ಬಾಗಲಕೋಟೆ: ಚೆಕ್ ಪೋಸ್ಟ್ ಬಳಿ ಬೀಡು ಬಿಟ್ಟ ಹೊರ ರಾಜ್ಯದ ಸಾವಿರಾರು ಕಾರ್ಮಿಕರು

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹೊರ ರಾಜ್ಯಗಳ ಕಾರ್ಮಿಕರು ಪ್ರವಾಹೋಪಾದಿಯಲ್ಲಿ ಜಿಲ್ಲೆಯತ್ತ ಬರುತ್ತಿದ್ದಾರೆ.
ಹೆದ್ದಾರಿಯಲ್ಲಿ ಬೀಡು ಬಿಟ್ಟಿರುವ ಹೊರ ರಾಜ್ಯದ ಕಾರ್ಮಿಕರು
ಹೆದ್ದಾರಿಯಲ್ಲಿ ಬೀಡು ಬಿಟ್ಟಿರುವ ಹೊರ ರಾಜ್ಯದ ಕಾರ್ಮಿಕರು

ಬಾಗಲಕೋಟೆ: ಕೊರೋನಾ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹೊರ ರಾಜ್ಯಗಳ ಕಾರ್ಮಿಕರು ಪ್ರವಾಹೋಪಾದಿಯಲ್ಲಿ ಜಿಲ್ಲೆಯತ್ತ ಬರುತ್ತಿದ್ದಾರೆ.

ಜಿಲ್ಲೆಯ ಗಡಿ ಭಾಗದಲ್ಲಿನ ಗುಗ್ಗಲಮರಿ ಚೆಕ್‌ಪೊಸ್ಟ್ ಬಳಿ ಸಾವಿರಾರು ಸಂಖ್ಯೆಯ ಹೊರ ರಾಜ್ಯಗಳ ಕಾರ್ಮಿಕರು ಜಮಾವಣೆಗೊಂಡಿದ್ದಾರೆ. ಇವರನ್ನು ಸಂಭಾಳಿಸುವುದೇ ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ. 

ಬೆಂಗಳೂರಿನಿಂದ ಸಿಕ್ಕಸಿಕ್ಕ ವಾಹನಗಳಲ್ಲಿ ಮಹಾರಾಷ್ಟ, ರಾಜಸ್ತಾನ ಮತ್ತು ಮಧ್ಯ ಪ್ರದೇಶದ ಕಾರ್ಮಿಕರು ಬರುತ್ತಿದ್ದಾರೆ. ಕೆಲವರು ನಡೆದುಕೊಂಡು ಬಂದಿದ್ದಾರೆ ಎನ್ನುವುದು ವಿಶೇಷ. ಹೀಗೆ ಬಂದವರಲ್ಲಿ ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ವೃದ್ಧರು ಸೇರಿದ್ದಾರೆ.

ರಾಜ್ಯದಲ್ಲಿ ಕಾರ್ಮಿಕ ವರ್ಗ ಎಲ್ಲಿದೆಯೋ ಅಲ್ಲಿಯೇ ಇರಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದರೂ ಕ್ಯಾರೆ ಎನ್ನದೇ ತವರಿನತ್ತ ಅವರೆಲ್ಲ ಮುಖ ಮಾಡಿದ್ದಾರೆ. 

ಜಿಲ್ಲೆಯ ಗಡಿ ಭಾಗದಲ್ಲಿ ಹೊರ ರಾಜ್ಯಗಳ ಕಾರ್ಮಿಕರು ಠಿಕಾಣಿ ಹೂಡಿದ್ದು, ಇವರಿಗೆಲ್ಲ ಅನ್ನ, ನೀರು ವ್ಯವಸ್ಥೆ ಮಾಡಲಾಗಿದ್ದರೂ ಇವರನ್ನೆಲ್ಲ ಅವರ ತವರಿಗೆ ಹೇಗೆ ಕಳುಹಿಸುವುದು ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಜತೆಗೆ ಸುರಕ್ಷತೆ ಸಮಸ್ಯೆ ಬೇರೆ.

ಆದಷ್ಟು ಬೇಗ ನಮ್ಮನ್ನೆಲ್ಲ ನಮ್ಮ ಊರಿಗೆ ಕಳುಹಿಸಿ ಎಂದು ಅವರು ಬೇಡಿಕೊಳ್ಳುತ್ತಿದ್ದು, ಏತನ್ಮಧ್ಯೆ ಕೆಲವರು ಖಾಸಗಿ ವಾಹನಗಳಲ್ಲಿ ಬರುತ್ತಿದ್ದು, ಚೆಕ್ ಪೊಸ್ಟ್ ಹತ್ತಿರ ಪೊಲೀಸರು ತಮ್ಮನ್ನೆಲ್ಲ ತಡೆಯಬಹುದು ಎನ್ನುವ ಕಾರಣಕ್ಕೆ ಒಂದೆರಡು ಕಿಮಿ ಮೊದಲೇ ವಾಹನದಿಂದ ಇಳಿದು ನಡೆದುಕೊಂಡು ಬಂದು ಚೆಕ್ ಪೋಸ್ಟ್ ದಾಟಿದ ಬಳಿಕ ಮತ್ತೆ ವಾಹನಗಳಲ್ಲಿ ಮುಂದಿನ ದಾರಿ ಕಂಡು ಕೊಳ್ಳುತ್ತಿದ್ದಾರೆ. ಉಳಿದವರು ಚೆಕ್ ಪೋಸ್ಟ್ಬಳಿ ಹೆದ್ದಾರಿ ಪಕ್ಕದಲ್ಲೇ ಬೀಡು ಬಿಟ್ಟಿದ್ದಾರೆ.

ಈಗಾಗಲೇ ಇಂತಹುದ್ದೆ ಸಮಸ್ಯೆ ಎದುರಿಸುತ್ತಿದ್ದ ವಿಜಯಪುರ ಜಿಲ್ಲಾಡಳಿತ ರಾಜಸ್ತಾನ ಸೇರಿದಂತೆ ಇತರ ರಾಜ್ಯಗಳ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಕಾರ್ಮಿಕ ವರ್ಗವನ್ನು ಸಾರಿಗೆ ಬಸ್ ಮೂಲಕ ಅವರ ತವರಿಗೆ ಕಳುಹಿಸಿದೆ. ಹೀಗೆ ಸಾವಿರಾರು ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಿದ ಬಳಿಕವೂ ರಾಜಧಾನಿಯಿಂದ ಇನ್ನಷ್ಟು ಮತ್ತಷ್ಟು ಕಾರ್ಮಿಕರು ಬರುತ್ತಲೇ ಇದ್ದಾರೆ. ಹಾಗಾಗಿ ಅವರಿಗೆ ವಾಹನಗಳ ವ್ಯವಸ್ಥೆ ಮಾಡಿ ಕಳುಹಿಸುವುದು ಸಮಸ್ಯೆ ಆಗಿ ಪರಿಣಮಿಸಿದೆ. 
ಪರಿಣಾಮವಾಗಿ ಬೆಂಗಳೂರು ಸೇರಿದಂತೆ ಇತರ ರಾಜ್ಯಗಳಿಂದ ಬಾಗಲಕೋಟೆ ಜಿಲ್ಲೆಯ ಗಡಿ ಭಾಗ ಗುಗ್ಗಲಮರಿ ಬಳಿ ಜಮಾಯಿಸುತ್ತಿರುವ ಕಾರ್ಮಿಕ ಸಂಖ್ಯೆ ಅಧಿಕವಾಗುತ್ತಿದೆ. ತವರಿನತ್ತ ಬರುತ್ತಿರುವ ಕಾರ್ಮಿಕರಲ್ಲಿ ಜಿಲ್ಲೆಗೆ ಸೇರಿದವರೂ ಇದ್ದಾರೆ. ಅವರನ್ನೆಲ್ಲ ಗುರುತಿಸಿ ಸಂಬಂಧಿಸಿದ ತಾಲೂಕುಗಳಿಗೆ ಆರೋಗ್ಯ ತಪಾಸಣೆ ಮಾಡಿ ಕಳುಹಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ. ಜತೆಗೆ ಆರೋಗ್ಯದ ಬಗೆಗೂ ನಿಗಾ ವಹಿಸುತ್ತಿದೆ.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ಹೆದ್ದಾರಿಗಳಲ್ಲಿ ಹರಿದು ಬರುತ್ತಿರುವ ಹೊರ ರಾಜ್ಯಗಳ ಹಾಗೂ ಜಿಲ್ಲೆಯ ಕಾರ್ಮಿಕ ವರ್ಗದ ಕಾಳಜಿ ಮಾಡಬೇಕಾದ ಇಬ್ಬಂದಿ ಸ್ಥಿತಿಯನ್ನು ಜಿಲ್ಲಾಡಳಿತ ಎದುರಿಸುತ್ತಿದೆ. 

ಇಂತಹ ಸನ್ನಿವೇಶದಲ್ಲಿ ಮನೆ ಬಿಟ್ಟು ಹೊರಗೆ ಬರಬೇಡಿ ಎಂದರೂ ಜನತೆ ಇನ್ನೂ ಅನಗತ್ಯವಾಗಿ ಹೊರ ಬರುವುದನ್ನು ನಿಲ್ಲಿಸುತ್ತಿಲ್ಲ. ಇತ್ತೀಚೆಗಂತೂ ತುರ್ತು ಕೆಲಸಕ್ಕೆ ಹೊರಗೆ ಬರುವವರು ಯಾರು ?, ಅನಗತ್ಯವಾಗಿ ಹೊರಗೆ ಬರುವವರು ಯಾರು ಎನ್ನುವುದು ಪತ್ತೆ ಹಚ್ಚುವುದೇ ಕಷ್ಟವಾಗಿದೆ.  ವಾಹನಗಳಲ್ಲಿ ಹೊರಗೆ ಬಂದವರೆಲ್ಲ ಪೊಲೀಸರಿಗೆ ಹತ್ತಾರು ನೆಪಗಳನ್ನು ಹೇಳಿ ತಪ್ಪಿಸಿಕೊಳ್ಳುವ ಕೆಲಸ ಮುಂದುವರಿಸಿದ್ದಾರೆ. ಅನಗತ್ಯವಾಗಿ ಹೊರ ಬರವವರನ್ನು ತಡೆಯಲೇಂದೆ ಪೆಟ್ರೋಲ್ ಬಂಕ್ ಮಾಲೀಕರು ಅಗತ್ಯ ಸೇವೆಯಲ್ಲಿರುವವರು ಹಾಗೂ ತೀರಾ ಅಗತ್ಯ ಎನ್ನಿಸುವವರಿಗೆ ಮಾತ್ರ ಪೆಟ್ರೋಲ್ ನೀಡುವ ವ್ಯವಸ್ಥೆ ಜಾರಿಗೆ ತಂದಿದ್ದಾರಾದರೂ ನಗರದಲ್ಲಿ ಸುಡು ಬಿಸಿಲಿನಲ್ಲೂ ತಿರುಗುವವರ ಸಂಖ್ಯೆಗೆ ಮಾತ್ರ ಕಡಿವಾಣ ಬೀಳುತ್ತಿಲ್ಲ. ಜನತೆ ಹೊರಗೆ ಬಾರದಂತೆ ಸ್ವಯಂ ನಿಯಂತ್ರಣ ಹಾಕಿಕೊಳ್ಳುತ್ತಿಲ್ಲ. ಇದರಿಂದಾಗಿ ಜಿಲ್ಲೆಯ ಹೆದ್ದಾರಿಗಳಲ್ಲಿ ಹೊರ ರಾಜ್ಯಗಳ ಕಾರ್ಮಿಕರ ಸಮಸ್ಯೆ, ಜಿಲ್ಲೆಯ ಒಳಭಾಗದಲ್ಲಿ ಅನಗತ್ಯವಾಗಿ ಹೊರಗೆ ತಿರುಗಾಡುತ್ತಿರುವವ ತಲೆನೋವು ಬೇರೆ. ಇವುಗಳೊಟ್ಟಿಗೆ ಕೊರೋನಾ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರು ಮೇಲೂ ನಿಗಾ ಇಡಬೇಕಾದ ಹೊಸ ತಲೆನೋವೊಂದು ಪೊಲೀಸರನ್ನು ಬೆನ್ನು ಹತ್ತಿದೆ. ಒಟ್ಟಾರೆ ಕೊರೊನಾ ವೈರಸ್ ಹರಡದಂತೆ ತಡೆಯುವಲ್ಲಿ ಜಿಲ್ಲಾಡಳಿತ ಸಾಕಷ್ಟು ತಿಪ್ಪರಲಾಗಾ ಹಾಕುತ್ತಿದ್ದರೂ ಅನಗತ್ಯ ಸಮಸ್ಯೆಗಳು ಹೆಚ್ಚುತ್ತಲೇ ಇವೆ. 

ದೇಶದಲ್ಲಿ ಕೊರೊನಾ ೩ ನೇ ಹಂತ ತಲುಪುತ್ತಿರುವ ಈ ಸನ್ನಿವೇಶದಲ್ಲೂ ಜನತೆ ನಿರ್ಲಕ್ಷಯ ಧೋರಣೆ ಮುಂದುವರಿಸಿದಲ್ಲಿ ಅಪಾಯ ತಪ್ಪಿದ್ದಲ್ಲ ಎನ್ನುವ ಆತಂಕ ಆಡಳಿತ ವರ್ಗವನ್ನು ಕಾಡಲಾರಂಭಿಸಿದೆ. ಈಗಲಾದರೂ ವೈರಸ್ ಹರಡದಂತೆ ನೋಡಿಕೊಳ್ಳಲು ಜನತೆ ಮನೆಯಿಂದ ಹೊರ ಬಾರದೆ  ಇದ್ದರೆ ಅದುವೆ ಸದ್ಯ ದೇಶಕ್ಕೆ ಕೊಡುವ ಬಹು ದೊಡ್ಡ ಕೊಡುಗೆ ಎನ್ನುವುದು ಆಡಳಿತ ವರ್ಗದ ಅಭಿಮತವಾಗಿದೆ.
-ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com