ಬಾಗಲಕೋಟೆ: ಕೊರೋನಾ ವಿರುದ್ದದ ಲಾಕ್ ಡೌನ್ ಗೆ ಕ್ಯಾರೆ ಎನ್ನದ ಜನತೆ

ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್ ತಡೆಗೆ ಏನೇ ಜನಜಾಗೃತಿ ಕಾರ್ಯಕ್ರಮ ಕೈಗೊಂಡರೂ ಪ್ರಯೋಜನವಾಗುತ್ತಿಲ್ಲ.
ಸಂತೆ ಮಾಡುತ್ತಿರುವ ಜನತೆ
ಸಂತೆ ಮಾಡುತ್ತಿರುವ ಜನತೆ

ಬಾಗಲಕೋಟೆ: ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್ ತಡೆಗೆ ಏನೇ ಜನಜಾಗೃತಿ ಕಾರ್ಯಕ್ರಮ ಕೈಗೊಂಡರೂ ಪ್ರಯೋಜನವಾಗುತ್ತಿಲ್ಲ.

ಮಾರಕ ವೈರಸ್ ತಡೆಯಲು ಬೇಡ ಬೇಡ ಎಂದರೂ ಜಿಲ್ಲೆಯಲ್ಲಿ ಅಲ್ಲಲ್ಲಿ ಸಂತೆಗಳು ನಡೆಯುತ್ತಲೇ ಇವೆ. ಮಂಗಳವಾರ ಬೆಳಗ್ಗೆ ಮಹಾಲಿಂಗಪುರದಲ್ಲಿ ಯಾವುದೇ ನಿಯಮಾವಳಿ ಅನುಸರಿಸದೇ ಬಹು ದೊಡ್ಡ ಸಂಖ್ಯೆಯ ಸಂತೆ ಆರಂಭಗೊಂಡಿತ್ತು. ಜನತೆ ಕೂಡಾ ಸಹಸ್ರಾರು ಸಂಖ್ಯೆಯಲ್ಲಿ ಸಂತೆಗೆ ಆಗಮಿಸಿದ್ದರು. ಬಳಿಕ ಪೊಲೀಸರು ಸಂತೆಯನ್ನು ರದ್ದುಗೊಳಿಸಲು ಹರಸಾಹಸ ಪಡಬೇಕಾಯಿತು.

ಹಾಗೆ ಜಿಲ್ಲೆಯ ನಾನಾ ಕಡೆಗಳಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳು ನಡೆಯುತ್ತಿವೆ. ಈಗಾಗಲೇ ಜಿಲ್ಲೆಯ ಮುಧೋಳ, ಬಾಗಲಕೋಟೆ ನಗರ ಮತ್ತು ಕಲಾದಗಿಯಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳನ್ನು ನಡೆಸಲಾಗಿದೆ. ಪ್ರಾರ್ಥನಾ ಮಂದಿರಗಳ ಮೇಲೆ ಪ್ರಾರ್ಥನೆ ವೇಳೆ ಪ್ರಾರ್ಥನೆಗಾಗಿ ಸೇರಿದ್ದವರಿಗೆ ತಿಳಿವಳಿಕೆ ಜತೆಗೆ ಲಾಠಿಯ ರುಚಿ ತೋರಿಸಿದರೂ ಮತ್ತೆ ಮತ್ತೆ ಪ್ರಾರ್ಥನೆಗಳು ನಡೆಯುತ್ತಿವೆ. ಸಂತೆಗಳನ್ನು ನಿಷೇಧಿಸಿದರೂ ಸಂತೆಗಳು ನಡೆಯುತ್ತಿವೆ. ಜನ ಖರೀದಿಗಾಗಿ ಮುಗಿ ಬೀಳುತ್ತಿದ್ದಾರೆ. 

ದಯವಿಟ್ಟು ಬರಬೇಡಿ ಎಂದು ಎಷ್ಟೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಜನತೆ ಅಗತ್ಯ ವಾಹನಗಳ ಓಡಾಟ ತಪ್ಪಿಸಲು ಪೆಟ್ರೋಲ್ ಹಂಚಿಕೆಯಲ್ಲೂ ಸಾಕಷ್ಟು ಕಡಿವಾಣ ಹಾಕಲಾಗಿದೆಯಾದರೂ ಅನಗತ್ಯವಾಗಿ ಓಡಾಟ ಇನ್ನೂ ನಡೆಯುತ್ತಿದೆ.

ಅನಗತ್ಯ ಓಡಾಟ ತಡೆಗಾಗಿ ವಾಹನಗಳನ್ನು ವಶಡಿಸಿಕೊಳ್ಳುವ ಕೆಲಸವನ್ನು ಪೊಲೀಸರು ನಡೆಸಿದ್ದಾರೆ. ಈಗಾಗಲೇ ಜಿಲ್ಲಾದ್ಯಂತ ನೂರಾರು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರಾದರೂ ಮಂಗಳವಾರವೂ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವಾಹನಗಳ ಓಡಾಟ ನಡೆದೆ ಇತ್ತು.

ಕೊರೋನಾ ವೈರಸ್‌ನ ಪರಿಣಾಮ ಬಗ್ಗೆ ಎಷ್ಟು ಅರಿವು ಮೂಡಿಸಲಾಗುತ್ತಿದೆ. ರಾಜ್ಯದಲ್ಲೂ ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೊರಗೆ ಬರಬೇಡಿ ಮನೆಯಲ್ಲೇ ಸುರಕ್ಷಿತವಾಗಿರಿ. ಹೊರಗೆ ಬಂದರೆ ಬದುಕು ದುಸ್ತರವಾಗಲಿದೆ ಎಂದರೂ ಯಾರೂ ಕೇಳುತ್ತಿಲ್ಲ. ಪೊಲೀಸರ ಕಣ್ತಪ್ಪಿಸಿ ಓಡಾಡುವ ಕೆಲಸ ನಡೆದಿದೆ. ಮನೆ ಮನೆಗೆ ತೆರಳಿ ತರಕಾರಿ ಮಾರಾಟ ಮಾಡಿ ಎಂದು ಮನವಿ ಮಾಡಿದರು, ಕದ್ದು ಮುಚ್ಚಿ ವಿವಿಧ ಬಡಾವಣೆಗಳಲ್ಲಿ ಒಂದೇ ಕಡೆ ತರಕಾರಿ ಇಟ್ಟುಕೊಂಡು ಮಾರಾಟ ಮಾಡುವುದು ನಿರಂತರವಾಗಿ ನಡೆದೇ ಇದೆ.

ಕೊರೋನಾ ಭೀಕರತೆ ಬಿಚ್ಚಿಡುತ್ತಿದ್ದರೂ ಜನತೆ ಕೇಳುತ್ತಿಲ್ಲವಲ್ಲ. ಇವರ ನಿರ್ಲಕ್ಷ್ಯಕ್ಕೆ ಏನು ಅನ್ನಬೇಕು. ಸರ್ಕಾರ ಎಂತಹ ಕಠಿಣ ಕ್ರಮಗಳಿಗೆ ಮುಂದಾದರೂ ಬೇಕು ಅಂತಲೇ ನಿಯಮಗಳನ್ನು ಉಲ್ಲಂಘಿಸುವ ಕೆಲಸ ನಡೆದಿರುವುದು ದುರದೃಷ್ಟಕರ ಸಂಗತಿಯಾಗಿದೆ.

ಇಷ್ಟರ ಮಧ್ಯೆ ಜಿಲ್ಲಾಡಳಿತ ನಾಳೆಯಿಂದ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ  ಏಪ್ರಿಲ್ ಮತ್ತು ಮೇ ತಿಂಗಳಿನ ಪಡಿತರ ವಿತರಣೆಗೆ ಮುಂದಾಗಿದೆ.

ಏಪ್ರಿಲ್ ತಿಂಗಳು ಅಂತ್ಯದವರೆಗೂ ಬೆಳಗ್ಗೆ ೭ ರಿಂದ ರಾತ್ರಿ ೯ ರವರೆಗೆ ಪಡಿತರ ವಿತರಣೆಗೆ ಅವಕಾಶ ನೀಡಿದೆ. ಪಡಿತರ ಚೀಟಿಯಲ್ಲಿರುವ ಒಬ್ಬರನ್ನು ನ್ಯಾಯಬೆಲೆ ಅಂಗಡಿಗೆ ಕರೆಯಿಸಿಕೊಳ್ಳಬೇಕು. ನಿತ್ಯ ೫೦ ರಿಂದ ೭೦ ಜನರನ್ನು ಮಾತ್ರ ಕರೆಸಿಕೊಂಡು ಪಡಿತರ ಹಂಚಿಕೆ  ಮಾಡಬೇಕು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಂಗಡಿ ಮುಂದೆ ಚೌಕ್ ಬಾಕ್ಸ್ ಹಾಕಿ, ಅಲ್ಲಿಗೆ ಪಡಿತರ ಚೀಟಿದಾರರನ್ನು ನಿಲ್ಲಿಸಿ ಪಡಿತರ ವಿತರಿಸಲು ಸೂಚಿಸಲಾಗಿದೆ.

ಜತೆಗೆ ಕೃಷಿ ಉತ್ಪಾದಿತ ತರಕಾರಿ, ಹಣ್ಣು,ಹಂಪಲಗಳ  ಸಾಗಣೆ ನಿಯಮಗಳಲ್ಲಿ ಸಡಲಿಕೆ ಮಾಡಿರುವ ಜಿಲ್ಲಾಡಳಿತ ಜಿಲ್ಲೆಯಲ್ಲಿ ಹಾಗೂ ಬೇರೆ ಜಿಲ್ಲೆಗಳಿಗೆ ಸಾಗಣೆ ಮಾಡಲೂ ಅಡತಡೆ ತೊಡೆದು ಹಾಕಿದೆ. ರೈತರು ಯಾವುದೇ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಬಹುದಾಗಿದೆ. ಮಾರಾಟಗಾರರು ಮಾತ್ರ ಒಂದೇ ಕಡೆ ಕುಳಿತು ಮಾರಾಟ ಮಾಡಬಾರದು ಎಂದು ತಿಳಿಸಿದೆ. ಆದರೆ ಇದು ಮಾತ್ರ ಇಂದಿಗೂ ಸಾಧ್ಯವಾಗುತ್ತಿಲ್ಲ. ಪೊಲೀಸರು ಮತ್ತು ಸಾರ್ವಜನಿಕರ ಮಧ್ಯೆ ನಿತ್ಯ ಸಂಘರ್ಷ ನಡೆಯುತ್ತಲೇ ಇದೆ.

ವೈರಸ್ ಹರಡುವಿಕೆ ತಡೆಯಲು ಜನಾಂದೋಲ ನಡೆಯುತ್ತಿದ್ದರೂ ಕಾನೂನು ಉಲ್ಲಂಘನೆ ಮಾತ್ರ ನಿಲ್ಲುತ್ತಿಲ್ಲ. ವೈರಸ್‌ನ ಅಪಾಯ ಕಣ್ಮುಂದೆ ಕಾಣಿಸಿತ್ತಿದೆ. ತಿಪ್ಪರಲಾಗಾ ಹಾಕಿದರೂ ನಾವು ನಮ್ಮ ಕಾಯಕ ಬಿಡಿವುದಿಲ್ಲ ಎನ್ನುವ ನೀತಿಗೆ ಜನತೆ ಶರಣಾದಂತೆ ಕಾಣಿಸುತ್ತಿದೆ. ಕಾನೂನು ಉಲ್ಲಂಘನೆ ಮಾಡುವವರಿಗೆ ದಂಡಂ ದಶಗುಣಂ ಎನ್ನುವುದೊ ಉಳಿದಿರುವ ಏಕೈಕ ಮಾರ್ಗ ಎನ್ನುವಂತಾಗಿದೆ. ವೈರಸ್ ಬುಡಕ್ಕೆ ಬಂದಾಗಲೇ ಇವರಿಗೆಲ್ಲ ಅದರ ಪರಿಣಾಮ ಅರಿವಿಗೆ ಬರಲಿದೆ ಎನ್ನುವ ಸ್ಥಿತಿ ಜಿಲ್ಲೆಯಲ್ಲಿದೆ.

-ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com