ಶ್ರಮಿಕ್ ಎಕ್ಸ್ ಪ್ರೆಸ್ ಮೂಲಕ ಮುಂಬೈಯಿಂದ ಕಲಬುರಗಿಗೆ 1200 ವಲಸೆ ಕಾರ್ಮಿಕರ ಆಗಮನ

ಲಾಕ್ ಡೌನ್ ನಿಂದಾಗಿ ಮುಂಬೈಯಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿದ್ದ  1200 ವಲಸೆ ಕಾರ್ಮಿಕರನ್ನು ಹೊತ್ತ ವಿಶೇಷ ಶ್ರಮಿಕ್ ಎಕ್ಸ್ ಪ್ರೆಸ್ ರೈಲೊಂದು ಮಂಗಳವಾರ ಬೆಳಗಿನ ಜಾವ 2 ಗಂಟೆಗೆ ಕಲಬುರಗಿಗೆ ಆಗಮಿಸಿತು.
ವಲಸೆ ಕಾರ್ಮಿಕರ ಕೈಗಳಿಗೆ ಮುದ್ರೆ ಹಾಕುತ್ತಿರುವ ಕಲಬುರಗಿ ರೈಲು ನಿಲ್ದಾಣದ ಅಧಿಕಾರಿ
ವಲಸೆ ಕಾರ್ಮಿಕರ ಕೈಗಳಿಗೆ ಮುದ್ರೆ ಹಾಕುತ್ತಿರುವ ಕಲಬುರಗಿ ರೈಲು ನಿಲ್ದಾಣದ ಅಧಿಕಾರಿ

ಕಲಬುರಗಿ: ಲಾಕ್ ಡೌನ್ ನಿಂದಾಗಿ ಮುಂಬೈಯಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿದ್ದ  1200 ವಲಸೆ ಕಾರ್ಮಿಕರನ್ನು ಹೊತ್ತ ವಿಶೇಷ ಶ್ರಮಿಕ್ ಎಕ್ಸ್ ಪ್ರೆಸ್ ರೈಲೊಂದು ಮಂಗಳವಾರ ಬೆಳಗಿನ ಜಾವ 2 ಗಂಟೆಗೆ ಕಲಬುರಗಿಗೆ ಆಗಮಿಸಿತು.

ಕಲಬುರಗಿ ಸಂಸದ ಡಾ.ಉಮೇಶ್ ಜಾದವ್, ಜಿಲ್ಲಾಧಿಕಾರಿ ಶರತ್ ಬಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಿ. ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್ ಬಾಬು ಮತ್ತು ಕಲಬುರಗಿ ರೈಲು ನಿಲ್ವಾದಣ ಮ್ಯಾನೇಜರ್ ಪ್ರಸಾದ್ ರಾವ್ ರೈಲ್ವೆ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.

ವಲಸೆ ಕಾರ್ಮಿಕರಿಗೆ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಮಾಡಿ, ಕೈಗಳಿಗೆ ಮುದ್ರೆ ಹಾಕಲಾಯಿತು. ಬಳಿಕ ಅವರ ಊರುಗಳ ಬಳಿ ವ್ಯವಸ್ಥೆ ಮಾಡಲಾಗಿದ್ದ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಯಿತು.

ಪ್ರಯಾಣಿಕರು ರೈಲಿನಿಂದ ಇಳಿಯುವಾಗ ದಟ್ಟಣೆಯಾಗದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿತ್ತು. ಒಂದು ಬೋಗಿಯಲ್ಲಿನ ಪ್ರಯಾಣಿಕರನ್ನು ನಿಗದಿತ ಬಸ್ ಗೆ ಹೋಗಲು ವ್ಯವಸ್ಥೆ ಮಾಡಿದ ನಂತರ ಇತರ ಬೋಗಿಗಳ ಪ್ರಯಾಣಿಕರು ರೈಲಿನಿಂದ ಇಳಿಯುವಂತೆ ನೋಡಿಕೊಳ್ಳಲಾಯಿತು.

ಶ್ರಮಿಕ್ ರೈಲಿನ ಮೂಲಕ ಬಂದಿಳಿದ 1230 ಪ್ರಯಾಣಿಕರಲ್ಲಿ 800 ಮಂದಿ ಚಿತ್ತಾಪುರ ತಾಲೂಕಿನವರು, 180 ಮಂದಿ ಇತರ ತಾಲೂಕುಗಳಿಗೆ ಸೇರಿದವರಾಗಿದ್ದಾರೆ. 250 ಕಾರ್ಮಿಕರು ಯಾದಗರಿ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಸೇರಿದವರು ಎಂಬುದು ಮೂಲಗಳಿಂದ ತಿಳಿದುಬಂದಿದೆ. ಒಂದೆರೆಡು ದಿನಗಳಲ್ಲಿ ಮತ್ತೊಂದು ಶ್ರಮಿಕ್ ರೈಲು ಕಲಬುರಗಿ ತಲುಪುವ ನಿರೀಕ್ಷೆಯಿದೆ.

ಶ್ರಮಿಕ್ ರೈಲಿನಿಂದ ಬಂದ ವಲಸೆ ಕಾರ್ಮಿಕರಿಗಾಗಿ 7 ಕ್ವಾರಂಟೈನ್ ಕೇಂದ್ರಗಳನ್ನು ಸ್ಥಾಪನೆ ಮಾಡಿರುವುದಾಗಿ ಚಿತ್ತಾಪುರ ತಹಸೀಲ್ದಾರ್ ಉಮಾಕಾಂತ್ ಹಳ್ಳಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. 

12 ದಿನಗಳ ಕ್ವಾರಂಟೈನ್ ಮುಗಿಸಿದ ಬಳಿಕ ವಲಸೆ ಕಾರ್ಮಿಕರ ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸಲಾಗುವುದು, ಅದರಲ್ಲಿ ನೆಗೆಟಿವ್ ಬಂದರೆ ಮಾತ್ರ ವಲಸೆ ಕಾರ್ಮಿಕರನ್ನು ಅವರ ಮನೆಗಳಿಗೆ ಕಳುಹಿಸಲಾಗುತ್ತದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com