ಕೊರೋನಾ ಲಾಕ್'ಡೌನ್ ಎಫೆಕ್ಟ್: ಆಂಧ್ರ ಗಡಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಮೀನುಗಾರರು

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಗಡಿಭಾಗಗಳನ್ನು ಬಂದ್ ಮಾಡಲಾಗಿದ್ದು, ಇದರ ಪರಿಣಾಮ ಎಂದಿನಂತೆ ತಮ್ಮ ಕಾರ್ಯನಿರ್ವಹಿಸುತ್ತಿದ್ದ ಮಂಗಳೂರಿನ ಮೀನುಗಾರರು ಆಂಧ್ರಪ್ರದೇಶ ಗಡಿಭಾಗದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೋಲಾರ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಗಡಿಭಾಗಗಳನ್ನು ಬಂದ್ ಮಾಡಲಾಗಿದ್ದು, ಇದರ ಪರಿಣಾಮ ಎಂದಿನಂತೆ ತಮ್ಮ ಕಾರ್ಯನಿರ್ವಹಿಸುತ್ತಿದ್ದ ಮಂಗಳೂರಿನ ಮೀನುಗಾರರು ಆಂಧ್ರಪ್ರದೇಶ ಗಡಿಭಾಗದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. 

ಮಂಗಳೂರು ಬಂದಿನಿಂದ ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದ ಮೀನುಗಾರರನ್ನು ಕೊಲಾರದ ಗಡಿ ಭಾಗವಾದ ನಂಗಲಿ ಚೆಕ್ ಪೋಸ್ಟ್ ಬಳಿ ಆಂಧ್ರಪ್ರದೇಶ ಪೊಲೀಸರು ತಡೆಹಿಡಿದಿದ್ದಾರೆಂದು ತಿಳಿದುಬಂದಿದೆ. 

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗಡಿಯಲ್ಲಿ ಆಂಧ್ರಪ್ರದೇಶ ಪೊಲೀಸರು ಮೀನುಗಾರರನ್ನು ತಡೆಹಿಡಿದಿದ್ದು, ಆಂಧ್ರ ಮೂಲಕ ನೂರಾರು ಮಂದಿ ಮೀನುಗಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಮಂಗಳೂರಿನಲ್ಲಿ ಮೀನುಗಾರರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಒಡಿಶಾ, ಪಶ್ಚಿಮ ಬಂಗಾಳದಿಂದಲೂ ಹಲವಾರು ಮೀನುಗಾರರು ಬಂದಿದ್ದು, ಗಡಿಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಅವರೂ ಕೂಡ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಇದೀಗ ಮೀನುಗಾರರು ತಾವು ಬಂದಿದ್ದ ಬೋಟುಗಳಲ್ಲೇ ಜೀವನ ನಡೆಸುವಂತಹ ಪರಿಸ್ಥಿತಿ ಎದುರಾಗಿದೆ. 

ಈ ನಡುವೆ ಮಂಗಳೂರು ಮೀನುಗಾರರು ಸರ್ಕಾರದ ಅನುಮತಿ ಪಡೆದು, ಸ್ಥಳೀಯ ಮಿನಿ ವ್ಯಾನ್, ಟೆಂಪೋ ಹಾಗೂ ಇತರೆ ವಾಹನಗಳ ಮೂಲಕ ತಮ್ಮ ತಮ್ಮ ಸ್ಥಳಗಳಿಗೆ ತೆರಳುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. ಆದರೆ, ಕೊರೋನಾ ಭೀತಿಯಿಂದಾಗಿ ಆಂಧ್ರಪ್ರದೇಶ ಪೊಲೀಸರು ಮೀನುಗಾರರನ್ನು ತಡೆಹಿಡಿದು, ಪ್ರವೇಶ ನಿರಾಕರಿಸುತ್ತಿದ್ದಾರೆ. ಪ್ರಸ್ತುತ ಸಂಕಷ್ಟದಲ್ಲಿರುವ ಮೀನುಗಾರರು ನೆಲ್ಲೂರು, ಪ್ರಕಾಶಂ, ಶ್ರೀಕಾಕುಲಂ ಹಾಗೂ ಇತರೆ ಪ್ರದೇಶಗಳಿಗೆ ಸೇರಿದ ಮೀನುಗಾರರಾಗಿದ್ದಾರೆ. ಇನ್ನು ಮೀನುಗಾರರು ಸಿಲುಕಿಕೊಂಡಿರುವ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು, ಉಪ ಆಯುಕ್ತ ಸತ್ಯವತಿ ಹಾಗೂ ಎಸ್'ಪಿ ಕಾರ್ತಿಕ್ ರೆಡ್ಡಿಯವರು ಆಂಧ್ರಪ್ರದೇಶ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲೇ ಮೀನುಗಾರರ ಸಂಕಷ್ಟ ದೂರಾಗಿಸಲಾಗುತ್ತದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಕೊರೋನಾ ಭೀತಿಯಿಂದಾಗಿ ಇದೀಗ ಮೀನುಗಾರರಿಗೆ ಸೌಲಭ್ಯ ಒದಗಿಸಿ, ಪ್ರತ್ಯೇಕ ಕೊಠಡಿಗಳಲ್ಲಿರಿಸಲು ಸರ್ಕಾರ ನಿರ್ಧರಿಸಿದ್ದು, ವೈದ್ಯರ ತಂಡವನ್ನು ಸ್ಥಳಕ್ಕೆ ರವಾನಿಸಲು ಸಿದ್ಧತೆಗಳು ನಡೆದಿವೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com