ಕೊರೋನಾ ವೈರಸ್ ಭೀತಿ: ಮಾನವೀಯತೆ ಮರೆತು ಈಶಾನ್ಯ ಭಾರತೀಯನ ಒಳಗೆ ಬಿಡದ ಸೂಪರ್ ಮಾರ್ಕೆಟ್ ಸಿಬ್ಬಂದಿ ಪೊಲೀಸ್ ವಶಕ್ಕೆ!

ದೇಶಾದ್ಯಂತ ವ್ಯಾಪಕವಾಗಿ ಪಸರಿಸುತ್ತಿರುವ ಕೊರೋನಾ ವೈರಸ್ ಭೀತಿಯಿಂದಾಗಿ ಮೈಸೂರಿನ ಸೂಪರ್ ಮಾರ್ಕೆಟ್ ಸಿಬ್ಬಂದಿ ಈಶಾನ್ಯ ಭಾರತದ ನಾಗರೀಕರಿಗೆ ಒಳಗೆ ಪ್ರವೇಶ ನೀಡದ ಆರೋಪದ ಮೇರೆಗೆ ಸೂಪರ್ ಮಾರ್ಕೆಟ್ ಸಿಬ್ಬಂದಿಗಳನ್ನು ಪೊಲೀಸರು ವಶಕ್ಕೆ  ಪಡೆದಿದ್ದಾರೆ.
ಈಶಾನ್ಯ ಭಾರತೀಯರ ವಿರುದ್ಧ ಸೂಪರ್ ಮಾರ್ಕೆಟ್ ಸಿಬ್ಬಂದಿಗಳ ತಾರತಮ್ಯ
ಈಶಾನ್ಯ ಭಾರತೀಯರ ವಿರುದ್ಧ ಸೂಪರ್ ಮಾರ್ಕೆಟ್ ಸಿಬ್ಬಂದಿಗಳ ತಾರತಮ್ಯ

ಮೈಸೂರು: ದೇಶಾದ್ಯಂತ ವ್ಯಾಪಕವಾಗಿ ಪಸರಿಸುತ್ತಿರುವ ಕೊರೋನಾ ವೈರಸ್ ಭೀತಿಯಿಂದಾಗಿ ಮೈಸೂರಿನ ಸೂಪರ್ ಮಾರ್ಕೆಟ್ ಸಿಬ್ಬಂದಿ ಈಶಾನ್ಯ ಭಾರತದ ನಾಗರೀಕರಿಗೆ ಒಳಗೆ ಪ್ರವೇಶ ನೀಡದ ಆರೋಪದ ಮೇರೆಗೆ ಸೂಪರ್ ಮಾರ್ಕೆಟ್ ಸಿಬ್ಬಂದಿಗಳನ್ನು ಪೊಲೀಸರು ವಶಕ್ಕೆ  ಪಡೆದಿದ್ದಾರೆ.

ಮೈಸೂರಿನ ಕೃಷ್ಣರಾಜಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸೂಪರ್ ಮಾರ್ಕೆಟ್ ನಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿ ಸಾಲಲ್ಲಿ ನಿಂತು ಅಗತ್ಯ ವಸ್ತುಗಳ ಕೊಳ್ಳಲು ಬಂದ ಈಶಾನ್ಯ ಭಾರತೀಯರನ್ನು ಸೂಪರ್ ಮಾರ್ಕೆಟ್ ಸಿಬ್ಬಂದಿ ಒಳಗೆ ಪ್ರವೇಶ  ಮಾಡಲು ಬಿಟ್ಟಿಲ್ಲ. ವೈರಸ್ ಸೋಂಕು ಇದೆ ಎಂಬ ಭೀತಿಯಿಂದ ಅವರನ್ನು ಒಳಗೆ ಬಿಟ್ಟಿಲ್ಲ. ಈ ವೇಳೆ ಈಶಾನ್ಯ ಭಾರತದ ವ್ಯಕ್ತಿ ಇಂತಹ ತಾರತಮ್ಯ ಸರಿಯಲ್ಲ. ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಇಂತಹ ಸಂಕಷ್ಟದ ಸಮಯದಲ್ಲೂ ಈ ರೀತಿಯ ತಾರತಮ್ಯ ಮಾಡಬೇಡಿ  ಎಂದು ಬೇಡಿಕೊಂಡಿದ್ದಾರೆ. ಇದಕ್ಕೆ ಜಗ್ಗದ ಸೂಪರ್ ಮಾರ್ಕೆಟ್ ಸಿಬ್ಬಂದಿ ಅವರನ್ನು ತಳ್ಳಿದ್ದಾರೆ. 

ಇದನ್ನು ಮತ್ತೋರ್ವ ಸ್ನೇಹಿತ ಚಿತ್ರೀಕರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸ್ ಇಲಾಖೆ, ಪ್ರಸ್ತುತ ಸೂಪರ್ ಮಾರ್ಕೆಟ್ ಮ್ಯಾನೇಜರ್ ಮತ್ತು ಸಿಬ್ಬಂದಿಗಳನ್ನು ವಶಕ್ಕೆ ಪಡೆದಿದೆ. ಅಲ್ಲದೆ  ಜನಾಂಗೀಯ ತಾರತಮ್ಯ ಆರೋಪ ಮತ್ತು ಲಾಕ್ ಡೌನ್ ನಿಯಮಗಳಡಿಯಲ್ಲಿ ಬಂಧಿತರ ವಿರುದ್ಧ ಪ್ರಕರಣ ದಾಖಲಾಸಿಕೊಳ್ಳಲಾಗಿದೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಪೊಲೀಸ್ ಇಲಾಖೆ, ಇಂತಹ ತಾರತಮ್ಯವನ್ನು ಕರ್ನಾಟಕ ಎಂದಿಗೂ ಸಹಿಸಿಕೊಳ್ಳುವುದಿಲ್ಲ. ಮುಂದೆ ಯಾರೇ ಇಂತಹ ಸಮಸ್ಯೆ ಎದುರಿಸಿದರೆ ಇಲಾಖೆಗೆ ದೂರು ನೀಡಿ ಎಂದು ಟ್ವೀಟ್ ನಲ್ಲಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com