ಬಾಗಲಕೋಟೆ: ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆ ಉಂಟಾಗದಿರಲು ಲಾಕ್‌ಡೌನ್ ಕಾರಣ!

ಪ್ರತಿವರ್ಷ ಮೇ ತಿಂಗಳಿನಲ್ಲಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ತೀವ್ರ ಕುಡಿವ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಈ ಬಾರಿ ಮಾತ್ರ ಜಿಲ್ಲೆಯ ಯಾವ ಭಾಗದಲ್ಲೂ ಇದುವರೆಗೂ ಕುಡಿವ ನೀರಿನ ಸಮಸ್ಯೆ ಕಾಣಿಸಿಕೊಂಡಿಲ್ಲ.
ಸಿಇಒ ಗಂಗೂಬಾಯಿ ಮಾನಕರ
ಸಿಇಒ ಗಂಗೂಬಾಯಿ ಮಾನಕರ

ಬಾಗಲಕೋಟೆ: ಪ್ರತಿವರ್ಷ ಮೇ ತಿಂಗಳಿನಲ್ಲಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ತೀವ್ರ ಕುಡಿವ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಈ ಬಾರಿ ಮಾತ್ರ ಜಿಲ್ಲೆಯ ಯಾವ ಭಾಗದಲ್ಲೂ ಇದುವರೆಗೂ ಕುಡಿವ ನೀರಿನ ಸಮಸ್ಯೆ ಕಾಣಿಸಿಕೊಂಡಿಲ್ಲ. ಇದಕ್ಕೆ ಲಾಕ್‌ಡೌನ್ ಕ್ರಮವೇ ಕಾರಣ ಎನ್ನುವುದು ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಿಇಒ ಅವರು ನೀಡುವ ಸಮಜಾಯಿಷಿ.

ಪ್ರತಿ ವರ್ಷ ಬೇಸಿಗೆಯಲ್ಲಿ ಏಪ್ರಿಲ್‌ನಿಂದಲೇ ತೀವ್ರ ಕುಡಿವ ನೀರಿನ ಸಮಸ್ಯೆ ಉಂಟಾಗುತ್ತಿತ್ತು. ಅದರಲ್ಲೂ ಕೃಷ್ಣಾ, ಘಟಪ್ರಭ ಮತ್ತು ಮಲಪ್ರಭ ನದಿ ತೀರದ ಗ್ರಾಮಗಳಲ್ಲಿನ ಜನತೆ ಹನಿ ನೀರಿಗೂ ಪರದಾಡುವ ಸ್ಥಿತಿ ಇರುತ್ತಿತ್ತು. ರಾಜ್ಯ ಸರ್ಕಾರ ಕೃಷ್ಣಾ ಮತ್ತು ಭೀಮಾ ನದಿಗೆ ನೀರು ಹರಿಸುವಂತೆ ಮಹಾರಾಷ್ಟ ಸರ್ಕಾರವನ್ನು ಪರಿಪರಿಯಾಗಿ ಬೇಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿರುತ್ತಿತ್ತು.

ಈಗ ನಾವು ಮೇ ತಿಂಗಳು ಮಧ್ಯ ಭಾಗದಲ್ಲಿ ಇದ್ದೇವಾದರೂ ಕುಡಿವ ನೀರಿನ ಸಮಸ್ಯೆ ಉಂಟಾಗಿಲ್ಲ. ಹಾಗಂತ ಮುಂಜಾಗೃತಾ ಕ್ರಮವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎದುರಾಗಲಿರುವ ಕುಡಿವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಕೃಷ್ಣಾ ಮತ್ತು ಭೀಮಾ ನದಿಗೆ ತಲಾ ೩ ಮೂರು ಟಿಎಂಸಿ ನೀರು ಬಿಡಿ ಎಂದು ಮಹಾ ಸರ್ಕಾರಕ್ಕೆ ಪತ್ರ ಬರೆದು ಅದಾಗಲೇ ವಾರ ಕಳೆದಿದೆ. ಆದರೆ ಮಹಾರಾಷ್ಟ ಸರ್ಕಾರ ಮಾತ್ರ ಸಿಎಂ ಬಿ.ಎಸ್. ಯಡಿಯೂರಪ್ಪ ಪತ್ರಕ್ಕೆ ಉತ್ತರಿಸುವ ಗೋಜಿಗೆ ಹೋಗಿಲ್ಲ.
 
ಅದು ಬಿಡಿ ಕುಡಿವ ನೀರಿನ ಸಮಸ್ಯೆ ತಲೆದೋರದೆ ಇರಲು ಲಾಕ್‌ಡೌನ್ ಕ್ರಮಗಳು ಕಾರಣವಾಗಿವೆ ಎನ್ನುವುದು ಜಿಪಂ. ಸಿಇಓ ಗಂಗೂಬಾಯಿ ಮಾನಕರ ಅವರ ಪ್ರತಿಪಾದನೆ ಆಗಿದೆ. ಬುಧವಾರ ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ತಮ್ಮ ವಾದಕ್ಕೆ ಅವರು ಸೂಕ್ತ ಕಾರಣಗಳನ್ನೂ ನೀಡಿದ್ದಾರೆ. ಲಾಕ್‌ಡೌನ್‌ನಿಂದ ಜನತೆ ಮನೆ ಬಿಟ್ಟು ಹೊರಕ್ಕೆ ಬರುತ್ತಿಲ್ಲ. ಹಾಗಾಗಿ ಮನೆಯಲ್ಲಿಯೇ ಎಷ್ಟು ಬೇಕೋ ಅಷ್ಟು ನೀರು ಬಳಕೆ ಮಾಡುತ್ತಿದ್ದಾರೆ. ಜತೆಗೆ ನಿತ್ಯ ಉಪಯೋಗಿಸುವುದಕ್ಕಿಂತೆ ಸ್ವಲ್ಪ ಜಾಸ್ತಿಯೇ ಉಪಯೋಗಿಸುತ್ತಿದ್ದಾರೆ ಎನ್ನುವುದು ಗಮನಾರ್ಹ.

ಹೋಟೆಲ್‌ಗಳು, ರೆಸ್ಟಾರೆಂಟ್‌ಗಳು, ಸಣ್ಣ ಹಾಗೂ ಮಧ್ಯ ಕೈಗಾರಿಕೆಗಳೂ ಸೇರಿದಂತೆ ಬೃಹತ್ ಕೈಗಾರಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಕೆ ಮಾಡುತ್ತವೆ. ಆದರೆ ಲಾಕ್‌ಡೌನ್ ಪರಿಣಾಮ ಇಂದು ಇವೆಲ್ಲ ಬಂದ್ ಇರುವುದರಿಂದ ನೀರಿನ ಬಳಕೆಯಲ್ಲಿ ಗಣನೀಯ ಬಳಕೆ ಕಡಿಮೆ ಆಗಿದೆ. ಇದೇ ಕಾರಣಕ್ಕಾಗಿ ಜಿಲ್ಲೆಯಲ್ಲಿ ಬಿರುಬೇಸಿಗೆಯಲ್ಲೂ ನೀರಿನ ಸಮಸ್ಯೆ ಕಾಣಿಸಿಕೋಂಡಿಲ್ಲ ಎನ್ನುವುದು ಅವರ ಬಲವಾದ ವಾದವಾಗಿದೆ.

ಒಂದೊಮ್ಮೆ ಲಾಕ್‌ಡೌನ್ ತೆರವುಗೊಂಡಲ್ಲಿ ಕೂಡಲೇ ಕುಡಿವ ನೀರಿನ ಸಮಸ್ಯೆ ಆರಂಭಗೊಂಡಲ್ಲಿ ಅಚ್ಚರಿ ಪಡಬೇಕಿಲ್ಲ. ಜಿಲ್ಲಾ ಪಂಚಾಯಿತಿ ಕುಡಿವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಆದರೆ ಇದುವರೆಗೂ ಜನತೆಗೆ ನೀರು ಪೂರೈಕೆಗೆಗಾಗಿ ಪ್ರತಿ ವರ್ಷ ಗುರುತಿಸುವಂತೆ ಖಾಸಗಿ ನೀರಿನ ಮೂಲಗಳನ್ನು ಗುರುತಿಸಿಲ್ಲ. ಅಂತಹ ಸ್ಥಿತಿ ಏನಾದರೂ ಎದುರಾದಲ್ಲಿ ಕೂಡಲೇ ಜಿಪಂ ಖಾಸಗಿ ನೀರಿನ ಮೂಲಗಳನ್ನು ಕುಡಿವ ನೀರಿನ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲು ಹಿಂಜರಿಯದು ಎನ್ನುವ ಮಾತನ್ನು ಹೇಳಿದ್ದಾರೆ.

ಲಾಕ್‌ಡೌನ್ ಪರಿಣಾಮವಾಗಿ ಈ ಬಾರಿ ಜಿಲ್ಲೆಯಲ್ಲಿ ಕುಡಿವ ನೀರಿನ ಹಾಹಾಕಾರ ಆರಂಭಗೊಂಡಿಲ್ಲ. ಒಂದೊಮ್ಮೆ ಲಾಕ್‌ಡೌನ್ ಮುಗಿದ ಬಳಿಕ ಆರಂಭಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಅದರಲ್ಲೂ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಕುಡಿವ ನೀರಿನ ತೊಂದರೆ ಹೆಚ್ಚಾಗಲಿದೆ. ಸರ್ಕಾರ ಮುಂಜಾಗೃತಾ ಕ್ರಮವಾಗಿ ಮಹಾರಾಷ್ಟ ಕೃಷ್ಣಾ ಮತ್ತು ಭೀಮಾ ನದಿಗೆ ನೀರು ಹರಿಸುವಂತೆ ಜ್ಞಾಪನಾ ಪತ್ರವನ್ನು ಈಗಲೇ ಬರೆಯುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ರಾಜ್ಯ ಸರ್ಕಾರ ಜ್ಞಾಪನಾ ಪತ್ರ ಬರೆಯುವಲ್ಲಿ ವಿಳಂಬ ಮಾಡಿದಲ್ಲಿ ಲಾಕ್‌ಡೌನ್ ಬಳಿಕ ಎದುರಾಗಲಿರುವ ಕುಡಿವ ನೀರಿನ ಸಮಸ್ಯೆ ಬಗೆಹರಿಸುವುದು ಕಷ್ಟವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಜಿಲ್ಲೆಯ ಬಹುತೇಕ ಗ್ರಾಮ, ಪಟ್ಟಣ ಮತ್ತು ನಗರ ಪ್ರದೇಶಗಳು ಕೃಷ್ಣ ನದಿಯಲ್ಲಿನ ನೀರನ್ನೇ ಅವಲಂಬಿಸಿವೆ. ಸದ್ಯ ಆಲಮಟ್ಟಿ ಜಲಾಶಯದ ಹಿನ್ನೀರು ಕೂಡ ತಕ್ಕ ಮಟ್ಟಿಗೆ ಇರುವುದು ಸಮಧಾನಕರ ಸಂಗತಿ.
ಲಾಕ್‌ಡೌನ್ ಮುಗಿಯುವುದರೊಳಗಾಗಿ ಮಳೆಗಾಲ ಆರಂಭಗೊಂಡಲ್ಲಿ ಅಷ್ಟರ ಮಟ್ಟಿಗೆ ರಾಜ್ಯ ಎದುರಾಗಲಿರುವ ಕುಡಿವ ನೀರಿನ ಸಮಸ್ಯೆಯಿಂದ ಪಾರಾಗಲಿದೆ. ಏನೇ ಆಗಲಿ ಲಾಕ್‌ಡೌನ್ ಸದ್ಯ ಕುಡಿವ ನೀರಿನ ಸಮಸ್ಯೆ ಪರಿಹಾರ ರೂಪವಾಗಿ ಕಾಣಿಸುತ್ತಿರುವುದಂತೂ ಸತ್ಯ. ಯಾವುದಕ್ಕೂ ಮುಂಜಾಗೃತೆ ಅಗತ್ಯವಾಗಿದೆ.

ವರದಿ :ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com