ಚಿದ್ದೀವಿ, ಗ್ರಾಮದ ಹಾಲಿನ ವಾಹನವನ್ನು ಅಡ್ಡ ನಿಲ್ಲಿಸಿ ದಿಗ್ಬಂಧನ ಹಾಕಿಕೊಂಡಿದ್ದೀವಿ ಅಂತ ಗ್ರಾಮ ಮುಖಂಡ ನಾಗರಾಜು ಮತ್ತಿತರರು ಮಾಧ್ಯಮದವರಿಗೆ ತಿಳಿಸಿದರು.

ಗ್ರಾಮಸ್ತರಿಗೆ ಅವಶ್ಯವಿರುವ ನಿತ್ಯಬಳಕೆ ವಸ್ತುಗಳು, ಹಾಲು ಇತ್ಯಾದಿಗಳ ಸರಬರಾಜಿಗೆ ನಮ್ಮೊಳಗೇ ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದೇವೆ, ಗ್ರಾಮದ ಮತ್ತಷ್ಟು ಹಿರಿಯರೊಂದಿಗೆ ಸೇರಿ ಚರ್ಚಿಸಿ ಪರಿಹಾರ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದರು.

ಇನ್ನು ಮಳವಳ್ಳಿ ತಾಲ್ಲೂಕಿನ ಪ್ರಸಿದ್ದ ಪ್ರವಾಸಿತಾಣವೆನಿಸಿಕೊಂಡಿರುವ ಬಸವನ ಬೆಟ್ಟದಲ್ಲಿಯೂ ಸಹ ಕೊರೋನಾವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ಪ್ರವಾಸಿಗರು ಸೇರಿದಂತೆ ಹೊರಗಿನವರ ಪ್ರವೇಶಕ್ಕೆ ಗ್ರಾಮಸ್ಥರಿಂದಲೇ ನಿರ್ಬಂಧ ವಿಧಿಸಲಾಗಿದೆ.

ಗ್ರಾಮಕ್ಕೆ ಇರುವ ಏಕೈಕ ಪ್ರಮುಖ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿದ್ದು, ಹೊರ ಹೋಗುವವರಿಗೆ ಮತ್ತು ಒಳ ಬರುವವರಿಗೆ ನಿರ್ಬಂಧ ಹಾಕಿದ್ದಾರೆ. ಮೊದಲ ಹಂತದಲ್ಲಿ ಸೋಲಾರ್ ಬೇಲಿಯನ್ನು ನಿರ್ಮಿಸಿ ಬಂದ್ ಮಾಡಿದ್ದರು. ನಂತರ ಮುಳ್ಳಿನ ಬೇಲಿಯನ್ನು ರಸ್ತೆ ಮಧ್ಯ ಹಾಕಿ ಸಂಪೂರ್ಣ ಬಂದ್ ಮಾಡಿದ್ದಾರೆ.

ನಮ್ಮ ಗ್ರಾಮದ ಬಸವಬೆಟ್ಟದ ದೇವರಿಗೆ ಇಡೀ ರಾಜ್ಯಾದ್ಯಂತ ಭಕ್ತರಿದ್ದಾರೆ, ನಿತ್ಯವೂ ನೂರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ, ಆದರೆ ಇತ್ತೀಚೆಗೆ ಕೊರೋನಾ ವೈರಸ್ ಹರಡುವಿಕೆ ಹೆಚ್ಚಾಗಿರೋದ್ರಿಂದ, ನಮ್ಮೂರೊಳಕ್ಕೆ ಬರುವ ಯಾರಿಗಾದರೂ ಕೊರೊನಾ ಸೋಂಕು ಇದ್ದರೆ ಗತಿಯೇನು ಎಂಬ ಚಿಂತೆಯಾಗಿದೆ, ಅದಕ್ಕಾಗಿಯೇ ಯಾರೂ ಕೂಡ ನಮ್ಮೂರಿಗೆ ಬರೋದು ಬೇಡ ಅಂತ ಬೇಲಿ ಹಾಕಿಕೊಂಡಿದ್ದೀವಿ ಅಂತ ಗ್ರಾಮದ ಮುಖಂಡ ಮಾದೇಗೌಡ ತಿಳಿಸಿದರು.

ಇಡೀ ದೇಶವೇ ಆರೋಗ್ಯದ ತುರ್ತು ಪರಿಸ್ಥಿತಿಯಲ್ಲಿದೆ, ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಕೇಂದ್ರ ಮತ್ತು ರಾಜ್ಯ ಸರಕಾರ ಕೈಗೊಂಡಿರುವ ಕ್ರಮಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು. ಬೇರೆಯವರಿಂದ ಬರೋ ರೋಗಕ್ಕೆ ನಾವ್ಯಾಕೆ ಬಲಿಯಾಗಬೇಕು, ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳೊಣ ಅಂತ ಈ ತೀರ್ಮಾನ ಕೈಗೊಂಡಿದ್ದೀವಿ ಎಂದು ಅವರು ತಿಳಿಸಿದರು.

ಗ್ರಾಮಕ್ಕೆ ಅವಶ್ಯಕವಿರುವ ವಸ್ತುಗಳನ್ನು ತಂದು ಸಂಗ್ರಹಿಸಿಟ್ಟುಕೊಂಡಿದ್ದೇವೆ. ನಮ್ಮಲ್ಲಿಯೇ ಸೊಪ್ಪು,ತರಕಾರಿ, ಹಣ್ಣುಗಳನ್ನು ಬೆಳೆಯುತ್ತೇವೆ, ಹಾಲು, ಮೊಸರು ನಮ್ಮಲ್ಲಿಯೇ ಸಿಗುತ್ತೆ, ಕುಡಿಯೋ ನೀರಿಗೂ ಕೊರತೆಯಿಲ್ಲ ಹೀಗಿರುವಾಗ ನಾವ್ಯಾರೂ ಹೊರಗೆ ಹೋಗೋ ಪ್ರಮೇಯವೇ ಇಲ್ಲ ಎಂದು ಅವರು ಹೇಳಿದರು.

ತಾಲೂಕು ಅಧಿಕಾರಿಗಳ ಮೂಲಕ ತಿಳುವಳಿಕೆ
ಈ ವಿಷಯ ನಮ್ಮ ಗಮನಕ್ಕೂ ಬಂದಿದೆ, ಗ್ರಾಮಸ್ಥರೇ ಸ್ವತಃ ನಿರ್ಬಂಧ ಹಾಕಿಕೊಳ್ಳೋ ಮೂಲಕ ಆರೋಗ್ಯದ ಬಗ್ಗೆ ಜಾಗೃತರಾಗಿರುವುದು ಒಳ್ಳೆಯದೇ, ಗ್ರಾಮಕ್ಕೆನೂ ನಾನು ಭೇಟಿ ನೀಡಿಲ್ಲ, ಆದರೆ ನಮ್ಮ ಕಚೇರಿಯ ಅಧಿಕಾರಿಗಳ ಮೂಲಕ ಅಷ್ಟೊಂದು ನಿರ್ಬಂಧ ಹಾಕಿಕೊಳ್ಳುವ ಅಗತ್ಯವೇನಿಲ್ಲ ಎಂಬ ತಿಳುವಳಿಕೆ ಕೊಟ್ಟಿದ್ದೇವೆ, ಎಲ್ಲವನ್ನೂ ನಿರ್ಬಂಧಿಸಿಕೊಳ್ಳುವಂತಹ ಪರಿಸ್ಥಿತಿಯೂ ನಮ್ಮೊಳಗಿಲ್ಲ, ಈಗಾಗಲೆ ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ಮಳವಳ್ಳಿ ತಾಲ್ಲೂಕಿಗೇ ಹೊರಗಿನಿಂದ ಬರುವವರ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಮಳವಳ್ಳಿ ತಹಸೀಲ್ದಾರ್ ಚಂದ್ರಮೌಳಿ ಅವರು ತಿಳಿಸಿದ್ದಾರೆ.

-ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com