ಮೇ 16ರಂದು ನ್ಯಾಯದ ದಿನ ಆಚರಿಸಲು ದೇವನೂರು ಮಹಾದೇವ ಕರೆ

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಡಾ. ಆನಂದ್ ತೇಲ್ತುಂಬ್ಡೆ ಮತ್ತಿತರ ಚಿಂತಕರಿಗೆ ಬೆಂಬಲ ಘೋಷಿಸಿ ಮೇ 16ರಂದು ನ್ಯಾಯದ ದಿನವನ್ನಾಗಿ ಆಚರಿಸೋಣ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಕರೆ ನೀಡಿದ್ದಾರೆ.

Published: 13th May 2020 03:53 PM  |   Last Updated: 13th May 2020 03:53 PM   |  A+A-


Devanur Mahadeva

ದೇವನೂರು ಮಹಾದೇವ

Posted By : Lingaraj Badiger
Source : UNI

ಬೆಂಗಳೂರು: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಡಾ. ಆನಂದ್ ತೇಲ್ತುಂಬ್ಡೆ ಮತ್ತಿತರ ಚಿಂತಕರಿಗೆ ಬೆಂಬಲ ಘೋಷಿಸಿ ಮೇ 16ರಂದು ನ್ಯಾಯದ ದಿನವನ್ನಾಗಿ ಆಚರಿಸೋಣ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಕರೆ ನೀಡಿದ್ದಾರೆ.

ಈ ಕುರಿತು 35 ಚಿಂತಕರ, ಹೋರಾಟಗಾರರ, ಪತ್ರಕರ್ತರ ಸಹಿಯುಳ್ಳ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. 

ಪತ್ರದ ಪೂರ್ಣ ಸಾರಾಂಶ ಹೀಗಿದೆ
ಡಾ. ಆನಂದ್ ತೇಲ್ತುಂಬ್ಡೆಯವರನ್ನು ಬಂಧಿಸಿ ಒಂದು ತಿಂಗಳಾಗುತ್ತದೆ. ತೇಲ್ತುಂಬ್ಡೆ ಭಾರತದ ಒಬ್ಬ ಪ್ರಮುಖ ವಿದ್ವಾಂಸ, ಲೋಕಚಿಂತಕ ಹಾಗೂ ಮಾನವ ಹಕ್ಕುಗಳ ಸಕ್ರಿಯ ಪ್ರತಿಪಾದಕ. ಅವರೊಂದಿಗೆ ಹಾಗt ಭೀಮಾಕೋರೆಗಾವ್ ಪ್ರಕರಣದಲ್ಲಿ ಬಂಧಿತರಾಗಿರುವ ಚಿಂತಕರೊಂದಿಗೆ ನಾವಿದ್ದೀವಿ ಎನ್ನುವುದನ್ನು ವ್ಯಕ್ತಪಡಿಸಲು ಮೇ 16 ರಂದು ನಾವೆಲ್ಲರೂ ನ್ಯಾಯ ದಿನವನ್ನಾಗಿ ಆಚರಿಸೋಣ ಎಂದು ಮನವಿ ಮಾಡಿಕೊಳ್ಳುತ್ತೇವೆ.

ಡಾ. ತೆಲ್ತುಂಬ್ಡೆಯವರು ಇಂದು ನ್ಯಾಯದ ಒಂದು ರಾಷ್ಟ್ರೀಯ ಸಂಕೇತವಾಗಿದ್ದಾರೆ. ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಬಡ ದಲಿತ ಕುಟುಂಬದಲ್ಲಿ ಹುಟ್ಟಿದರು. ಪೇಂಟರ್ ಆಗಿ ದುಡಿದು ವಿದ್ಯಾಭ್ಯಾಸ ಮಾಡಿದರು. ನಂತರ ಮೆಕಾನಿಕಲ್‌ ಇಂಜಿನಿಯರ್ ಆದವರು. ಆಮೇಲೆ ಸೈಬರ್‌ ನೆಟಿಕ್ಸ್‌ನಲ್ಲಿ ಡಾಕ್ಟರೇಟ್ ಮಾಡಿದರು. ಅಹಮದಾಬಾದಿನ ಐಐಎಂನಲ್ಲಿ ಎಂಬಿಎ ಮುಗಿಸಿದರು. ದೇಶದಲ್ಲಿ ಡೇಟಾ ಅನಾಲಿಸಿಸ್ ಪ್ರಾರಂಭಿಸಿದ ಪ್ರಮುಖರಲ್ಲಿ ಅವರೂ ಒಬ್ಬರು. ಸಾರ್ವಜನಿಕ ಸ್ವಾಮ್ಯದ ಪೆಟ್ರೊನೆಟ್ ಇಂಡಿಯ ಕಂಪೆನಿಯಲ್ಲಿ ನಿರ್ವಾಹಕ ನಿರ್ದೇಶಕರು ಮತ್ತು ಸಿಇಒ ಆಗಿದ್ದರು. ಐಐಟಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಬಂಧನವಾಗುವ ಸಮಯದಲ್ಲಿ ಗೋವಾ ಇನ್ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟಿನಲ್ಲಿ ಬಿಗ್ ಡೇಟಾ ಅನಲಿಟಿಕ್ಸ್‌ನಲ್ಲಿ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿದ್ದರು. ಇವರು, ಬಾಬಾಸಾಹೇಬರ ಮೊಮ್ಮಗಳನ್ನು ಮದುವೆ ಆಗಿದ್ದಾರೆ. ಜೊತೆಗೆ ತೇಲ್ತುಂಬ್ಡೆಯವರ ಬದುಕೂ ಕೂಡ ಬಾಬಾಸಾಹೇಬ್ ಅಂಬೇಡ್ಕರರ ಬದುಕನ್ನೇ ನೆನಪಿಸುತ್ತದೆ.

ಕಳೆದ ಎರಡು ದಶಕಗಳಲ್ಲಿ ತೆಲ್ತುಂಬ್ಡೆ ಭಾರತದ ಸಾಮಾಜಿಕ ನ್ಯಾಯದ ವಿಷಯದಲ್ಲಿ ಸುಸಂಬದ್ಧ ಹಾಗೂ ಗೌರವಯುತ ದನಿಯಾಗಿದ್ದಾರೆ. ತಮ್ಮ ಬರಹಗಳು ಹಾಗೂ ಸಾಮಾಜಿಕ ಮುಖಾಮುಖಿಯ ಮೂಲಕ ಜಾತಿ ಹಾಗೂ ಇನ್ನಿತರ ಶೋಷಣೆಯ ಸ್ವರೂಪಗಳ ವಿರುದ್ಧ ಧ್ವನಿಯೆತ್ತಿದ್ದಾರೆ. ಅದರ ಜೊತೆಯಲ್ಲೇ ಎಲ್ಲಾ ರೀತಿಯ ಕುರುಡು ನಂಬಿಕೆಗಳು ಹಾಗೂ ಸಾಂಪ್ರದಾಯಿಕತೆಯನ್ನು ಪ್ರಶ್ನಿಸುತ್ತಿದ್ದಾರೆ. ತಮ್ಮ ಚಿಂತನೆಗಳ ಮೂಲಕ ಬಾಬಾಸಾಹೇಬರ ವಿಚಾರಗಳನ್ನು ಪ್ರತಿಪಾದಿಸುತ್ತಾ ಮತ್ತು ಅವುಗಳನ್ನು ವಿಸ್ತರಿಸುತ್ತಾ ಸಾಗಿದ್ದಾರೆ. ಅದರ ಜೊತೆಗೆ ಅವರು ಡಾ.ಅಂಬೇಡ್ಕರರನ್ನು ದೇವರನ್ನಾಗಿ ಮಾಡುವ ಪ್ರಯತ್ನದ ವಿರುದ್ಧವು ನಮ್ಮನ್ನು ಎಚ್ಚರಿಸುತ್ತಿದ್ದಾರೆ. ಸಾಮಾಜಿಕ ನ್ಯಾಯವನ್ನು ಕುರಿತಂತೆ ನಮ್ಮ ಚಿಂತನೆಯ ಪರಿಧಿಯನ್ನೇ ಅವರು ವಿಸ್ತರಿಸಿದ್ದಾರೆ ಎನ್ನಬಹುದು. ಸಂವಿಧಾನಾತ್ಮಕ ಮೌಲ್ಯಗಳು ಮತ್ತು ಮಾನವ ಹಕ್ಕುಗಳ ಬಗ್ಗೆ ಅವರದು ಉತ್ಕಟವಾದ ಬದ್ಧತೆ. ಆ ಬದ್ಧತೆಯಿಂದಾಗಿಯೇ ಅವರು ಈಗಿರುವ ಸರ್ಕಾರವೂ ಸೇರಿದಂತೆ ಎಲ್ಲಾ ಸರ್ಕಾರಗಳ ನೀತಿಗಳನ್ನು ನಿಷ್ಠುರವಾಗಿ ಪ್ರಶ್ನಿಸಿತ್ತಾ ಬಂದಿದ್ದಾರೆ. ಬಾಬಾಸಾಹೇಬರ ಹುಟ್ಟುಹಬ್ಬದಂದೇ ಅವರು ಬಂಧನಕ್ಕೆ ಒಳಗಾಗಿರುವುದು ಇಂದಿನ ಶೋಷಕ ವ್ಯವಸ್ಥೆಯ ಮೂಲವನ್ನು ಅವರು ಅಂಬೇಡ್ಕರ್‌ರಂತೆಯೇ ಕಟುವಾಗಿ ಟೀಕಿಸುತ್ತಿರುವುದೆ ಕಾರಣ ಎಂಬ ತೀರ್ಮಾನಕ್ಕೆ ನಾವು ಬರುವಂತಾಗಿದೆ.

ನ್ಯಾಯದ ಸಂಕೇತವಾಗಿದ್ದ ಇಂತಹ ವ್ಯಕ್ತಿ ಇಂದು ಅನ್ಯಾಯದ ವ್ಯವಸ್ಥೆಯ ಬಂಧಿಯಾಗಿರುವುದು ಒಂದು ದೊಡ್ಡ ದುರಂತ. ತೇಲ್ತುಂಬ್ಡೆಯವರು ಬದುಕಿಡೀ ಹಿಂಸೆ ಮತ್ತು ಬಲಪ್ರಯೋಗವನ್ನು ವಿರೋಧಿಸುತ್ತಾ ಬಂದವರು. ಆದರೀಗ ಅವರ ಮೇಲೆಯೇ ರಾಜಕೀಯ ಹಿಂಸೆಯನ್ನು ಯೋಜಿಸಿದರು ಎಂಬ ಆರೋಪ ಹೊರಿಸಲಾಗಿದೆ. ಇದಕ್ಕೆ ನೆಪವಾದ ಎಲ್ಗಾರ್ ಪರಿಷತ್ ಸಮಾವೇಶಕ್ಕೆ ಕರೆ ನೀಡಿದ್ದವರು ಉನ್ನತ ನ್ಯಾಯಾಲಯದ ಇಬ್ಬರು ನ್ಯಾಯಾಧೀಶರು. 

ತೆಲ್ತುಂಬ್ಡೆಯವರು ಅದರಲ್ಲಿ ಭಾಗವಹಿಸಿಯೂ ಇರಲಿಲ್ಲ. ವಸ್ತುಸ್ಥಿತಿ ಹೀಗಿದ್ದಾಗಲೂ ಇವರು ಸಮಾವೇಶದ ಮೂಲಕ ರಾಜಕೀಯ ಹಿಂಸೆಯನ್ನು ಯೋಜಿಸಿದರು ಎನ್ನುವ ಆರೋಪ ಹೊರಿಸಲಾಗಿದೆ. ಇದು ನಿಜಕ್ಕೂ ತುಂಬಾ ಆತಂಕದ ವಿಷಯ. ಅಷ್ಟೇ ಅಲ್ಲ ಅದು ಒಂದು ಸಣ್ಣ ಪುರಾವೆಯೂ ಇಲ್ಲದೆ ಕೆಲವು ಕ್ಷುಲಕ ಆರೋಪಗಳ ಜೊತೆಗೆ ಪ್ರಧಾನ ಮಂತ್ರಿಯ ಕೊಲೆಯ ಸಂಚಿನ ಆರೋಪವನ್ನೂ ತೇಲ್ತುಂಬ್ಡೆಯವರ ಮೇಲೆ ಹೊರಿಸಲಾಗಿದೆ. ಇದು ನಿಜಕ್ಕೂ ಹಾಸ್ಯಾಸ್ಪದ. ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾಗಿ, ನ್ಯಾಯಯುತ ವಿಚಾರಣೆಯ ಸಾಧ್ಯತೆ ತೆರೆದುಕೊಳ್ಳುತ್ತಿದ್ದಂತಯೇ ಆ ವಿಚಾರಣೆಯನ್ನೇ ಡಿಢೀರನೇ ಮಹಾರಾಷ್ಟ್ರ ಪೋಲಿಸರಿಂದ ರಾಷ್ಟ್ರೀಯ ವಿಚಾರಣಾ ಏಜೆನ್ಸಿಗೆ (ಎನ್.ಐ.ಎ.) ಏಕಪಕ್ಷಿಯವಾಗಿ ಕೈಗೆತ್ತಿಕೊಂಡಿರುವ ಪ್ರಕ್ರಿಯೆ ತೀರ ಅನುಮಾನಸ್ಪದಾಗಿದೆ. ಈ ಹಿನ್ನಲೆಯಲ್ಲಿ, ಡಾ. ತೇಲ್ತುಂಬ್ಡೆ ಮತ್ತಿತರ ಕಾರ್ಯಕರ್ತರಿಗೆ ನ್ಯಾಯಯುತ ಮುಕ್ತ ವಿಚಾರಗಳಿಂದ ಅವರನ್ನು ವಂಚಲಿಸಕ್ಕಾಗಿಯೇ ಜಾಮೀನು ಸಿಗದ ಹಾಗೂ ನ್ಯಾಯಯುತ ವಿಚಾರಣೆಯೂ ಜರುಗದ ಪೈಶಾಚಿಕ ಯು.ಎ.ಪಿ.ಎ. (UAPA) ಕಾಯ್ದೆಯಡಿ ಬಂಧಿಸಿರುವುದು ಸ್ವಯಂ ಸ್ಪಷ್ಟವಾಗಿದೆ.

ಸೂಕ್ಷ್ಮ ಆರೋಗ್ಯ ಪರಿಸ್ಥಿತಿಯ ತೇಲ್ತುಂಬ್ಡೆಯವರನ್ನು ಕೋವಿಡ್-19ರ ಸೋಂಕು ತಗಲುವ ಸಾಧ್ಯತೆಯಿರುವ ಇಂದಿನ ಸಂದರ್ಭದಲ್ಲಿ, ಜೈಲಲ್ಲಿರುವ ಅಪರಾಧಿಗಳನ್ನೇ ಕೋವಿಡ್-19 ರ ಸೋಂಕಿನ ವಾತಾವರಣದಿಂದಾಗಿ ಬಿಡುಗಡೆ ಮಾಡುತ್ತಿರುವ ಈ ಸಂದರ್ಭದಲ್ಲಿ 69 ವರ್ಷದ ಹಿರಿಯರಾದ ತೇಲ್ತುಂಬ್ಡೆಯವರನ್ನು ಜೈಲಿಗೆ ಕಳುಹಿಸಿದ್ದು, ಕ್ರೌರ್ಯದ ಪರಮಾವಧಿ ಎನ್ನಬೇಕಾಗುತ್ತದೆ.

ಸಮಾಜದ ಅನ್ಯಾಯದ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಸೆರೆಯಲ್ಲಿರುವ ಡಾ. ತೆಲ್ತುಂಬ್ಡೆ, ಜಗತ್ತಿನಾದ್ಯಂತ ಶೋಷಣೆ ಹಾಗೂ ಅನ್ಯಾಯದ ವಿರುದ್ಧದ ದನಿಯನ್ನು ಪ್ರತಿನಿಧಿಸುತ್ತಾರೆ. ಅದರಿಂದಾಗಿಯೇ ಜಿಜ್ಞಾಸುಗಳು, ಚಿಂತಕರು, ಕಲಾವಿದರು, ಕಾರ್ಯಕರ್ತರು, ಮುಖಂಡರು, ಮತ್ತು ನಾಗರಿಕ ಹಕ್ಕುಗಳ ಸಂಘಟನೆಗಳು ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಅವರ ಬಂಧನದ ವಿರುದ್ಧ ಧ್ವನಿಯೆತ್ತಿದ್ದಾರೆ. ಅವರಲ್ಲಿ ಪ್ರಮುಖರಾದವರು ಅಮ್ನೆಸ್ಟಿ ಇಂಟರ್ ನ್ಯಾಷನಲ್, ಇಂಡಿಯಾ ಸಿವಿಲ್ ವಾಚ್, ರಿಸ್ಕ್ ನೆಟ್ ವರ್ಕನ ವಿದ್ವಾಂಸರುಗಳು, ಪ್ರೊಫೆಸರ್ ಅಮರ್ತ್ಯ ಸೇನ್, ನೋಮ್‌ಚಾಮ್ಸ್ಕಿ, ಜೀನ್‌ಡ್ರೇಜ್, ಬಿ ಎಲ್ ಮುಂಗೇಕರ್, ಅರುಂಧತಿರಾಯ್, ಅಪರ್ಣಾ ಸೇನ್, ರೋಮಿಲಾಥಾಪರ್, ಪ್ರಭಾತ್ ಪಟ್ನಾಯಕ್, ದೇವಕಿಜೈನ್, ಪ್ರಕಾಶ್‌ಅಂಬೇಡ್ಕರ್, ಮಜದಾರೂವಾಲ ಮುಂತಾದವರು ಸೇರಿದಂತೆ 5000ಕ್ಕೂ ಹೆಚ್ಚು ಪ್ರಜ್ಞಾವಂತ ನಾಗರಿಕರು ದನಿಯೆತ್ತಿದ್ದಾರೆ.

ಇದಕ್ಕೆ ನಾವೂ ಜತೆಗೂಡಬೇಕಾಗಿದೆ. ಅದಕ್ಕಾಗಿ ಮೇ 16 ನೇ ದಿನವನ್ನು ನ್ಯಾಯ ದಿನವನ್ನಾಗಿ ಆಚರಿಸೋಣ ಎಂದು ಸಲಹೆ ನೀಡುತ್ತೇವೆ. ಡಾ.ತೇಲ್ತುಂಬ್ಡೆ ಮತ್ತು ಅವರೊಡನೆ ಆರೋಪ ಎದುರಿಸುತ್ತಿರುವ ಕಾರ್ಯಕರ್ತರಿಗೆ ನ್ಯಾಯ ದೊರಕಿಸಲು ಒತ್ತಾಯಿಸಲು ಹಾಗೂ ಅವರು ಎತ್ತಿಹಿಡಿದ ಒಂದು ನ್ಯಾಯಯುತ ಸಮಾಜದ ವಿಚಾರವನ್ನು ಬೆಂಬಲಿಸಲು ಮೇ 16 ರಂದು ನ್ಯಾಯದ ದಿನವನ್ನಾಗಿ ಆಚರಿಸೋಣ.

ಇಂದು ಕೊರೋನಾ ವೈರಾಣುವಿನ ಪಿಡುಗಿನ ಕಾರಣದಿಂದಾಗಿ ಸಾರ್ವಜನಿಕವಾಗಿ ಸೇರುವುದಕ್ಕೆ ನಿರ್ಬಂಧವಿರುವುದರಿಂದ ಮೇ 16 ರ ನ್ಯಾಯದ ದಿನ ವನ್ನು ಕೆಳಕಂಡಂತೆ ಆಚರಿಸಬಹುದೆಂದು ನಾವು ಪ್ರಸ್ತಾಪಿಸುತ್ತೇವೆ:

1. ನಮ್ಮ ಎಲ್ಲ ಸಾಮಾಜಿಕ ಮಾಧ್ಯಮದ ಪ್ರೊಫೈಲ್ (ಡಿ.ಪಿ.) ಚಿತ್ರವನ್ನು ಮೇ 16 ರಂದು ಡಾ. ತೇಲ್ತುಂಬ್ಡೆಯವರ ಚಿತ್ರವನ್ನು ಹಾಕಿಕೊಳ್ಳೋಣ.

2. ನಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಎರಡು ಗಂಟೆಗಳ ಕಾಲ ಸಂಜೆ 4 ರಿಂದ 6 ರವರೆಗೆ #ಜಸ್ಟಿಸ್4 ತೆಲ್ತುಂಬ್ಡೆ ಆಂದೋಲನವನ್ನು ನಡೆಸೋಣ.

3. ವೆಬಿನಾರ್ ಮತ್ತು ವರ್ಚುಯಲ್ ಸಭೆಗಳನ್ನು ಸಂಘಟಿಸಿ ಮೇ ತಿಂಗಳ ಎಲ್ಲಾ ದಿನಗಳಲ್ಲೂ ಡಾ. ತೆಲ್ತುಂಬ್ಡೆಯವರ ಹಾಗೂ ಬಾಬಾಸಾಹೇಬ ಅಂಬೇಡ್ಕರರನ್ನು ಓದೋಣ ಮತ್ತು ಚರ್ಚಿಸೋಣ.

ನ್ಯಾಯದ ದಿನ ವನ್ನು ಆಚರಿಸುವುದರ ಮೂಲಕ ನಮ್ಮ ಸಂವಿಧಾನದ ಮೌಲ್ಯಗಳನ್ನು ಸಮರ್ಥಿಸೋಣ ಮತ್ತು ಪ್ರಜೆಯಾಗಿ ನಮ್ಮ ಕರ್ತವ್ಯವನ್ನು ನೆರವೇರಿಸೋಣ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಪತ್ರಕ್ಕೆ ಜಸ್ಟೀಸ್‌ ಗೋಪಾಲಗೌಡ, ರಾಜ್‌ಮೋಹನ್‌ ಗಾಂಧಿ, ಪ್ರಶಾಂತ್‌ ಭೂಷಣ್‌, ಅಡ್ಮಿರಲ್‌ ರಾಮ್‌ದಾಸ್‌, ಅಜಯ್‌ಕುಮಾರ್‌ ಸಿಂಗ್‌, ಪ್ರೊ.ಆನಂದ್‌ ಕುಮಾರ್‌, ಎ.ಎನ್‌ ಯೆಲ್ಲಪ್ಪ ರೆಡ್ಡಿ, ಅರುಣಾ ರಾಯ್‌, ಏಕಾಂತಯ್ಯ, ಜಸ್ಟಿಸ್‌ ಎ.ಪಿ ಶಾ, ಜಸ್ಟಿಸ್‌ ಎಚ್‌.ಎನ್‌ ನಾಗಮೋಹನ್‌ದಾಸ್‌, ಕೆ.ಸಿ ರಘು, ಕೋದಂಡರಾಮಯ್ಯ, ಕೃಷ್ಣ ಕೆ.ಆರ್‌ ಪೇಟೆ, ಕುಮಾರ್‌ ಪ್ರಶಾಂತ್‌ , ಮರಿಸ್ವಾಮಿ, ಎಸ್‌.ಕೆ ಕಾಂತ, ಸುಹಾಸ್‌ ಪಲ್ಸಿಕರ್‌, ವಾಜಹತ್‌ ಹಬೀಬುಲ್ಲ, ಯೋಗೇಂದ್ರ ಯಾದವ್‌, ಜಸ್ಟೀಸ್‌ ಎ.ಜೆ ಸದಾಶಿವ, ಪ್ರೊ.ರವಿವರ್ಮಕುಮಾರ್‌, ಸುಗತ ರಾಜು, ಮಲೈ ಭಟ್ಟಾಚಾರ್ಯ, ಬೆಜವಾಡ ವಿಲ್ಸನ್‌, ತ್ರಿಲೋಚನಾ ಶಾಸ್ತ್ರಿ, ದಿನೇಶ್‌ ಅಮೀನ್‌ ಮಟ್ಟು, ಅಭಯ್‌, ಇಂಧೂದರ ಹೊನ್ನಾಪುರ, ಬಿ.ಟಿ ವೆಂಕಟೇಶ್‌, ಸೈಲ್‌ ಶೆಟ್ಟಿ, ಎಸ್‌.ಆರ್‌ ಹೀರೇಮಠ್‌ , ದೇವನೂರು ಮಹಾದೇವ ಮುಂತಾದವರು ಸಹಿ ಹಾಕಿದ್ದಾರೆ.

Stay up to date on all the latest ರಾಜ್ಯ news
Poll
SChool_Children1

ಕೆಲವು ರಾಜ್ಯಗಳಲ್ಲಿ ಶಾಲೆಗಳ ಭಾಗಶಃ ಪುನರಾರಂಭವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp