ಮಂಡ್ಯ ರೈತರ ಜೀವನಾಡಿ ಪಿಎಸ್ಎಸ್ ಕೆ ಆರಂಭಕ್ಕೆ ದಿನಗಣನೆ

ಮಂಡ್ಯ ಜಿಲ್ಲೆಯ ಪಾಂಡವಪುರ ಮತ್ತು ಶ್ರೀರಂಗಪಟ್ಟಣ ಭಾಗದ ರೈತರ ಜೀವನಾಡಿ ಪಿಎಸ್ಎಸ್ ಕೆ  ಪುನರ್ ಆರಂಭಕ್ಕೆ ದಿನಗಣನೆ ಆರಂಭಗೊಂಡಿದ್ದು, ಮೇ.೧೩ ರಂದು ಕಾರ್ಖಾನೆಯ ಖಾಸಗೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆಗಸ್ಟ್ ಮೊದಲ ವಾರ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ಮತ್ತು ಶ್ರೀರಂಗಪಟ್ಟಣ ಭಾಗದ ರೈತರ ಜೀವನಾಡಿ ಪಿಎಸ್ಎಸ್ ಕೆ  ಪುನರ್ ಆರಂಭಕ್ಕೆ ದಿನಗಣನೆ ಆರಂಭಗೊಂಡಿದ್ದು, ಮೇ.೧೩ ರಂದು ಕಾರ್ಖಾನೆಯ ಖಾಸಗೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆಗಸ್ಟ್ ಮೊದಲ ವಾರ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ.

ಈ ಬಾರಿ ಕಾರ್ಖಾನೆಯನ್ನು ಸುಧೀರ್ಘ ೪೦ ವರ್ಷಗಳ ಕಾಲ ಖಾಸಗೀಕರಣಕ್ಕೆ ವಹಿಸಲು ನಿರ್ಧರಿಸಿರುವುದರಿಂದ ಕೋಜನ್ ಹಾಗೂ ಡಿಸ್ಟಿಲರಿ ಘಟಕಗಳು ಕಾರ್ಯಾರಂಭ ಮಾಡುವ ಸಾಧ್ಯತೆಯಿದ್ದು ಇದಕ್ಕಾಗಿಯೇ ಸರ್ಕಾರ ಕಾರ್ಖಾನೆ ಗುತ್ತಿಗೆ ಪಡೆಯುವವರಿಂದ ಒಪಂದವನ್ನೂ ಸಹ ಮಾಡಿಕೊಳ್ಳಲಿದೆ.

ಮೇ ೧೩ ಕ್ಕೆ ಕಾರ್ಖಾನೆಯನ್ನು ಯಾವ ಕಂಪನಿಗೆ ಖಾಸಗೀಕರಣಗೊಳಿಸಲಾಗುತ್ತದೆ ಎಂಬುದು ಕೂಡ ಗೊತ್ತಾಗಲಿದೆ. ಈಗಾಗಲೆ ಈ ಮೊದಲು ಗುತ್ತಿಗೆ ಪಡೆದಿದ್ದ ಕೊಠಾರಿ ಸೇರಿದಂತೆ ೧೦ ಕ್ಕೂ ಹೆಚ್ಚು ಕಂಪನಿಗಳು ಕಾರ್ಖಾನೆಯನ್ನು ಗುತ್ತಿಗೆಪಡೆಯಲು ಮುಂದೆ ಬಂದಿವೆ ಎನ್ನಲಾಗಿದ್ದು, ಟೆಂಡರ್ ಓಪನ್ ಆದ ಬಳಿಕ ಅಧಿಕೃತ ಮಾಹಿತಿ ಹೊರಬೀಳಲಿದೆ.

ಅದರಂತೆ ಗುತ್ತಿಗೆ ಪಡೆಯುವವರು ಸರ್ಕಾರದ ನಿಬಂಧನೆಗಳಿಗೆ ಒಳಪಟ್ಟು ಕೋಜನ್, ಡಿಸ್ಟಿಲರಿ ಘಟಕ ಆರಂಭಿಸಬೇಕಾಗಿದೆ. ೨೦೨೦ರ ಜೂನ್ ನಿಂದ ೨೦೨೧ರ ಮಾರ್ಚ್ ವರೆಗೆ ಪಿಎಸ್ಎಸ್ಕೆ ವ್ಯಾಪ್ತಿಯಲ್ಲಿ ೮ ಲಕ್ಷ ಟನ್ ಕಬ್ಬು ದೂರೆಯಲ್ಲಿದ್ದು, ಕಾರ್ಖಾನೆ ಸುಲಲಿತವಾಗಿ ನಡೆಯಲು ಯಾವುದೇ ತೊಂದರೆಯಿಲ್ಲ. ಅಲ್ಲದೆ ರೈತರಿಗೆ ಯಾವುದೇ ಕಬ್ಬಿನ ಬಾಕಿ ಹಣವನ್ನು ನೀಡಬೇಕಾಗಿಲ್ಲ. ಈ ಎಲ್ಲಾ ಅಂಶಗಳ ಆಧಾರದ ಮೇಲೆ ಕಾರ್ಖಾನೆ ಸಣ್ಣ ಪುಟ್ಟ ಆಧುನಿಕರಣದೂಂದಿಗೆ ಆರಂಭವಾಗಲೂ ಯಾವುದೇ ಅಡಚಣೆ ಇಲ್ಲ.

ಕಾರ್ಖಾನೆಯ ನೌಕರರಿಗೆ ೩೬ ತಿಂಗಳ ಸಂಬಳ ನೀಡಬೇಕಾಗಿದ್ದು, ಈ ಬಾಕಿ ವೇತನ, ಆಧುನೀಕರಣದ ಖರ್ಚುನ್ನು ಗುತ್ತಿಗೆ ಪಡೆಯುವವರೆ ಬರಿಸಬೇಕಾಗಿದ್ದು, ಈ ಕರ್ಚು ಭರಿಸಿಕೊಳ್ಳಲು ೧೨ ಮೇಘಾ ವ್ಯಾಟ್ ವಿದ್ಯುತ್ ಬಳಸಿಕೊಳ್ಳಬಹುದಾಗಿದೆ.

ಪ್ರತಿನತ್ಯ ೩೫೦೦ ಟನ್ ಕಬ್ಬು ಅರೆಯುವ ಸಾಮರ್ಥ್ಯ ಇರುವುದರಿಂದ ಮುಂದೆ ಅದನ್ನು ೫ ಸಾವಿರ ಟನ್ ಗೆ ವಿಸ್ತರಣೆ ಮಾಡಿಕೊಂಡು, ರೈತರ ಮತ್ತು ಕಾರ್ಮಿಕರ ಹಿತಕಾಪಾಡುವಂತೆ ಸರ್ಕಾರ ಟೆಂಡರ್ನಲ್ಲಿ ನಿಬಂಧನೆ ವಿಧಿಸಿದೆ. ಈ ನಿಯಮಗಳನ್ನು ಗುತ್ತಿಗೆ ಪಡೆಯುವವರು ಪಾಲಿಸಿಕೊಂಡು ಹೊಗಬೇಕಾಗುತ್ತದೆ.

ಪಿಎಸ್ಎಸ್ಕೆ ನಡೆದು ಬಂದ ದಾರಿ
ಸಹಕಾರಿ ದುರಿಣ,ಮಾಜಿ ಶಾಸಕ ಬಿ.ವೈ.ನೀಲೇಗೌಡರ ನೇತೃತ್ವದಲ್ಲಿ ೧೯೫೯ರಲ್ಲಿ ಸ್ಥಾಪನೆಯಾದ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭದಲ್ಲಿ ೮೦೦ ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿತ್ತು ೧೦ ವರ್ಷಗಳ ಕಾಲ ಬಿ.ವೈ.ನೀಲೇಗೌಡರೆ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು, ಆಲ್ಲದೆ ರಾಜ್ಯದಲ್ಲೇ ಪ್ರಥಮ ಸಹಕಾರಿ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತ್ತು.

೧೯೭೧-೭೨ರಲ್ಲಿ ಚಿಕ್ಕರಾಮಾಂಜೇಗೌಡರು ಅಧ್ಯಕ್ಷರಾದಾಗ ಮಿಲ್ ನ ಆಧುನಿಕರಣಗೊಳಿಸಿ ೧೩೦೦ ಟನ್ ಸಾಮರ್ಥ್ಯಕ್ಕೆ ಏರಿಸಲಾಯಿತು, ಅಲ್ಲಿಂದ ೧೯೯೬ರ ವರೆಗೂ ಕಾರ್ಖಾನೆ ಯಾವುದೇ ತೊಂದರೆ ಇಲ್ಲದೆ ನಡೆದುಕೊಂಡು ಬಂತು, ೧೯೯೭ರಲ್ಲಿ ಕೆನ್ನಾಳು ರಾಮಕೃಷ್ಣೇಗೌಡ ಅಧ್ಯಕ್ಷರಾದಾಗ ಮತ್ತೆ ಮಿಲ್ ನ ಆಧುನಿಕರಣಗೊಳಿಸಿ ಕಬ್ಬು ಅರೆಯುವ ಸಾಮರ್ಥ್ಯವನ್ನು ೩೫೦೦ ಟನ್ ಗೆ ಏರಿಸಲಾಯಿತು.

ಪ್ರಾರಂಭದಲ್ಲಿ ಪ್ರತಿದಿನ ೩ ಸಾವಿರ ಟನ್ ಕಬ್ಬು ಅರೆಯಲಾಗುತ್ತಿತ್ತು. ಆದರೆ ಅದೇ ಸಂದರ್ಭದಲ್ಲಿ ವಿ.ಸಿ.ನಾಲೆಯ ಆಧುನೀಕರಣದಿಂದ ಕೆ.ಆರ್.ಎಸ್.ಜಲಾಶಯದಿಂದ ನೀರು ನಿಲ್ಲಿಸಿದ ಪರಿಣಾಮ ಕಬ್ಬು ಸರಬರಾಜಾಗದೆ ೧ ವರ್ಷ ಕಬ್ಬು ಅರೆಯದೆ ಕಾರ್ಖಾನೆ ಸ್ಥಗಿತಗೊಡಿತ್ತು, ೨೦೦೪ರ ವರೆಗೂ ಇದೆ ಪರಿಸ್ಥಿತಿ ಮುಂದುವರೆದಿದ್ದರಿಂದ ಆಡಳಿತ ಮಂಡಳಿಯನ್ನು ವಿಸರ್ಜಿಸಿ ಜಿಲ್ಲಾಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಯಿತು.

ಈ ಸಂದರ್ಭದಲ್ಲಿ ಸರ್ಕಾರ ೨೦೦೫ರಿಂದ ೭ ವರ್ಷಗಳ ಕಾಲ ಕಾರ್ಖಾನೆಯನ್ನು ಕೊತಾರಿ ಕಂಪನಿಗೆ ಗುತ್ತಿಗೆ ನೀಡಿತ್ತು. ಪ್ರಥಮ ವರ್ಷ ೬೫೦೦ ಲಕ್ಷ ಟನ್ ಕಬ್ಬು ಅರೆದು ಇತಿಹಾಸ ನಿರ್ಮಿಸಿದ ಕೊತಾರಿ ಕಂಪನಿ ಕಾರ್ಖಾನೆಯಲ್ಲಿ ಕೋಜನ್,ಡಿಸ್ಟಲರಿ ಘಟಕ ಆರಂಭಿಸಲು ೩೦ ವರ್ಷ ಗುತ್ತಿಗೆ ಮುಂದುವರಿಸುವಂತೆ ಕೋರಿತ್ತು. ಇದಕ್ಕೆ ಸರ್ಕಾರ ಹಾಗೂ ಆಡಳಿತ ಮಂಡಳಿ ಒಪ್ಪಿಗೆ ನಿಡದಿದ್ದಾಗ ೨೦೦೯ ರಲ್ಲಿ ತನ್ನ ಗುತ್ತಿಗೆಯನ್ನು ಹಿಂಪಡೆದುಕೊಂಡಿತ್ತು, ೨೦೦೯ ರಿಂದ ೨೦೧೨ ರವರೆಗೆ ಪಿಎಸ್ಎಸ್ಕೆಯನ್ನು ಮಂಡ್ಯ ಮೈಷುಗರ್ನೊಂದಿಗೆ ವಿಲೀನ ಮಾಡಿ ಮೈಷುಗರ್ ಅಧ್ಯಕ್ಷರಾಗಿದ ನಾಗರಾಜಪ್ಪ ಅವರನ್ನೇ ಇಲ್ಲಿಗೂ ಅಧ್ಯಕ್ಷರನ್ನಾಗಿ ಮುಂದುವರೆಸಲಾಯಿತು. ಈ ಸಂಧರ್ಭದಲ್ಲ್ಲೂಕಾರ್ಖಾನೆ ಸರಿಯಾಗಿ ನಡೆಯದೆ ರೈತರಿಗೆ ಬಾಕಿ ಪಾವತಿಸಲಾಗದೆ ಆರ್ಥಿಕ ನಷ್ಟ ಅನುಭವಿಸಿತು.

ಬಳಿಕ ೨೦೧೨ರಂದ ೨೦೧೪ರವರೆಗೂ ಸರ್ಕಾರ ಐಎಎಸ್ ಅಧಿಕಾರಿ ಜ್ಯೋತೀಂದ್ರ ಅವರನ್ನು ಎಂಡಿಯನ್ನಾಗಿ ನೇಮಿಸಿತ್ತು ಮತ್ತೆ ೨೦೧೪ ರಲ್ಲಿ ಆಡಳಿತ ಮಂಡಳಿಗೆ ಚುನಾವಣೆ ನಡೆದು ರೈತಸಂಘ ಹಾಗೂ ಕಾಂಗ್ರೆಸ್ ಮೈತ್ರಿ ಆಡಳಿತ ಅಧಿಕಾರಕ್ಕೆ ಬಂದು ಕೆ.ಎಸ್.ನಂಜುಂಡೇಗೌಡ ಎರಡೂವರೇ ವರ್ಷ ಅಧ್ಯಕ್ಷರಾಗಿ, ಕಾಂಗ್ರೆಸ್ನ ಹಾರೋಹಳ್ಳಿ ನಂಜುಂಡೇಗೌಡ ೧ ವರ್ಷ ಹಾಗೂ ದರಸಗುಪ್ಪೆ ಧನಂಜಯ್ಯ ಅವರು ೨೦೧೯ ರವರೆಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

೨೦೧೭-೧೮ರಲ್ಲಿ ಬರ ಪರಿಸ್ಥಿತಿ ಎದುರಾದ ಹಿನ್ನಲೆಯಲ್ಲಿ ಕಾರ್ಖಾನೆ ನಡೆಸಲು ದೆಹಲಿಯ ಎನ್.ಸಿ.ಡಿ.ಸಿ. ಬ್ಯಾಂಕ್,ಎಡಿಸಿಸಿ ಬ್ಯಾಂಕ್,ಐಸಿಐಸಿಐ ಬ್ಯಾಂಕ್ಗಳಿಂದ ೨೫೦ ಕೋಟಿ ಸಾಲ ಪಡೆಯಿತು, ಬಳಿಕ ಸಾಲ ತೀರಿಸಲಾಗದೆ ನೌಕರರಿಗೆ ಸಂಬಳ ನೀಡಲಾಗದೆ ಜೊತೆಗೆ ಬಂಡವಾಳ ಕೊರತೆಯಿಂದಾಗಿ ೨೦೧೯ ರಿಂದ ಕಾರ್ಖಾನೆ ಸ್ಥಗಿತಗೊಂಡಿತ್ತು.

ಈ ಸಂದರ್ಭದಲ್ಲಿ ಕಾರ್ಖಾನೆ ವ್ಯಾಪ್ತಿಯ ರೈತರು ತಮ್ಮ ಒಪ್ಪಿಗೆ ಕಬ್ಬನ್ನು ನಂಜನಗೊಡು ಬಣ್ಣಾರಿ, ಕುಂತೂರು ಕಾರ್ಖಾನೆ,ಕಿ.ಎಂ.ದೊಡ್ಡಿಯ ಚಾಂಷುಗರ್,ಕೊಪ್ಪದ ಎಂ.ಎಸ್.ಎಲ್.,ಕೆ.ಆರ್.ಪೇಟೆಯ ಐಸಿಎಲ್ ಹಾಗೂ ತಮಿಳುನಾಡಿನ ಶೆಟ್ಟಿ ಕಾರ್ಖಾನೆ ಜೊತೆಗೆ ಗಾಣಗಳಿಗೆ ಸರಬರಾಜು ಮಾಡಬೇಕಾಯಿತು.

ಈ ಎಲ್ಲಾ ಅಂಶಗಳನ್ನು ಅವಲೋಕಿಸಿದ ಸರ್ಕಾರ ೨೦೧೯ರ ಮಾರ್ಚ್ ೧ರಂದು ಅಂದಿನ ಜಿಲ್ಲಾಧಿಕಾರಿ ಮಂಜುಶ್ರೀ ಅವರ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿ,ರೈತರ ಹಾಗೂ ಷೇರುದಾರರ ಸಭೆ ಕರೆದು ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಲು ಒಮ್ಮತದ ನಿರ್ಧಾರ ಕೈಗೊಂಡು ಅದರಂತೆ ಸರ್ಕಾರ ಟಿಂಡರ್ ಪ್ರಕಟಣೆ ಮಾಡಿತ್ತು.

ಖಾಸಗೀಕರಣಕ್ಕೆ ಹಲವು ನಿಬಂಧನೆಗಳ ಅನ್ವಯ ಟೆಂಡರ್ ಕರೆಯಲಾಗಿದ್ದು, ಇದೆ ಮೇ.೧೩ರಂದು ಅದು ಪೂರ್ಣಗೊಳ್ಳಲಿದೆ, ಬಳಿಕ ಕಬ್ಬು ಅರೆಯುವಿಕೆಗೆ ಆಗಸ್ಟ್ ಮೊದಲ ವಾರ ಚಾಲನೆ ದೊರೆಯುವ ಸಾಧ್ಯತೆ ಇದ್ದು ಸರ್ಕಾರದ ಈ ನಿರ್ಧಾರದಿಂದಾಗಿ ರೈತರಲ್ಲಿ ಸಂತಸ ಮೂಡಿಸಿದೆ.
-ನಾಗಯ್ಯ ಲಾಳನಕೆರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com