ಮದುವೆ ತಂದ ಕೊರೋನಾ ಆತಂಕ: ನಿಲೋಗಲ್ ಆಯ್ತು, ಈಗ ಹನುಮನಾಳ ಸರದಿ!

ಕೊಪ್ಪಳದ ಹನುಮನಾಳದಲ್ಲಿ ನಡೆದ ಮದುವೆಯೊಂದು ಇದೀಗ ಕೊರೋನಾ ಆತಂಕಕ್ಕೆ ಕಾರಣವಾಗಿದ್ದು, ಹಸಿರು ವಲಯದಲ್ಲಿರುವ ಕೊಪ್ಪಳ ಸೇಫ್ ಝೋನ್ ನಿಂದ ಹೊರ ಬೀಳುವ ಆತಂಕ ಎದುರಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊಪ್ಪಳ: ಕೊಪ್ಪಳದ ಹನುಮನಾಳದಲ್ಲಿ ನಡೆದ ಮದುವೆಯೊಂದು ಇದೀಗ ಕೊರೋನಾ ಆತಂಕಕ್ಕೆ ಕಾರಣವಾಗಿದ್ದು, ಹಸಿರು ವಲಯದಲ್ಲಿರುವ ಕೊಪ್ಪಳ ಸೇಫ್ ಝೋನ್ ನಿಂದ ಹೊರ ಬೀಳುವ ಆತಂಕ ಎದುರಾಗಿದೆ.

ದಾವಣಗೆರೆ ಜಿಲ್ಲೆ ಹಸಿರು ವಲಯದಲ್ಲಿದ್ದು, ಒಮ್ಮೆಲೆ ಕೊರೋನಾ ಪ್ರಕರಣಗಳ ಸ್ಪೋಟದಿಂದಾಗಿ ಕೆಂಪು ವಲಯದ ಸನಿಹಕ್ಕೆ ಬಂದು ನಿಂತಿದೆ. ಹಾಗೆಯೇ ಹಾವೇರಿ ಸಹ ಹಸಿರು ವಲಯದಿಂದ ಕಿತ್ತಳೆ ವಲಯಕ್ಕೆ ಸೇರಿದೆ. ಈಗ ಸದ್ಯ ಹಸಿರು ವಲಯದಲ್ಲಿ ಸೇಫ್ ಆಗಿರುವ ಕೊಪ್ಪಳ ಜಿಲ್ಲೆಗೂ  ಹಸಿರು ವಲಯ ಕೈ ತಪ್ಪುವ ಆತಂಕ ಶುರುವಾಗಿದೆ. ಇಷ್ಟಕ್ಕೆಲ್ಲ ಕಾರಣವಾದದ್ದು, ನಿಷೇಧಾಜ್ಞೆಯ ಮಧ್ಯೆಯೂ ನಡೆದ ಮದುವೆ!

ಹೌದು.. ಬಾಗಲಕೋಟೆ ಜಿಲ್ಲೆಯಲ್ಲಿ ಮೇ 6 ರಂದು 13 ಕೊರೊನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದವು. ಅದರಲ್ಲಿದ್ದ p-681 ಮತ್ತು p-684 ಅವರ ಟ್ರಾವೆಲ್ ಹಿಸ್ಟರಿಯನ್ನ ಬಾಗಲಕೋಟೆ ಜಿಲ್ಲಾಡಳಿತ ಮೇ 7ರಂದು ಸಂಜೆ ಬಿಡುಗಡೆ ಮಾಡಿದೆ. ಈ ಟ್ರಾವೆಲ್ ಹಿಸ್ಟರಿ ಗಮನಿಸಿದರೆ  ಬೆರಳೆಣಿಕೆಯ ಕೊರೊನಾ ಪಾಸಿಟಿವ್ ಕೇಸ್ ಹೊಂದಿದ್ದ ಗದಗ ಜಿಲ್ಲೆಯಲ್ಲಿ ದೊಡ್ಡ ಆತಂಕ ಮೂಡಿದೆ. ಯಾಕೆಂದರೆ ಟ್ರಾವೆಲ್ ಹಿಸ್ಟರಿಯಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ 8 ಹಳ್ಳಿಗಳ ಹೆಸರಿವೆ. ಹಾಗೆಯೇ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದ ಹೆಸರೂ  ಸ್ಪಷ್ಟವಾಗಿರುವುದರಿಂದ ಬಹುತೇಕ ಸೇಫ್ ಆಗಿದ್ದ ಕೊಪ್ಪಳ ಕ್ರಿಟಿಕಲ್ ಸ್ಟೇಜ್ ತಲುಪುತ್ತಿದೆ.

ಗದಗ ಜಿಲ್ಲೆಯ ಆತಂಕ ಇಷ್ಟಕ್ಕೆ‌ ಮುಗಿಯಲಿಲ್ಲ, p-683, p-688 ಹಾಗೂ p-691 ಟ್ರಾವೆಲ್ ಹಿಸ್ಟರಿಯಲ್ಲೂ ಗದಗ ಜಿಲ್ಲೆಯ ಸರ್ಜಾಪುರ, ಹಿರೇಹಾಳ, ಬಸರಕೋಡ ಹಾಗೂ ಹೊಳೆಹಳ್ಳಿ‌ ಹೆಸರುಗಳಿವೆ. P-681 ಮತ್ತು p-684 ಟ್ರಾವೆಲ್ ಹಿಸ್ಟರಿಯಲ್ಲಿ ಹಿರೇಹಾಳ, ಬಸರಕೋಡ,  ಹೊಳೆಹಳ್ಳಿ, ಮುಶಿಗೇರಿ, ಶಾಂತಗಿರಿ, ಹೊಳೆಹಡಗಲಿ, ತೊಗಲದಿನ್ನಿ ಮತ್ತು ಕೊತಬಾಳ‌ ಗ್ರಾಮಗಳ ಹೆಸರಿದ್ದು, ಗದಗ ಜಿಲ್ಲೆಯ ಎಂಟೂ ಹಳ್ಳಿಗಳಲ್ಲಿ ಆತಂಕ ಮನೆ ಮಾಡಿದೆ. ಕೊಪ್ಪಳ ಜಿಲ್ಲೆಯಲ್ಲಿ ನಿಲೊಗಲ್ ಗ್ರಾಮದ 18 ಜನರನ್ನು ಮೇ 7ರಂದು ಕ್ವಾರಂಟೈನ್ ಮಾಡಲಾಗಿದೆ. ಇವರೆಲ್ಲ  ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಡಾನಕ್‌ಶಿರೂರು ಗ್ರಾಮದ ಕೊರೊನಾ ಸೋಂಕು ದೃಢಪಟ್ಟ ವ್ಯಕ್ತಿಯೊಬ್ಬನ ಮಗಳ ಮದುವೆಯಲ್ಲಿ ಪಾಲ್ಗೊಂಡಿದ್ದರು. ಇವರ ಗಂಟಲು ದ್ರವದ ಸ್ಯಾಂಪಲ್‌ನ್ನು ಲ್ಯಾಬ್‌ಗೆ ಕಳಿಸಲಾಗಿದ್ದು ಇಂದು ಮಧ್ಯಾಹ್ನ  ಫಲಿತಾಂಶ ಹೊರಬೀಳುವ  ಸಾಧ್ಯತೆ ಇದೆ.

ಬಾಗಲಕೋಟೆ ಜಿಲ್ಲೆಯ ಬಿಡುಗಡೆ ಮಾಡಿರುವ ಟ್ರಾವೆಲ್ ಹಿಸ್ಟರಿ‌ ಗಮನಿಸಿದರೆ, ಮದುವೆ ಆಮಂತ್ರಣ ನೀಡಲು ಹಿಸ್ಟರಿಯಲ್ಲಿರುವ ಊರುಗಳಿಗೆ ತೆರಳಿದ್ದು ಬಹುತೇಕ ಖಚಿತವಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೊರೊನಾ ವೈರಸ್ ಬಾಗಲಕೋಟೆ ಟು ಗದಗ, ಕೊಪ್ಪಳ  ಸಂಚರಿಸಿದಂತಿದೆ. ವೈದ್ಯಾಧಿಕಾರಿಗಳನ್ನ ಹನುಮನಾಳ ಗ್ರಾಮಕ್ಕೆ ಕಳಿಸಲಾಗಿದೆ. ಡಾನಕ್‌ಶಿರೂರಿನ ಸೋಂಕು ದೃಢಪಟ್ಟ ವ್ಯಕ್ತಿಗಳು ಹನುಮನಾಳದಲ್ಲಿ ಎಷ್ಟು ಜನರ ಮನೆಗೆ ಭೇಟಿ‌ ನೀಡಿದ್ದರು ಎಂಬ ಮಾಹಿತಿ ಸಂಗ್ರಹಿಸಿ, ಅವರನ್ನು ಹಾಗೂ ಅವರು ಓಡಾಡಿದ ಜಿಲ್ಲಾ ವ್ಯಾಪ್ತಿಯ  ಸ್ಥಳಗಳನ್ನು ಪರಿಶೀಲಿಸಲಾಗುವುದು. ಈವರೆಗೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಕೇಸ್‌ಗಳಿಲ್ಲ. ಜನ ಆತಂಕಕ್ಕೆ ಒಳಗಾಗಬಾರದು. ಜಿಲ್ಲಾಡಳಿತ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ತಿಳಿಸಿದರು.

ವರದಿ: ಬಸವರಾಜ ಕರುಗಲ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com