ಬಾಗಲಕೋಟೆ: ಕಾಟನ್ ಸೀರೆ ಖ್ಯಾತಿಯ ನಾಡಿಗೂ ನಂಟು ಬೆಳೆಸಿದ ಕೊರೋನಾ

ದೇಶದಾದ್ಯಂತ ಕಾಟನ್ ಸೀರೆ ಉತ್ಪಾದನೆಗೆ ಹೆಸರಾದ ಜಿಲ್ಲೆಯ ರಬಕವಿ-ಬನಹಟ್ಟಿ ನಗರಕ್ಕೂ ಮಹಾಮಾರಿ ಕೊರೋನಾ ವ್ಯಾಪಿಸಿದ್ದು, ಬನಹಟ್ಟಿಯಲ್ಲಿ ಇಪ್ಪತ್ತರ ಹರೆಯದ ಯುವಕನಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.
ಬನಹಟ್ಟಿ ಅಧಿಕಾರಿಗಳು
ಬನಹಟ್ಟಿ ಅಧಿಕಾರಿಗಳು

ಬಾಗಲಕೋಟೆ: ದೇಶದಾದ್ಯಂತ ಕಾಟನ್ ಸೀರೆ ಉತ್ಪಾದನೆಗೆ ಹೆಸರಾದ ಜಿಲ್ಲೆಯ ರಬಕವಿ-ಬನಹಟ್ಟಿ ನಗರಕ್ಕೂ ಮಹಾಮಾರಿ ಕೊರೋನಾ ವ್ಯಾಪಿಸಿದ್ದು, ಬನಹಟ್ಟಿಯಲ್ಲಿ ಇಪ್ಪತ್ತರ ಹರೆಯದ ಯುವಕನಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

ಬಾದಾಮಿ ಚಾಲುಕ್ಯರ ನಾಡಿನ ಢಾಣಕ ಶಿರೂರಿನಲ್ಲಿ ಗರ್ಭೀಣಿ ಮಹಿಳೆಯಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ಬಳಿಕ ಒಂದೇ ದಿನ ೧೨ ಜನರಲ್ಲಿ ಕಾಣಿಸಿಕೊಳ್ಳುವ ಮೂಲಕ ತನ್ನ ರೌದ್ರಾವತಾರ ಪ್ರದರ್ಶಿಸಿತ್ತು. ಇಂದು ಅದೇ ಢಾಣಕ ಶಿರೂರಿನ ಮತ್ತೊಬ್ಬರಲ್ಲಿ ವೈರಸ್ ಪತ್ತೆಯಾಗುವ ಜತೆಗೆ ನೇಕಾರಿಕೆ ಖ್ಯಾತಿಯ ನಗರ ಬನಹಟ್ಟಿಯಲ್ಲೂ ತನ್ನ ಇರುವಿಕೆಯನ್ನು ಸಾಬೀತು ಪಡಿಸಿದೆ.

ಬನಹಟ್ಟಿಯ ಕಾಟನ್ ಸೀರೆಗಳಿಗೆ  ನೆರೆಯ ತಮಿಳುನಾಡು, ಆಂಧ್ರ ಪ್ರದೇಶ, ತೇಲಂಗಾಣ, ಪಶ್ಚಿಮ ಬಂಗಾಳ ಸೇರಿದಂತೆ ದೇಶದಾದ್ಯಂತ ಭಾರಿ ಬೇಡಿಕೆ ಇದೆ. ಇದುವರೆಗೂ ಈ ನಗರದ ಸುತ್ತಲಿನ ಮುಧೋಳ, ಜಮಖಂಡಿ ಮತ್ತು ಮುಗುಳಖೋಡದಲ್ಲಿ ಕೊರೋನಾ ರಣಕೇಕೆ ಕೇಳಿಸಿತ್ತು. ಬನಹಟ್ಟಿಯಲ್ಲಿ ಮಾತ್ರ ಅದರ ಸುಳಿವು ಇರಲಿಲ್ಲ.ಇದೀಗ ಗುಜರಾತ್‌ನ ಅಹಮದಾಬಾದನ್‌ಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ನಗರಕ್ಕೆ ವಾಪಸ್ಸಾಗಿದ್ದ ಯುವಕನಲ್ಲಿ ವೈರಸ್ ಪತ್ತೆ ಆಗಿರುವುದು ಇಡೀ ರಬಕವಿ-ಬನಹಟ್ಟಿ ನಗರವನ್ನು ತಲ್ಲಣಗೊಳಿಸಿದೆ.

ಕಲಬುರಗಿಯ ತಬ್ಲೀಘಿಯಿಂದ ಬಾಗಲಕೋಟೆ ಪಟ್ಟಣಕ್ಕೆ ಕಾಲಿಟ್ಟಿದ್ದ ಕೊರೋನಾ ವೃದ್ದನನ್ನು ಬಲಿ ತೆಗೆದುಕೊಂಡು ಇತರ ೧೨ ಜನರಿಗೆ ವ್ಯಾಪಿಸಿತ್ತು. ಪರಿಣಾಮವಾಗಿ ಇಡೀ ಬಾಗಲಕೋಟೆ ಪಟ್ಟಣದ ಹಳೆ ಪ್ರದೇಶ ಇದುವರೆಗೂ ಸೀಲ್‌ಡೌನ್ ಆಗಿ ನಿರ್ಬಂಧಿತ ಪ್ರದೇಶವಾಗಿತ್ತು. ಕಳೆದ ಮೂರು ದಿನಗಳಿಂದ ಬಾಗಲಕೋಟೆಯ ನಿರ್ಬಂಧಿತ ಪ್ರದೇಶ ಸೇರಿದಂತೆ ಇಡೀ ನಗರ ಲಾಕ್‌ಡೌನ್ ಸಡಿಲಿಕೆಯಿಂದ ಉಸಿರಾಡುತ್ತಿರುವಾಗಲೇ ಜಿಲ್ಲೆಗೆ ಮತ್ತೆ ಕೊರೋನಾ ವಕ್ಕರಿಸಿಕೊಂಡಿದೆ.

ಬನಹಟ್ಟಿಯ ಯುವಕ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ವಾಪಸ್ಸಾಗಿದ್ದ. ಈಗ ಈತನಲ್ಲಿ ಸೋಂಕು ಪತ್ತೆಯಾಗಿದೆ. ಇತನ ಜತೆಗೆ ಇನ್ನಷ್ಟು ಜನ ತಬ್ಲಿಘಿಗಳು ಅಹಮದಾಬಾದ್‌ಗೆ ಹೋಗಿ ಬಂದಿದ್ದು, ಅವರೆಲ್ಲ ಬನಹಟ್ಟಿಯಲ್ಲಿ ಕ್ವಾರಂಟೈನ್ ಆಗಿದ್ದಾರೆ ಎನ್ನುವುದು ಗಮನಾರ್ಹ.

ಸದ್ಯ ಜಿಲ್ಲೆಯಲ್ಲಿ ಕೊರೋನಾ ೫೩ ಜನರಲ್ಲಿ ಪತ್ತೆ ಆಗಿದೆ ಎನ್ನುವುದು ತಾಂತ್ರಿಕ ಲೆಕ್ಕಾಚಾರವಾಗಿದೆ. ಆದರೆ ಬಾಗಲಕೋಟೆ ಜಿಲ್ಲೆಗೆ ಸೇರಿರುವ ಕೆಲವರು ಬೆಳಗಾವಿಯಲ್ಲಿ ಕ್ವಾರಂಟೈನ್ ಆಗಿದ್ದು, ಅವರಲ್ಲಿನ ೮ ಜನರಲ್ಲಿ ನಿನ್ನೆಯಷ್ಟೇ ಸೋಂಕು ಪತ್ತೆ ಆಗಿದೆ. ಆದರೆ ಅದನ್ನು ಬೆಳಗಾವಿ ಜಿಲ್ಲೆಯ ಸೋಂಕಿತರ ಲೆಕ್ಕಕ್ಕೆ ಸೇರಿಸಲಾಗಿದೆ. ಅಲ್ಲಿನ ಸೋಂಕಿತರ ಪಟ್ಟಿಗೆ ಸೇರಿದ್ದರೂ ಅದರಿಂದ ಭೀತಿಗೆ ಒಳಗಾಗಿರುವವರು ಬಾಗಲಕೋಟೆ ಜಿಲ್ಲೆಯವರು ಎನ್ನುವುದು ಪ್ರಮುಖ ವಿಚಾರವಾಗಿದೆ. 

ಬೆಳಗಾವಿ ಜಿಲ್ಲೆಯ ಕೊರೋನಾ ಸೋಂಕಿತರ ಪಟ್ಟಿಗೆ ಸೇರಿರುವ ೮ ಜನರು ರಾಜಸ್ಥಾನದ ಅಜ್ಮೀರ್‌ಗೆ ತೆರಳಿ ವಾಪಸ್ಸಾಗುತ್ತಿರುವಾಗ ಬೆಳಗಾವಿಯಲ್ಲಿ ಕ್ವಾರಂಟೈನ್ ಆಗಿದ್ದಾರಷ್ಟೆ. ಅಪ್ಪಿತಪ್ಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕ್ವಾರಂಟೈನ್ ಆಗಿದ್ದಲ್ಲಿ ಆ ಎಂಟು ಜನರೂ ಜಿಲ್ಲೆಯ ಕೊರೋನಾ ಸೋಂಕಿತರ ಲೆಕ್ಕದಲ್ಲಿ ಬರುತ್ತಿದ್ದರು. ಏನೇ ಆಗಲಿ ಬಾಗಲಕೋಟೆ ಜಿಲ್ಲೆಗೆ ಸೇರಿದವರು ಎನ್ನುವುದು ಮುಖ್ಯವಾಗಲಿದೆ.

ಏನೇ ಆಗಲಿ ಕೊರೋನಾ ವಿಷಯದಲ್ಲಿ ಜಿಲ್ಲೆಗೆ ತಬ್ಲೀಘಿಗಳ ಕಾಟ ತಪ್ಪಿತಲ್ಲ ಎಂದು ಜನತೆ ನಿಟ್ಟುಸಿರುವ ಬಿಡುತ್ತಿರುವಾಗಲೇ ಬನಹಟ್ಟಿಯಲ್ಲಿ ತಬ್ಲಿಘಿ ಧಾರ್ಮಿಕ ಸಭೆಗೆ ಹೋಗಿ ಬಂದ ಯುವಕನಲ್ಲಿ ಸೋಂಕು ಪತ್ತೆ ಆಗಿರುವುದು ಮತ್ತೆ ಆತಂಕ ಸೃಷ್ಟಿಗೆ ಕಾರಣವಾಗಿದೆ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com