ಕೊರೋನಾ ವೈರಸ್ ಪರಿಣಾಮ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ಬದಲಿಗೆ ಅಕ್ಕಿ ಮತ್ತು ಬೇಳೆ ವಿತರಣೆ

ಕೊರೋನಾ ವೈರಸ್ ತಡೆಗೆ ಲಾಕ್ ಡೌನ್ ಘೋಷಣೆ ಮಾಡಿರುವುದು ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ನೀಡಲಾಗುತ್ತಿದ್ದ ಮಧ್ಯಾಹ್ನದ ಬಿಸಿಯೂಟದ ಮೇಲೂ ಪರಿಣಾಮ ಬೀರಿದೆ. ಆದರೆ ರಾಜ್ಯ ಸರ್ಕಾರ ಇದರಿಂದ ಮಕ್ಕಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿದೆ. 
ಮಧ್ಯಾಹ್ನದ ಬಿಸಿ ಊಟ
ಮಧ್ಯಾಹ್ನದ ಬಿಸಿ ಊಟ

ಚಾಮರಾಜನಗರ: ಕೊರೋನಾ ವೈರಸ್ ತಡೆಗೆ ಲಾಕ್ ಡೌನ್ ಘೋಷಣೆ ಮಾಡಿರುವುದು ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ನೀಡಲಾಗುತ್ತಿದ್ದ ಮಧ್ಯಾಹ್ನದ ಬಿಸಿಯೂಟದ ಮೇಲೂ ಪರಿಣಾಮ ಬೀರಿದೆ. ಆದರೆ ರಾಜ್ಯ ಸರ್ಕಾರ ಇದರಿಂದ ಮಕ್ಕಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿದೆ. 

ಈ ಘೋಷಣೆಯಿಂದ ಸರ್ಕಾರಿ ಶಾಲೆಯ ಮಕ್ಕಳು ಮದ್ಯಾಹ್ನ ಬಿಸಿಯೂಟ ಯೋಜನೆಯಿಂದ ವಂಚಿತರಾಗಿದ್ದರು. ಇದನ್ನು ಮನಗಂಡ ರಾಜ್ಯ ಸರ್ಕಾರವು ಶಾಲೆಯ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿ, ಬಿಸಿಯೂಟದ ಬದಲಿಗೆ 1 ರಿಂದ 5ನೇ ತರಗತಿವರೆಗೆ ವ್ಯಾಸಂಗ ಮಾಡುವ ಪ್ರತಿ ಮಗುವಿಗೆ ಪ್ರತಿದಿನಕ್ಕೆ 100ಗ್ರಾಂ ಅಕ್ಕಿ, 50 ಗ್ರಾಂ ಬೇಳೆ ಹಾಗೂ 6ರಿಂದ 10ನೇ ತರಗತಿಯವರೆಗೆ ಅಭ್ಯಾಸ ಮಾಡುವ ಪ್ರತಿ ಮಕ್ಕಳಿಗೆ 1150 ಗ್ರಾಂ ಅಕ್ಕಿ, 75 ಗ್ರಾಂ ಬೇಳೆಯನ್ನು ಪ್ರತಿದಿನಕ್ಕೆ ಸೇರಿದಂತೆ ರಜಾ ಅವಧಿಯ ಒಟ್ಟು 21 ದಿನಗಳಿಗೆ ಒಟ್ಟಾಗಿ ಸೇರಿ ಅಕ್ಕಿ ಮತ್ತು ಬೇಳೆಯನ್ನು ವಿತರಿಸುತ್ತಿದೆ. ಇದು ರಾಜ್ಯದ ಗಡಿ ಜಿಲ್ಲೆಯ ಚಾಮರಾಜನಗರ ಜಿಲ್ಲಾದ್ಯಂತ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳು ಮುಖಕ್ಕೆ ಮಾಸ್‌ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ತಮಗೆ ದೊರಕಬೇಕಾಗಿದ್ದ 21 ದಿನಗಳ ಅಕ್ಕಿ & ಬೇಳೆಯನ್ನು ಪಡೆದುಕೊಳ್ಳುತ್ತಿದ್ದಾರೆ. 

ಚಾಮರಾಜನಗರ ಜಿಲ್ಲಾ ಪಂಚಾಯ್ತಿಯ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿಗಳಾದ ಗುರುಲಿಂಗಯ್ಯ ಮಾತನಾಡಿ ರಾಜ್ಯಾದ್ಯಂತ ವ್ಯಾಪಿಸಿರುವ ಕೊವಿಡ್ 19 ವೈರಸ್ ತಡೆಗಟ್ಟಲು ಹಾಗೂ ನಿಯಂತ್ರಿಸಲು ರಾಜ್ಯ ಸರ್ಕಾರ ಶಾಲೆಗಳಿಗೆ ರಜೆ ಘೋಷಣೆ ಮಾಡಿತ್ತು. ಈ ಹಿಂದೆ ಮದ್ಯಾಹ್ನದ ಬಿಸಿಯೂಟವನ್ನು ಮಕ್ಕಳು ಶಾಲೆಯಲ್ಲಿಯೇ ಸವಿಯುತ್ತಿದ್ದರು. ಈಗ ಕೋವಿಡ್‌ನ ಪರಿಣಾಮವಾಗಿ ರಜೆ ಘೋಷಣೆಯಾಗಿರುವುದರಿಂದ 21 ದಿನಗಳ ಅವಧಿಯ ಮದ್ಯಾಹ್ನದ ಬಿಸಿಯೂಟದ ಬದಲಾಗಿ ಅಕ್ಕಿ ಮತ್ತು ನೇಳೆಯನ್ನು ವಿತರಿಸುತ್ತಿದ್ದೇವೆ. ಜಿಲ್ಲೆಯ 926 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 81,440 ಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ವಿವರಿಸಿದರು.

ಯಳಂದೂರಿನ ಬಳೇಪೇಟೆ ಸರ್ಕಾರಿ  ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿನಿ ಸಂಜನಾ ಮಾತನಾಡಿ ಈ ಹಿಂದೆ ಮದ್ಯಾಹ್ನದ ವೇಳೆ ನಮಗೆಲ್ಲಾ ಬಿಸಿಯೂಟವನ್ನು ಶಾಲೆಯಲ್ಲಿಯೇ ವಿತರಿಸಲಾಗುತ್ತಿತ್ತು. ಈಗ ವಿಶ್ವದೆಲ್ಲೆಡೆ ಕೊರೊನಾ ವೈರಸ್ ಹಬ್ಬುತ್ತಿರುವುದರಿಂದ ನಮಗೆ ರಜೆ ಘೋಷಿಸಿದ್ದಾರೆ. ಈ ರಜಾವಧಿಯಲ್ಲಿ ಮದ್ಯಾಹ್ನದ ಬಿಸಿಯೂಟದ ಬದಲಿಗೆ ಅಕ್ಕಿ ಮತ್ತು ಬೇಳೆಯನ್ನು ವಿತರಿಸುತ್ತಿರುವುದು ತುಂಬಾ ಖುಷಿ ನೀಡಿದೆ ಎಂದರು.

ಯಳಂದೂರು ತಾಲ್ಲೂಕಿನ ಗುಂಬಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಲಕ್ಷ್ಮೀ ಮಾತನಾಡಿ ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಬಿಸಿಯೂಟದ ಬದಲಿಗೆ ಅಕ್ಕಿ ಮತ್ತು ಬೇಳೆಯನ್ನು ನಮ್ಮ ಶಾಲೆಯಲ್ಲಿ ವಿತರಿಸುತ್ತಿದ್ದಾರೆ. ನಾವು ಸಾಮಾಜಿಕ ಅಂತರ ಕಾಪಾಡಿಕೊಂಡು ಅಕ್ಕಿ ಬೇಳೆಯನ್ನು ಪಡೆದು ಮನೆಯಲ್ಲಿ ಆಹಾರ ತಯಾರಿಸಿ ಸವಿಯುತ್ತಿದ್ದೇವೆ. ಮುಂದಿನ ಬೇಸಿಗೆ ರಜಾದಿನದ ಅವಧಿಯಲ್ಲಿಯೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಈ ಅಕ್ಕಿ ಮತ್ತು ಬೇಳೆಯನ್ನು ವಿಸ್ತರಿಸಲು ಯೋಜನೆ ರೂಪಿಸಿಕೊಂಡರೆ ವಿದ್ಯಾರ್ಥಿಗಳಿಗೆ ಒಳಿತಾಗುತ್ತದೆ ಎಂದು ಮನವಿ ಮಾಡಿದರು.

ವರದಿ: ಗುಳಿಪುರ ನಂದೀಶ ಎಂ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com