ಗಂಗಾವತಿ: ಗುಹೆಯಲ್ಲಿ ಸಿಲುಕಿದ ಇಟಲಿಯ ಮಾರಿಯಾನ್; ಸ್ಥಳೀಯರಿಂದ ಸಹಾಯ ಹಸ್ತ!

ಕೊರೊನಾದಿಂದಾಗಿ ದೇಶವೇ ಲಾಕ್‌ಡೌನ್ ಸುಮಾರು 40 ದಿನಗಳಾಗುತ್ತಾ ಬಂದಿದೆ. ಈಗ ಹಂತ-ಹಂತವಾಗಿ ಲಾಕ್‌ಡೌನ್ ಸಡಿಲಗೊಳ್ಳುವ ಘಟ್ಟಕ್ಕೆ ಬರಲಾಗಿದ್ದು, ಕಳೆದ ಸುಮಾರು ಎರಡು ತಿಂಗಳಿನಿಂದಲೂ ವಿದೇಶಿ ಪ್ರಜೆಯೊಬ್ಬ ಗುಹೆಯಲ್ಲೇ ವಾಸವಾಗಿದ್ದಾನೆ. ಅದು ಅನ್ನ-ನೀರಿಲ್ಲದೇ!!
ಕೊಪ್ಪಳ ಜಿಲ್ಲೆಯ ಋಷಿಮುಖ ಪರ್ವತದ ಗುಹೆಯಲ್ಲಿ ಸಿಲುಕಿರುವ ಇಟಲಿಯ ಮಾರಿಯಾನ್‌ಗೆ ಆಹಾರ ಸಾಮಗ್ರಿ ಕೊಡಲಾಯಿತು.
ಕೊಪ್ಪಳ ಜಿಲ್ಲೆಯ ಋಷಿಮುಖ ಪರ್ವತದ ಗುಹೆಯಲ್ಲಿ ಸಿಲುಕಿರುವ ಇಟಲಿಯ ಮಾರಿಯಾನ್‌ಗೆ ಆಹಾರ ಸಾಮಗ್ರಿ ಕೊಡಲಾಯಿತು.

ಕೊಪ್ಪಳ: ಕೊರೊನಾದಿಂದಾಗಿ ದೇಶವೇ ಲಾಕ್‌ಡೌನ್ ಸುಮಾರು 40 ದಿನಗಳಾಗುತ್ತಾ ಬಂದಿದೆ. ಈಗ ಹಂತ-ಹಂತವಾಗಿ ಲಾಕ್‌ಡೌನ್ ಸಡಿಲಗೊಳ್ಳುವ ಘಟ್ಟಕ್ಕೆ ಬರಲಾಗಿದ್ದು, ಕಳೆದ ಸುಮಾರು ಎರಡು ತಿಂಗಳಿನಿಂದಲೂ ವಿದೇಶಿ ಪ್ರಜೆಯೊಬ್ಬ ಗುಹೆಯಲ್ಲೇ ವಾಸವಾಗಿದ್ದಾನೆ. ಅದು ಅನ್ನ-ನೀರಿಲ್ಲದೇ!

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ, ಅಂಜನಾದ್ರಿ ಪರ್ವತ, ಸಾಣಾಪುರ, ವಿರುಪಾಪುರಗಡ್ಡೆ ಸೇರಿದಂತೆ ಕೆಲ ಪ್ರದೇಶಗಳು ವಿದೇಶಿಯವರ ಫೇವರೆಟ್ ಸ್ಪಾಟ್‌‌ಗಳು.

ಫೆಬ್ರವರಿಯಲ್ಲಿ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲಾಡಳಿತ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರ ಸೇರಿಕೊಂಡು ನ್ಯಾಯಾಲಯದ ಆದೇಶದಂತೆ ವಿರುಪಾಪುರಗಡ್ಡೆಯಲ್ಲಿದ್ದ ಅಕ್ರಮ ರೇಸಾರ್ಟ್‌ಗಳನ್ನು ನೆಲಸಮ ಮಾಡಿ ತೆರವುಗೊಳಿಸಲಾಗಿತ್ತು.
ಹಂಪಿ ಹಾಗೂ ಸುತ್ತಮುತ್ತಲಿನ ಸ್ಥಳಗಳನ್ನು ನೋಡಲು ಬರುತ್ತಿದ್ದ ವಿದೇಶಿಯರು ಉಳಿದುಕೊಳ್ಳಲು ವಿರುಪಾಪುರಗಡ್ಡೆಯ ರೇಸಾರ್ಟ್‌ಗಳನ್ನೇ ಹೆಚ್ಚು ಇಷ್ಟಪಡುತ್ತಿದ್ದರು. ರೇಸಾರ್ಟ್ ತೆರವಿನ ಬಳಿಕ ವಿದೇಶದವರ ಟಚ್ ಇಲ್ಲದಂತಾಯಿತು. ಇದು ರೇಸಾರ್ಟ್ ತೆರವಿನ ವೇಳೆ ಅಚಾನಕ್ಕಾಗಿ ಉಳಿದುಕೊಂಡ ವಿದೇಶಿ ಪ್ರಜೆಯ ಕಥೆ ಮತ್ತು ವ್ಯಥೆ..

ಇಟಲಿ ದೇಶದ ಪ್ರಜೆ ಮಾರಿಯಾನ್, 2020ರ ಜನವರಿ ತಿಂಗಳಿನಲ್ಲೇ ಹಂಪಿ, ಮತ್ತಿತರ ಸ್ಥಳಗಳನ್ನು ನೋಡಲು ಬಂದಿದ್ದಾನೆ. ಫೆಬ್ರವರಿಯಲ್ಲಿ ರೇಸಾರ್ಟ್ ತೆರವು ವೇಳೆ ಯಾವುದೋ ಸ್ಥಳ ವೀಕ್ಷಣೆಗೆ ಹೋದಾತ ರಾತ್ರಿ ಬಂದಿದ್ದಾನೆ. ನಸುಕಿನ ವೇಳೆಯಲ್ಲಿದ್ದ ಕಟ್ಟಡಗಳೆಲ್ಲ ನೆಲಸಮವಾಗಿವೆ. ಹಾಗಾಗಿ ಮಾರಿಯಾನ್ ಹಂಪಿ, ಆನೆಗೊಂದಿ, ನವವೃಂದಾವನ, ಪಂಪಾಸರೋವರ, ಗವಿರಂಗನಾಥ, ವಾಲಿ ಕಿಲ್ಲಾ ಮತ್ತಿತರ ಸ್ಥಳಗಳನ್ನು ವೀಕ್ಷಿಸಿ ಇನ್ನೇನು ತಮ್ಮ ದೇಶಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಲಾಕ್‌ಡೌನ್ ಘೋಷಣೆಯಾಗಿದೆ. ಹೊರಗಡೆ ಎಲ್ಲೂ ತಿರುಗುವ ಹಾಗಿಲ್ಲ. ಹಾಗಾಗಿ ಋಷಿಮುಖ ಪರ್ವತದ ಗುಹೆ ಪ್ರವೇಶಿದ್ದಾನೆ. ಗುಹೆಯ ಸುತ್ತಮುತ್ತ ಹಣ್ಣು-ಹಂಪಲು, ದೇಗುಲ ಬಿಟ್ಟರೆ ಮತ್ತೇನೂ ಇಲ್ಲ.

ಮಾರ್ಚ್-ಏಪ್ರಿಲ್ ಎರಡು ತಿಂಗಳು ಗುಹೆಯಲ್ಲಿ ಕಳೆದಿರುವ ಮಾರಿಯಾನ್, ಹಣ್ಣು-ಹಂಪಲಿನಿಂದ ಹೊಟ್ಟೆ ತುಂಬಿಸಿಕೊಂಡಿದ್ದಾನೆ. ದೇಗುಲದ ಪಕ್ಕ ಹರಿಯುತ್ತಿದ್ದ ನೀರಿನ ಸಣ್ಣ ಝರಿಯಿಂದ ದಾಹ ನೀಗಿಸಿಕೊಂಡಿದ್ದಾನೆ. ಈ ಎರಡು ತಿಂಗಳಲ್ಲಿ ಮಾರಿಯಾನ್‌ಗೆ ಮೊದಲಿನಿಂದಲೂ ಆಧ್ಯಾತ್ಮದಲ್ಲಿ ಒಲವಿದ್ದಿದ್ದರಿಂದ ಅಲ್ಲಿನ ಪರಿಸರ ಕಂಡು ಸಾಧುವಾಗಿದ್ದಾನೆ. ಕೇಸರಿ ಉಡುಪು ಧರಿಸಿ, ಗಡ್ಡ ಬಿಟ್ಟಿದ್ದಾನೆ.

ಗೊತ್ತಾಗಿದ್ದು ಹೇಗೆ?
ಸುಮಾರು ತಿಂಗಳ ಹಿಂದೆ, ಋಷಿಮುಖ ಪರ್ವತದಲ್ಲಿದ್ದ ಈಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಸಾಣಾಪುರ ಗ್ರಾಮಸ್ಥರೊಬ್ಬರು ಆಗಮಿಸಿದಾಗ ಮಾರಿಯಾನ್ ಗುಹೆಯಲ್ಲಿ ಸಿಲುಕಿರುವುದು ಗೊತ್ತಾಗಿದೆ. ಜನರು ಅಲ್ಲಿಗೆ ಬಂದು ಈಶ್ವರನ ಪೂಜೆ ಮಾಡುತ್ತಿದ್ದನ್ನು ಕಂಡು ಮಾರಿಯಾನ್ ಸಹ ನಿತ್ಯ ಪೂಜೆ ಮಾಡುತ್ತಿದ್ದಾನೆ. ಆಗಾಗ ಗ್ರಾಮಸ್ಥರು ಊಡ ಕೊಡುತ್ತಿದ್ದರು. ಕಿರ್ಲೋಸ್ಕರ ಕಂಪನಿಯ ನೌಕರ ಎಂ.ವೆಂಕಟರಮಣ ಎಂಬುವವರು ಮಾರಿಯಾನ್ ಸಂಕಷ್ಟ ಅರಿತು ದಿನಸಿ‌ ಕಿಟ್ ನೀಡಿದ್ದಾರೆ. ಆ ವೇಳೆ ಲಾಕ್‌ಡೌನ್ ಮುಗಿಯುವ ಕುರಿತು ಕೇಳಿರುವ ಮಾರಿಯಾನ್, ಲಾಕ್‌ಡೌನ್ ಮುಗಿದ ಬಳಿಕ ಇಟಲಿಗೆ ತೆರಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಕೋವಿಡ್-19 ಪರೀಕ್ಷೆ ಮಾಡಲಾಗಿದೆ:
ಇಟಲಿಯ ಮಾರಿಯಾನ್‌ಗೆ ಭಾರತದ ವಿವಿಧ ಪ್ರದೇಶಗಳ ಜೊತೆಗೆ ಸುಮಾರು 20 ವರ್ಷಗಳಿಂದಲೂ ನಂಟಿದೆ. ವಿಷಯ ಗೊತ್ತಾದ ಬಳಿಕ ವಿಚಾರಣೆ ನಡೆಸಿದಾಗ ಮಾರಿಯಾನ್ ಹಿಂದಿಯಲ್ಲೇ ಮಾತನಾಡಿದ. ಅಲ್ಲದೇ ಶ್ಲೋಕಗಳನ್ನು ಸಹ ಹೇಳುತ್ತಾನೆ. ಅದನ್ನು ಕಂಡು ನಮಗೆ ಅಚ್ಚರಿಯಾಯಿತು. ವಿದೇಶದನಾದ್ದರಿಂದ ಆತನಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ. ರಿಜಲ್ಟ್ ನೆಗೆಟಿವ್ ಬಂದಿದೆ. ಈಗ ಆತನನ್ನು ಇಟಲಿಗೆ ಕಳಿಸಿಕೊಡಲು ಬರುವುದಿಲ್ಲ. ಲಾಕ್‌ಡೌನ್ ಮುಗಿದ ಬಳಿಕ ಸರಕಾರ ಹಾಗೂ ಮೇಲಧಿಕಾರಿಗಳ ನಿರ್ದೇಶನದ ಪ್ರಕಾರ ಕ್ರಮಕ್ಕೆ ಮುಂದಾಗಲಾಗುವುದು.
-ಚಂದ್ರಕಾಂತ್, ತಹಸೀಲ್ದಾರ್, ಗಂಗಾವತಿ.

ವರದಿ: ಬಸವರಾಜ ಕರುಗಲ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com