ಮುಂದಿನ ವರ್ಷಕ್ಕೆ ದಾಖಲಾತಿ, ಶುಲ್ಕ ಪಾವತಿಗೆ ಸೂಚಿಸುವ ಶಾಲೆಗಳ ವಿರುದ್ಧ ಕಠಿಣ ಕ್ರಮ: ಸುರೇಶ್ ಕುಮಾರ್

ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ದೇಶದಲ್ಲಿ ಆರೋಗ್ಯ ತುರ್ತುಪರಿಸ್ಥಿತಿಯ ವಾತಾವರಣವಿದ್ದು, ಇಂತಹ ಸಂದರ್ಭದಲ್ಲಿ ಯಾವುದೇ ಶಾಲೆಯಲ್ಲಿ ದಾಖಲಾತಿ ಪ್ರಕ್ರಿಯೆ ಮತ್ತು ಶುಲ್ಕ ವಸೂಲಾತಿಯನ್ನು ತಕ್ಷಣ ನಿಲ್ಲಿಸಬೇಕು.
ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್
ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್

ಬೆಂಗಳೂರು: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ದೇಶದಲ್ಲಿ ಆರೋಗ್ಯ ತುರ್ತುಪರಿಸ್ಥಿತಿಯ ವಾತಾವರಣವಿದ್ದು, ಇಂತಹ ಸಂದರ್ಭದಲ್ಲಿ ಯಾವುದೇ ಶಾಲೆಯಲ್ಲಿ ದಾಖಲಾತಿ ಪ್ರಕ್ರಿಯೆ ಮತ್ತು ಶುಲ್ಕ ವಸೂಲಾತಿಯನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಇಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ವೀಡಿಯೋ ಅಪ್‌ಲೋಡ್ ಮಾಡಿರುವ ಅವರು, ರಾಜ್ಯದ ಎಲ್ಲಾ ಶಿಕ್ಷಕರಿಗೆ ಮಾ.31ರವರೆಗೆ ನೀಡಲಾಗಿದ್ದ ರಜೆಯನ್ನು ಏಪ್ರಿಲ್‌ 11 ರವರೆಗೆ ವಿಸ್ತರಿಸಲಾಗಿದೆ. ಯಾವುದೇ ಶಿಕ್ಷಕರು ಕೇಂದ್ರ ಸ್ಥಾನ ಬಿಡದಿರಲು ಸೂಚನೆ‌ ನೀಡಲಾಗಿದೆ. ಶಿಕ್ಷಕರಿಗೆ ನೀಡಲಾಗಿದ್ದ ವರ್ಕ್ ಫ್ರಂ ಹೋಮ್‌ ಕೆಲಸಗಳನ್ನು ಏ.11ರೊಳಗೆ ಮಾಡಿ ಮುಗಿಸಬೇಕು. 

ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ಎಲ್ಲರೂ ಸನ್ನದ್ಧರಾಗಬೇಕು. ಇಲಾಖೆಯಿಂದ ಬರುವ ತುರ್ತು ಕರೆಗಳಿಗೆ ಸ್ಪಂದಿಸಲು ಕೇಂದ್ರ ಸ್ಥಾನದಲ್ಲಿರಬೇಕು. ಇಲಾಖೆ ಕೊಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ನಮ್ಮ ಅಗತ್ಯತೆ ಬಗ್ಗೆ ಕರೆ ಬಂದರೆ ನಾವು ಸ್ವಲ್ಪವೂ ಹಿಂಜರಿಯದೆ ಇದು ಪವಿತ್ರವಾದ ರಾಷ್ಟ್ರದ ಕಾರ್ಯ ಎಂದು ತಿಳಿದು ಅದರಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

2020-21ನೇ ಸಾಲಿನ ವಿದ್ಯಾರ್ಥಿಗಳ ದಾಖಲಾತಿಯನ್ನು ಮುಂದೂಡಬೇಕು ಎಂದು ಈಗಾಗಲೇ ಇಲಾಖೆ ಸೂಚಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ಇಲಾಖೆ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಮುಂದಿನ ಆದೇಶದವರೆಗೆ ದಾಖಲಾತಿ ಪ್ರಾರಂಭಿಸಬಾರದು ಹಾಗೂ ಶುಲ್ಕಕ್ಕೆ ಒತ್ತಾಯ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಆದರೂ ಕೆಲವು ಖಾಸಗಿ ಶಾಲೆಗಳ ಆಡಳಿತ ಮಂಡಳಿ 2020-21ನೇ ಸಾಲಿನ ವಿದ್ಯಾರ್ಥಿಗಳ ಶುಲ್ಕವನ್ನು ಕಟ್ಟುವಂತೆ ಪೋಷಕರಿಗೆ ನೋಟಿಸ್‌ ಕಳುಹಿಸಲಾಗಿದೆ. ಕೆಲವು ಪೋಷಕರಿಗೆ ಎಸ್‌ಎಂಎಸ್ ಮೂಲಕ ಸಂದೇಶ ಕಳುಹಿಸಲಾಗುತ್ತಿದೆ. ಇಲ್ಲದಿದ್ದರೆ ದಂಡ ಕಟ್ಟುವಂತೆಯೂ ಕೆಲವು ಶಾಲೆಗಳು ಸೂಚಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಇದು ಅಪರಾಧವಲ್ಲದೆ ಮತ್ತೇನೂ ಅಲ್ಲ. ಅನೇಕ ಕುಟುಂಬಗಳು ಕೆಲಸವಿಲ್ಲದೆ ಮನೆಯಲ್ಲೆ ಇವೆ. ಅವರಿಗೆ ಈಗ ಆದಾಯವಿಲ್ಲ. ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದಲ್ಲಿ ಯಾವುದೇ ಪಠ್ಯಕ್ರಮದ ಶಾಲೆಗಳು ಮಕ್ಕಳ ದಾಖಲಾತಿ ಅಥವಾ ಶುಲ್ಕ ಪಾವತಿಸುವಂತೆ ಸೂಚಿಸಬಾರದು.
ಯಾವ ಶಾಲೆಯೂ ಶುಲ್ಕಕ್ಕಾಗಿ ಸಮಯ ನಿಗದಿಪಡಿಸುವಂತಿಲ್ಲ. ಸರ್ಕಾರ ಎಲ್ಲಾ ವಾತಾವರಣ ಅವಲೋಕನ ಮಾಡಿ ಮುಂದಿನ ದಿನಾಂಕವನ್ನು ಘೋಷಿಸಲಿದೆ. ಅದಾದ ಬಳಿಕವೇ ಈ ಪ್ರಕ್ರಿಯೆಯನ್ನು ಮಾಡಬೇಕು ಎಂದು ಸಚಿವರು ಸ್ಪಷ್ಟಪಡಿಸಿದರು.

ಒಂದು ವೇಳೆ ಯಾರಾದರೂ ಆದೇಶವನ್ನು ಉಲ್ಲಂಘಿಸಿ ಉದ್ಧಟತನ ತೋರಿಸಿದರೆ ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಅಗತ್ಯವಿದ್ದರೆ ಶಾಲೆಗಳ ಮಾನ್ಯತೆ ರದ್ದುಪಡಿಸಲಾಗುವುದು ಅಥವಾ ವಿಪರೀತ ಪ್ರಮಾಣದಲ್ಲಿ ದಂಡ ವಿಧಿಸುವ ಹಕ್ಕು ಸರ್ಕಾರಕ್ಕೆ ಇದೆ. ಸಾಂಕ್ರಾಮಿಕ ರೋಗಗಳ ಅಧಿನಿಯಮದಡಿಯಲ್ಲಿ ಸಹಾ ತೀವ್ರ ಕ್ರಮ ಕೈಗೊಳ್ಳಲೂ ಅವಕಾಶವಿದೆ. ಆದ್ದರಿಂದ ಈ ಕಾಯ್ದೆಯಡಿ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಅನಿವಾರ್ಯತೆ ಸೃಷ್ಟಿಸಬಾರದು ಎಂದು ಅವರು ಎಚ್ಚರಿಕೆ ನೀಡಿದರು.

ಈಗಾಗಲೇ ಪೋಷಕರಿಗೆ ಸೂಚನೆ ನೀಡಿದ್ದರೆ ಅದನ್ನು ಹಿಂಪಡೆಯಬೇಕು ಹಾಗೂ ತಕ್ಷಣ ಎಲ್ಲಾ ದಾಖಲಾತಿ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಅವರು ಸೂಚಿಸಿದರು.

ಕೆಲ ಖಾಸಗಿ ಶಾಲೆಗಳು 2020-21 ನೇ ಸಾಲಿನ ಶುಲ್ಕ ವಸೂಲಾತಿ ಪ್ರಕ್ರಿಯೆಯನ್ನು ಈಗಾಗಲೇ ಆರಂಭ ಮಾಡಿ‌ ಪೋಷಕರಿಗೆ ಅನಗತ್ಯ ಸಮಸ್ಯೆ ಸೃಷ್ಟಿ ಮಾಡುತ್ತಿರುವುದರ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ, 2020-21 ನೇ‌ ಸಾಲಿನ ದಾಖಲಾತಿ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.

ರಾಜ್ಯದಲ್ಲಿ ಇರುವ ಯಾವುದೇ ಪಠ್ಯಕ್ರಮದ‌ ಶಾಲಾ ಆಡಳಿತ ಮಂಡಳಿಗಳು ಪೋಷಕರಿಗೆ ಈ ರೀತಿ ಈಗಾಗಲೇ ಸೂಚನೆ ನೀಡಿದ್ದಲ್ಲಿ ಇಂತಹ ಸೂಚನೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಸೂಚಿಸಲಾಗಿದೆ. ಸರ್ಕಾರದ ಮುಂದಿನ ಆದೇಶದವರೆಗೆ ಮುಂದೂಡಬೇಕೆಂದು‌ ನಿರ್ದೇಶಿಸಲಾಗಿದೆ ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com