ಅನಾರೋಗ್ಯ ಪೀಡಿತ ವೃದ್ಧೆ ದಾಖಲಿಸಿಕೊಳ್ಳಲು ಆಸ್ಪತ್ರೆ ನಕಾರ: ಸಕಾಲಕ್ಕೆ ಚಿಕಿತ್ಸೆ ದೊರಕದೆ ಸಾವು

ಕೊರೋನಾ ವೈರಸ್ ಇರುವ ಶಂಕೆಯಿಂದಾಗಿ ಅನಾರೋಗ್ಯ ಪೀಡಿತ ವೃದ್ಧ ಮಹಿಳೆಯೊಬ್ಬರನ್ನು ಖಾಸಗಿ ಆಸ್ಪತ್ರೆಯೊಂದು ದಾಖಲಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕದೆ ಮಹಿಳೆ ಸಾವನ್ನಪ್ಪಿರುವ ಘಟನ ಮೈಸೂರಿನಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಕೊರೋನಾ ವೈರಸ್ ಇರುವ ಶಂಕೆಯಿಂದಾಗಿ ಅನಾರೋಗ್ಯ ಪೀಡಿತ ವೃದ್ಧ ಮಹಿಳೆಯೊಬ್ಬರನ್ನು ಖಾಸಗಿ ಆಸ್ಪತ್ರೆಯೊಂದು ದಾಖಲಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕದೆ ಮಹಿಳೆ ಸಾವನ್ನಪ್ಪಿರುವ ಘಟನ ಮೈಸೂರಿನಲ್ಲಿ ನಡೆದಿದೆ. 

80 ವರ್ಷದ ವೃದ್ಧ ಮಹಿಳೆಗೆ ಉಸಿರಾಟ ಸಮಸ್ಯೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆಸ್ಪತ್ರೆಗೆ ಕರೆ ತಂದಿದ್ದರು. ಮಹಿಳೆಯ ಸ್ಥಿತಿಯನ್ನು ನೋಡಿದ ಆಸ್ಪತ್ರೆಯ ಸಿಬ್ಬಂದಿಗಳು ವೈರಸ್ ಇದೆಯಿದೆ ಎಂದು ಶಂಕಿಸಿ, ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆಂದು ತಿಳಿದುಬಂದಿದೆ. 

ತಾಯಿ ಹೃದ್ರೋಗಿಯಾಗಿದ್ದು, ಅಸ್ತಮಾದಿಂದ ಬಳಲುತ್ತಿದ್ದರು. ಉಸಿರಾಟ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು. ಎರಡು ಖಾಸಗಿ ಆಸ್ಪತ್ರೆಗಳು ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದರು ಎಂದು ವೃದ್ಧ ಮಹಿಳೆಯ ಪುತ್ರ ಹೇಳಿದ್ದಾರೆ. 

ಉಸಿರಾಟ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಶನಿವಾರ ಸ್ಥಳೀಯ ನರ್ಸಿಂಗ್ ಹೋಂಗೆ ಕರೆತರಲಾಗಿತ್ತು. ಅಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ್ದರು. ಬಳಿಕ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಸಿಬ್ಬಂದಿಗಳು ಒರಟಾಗಿ ನಡೆದುಕೊಂಡಿದ್ದೂ ಅಲ್ಲದೆ, ಚಿಕಿತ್ಸೆಗೆ ನಿರಾಕರಿಸಿದ್ದರು. ಬಳಿಕ ಫೋನ್ ಮೂಲಕ ಮತ್ತೊಂದು ಆಸ್ಪತ್ರೆಯನ್ನು ಸಂಪರ್ಕಿಸಿದಾಗ ಅಲ್ಲಿನ ಸಿಬ್ಬಂದಿ ಜಯದೇವ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದರು. ಕೂಡಲೇ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆ ಸಮಯಕ್ಕಾಗಲೇ ಬಹಳ ತಡಾಗಿತ್ತು. ಭಾನುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ತಾಯಿ ಕೊನೆಯುಸಿರೆಳೆದಿದ್ದರು. 

ತಾಯಿ ವಿದೇಶ ಪ್ರಯಾಣ ಮಾಡಿಲ್ಲ. ಇತರೆ ವ್ಯಕ್ತಿಗಳ ಸಂಪರ್ಕ ಕೂಡ ಇಟ್ಟುಕೊಂಡಿರಲಿಲ್ಲ ಎಂದು ಹೇಳಿದರೂ, ಆಸ್ಪತ್ರೆಯವರು ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದರು. ವಿದ್ಯಾರಣ್ಯಪುರದಲ್ಲಿರುವ ಖಾಸಗಿ ಆಸ್ಪತ್ರೆಯನ್ನು ಸಂಪರ್ಕಿಸಿದಾಗ ಅವರೂ ಕೂಡ ಎಲ್ಲಾ ಚಿಕಿತ್ಸೆಗಳನ್ನು ನಿಲ್ಲಿಸಿ, ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com