ಮಂಡ್ಯ: ಬಾಂಬೆಯಿಂದ ಕೆಆರ್ ಪೇಟೆಗೆ ಬಂದ ಗರ್ಭಿಣಿಯಲ್ಲೂ ಕೊರೋನಾ ಪಾಸಿಟಿವ್!

ಮುಂಬೈಯಿಂದ ಕೆ.ಆರ್.ಪೇಟೆಗೆ ಬಂದ ಗರ್ಭಿಣಿ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸೇರಿದಂತೆ ಇಬ್ಬರಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಡ್ಯ: ಮುಂಬೈಯಿಂದ ಕೆ.ಆರ್.ಪೇಟೆಗೆ ಬಂದ ಗರ್ಭಿಣಿ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸೇರಿದಂತೆ ಇಬ್ಬರಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ. ಇದರೊಂದಿಗೆ ಮಂಡ್ಯ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ೨೮ಕ್ಕೆ ಏರಿಕೆಯಾದಂತಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ ವೆಂಕಟೇಶ್ ತಿಳಿಸಿದ್ದಾರೆ.

ಮಾದ್ಯಮಗಳಿಗೆ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಈ ವಿಷಯ ತಿಳಿಸಿರುವ ಅವರು, ಮೂಲತಃ ಕೆ.ಆರ್.ಪೇಟೆ ತಾಲ್ಲೂಕಿನ ಜಾಗಿನಕೆರೆ ಗ್ರಾಮದವರಾದ ಗರ್ಭಿಣಿ ಪಿ.೬೩೭ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿನಿ(೧೯ವರ್ಷ) ಪಿ.೬೩೮ ಅವರು ಬಾಂಬೆಯ ಸಾಂಥ್ ಕ್ರೋಸ್ ಈಷ್ಟ್ ನ್ಯೂ ಅಗ್ರಿಪಾಡದಲ್ಲಿ ವಾಸವಾಗಿದ್ದರು ಎಂದು ಹೇಳಿದ್ದಾರೆ. 

ಕಳೆದ ಮೂರು-ನಾಲ್ಕು ವರ್ಷಗಳಿಂದ ಮುಂಬೈನಲ್ಲಿ ವಾಸವಾಗಿದ್ದ ಪಿ ೬೩೭ ಅವರು ೭ ತಿಂಗಳ ಗರ್ಭಿಣಿಯಾಗಿದ್ದು, ಮುಂಬೈನಿಂದ ತಾಯಿ ಕಾರ್ಡ್ ತೋರಿಸಿ ಕೆ.ಆರ್.ಪೇಟೆಗೆ ಇನ್ನೋವಾ ಕಾರ್‌ನಲ್ಲಿ ಆಕೆಯ ಪತಿ, ಅತ್ತೆ, ಮಾವ ಮತ್ತು ಅವರ ಮಕ್ಕಳು ಸೇರಿದಂತೆ ೭ ಜನರೊಟ್ಟಿಗೆ ಬಂದಿದ್ದರು.

ಏಪ್ರಿಲ್ ೨೩ರಂದು ಸಂಜೆ ಮುಂಬೈನಿಂದ ಹೊರಟು, ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆ, ಕಡೂರು, ಅರಸೀಕೆರೆ, ಚನ್ನರಾಯಪಟ್ಟಣ, ಶ್ರವಣಬೆಳಗೊಳ ಚೆಕ್ ಪೋಸ್ಟ್ ಮೂಲಕ ಸ್ವಗ್ರಾಮ ಜಾಗನಕೆರೆಗೆ ಬಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಏ.೨೪ ರಿಂದ ೨೯ ರ ವರೆಗೆ ಮನೆಯಲ್ಲೇ ವಾಸವಾಗಿದ್ದರು. ಮೇ ೧ರಂದು ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಕೊರೋನಾ ವರದಿ ಪಾಸಿಟಿವ್ ಬಂದಿದೆ. ಇವರಿಬ್ಬರು ಒಂದೇ ಕಾರಿನಲ್ಲಿ ಮುಂಬೈನಿಂದ ಬಂದಿದ್ದರು. ಸದ್ಯ ಇವರಿಗೆ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಇನ್ನೂ ಗರ್ಭಿಣಿಯೊಂದಿಗೆ ಬಂದಿರುವ ಇಂಜಿನಿಯರಿಂಗ್ ವಿದ್ಯಾರ್ಥಿನಿ ಪಿ.೬೩೮,ಬಾಂಬೆಯ ಎಲ್.ಆರ್.ತಿವಾರಿ ಕಾಲೇಜಿನಲ್ಲಿ ೬ ನೇ ಸೆಮಿಸ್ಟರ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾಳೆ. ಬಾಂಬೆಯ ಸಾಂತಾಕ್ರೋಸ್ ಈಸ್ಟ್ ನ್ಯೂ ಅಗ್ರವಾಪಾಡನಲ್ಲಿ ತನ್ನ ಸಹೋದರರೊಂದಿಗೆ ವಾಸವಿದ್ದಳೆಂದು ಅವರು ತಿಳಿಸಿದ್ದಾರೆ.

ಮುಂಬೈಯಿಂದ ಆಗಮಿಸಿದ ಗರ್ಭಿಣಿಯನ್ನು ಸಂಬಂಧಿಕರು ಹಾಗೂ ಅಕ್ಕಪಕ್ಕದವರು ಗ್ರಾಮೀಣ ಸಂಪ್ರದಾಯದಂತೆ ತಮ್ಮ ಮನೆಗೆ ಕರೆಸಿ ಊಟ ಹಾಕಿದ್ದಾರೆ. ಈಗ ಊಟ ಹಾಕಿದ ಮನೆಮಂದಿಗೆಲ್ಲ ಕೊರೋನಾ ಸೋಂಕಿನ ಭಯ ಶುರುವಾಗಿದೆ. ಈಕೆಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ೩೦ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಕಂಟೈನ್‌ಮೆಂಟ್ ಜೋನ್
ಜಾಗಿನಕೆರೆ ಗ್ರಾಮವನ್ನು ಕಂಟೈನ್‌ಮೆಂಟ್ ಜೋನ್ ಎಂದು ಘೋಷಿಸಿದ ಬಳಿಕ ಗ್ರಾಮವನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳಿಗೂ ಬ್ಯಾರಿಕೇಡ್‌ಗಳನ್ನು ಹಾಕಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದ್ದು,  ಪೋಲಿಸರ ಕಣ್ಗಾವಲಿನಲ್ಲಿದೆ.

ಗ್ರಾಮದಲ್ಲಿ ಜನರ ಓಡಾಟವನ್ನು ನಿಷೇದಿಸಲಾಗಿಸಲಾಗಿದ್ದು, ಜಾನುವಾರು ಇರುವ ಮನೆಯವರು ಮಾತ್ರ ಗ್ರಾಮದಲ್ಲಿ ಇದ್ದು, ಕೆಲವು ಕುಟುಂಬಗಳು ಮನೆಗೆ ಬೀಗ ಹಾಕಿ ತೋಟದ ಮನೆಗಳಲ್ಲಿ ವಾಸಮಾಡುತ್ತಿದ್ದಾರೆ. ಯಾರೋಬ್ಬರು ಕೂಡಾ ಅನಗತ್ಯವಾಗಿ ಓಡಾಡದಂತೆ ತಾಲ್ಲೂಕು ಆಡಳಿತವು ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಬಫರ್‌ಜೋನ್ ಗ್ರಾಮಗಳಲ್ಲಿ ಯಾರಿಗಾದರೂ ಶೀತ, ಜ್ವರ, ಕೆಮ್ಮು, ನೆಗಡಿ ಮುಂತಾದ ರೋಗ ಲಕ್ಷಣಗಳು ಕಂಡುಬಂದರೆ ಸ್ಥಳೀಯ ಆಶಾ ಕಾರ್ಯಕರ್ತೆಯರಿಗೆ ಅಥವಾ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಲು ತಾಲ್ಲೂಕು ಆಡಳಿತ ತಿಳಿಸಿದೆ. 

ಕೊರೋನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಜಾಗಿನಕೆರೆ ಸುತ್ತಮುತ್ತಲಿನ ೭ ಕಿ.ಮೀ. ವ್ಯಾಪ್ತಿಯಲ್ಲಿರುವ ಕೆ.ಆರ್.ಪೇಟೆ ತಾಲ್ಲೂಕಿನ ೪೮ ಗ್ರಾಮಗಳಾದ  ಕೊಟಗಹಳ್ಳಿ, ಬೊಪ್ಪನಹಳ್ಳಿ, ದುಗ್ಗನಹಳ್ಳಿ, ರಂಗನಾಥಪುರ, ಬಿಲ್ಲೇನಹಳ್ಳಿ, ಜೊತ್ತನಪುರ, ಚಿಕ್ಕಹಾರನಹಳ್ಳಿ, ದಾಸಗೋಳಪುರ, ಹೆತ್ತಗೋನಹಳ್ಳಿ, ಗೊರವಿ, ಯಲಾದಹಳ್ಳಿ, ಸೋಮೇನಹಳ್ಳಿ, ನಾಯಕನಹಳ್ಳಿ, ಹರಪ್ಪನಹಳ್ಳಿ, ಹಲಗೆಹೊಸಹಳ್ಳಿ, ಆದಿಹಳ್ಳಿ, ಮಾಚಹಳ್ಳಿ, ಸಾರಂಗಿ, ಶ್ಯಾರಹಳ್ಳಿ,  ಕೊರಟೀಕೆರೆ, ಬಳ್ಳೇಕೆರೆ, ಕೈಗೋನಹಳ್ಳಿ,  ನಗರೂರು, ಮಾರ್ಗೋನಹಳ್ಳಿ, ವಳಗೆರೆ ಮೆಣಸ, ಮಲ್ಲೇನಹಳ್ಳಿ ತಮ್ಮಡಹಳ್ಳಿ, ಕ್ಯಾತನಹಳ್ಳಿ, ಸಿಂಧಘಟ್ಟ, ರಾಯಸಮುದ್ರ, ಅಂಕನಾಥಪುರ, ಚಾಮಲಾಪುರ, ಹರೀನಹಳ್ಳಿ, ಚಿಲ್ಲದಹಳ್ಳಿ, ಅರೆಬೊಪ್ಪನಹಳ್ಳಿ, ಕೋಮನಹಳ್ಳಿ, ಅಗ್ರಹಾಯಬಾಚಹಳ್ಳಿ, ಬಂಡಬೋಯಿಗನಹಳ್ಳಿ, ಕೋಡಿಹಳ್ಳಿ, ಬೊಮ್ಮನಾಯಕನಹಳ್ಳಿ, ಹತ್ತಿಮಾರನಹಳ್ಳಿ, ಉಯ್ಗೋನಹಳ್ಳಿ, ಚಾಕನಾಯಕನಹಳ್ಳಿ, ಮರುವನಹಳ್ಳಿ, ಹರಳಹಳ್ಳಿ, ಮೈಲನಹಳ್ಳಿ ಹಾಗೂ ನಾಗಮಂಗಲ ತಾಲ್ಲೂಕಿನ ಕೋರವನಹುಂಡಿ ಒಂದು ಗ್ರಾಮವನ್ನು ಬಫರ್ ಜೋನ್ ಎಂದು ಕೆ.ಆರ್.ಪೇಟೆ ತಾಲ್ಲೂಕು ಆಡಳಿತವು ಘೋಷಣೆ ಮಾಡಿದೆ ಎಂದು ತಹಶೀಲ್ದಾರ್ ಶಿವಮೂರ್ತಿ ತಿಳಿಸಿದ್ದಾರೆ. ಸಂತೇಬಾಚಹಳ್ಳಿ ಹೋಬಳಿಯ ಜಾಗಿನಕರೆ ಗ್ರಾಮದಲ್ಲಿ ಒಟ್ಟು ೩೪೯ ಮನೆಗಳಿದ್ದು, ೧೩೩೦ ಜನಸಂಖ್ಯೆ ಇದೆ. 

ಜಾಗಿನಕೆರೆ ಗ್ರಾಮಕ್ಕೆ ಮಂಡ್ಯ ಜಿಲ್ಲಾ ಎಸ್.ಪಿ. ಪರಶುರಾಮ್, ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ, ತಹಶೀಲ್ದಾರ್ ಶಿವಮೂರ್ತಿ, ಸರ್ಕಲ್ ಇನ್ಸ್ಪೆಕ್ಟರ್, ಸುಧಾಕರ್,  ತಾಲ್ಲೂಕು ಪಂಚಾಯ್ತಿ ಕಾಯ ನಿರ್ವಹಣಾಧಿಕಾರಿ ಚಂದ್ರಮೌಳಿ, ಸಬ್‌ಇನ್ಸ್ಪೆಕ್ಟರ್ ಬ್ಯಾಟರಾಯಗೌಡ, ಆರ್.ಐ. ರಾಮಚಂದ್ರಪ್ಪ ಸಾರಂಗಿ ಪಿಡಿಓ ಯೋಗೇಶ್ ಸೇರಿದಂತೆ ಹಲವು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ೨ ಊರಿನವರಿಗೆ ಕ್ವಾರಂಟೈನ್
ಮುಂಬೈನಿಂದ ಶವ ತಂದು ಅಂತ್ಯ ಸಂಸ್ಕಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್. ಪೇಟೆ ತಾಲೂಕಿನ ಜಾಗಿನಕೆರೆ ಹಾಗೂ ಸಾರಂಗಿ ಗ್ರಾಮದ ೧೪ ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇವರೆಲ್ಲಾ ದ್ವಿತೀಯ ಸಂಪರ್ಕಿತರು ಎಂದು ಹೇಳಲಾಗಿದೆ.

ಈ ಸಂಬಂಧ ಮಾಜಿ ಸಚಿವ ಪುಟ್ಟರಾಜು ಮುಂಬೈನಿಂದ ಶವದ ಜೊತೆ ಮತ್ತೊಬ್ಬರು ಬಂದಿದ್ದರು ಎಂದು ತಿಳಿಸಿದ್ದ ತಕ್ಷಣ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು, ಎಂಟು ಮಂದಿ ಪುರುಷರು ಹಾಗೂ ಆರು ಮಂದಿ ಮಹಿಳೆಯರನ್ನು ಕ್ವಾರಂಟೈನ್ ಮಾಡಿದ್ದಾರೆ. 

ಕೊರೊನಾ ಆತಂಕ ನಡುವೆ ಜಿಲ್ಲೆಗೆ ಸಿಹಿ ಸುದ್ದಿ
ಕೊರೋನಾ ಆತಂಕದ ನಡುವೆಯೂ ಮಂಡ್ಯ ಜಿಲ್ಲೆಗೆ ಸಿಹಿ ಸುದ್ದಿ ಸಿಕ್ಕಿದೆ, ಇಂದು ಮತ್ತೆ ಮೂವರು ಕೊರೊನಾ ಮುಕ್ತರಾಗಿದ್ದು, ಗುಣಮುಖರಾದ ಪಿ೧೭೯,೨೩೮,೨೩೯ ಈ ಮೂವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಏ.೨೫ರಂದು ನಾಲ್ವರು ಡಿಸ್ಚಾರ್ಜ್ ಆಗಿದ್ರು. ಇಂದು ಗುಣಮುಖರಾದ ಮೂವರು ಸೇರಿ ಜಿಲ್ಲೆಯಲ್ಲಿ ಒಟ್ಟು ೭ ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು ೨೮ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದು ಗುಣಮುಖರಾದ ೭ ಜನ ಹೊರತುಪಡಿಸಿ ಸದಯಕ್ಕೆ ಜಿಲ್ಲೆಯಲ್ಲಿ ಒಟ್ಟು ೨೧ ಆಕ್ಟೀವ್ ಕೇಸ್‌ಗಳಿವೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.
-ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com