ಶುಶ್ರೂಷಕರು ಜೀವ ರಕ್ಷಕರು: ಸಿಎಂ ಯಡಿಯೂರಪ್ಪ

ಕೋವಿಡ್ - 19 ಸೋಂಕು ನಿಯಂತ್ರಣದಲ್ಲಿ ಸೇನಾನಿಗಳಾಗಿ ದುಡಿಯುತ್ತಿರುವ ವಿಶ್ವದ ಎಲ್ಲಾ ಶುಶ್ರೂಷಕರಿಗೆ ಫ್ಲಾರೇನ್ಸ್ ನೈಟಿಂಗೇಲ್‍ರವರ ಹುಟ್ಟು ಹಬ್ಬ ಹಾಗೂ ವಿಶ್ವ ಶುಶ್ರೂಷಕರ ದಿನಾಚರಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಭ ಕೋರಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಬೆಂಗಳೂರು: ಕೋವಿಡ್ - 19 ಸೋಂಕು ನಿಯಂತ್ರಣದಲ್ಲಿ ಸೇನಾನಿಗಳಾಗಿ ದುಡಿಯುತ್ತಿರುವ ವಿಶ್ವದ ಎಲ್ಲಾ ಶುಶ್ರೂಷಕರಿಗೆ ಫ್ಲಾರೇನ್ಸ್ ನೈಟಿಂಗೇಲ್‍ರವರ ಹುಟ್ಟು ಹಬ್ಬ ಹಾಗೂ ವಿಶ್ವ ಶುಶ್ರೂಷಕರ ದಿನಾಚರಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಭ ಕೋರಿದ್ದಾರೆ.

ವಿದೇಶಗಳಲ್ಲಿ ನೆಲೆಸಿರುವ ದಾದಿಯರ ಜತೆ ವಿಡಿಯೋ ಸಂವಾದ ನಡೆಸಿದ ಯಡಿಯೂರಪ್ಪ, ಈ ವರ್ಷ ಫ್ಲಾರೇನ್ಸ್ ನೈಟಿಂಗೇಲ್ ಅವರ ಜನ್ಮ ದ್ವಿಶತಮಾನೋತ್ಸವ ಅಂಗವಾಗಿ ವಿಶ್ವ ಆರೋಗ್ಯ ಸಂಸ್ಥೆಯು ಈ ವರ್ಷವನ್ನು “ಶುಶ್ರೂಷಕರ ಹಾಗೂ ದಾದಿಯರ” ವರ್ಷವೆಂದು ಘೋಷಿಸಿದೆ. ಇದು ಹರ್ಷದಾಯಕ ಸಂಗತಿ ಎಂದಿದ್ದಾರೆ.

ಫ್ಲಾರೆನ್ಸ್ ನೈಟಿಂಗೇಲ್‍ ಅವರು 1820ರ ಮೇ 12 ರಂದು ಜನಿಸಿದರು. ಉತ್ತಮ ಆರ್ಥಿಕತೆಯ ಕುಟುಂಬದಲ್ಲಿ ಜನಿಸಿದ್ದ ಅವರು, ಸಂಖ್ಯಾಶಾಸ್ತ್ರಜ್ಞೆಯಾಗಿದ್ದರು. ಕ್ರೀಮಿಯ ಯುದ್ದದ ಸಂದರ್ಭದಲ್ಲಿ ಗಾಯಗೊಂಡ ಸೈನಿಕರಿಗೆ 24 ತಾಸು ಆರೈಕೆ ಮಾಡಿದ್ದರು. ರಾತ್ರಿಹೊತ್ತು ಸಹ ದೀಪ ಹಿಡಿದು ಪ್ರತಿ ಸೈನಿಕರ ಹತ್ತಿರ ಹೋಗಿ ಯೋಗಕ್ಷೇಮ ವಿಚಾರಿಸುತ್ತಿದ್ದರು. ಹಾಗಾಗಿ ಅವರನ್ನು “ಲೇಡಿ ವಿತ್ ಲ್ಯಾಂಪ್” ಎಂದು ಕರೆಯುತ್ತಾರೆ. ಅವರು ಹಾಕಿಕೊಟ್ಟ ಬುನಾದಿ ಇಂದಿಗೂ ಭದ್ರವಾಗಿದೆ.

ಪ್ರಸ್ತುತ ಕರ್ನಾಟಕದಲ್ಲಿ 18 ಸರ್ಕಾರಿ ಸೇರಿ ಒಟ್ಟು 762 ಶುಶ್ರೂಷಾ ಶಾಲೆಗಳಿವೆ. ಇವುಗಳಲ್ಲಿ ಒಟ್ಟು 30,040 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ರಾಜ್ಯ ಶುಶ್ರೂಷಾ ಮಂಡಳಿಯಲ್ಲಿ ಒಟ್ಟು 3,63,112 ಶುಶ್ರೂಷಕರು ನೋಂದಾಯಿಸಿಕೊಂಡಿದ್ದಾರೆ. ಎರಡು ಲಕ್ಷ ಶುಶ್ರೂಷಕರು ವಿವಿಧ ಇಲಾಖೆ, ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ. 

ಸೇವೆಯನ್ನೇ ವೃತ್ತಿಯಾಗಿಸಿಕೊಂಡಿರುವ ನಿಮ್ಮ ಇಷ್ಟೊಂದು ದೊಡ್ಡ ಸಮೂಹವು ನಮ್ಮ ರಾಜ್ಯ ಹಾಗೂ ದೇಶದ ಜನರಿಗಾಗಿ ಹಗಲಿರುಳು ನಿಸ್ವಾರ್ಥವಾಗಿ ದುಡಿಯುತ್ತಿದ್ದೀರಿ. ನಿಮ್ಮ ಶುಶ್ರೂಷಾ ಸೇವೆ ಅತ್ಯಂತ ಶ್ಲಾಘನೀಯವಾಗಿದೆ. ಜಾಗತಿಕ ಮಹಾ ಪಿಡುಗು ಕೋವಿಡ್ -19 ನ್ನು ಕಟ್ಟಿಹಾಕಲು ಶುಶ್ರೂಕರು ತಮ್ಮ ಬಂಧು-ಬಾಂದವರನ್ನು, ಮಕ್ಕಳು, ಸಂಸಾರವನ್ನು, ವೈಯಕ್ತಿಕ ವಿಚಾರಗಳನ್ನು ಬಿಟ್ಟು ಜೀವದ ಹಂಗನ್ನು ತೊರೆದು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇಂತಹ ಕಷ್ಟದ ಸಮಯದಲ್ಲಿ ಸರ್ಕಾರದ ಜೊತೆಗೂಡಿ ಜನರಿಗಾಗಿ ಕೆಲಸ ನಿರ್ವಹಿಸುತ್ತಿರುವ ನಿಮ್ಮ ಜೀವನವನ್ನು ಹಸನಾಗಿಸಲು ಸರ್ಕಾರ ಕಾರ್ಯರೂಪವನ್ನು ಸಿದ್ದಪಡಿಸುತ್ತಿದೆ. ಅನೇಕ ಯೋಜನೆಗಳನ್ನು ಯೋಜಿಸುತ್ತಿದೆ ಎಂದಿದ್ದಾರೆ. 

ವಿಶ್ವ ಶುಶ್ರೂಷಕರ ದಿನಾಚರಣೆಯ ಶುಭ ಸಂದರ್ಭದಲ್ಲಿ ಶುಶ್ರೂಷಕರು ಎನ್ನುವ ಪದನಾಮವನ್ನು ಶುಶ್ರೂಷಾಧಿಕಾರಿ ಎಂದು ಮರು ನಾಮಕರಣ ಮಾಡಿ ಶುಶ್ರೂಷಕರಿಗೆ ಹುರುಪನ್ನು ತುಂಬಿದೆ. ಶುಶ್ರೂಷಕರುಗಳು ಆರೋಗ್ಯ ಇಲಾಖೆ ಹಾಗೂ ದೇಶದ ಆರೋಗ್ಯ ವ್ಯವಸ್ಥೆಗೆ ಆಧಾರಸ್ತಂಭವಾಗಿದ್ದಾರೆ. ತಮ್ಮ ನೋವು ನಲಿವನ್ನು ಬಿಟ್ಟು ನೊಂದ ರೋಗಿಗಳ ಹಾರೈಕೆಯಲ್ಲಿ ತೊಡಗುತ್ತಾರೆ. ವೈದ್ಯರು ಸೂಚಿಸುವ ಚಿಕಿತ್ಸೆಯನ್ನು ಯಥಾವತ್ತಾಗಿ ರೋಗಿಗಳಿಗೆ ಸರಿಯಾದ ಸಮಯಕ್ಕೆ ತಲುಪಿಸಿ ರೋಗಿಗಳ ಜೀವ ಉಳಿಸುತ್ತಾರೆ. ತಮ್ಮ ವಿದ್ಯೆ ಮತ್ತು ಜ್ಞಾನವನ್ನು ಸರ್ಮಪಕವಾಗಿ ಉಪಯೋಗಿಸಿ ರೋಗಿಗಳ ಚಿಕಿತ್ಸೆಯಲ್ಲಿ ಹಾಗೂ ಜೀವ ಉಳಿಸುವಲ್ಲಿ ನಿರತರಾಗಿರುತ್ತಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ. 

ವೈದ್ಯೋನಾರಾಯಣ ಹರಿ ಎಂಬಂತೆಯೇ, ಶುಶ್ರೂಕರು ಜೀವ ರಕ್ಷಕರು ಎಂಬುದು ಸರಿಯಾದ ನುಡಿಯಾಗಿದೆ. ಈ ನಿಮ್ಮ ಸೇವೆಯ ವೃತ್ತಿ ನಿರಂತರವಾಗಿ ಸಮೃದ್ಧಿಯಾಗಿ ಬೆಳೆದು ಇಡೀ ವಿಶ್ವವನ್ನೇ ಕಾಪಾಡುವಂತಾಗಲಿ. ನೀವುಗಳು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಉನ್ನತ ವ್ಯಾಸಂಗ ಪಡೆದುಕೊಳ್ಳಿ. ಆ ಜ್ಞಾನವನ್ನು ಜನರ ಹಿತಕ್ಕಾಗಿ ಉಪಯೋಗಿಸಿ. ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ. ಸರ್ಕಾರದ ಹಿತವನ್ನು ಕಾಪಾಡಿ. ನಮ್ಮ ಸರ್ಕಾರ ಸದಾ ಕಾಲ ನಿಮ್ಮ ರಕ್ಷಣೆಗೆ ಸಿದ್ದವಾಗಿರುತ್ತದೆ ಎಂದು ಮುಖ್ಯಮಂತ್ರಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com