'ಮುಖ್ಯಮಂತ್ರಿಗಳೇ ನಿಮ್ಮ ಕೆಲಸಕ್ಕೆ ಹ್ಯಾಟ್ಸ್ ಆಫ್': ಯಡಿಯೂರಪ್ಪನವರನ್ನು ಹಾಡಿ ಹೊಗಳಿದ ಸಚಿವ ಸುರೇಶ್ ಕುಮಾರ್
ಕರ್ನಾಟಕ ಸೇರಿದಂತೆ ಇಡೀ ಜಗತ್ತು ಇಂದು ಕೊರೋನಾ ಸವಾಲನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕಳೆದ 50 ದಿನಗಳಿಂದ ಸಮಯಕ್ಕೆ ಸರಿಯಾಗಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಅವರ ಸಂಪುಟ ಸಹೋದ್ಯೋಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಸ್ ಹಾಡಿ ಹೊಗಳಿದ್ದಾರೆ.
Published: 09th May 2020 11:13 AM | Last Updated: 09th May 2020 12:47 PM | A+A A-

ಸಿಎಂ ಯಡಿಯೂರಪ್ಪನವರೊಂದಿಗೆ ಸಚಿವ ಎಸ್ ಸುರೇಶ್ ಕುಮಾರ್, ಬಲ ಚಿತ್ರದಲ್ಲಿ ಸರ್ವಪಕ್ಷ ನಿಯೋಗ ಸಭೆ ನಡೆಸಿದ ಸಿಎಂ ಯಡಿಯೂರಪ್ಪ
ಬೆಂಗಳೂರು: ಕರ್ನಾಟಕ ಸೇರಿದಂತೆ ಇಡೀ ಜಗತ್ತು ಇಂದು ಕೊರೋನಾ ಸವಾಲನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕಳೆದ 50 ದಿನಗಳಿಂದ ಸಮಯಕ್ಕೆ ಸರಿಯಾಗಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಅವರ ಸಂಪುಟ ಸಹೋದ್ಯೋಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಸ್ ಹಾಡಿ ಹೊಗಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯಕ್ಕೆ ತಕ್ಕಂತೆ ರಾಜ್ಯದಲ್ಲಿ ಕೊರೋನಾ ಸೋಂಕು ತಡೆಗೆ ಲಾಕ್ ಡೌನ್ ನಿಯಮ ಪಾಲನೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಮ್ಮ ಸರ್ಕಾರ ತೆಗೆದುಕೊಂಡ ಕೆಲ ನಿರ್ಧಾರಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಿನ್ನಾಭಿಪ್ರಾಯಗಳು ಬಂದಿವೆ. ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಸಮಾಜದಲ್ಲಿ ಬೇರೆ ಬೇರೆ ಅಭಿಪ್ರಾಯ ಇರುವುದು ಸಹಜ. ಪ್ರಶ್ನೆ ಮಾಡುವುದು, ಟೀಕಿಸುವುದು ಅವರವರ ಹಕ್ಕು. ಆದರೆ ಸರ್ಕಾರದ ಸದುದ್ದೇಶ ಮಾತ್ರ ಯಾರೂ ಪ್ರಶ್ನಿಸಿಲ್ಲ. ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.
ನಮಗೆ ಒಂದೆರಡು ಖಾತೆಗಳನ್ನು ನಿಭಾಯಿಸುವುದು ಒತ್ತಡವೆನಿಸುವಾಗ ಮುಖ್ಯಮಂತ್ರಿಗಳು ಈ ಕಠಿಣ ಸವಾಲಿನ ಸಮಯದಲ್ಲಿ ತಾಳ್ಮೆಯಿಂದ ಹಗಲಿರುಳು ದುಡಿಯುತ್ತಿದ್ದಾರೆ. ಯಾವುದೇ ನಿಯೋಗ ಬಂದರೂ ನಿರಾಕರಿಸದೆ ಭೇಟಿ ಮಾಡುತ್ತಾರೆ, ಒಂದು ಲಕ್ಷದಷ್ಟು ಮೊತ್ತದ ಚೆಕ್ ಕೊಡಲು ಬಂದವರೂ ಫೋಟೋ ಬಯಸಿದಾಗ ನಿಂತು ಸಹಕರಿಸುತ್ತಾರೆ. ಇಷ್ಟೆಲ್ಲಾ ಒತ್ತಡ, ದುಗುಡದ ನಡುವೆ ಇದು ಹೇಗೆ ಸಾಧ್ಯ ಎಂದು ಅವರನ್ನು ಕೇಳಿದೆ, ಅದಕ್ಕವರು ಇದೊಂದು ಸವಾಲು, ರಾಜ್ಯದ ಜನತೆ ಹಿತಕ್ಕಾಗಿ ಈ ಎಲ್ಲಾ ಸವಾಲುಗಳನ್ನು ಎದುರಿಸಬೇಕಲ್ಲವೇ, ಆದ್ದರಿಂದ ಗಟ್ಟಿಯಾಗಿ ಎದುರಿಸುತ್ತಿದ್ದೇನೆ ಎಂದು ಉತ್ತರಿಸಿದರು ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ನಮ್ಮ ರಾಜ್ಯಕ್ಕೆ ಉತ್ತಮ ನಾಯಕ ಸಿಕ್ಕಿದ್ದಾರೆ, ಅವರ ನೇತೃತ್ವ, ವ್ಯಸನದಂತೆ ಕೆಲಸ ಮಾಡುವ ಶೈಲಿ ಬಹುತೇಕ ರಾಜ್ಯಗಳಿಗೆ ಹೋಲಿಸಿದರೆ ಸಮಾಧಾನಕರ ಸ್ಥಿತಿಯಲ್ಲಿಡುವಂತೆ ಮಾಡಿದೆ ಎಂದು ವಿಶ್ವಾಸದಿಂದ ಸುರೇಶ್ ಕುಮಾರ್ ನುಡಿದಿದ್ದಾರೆ.