ಕೊರೋನಾ ದಿನಗಳು ಖೊಟ್ಟಿ ಬಿಲ್ ಎತ್ತಲು ಅನುಕೂಲವಾಗಿದೆ: ಬಿಜೆಪಿ ಶಾಸಕನ ವಿರುದ್ಧ ತಂಗಡಗಿ ಆರೋಪ

ಕೊರೋನಾ  ದಿನಗಳಲ್ಲಿ ಖೊಟ್ಟಿ ಬಿಲ್ ಎತ್ತಿ ಸುಮಾರು 4 ಕೋಟಿ ರೂಪಾಯಿಯನ್ನು  ಕನಕಗಿರಿ ಶಾಸಕ ಹಾಗೂ ಗುತ್ತಿಗೆದಾರರು ಇತರರು ಸೇರಿ ಗೋಲ್‌ಮಾಲ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ‌ ತಂಗಡಗಿ ಆರೋಪಿಸಿದ್ದಾರೆ. 
ಶಿವರಾಜ್ ತಂಗಡಗಿ
ಶಿವರಾಜ್ ತಂಗಡಗಿ

ಕೊಪ್ಪಳ: ಕೊರೋನಾ  ದಿನಗಳಲ್ಲಿ ಖೊಟ್ಟಿ ಬಿಲ್ ಎತ್ತಿ ಸುಮಾರು 4 ಕೋಟಿ ರೂಪಾಯಿಯನ್ನು  ಕನಕಗಿರಿ ಶಾಸಕ ಹಾಗೂ ಗುತ್ತಿಗೆದಾರರು ಇತರರು ಸೇರಿ ಗೋಲ್‌ಮಾಲ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ‌ ತಂಗಡಗಿ ಆರೋಪಿಸಿದ್ದಾರೆ. 

ಜಿಪಂ ಸದಸ್ಯ ರಾಜಶೇಖರ ಹಿಟ್ನಾಳ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವ್ಯವಹಾರದ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ಈ ಅವ್ಯವಹಾರವನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕು. ತಪ್ಪಿತಸ್ಥ ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ಕಾನೂನು‌ ಕ್ರಮ‌ ಜರುಗಬೇಕು ಎಂದು ಒತ್ತಾಯಿಸಿದರು.

ಕನಕಗಿರಿ ಕ್ಷೇತ್ರದಲ್ಲಿ ಮಾಡಿರುವ ಕಾಮಗಾರಿಗಳು ಒಂದು ಪೂರ್ಣವಾಗಿಲ್ಲ. ಪೂರ್ಣವಾಗದೇ ಎಲ್ಲಾ ಖೊಟ್ಟಿ ಬಿಲ್‌ಗಳನ್ನು ಎತ್ತಿ ಅವ್ಯವಹಾರ ಮಾಡಿದ್ದಾರೆ. ಮತ್ತೇ ಈಗ ಸುಮಾರು 1.6 ಕೋಟಿ ರೂಪಾಯಿ ಕೊಳ್ಳೆ ಹೊಡೆಯಲು ಖೊಟ್ಟಿ ದಾಖಲೆಗಳನ್ನು ಸರಕಾರಕ್ಕೆ ಕೊಟ್ಟಿದ್ದಾರೆ. ಆದರೆ ಆ ಹಣ ಇನ್ನೂ ಬಿಡುಗಡೆಯಾಗಿಲ್ಲ ಎಂದು ಅವರು ವಿವರಿಸಿದರು.

ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಸರಕಾರಕ್ಕೆ ದಾಖಲೆ ಸಲ್ಲಿಸಿ 4 ಕೋಟಿ ರೂಪಾಯಿ ಗುಳುಂ ಸ್ವಾಹಾ ಮಾಡಲಾಗಿದೆ. ಒಂದು ವೇಳೆ ಕಾಮಗಾರಿಯಲ್ಲಿ ಕಾಲು ಭಾಗ ಕಾಮಗಾರಿ ಪೂರ್ಣವಾಗಿದ್ದನ್ನು ಸಾಬೀತು ಪಡಿಸಿದರೆ ಜೀವನಪರ್ಯಂತವಾಗಿ ಸಾಬೀತುಪಡಿಸಿದವರು ಹೇಳಿದಂತೆ ಕೇಳಿಕೊಂಡು ಇರುತ್ತೇನೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಕನಕಗಿರಿ ಶಾಸಕರಿಗೆ ಸವಾಲ್ ಎಸೆದರು.

ಈ ಕಾಮಗಾರಿಗಳ ಕುರಿತು ಎಲ್ಲಾ ಮಾಹಿತಿ ಕಲೆ ಹಾಕಲಾಗಿದೆ. ಈಗ ನಾನು ಹೇಳುತ್ತಿರುವ ಕಾಮಗಾರಿ ಅವ್ಯವಹಾರದ ಜಸ್ಟ್ ಸ್ಯಾಂಪಲ್ ಅಷ್ಟೇ; ಕೊರೊನಾ ಇದೆ ಅಂತ ಸುಮ್ಮನೆ ಇದ್ದಿವಿ. ಆದರೆ ಈಗ ಈ ಅವ್ಯವಹಾರ ಕುರಿತು ಕೊಪ್ಪಳ ಜಿಲ್ಲಾಧಿಕಾರಿ, ಜಿ.ಪಂ.ಸಿಇಓ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಸಂರ್ಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು, ಅವ್ಯವಹಾರವಾದ ಹಣವನ್ನು ಮರಳಿ ಸರಕಾರ ಪಡೆಯುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು. 

ಪ್ರಚಾರಕ್ಕಾಗಿ ಶಿವರಾಜ ತಂಗಡಗಿ ಮಾತನಾಡುತ್ತಾರೆ ಎಂಬ ಶಾಸಕ ಬಸವರಾಜ ದಡೆಸೂಗೂರು ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ತಂಗಡಗಿ,  ಶಾಸಕರಾಗಿ ಕ್ಷೇತ್ರವನ್ನು ಆಳುವ ಶಾಸಕ ಬಸವರಾಜ ದಡೆಸೂಗೂರು ಅವರು ಮೊದಲು ಅವರ ಪಕ್ಷದ ರಾಜ್ಯಾಧ್ಯಕ್ಷರ ಹೆಸರನ್ನು ನೆಟ್ಟಗೆ ಹೇಳಲಿ. ಶಾಸಕ, ಕ್ಷೇತ್ರ ಪದಗಳನ್ನು ಸರಿಯಾಗಿ ಉಚ್ಛಾರ ಮಾಡಲು ಬರದವರಿಂದ ನಾನು ಬುದ್ಧಿ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕನಕಗಿರಿ ಶಾಸಕ ದಡೇಸೂಗೂರು ಅವರಿಗೆ ಟಾಂಗ್ ‌ನೀಡಿದರು.

ನಾನು ಈಗಾಗಲೇ ಶಾಸಕರಾಗಿ ಸಚಿವರಾಗಿ ಕೆಲಸ ಮಾಡಿದ್ದೇನೆ. ಈಗಾಗಿ ನನಗೆ ಯಾವುದೇ ಪ್ರಚಾರದ ಅವಶ್ಯಕತೆ ಇಲ್ಲ, ಆದರೆ ವಿರೋಧ ಪಕ್ಷದಲ್ಲಿ ಕುಳಿತ ನಾವು ಆಡಳಿತದ ಲೋಪಗಳನ್ನ ಎತ್ತಿ ತೋರಿಸುವ ಕೆಲಸ ಮಾಡಿದ್ದೇವೆ ವಿನಃ ಪ್ರಚಾರಕ್ಕಾಗಿ ಅಲ್ಲ ಎಂದು ಗುಡುಗಿದರು.

ಕನಕಗಿರಿ ಮತ್ತು ಗಂಗಾವತಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯದೆ ಖೊಟ್ಟಿ ಬಿಲ್ ಆಡಳಿತ ವಿದ್ಯೆ ನಡೆದಿದೆ. ಇದರ ಕುರಿತು ಯಾರಾದರೂ ಆರ್‌ಟಿಐಯಲ್ಲಿ ಮಾಹಿತಿ ಹಾಕಿದ್ರೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡ್ತಿದಾರೆ. ಜಾತಿ ನಿಂದನೆಯ ಸುಳ್ಳು ಕೇಸ್ ಹಾಕುವ ಮೂಲಕ ಜನರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಂಗಡಗಿ ಆರೋಪಿಸಿದರು.

ಬಿಜೆಪಿ ಸರಕಾರದವರು ನಾವು ಸ್ವಚ್ಛ ಆಡಳಿತದವರು ಎಂಬುದು ಸಾಬೀತು ಪಡಿಸಲಿ. ತಾಕತ್ತಿದ್ದರೆ ಕನಕಗಿರಿ ಕ್ಷೇತ್ರದಲ್ಲಿ ನಡೆದ ಅವ್ಯವಹಾರ ಕಾಮಗಾರಿಗಳ ತನಿಖೆಯನ್ನು ಸಿಓಡಿ ತನಿಖೆಗೆ ಒಪ್ಪಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ವರದಿ: ಬಸವರಾಜ ಕರುಗಲ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com