ಕೊರೋನಾ ವೈರಸ್: ರಾಜ್ಯದಲ್ಲಿ 10 ತಿಂಗಳ ಮಗು ಸೇರಿ ಮತ್ತೆ 8 ಮಂದಿಗೆ ಪಾಸಿಟಿವ್, ಸೋಂಕಿತರ ಸಂಖ್ಯೆ 63ಕ್ಕೆ ಏರಿಕೆ

ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶುಕ್ರವಾರ 10 ತಿಂಗಳ ಮಗು ಸೇರಿದಂತೆ ಮತ್ತೆ ಎಂಟು ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶುಕ್ರವಾರ 10 ತಿಂಗಳ ಮಗು ಸೇರಿದಂತೆ ಮತ್ತೆ ಎಂಟು ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 63ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು ಎಂಟು ಹೊಸ ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಯಾವುದೇ ದೇಶಕ್ಕೂ ಪ್ರಯಾಣಿಸಿರದ 10 ತಿಂಗಳ ಮಗುವಿಗೂ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ 10 ತಿಂಗಳ ಗಂಡುಮಗುವನ್ನು ಕೆಲವು ದಿನಗಳ ಹಿಂದೆ ಪೋಷಕರು ಕೇರಳಕ್ಕೆ ಕರೆದುಕೊಂಡು ಹೋಗಿದ್ದರು. ಕೇರಳದಿಂದಲೇ ಮಗುವಿಗೆ ಸೋಂಕು ತಗುಲಿದೆಯಾ? ಅಥವಾ ಬೇರಾವುದಾದರೂ ಹಿನ್ನೆಲೆ ಇದೆಯಾ? ಎಂಬುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಹಸುಗೂಸು ಕೋರೊನಾ ಸೋಂಕಿನಿಂದ ಬಳಲುತ್ತಿದೆ.
ಜ್ವರ ಹಾಗೂ ಶೀತದಿಂದ ಬಳಲುತ್ತಿದ್ದ ಈ ಮಗುವನ್ನು 23 ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಗಂಟಲಿನ ದ್ರವ ಪರೀಕ್ಷೆ ವರದಿ ಬಂದಿದ್ದು , ಮಗುವಿಗೆ ಕೋರೊನಾ ಸೋಂಕು ಇರುವುದು ದೃಢಪಟ್ಟಿದೆ.

ಇದೀಗ ಮಗುವಿನ ಹತ್ತಿರದ ಸಂಬಂಧಿಗಳನ್ನು ತೀವ್ರ ನಿಗಾವಣೆಯಲ್ಲಿ ಇರಿಸಲಾಗಿದೆ. ಈ ಕೂಸಿಗೆ ಯಾವ ಮೂಲದಿಂದ ಸೋಂಕು ತಗಲಿರಬಹುದೆಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಸಜಿಪನಡು ಗ್ರಾಮಕ್ಕೆ ಹೊರಗಿನವರು ಯಾರು ಪ್ರವೇಶಿಸದಂತೆ ಹಾಗೂ ಗ್ರಾಮಸ್ಥರು ಹೊರ ಹೋಗದಂತೆ ಕ್ರಮ ಕೈಗೊಳ್ಳಲಾಗಿದೆ.

ಇನ್ನು ಕೊಲಂಬೋದಿಂದ ವಾಪಸಾಗಿದ್ದ ಬೆಂಗಳೂರಿನ 20 ವರ್ಷದ ಯುವಕನಿಗೂ ಕೊರೋನಾ ಸೋಂಕು ದೃಢಪಟ್ಟಿದೆ. ಮಾರ್ಚ್​ 15ರಂದು ಈತ ಭಾರತಕ್ಕೆ ವಾಪಸಾಗಿದ್ದ. ನಂತರ ಈತನನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಐಸೋಲೇಷನ್​ನಲ್ಲಿ ಇರಿಸಲಾಗಿದೆ.

ಬೆಂಗಳೂರಿನ 25 ವರ್ಷದ ಯುವತಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಲಂಡನ್​ಗೆ ತೆರಳಿದ್ದ ಈ ಯುವತಿ ಮಾರ್ಚ್​ 18ರಂದು ಬೆಂಗಳೂರಿಗೆ ಮರಳಿದ್ದರು. 35 ವರ್ಷದ ಬೆಂಗಳೂರಿನ ಇನ್ನೋರ್ವ ವ್ಯಕ್ತಿಗೂ ಸೋಂಕು ತಗುಲಿರುವುದು ಖಚಿತವಾಗಿದೆ. ಇವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೂ ಕೊರೋನಾ ಸೋಂಕು ದೃಢಪಟ್ಟಿದೆ. 

ಉತ್ತರ ಕನ್ನಡ ಜಿಲ್ಲೆಯ 22 ವರ್ಷದ ಯುವತಿ ಕೆಲವು ದಿನಗಳ ಹಿಂದೆ ದುಬೈನಿಂದ ಆಗಮಿಸಿದ್ದರು. ಅವರಿಗೆ ಕೊರೋನಾ ಸೋಂಕು ಖಚಿತವಾಗಿದ್ದು, ಉತ್ತರ ಕನ್ನಡದ ಆಸ್ಪತ್ರೆಯಲ್ಲಿ ಐಸೋಲೇಷನ್​ನಲ್ಲಿ ಇರಿಸಲಾಗಿದೆ.

ದಾವಣೆಗೆರೆಯಲ್ಲಿ ಇಂದು ಮತ್ತೊಂದು ಪ್ರಕರಣ ಪತ್ತೆಯಾಗಿದ್ದು, ಮಾ. 17 ರಂದು ಫ್ರಾನ್ಸ್ ನಿಂದ ಹೊರಟು ಅಬುಧಾಬಿ ಮೂಲಕ ಬೆಂಗಳೂರಿಗೆ ಬಂದಿದ್ದ 24 ವರ್ಷದ ಯುವಕ ಮಾರ್ಚ್ 18 ರಂದು ದಾವಣಗೆರೆಗೆ ಆಗಮಿಸಿದ್ದರು. ಮಾರ್ಚ್ 25 ರಂದು ಕೆಮ್ಮು, ‌ಜ್ವರದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರ್ಚ್ 26 ರಂದು ಅವರಿಗೆ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ತಿಳಿಸಿದ್ದಾರೆ.

ಕೊರೋನಾಗೆ ರಾಜ್ಯದಲ್ಲಿ ಮತ್ತೊಂದು ಬಲಿ
ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ಸೋಂಕಿನಿಂದ ಮೃತಪಟ್ಟಿರುವ 60 ವರ್ಷದ ಧರ್ಮ ಪ್ರಚಾರಕರೋರ್ವರು ಮಾರ್ಚ್ 13ರಂದು ರೈಲಿನಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಇವರು ತುಮಕೂರಿನ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

24 ಜನರು ಇವರೊಂದಿಗೆ ನೇರ ಸಂಪರ್ಕ ಹೊಂದಿದ್ದು, 13 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ 8 ಜನರಲ್ಲಿ ಸೋಂಕು ಪತ್ತೆಯಾಗಿಲ್ಲ. ಉಳಿದ ಮೂವರು ಆರೋಗ್ಯ ಸಿಬ್ಬಂದಿಯಾಗಿದ್ದು, ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com