ರೈತರ ಹಿತದೃಷ್ಟಿಯಿಂದ ಎಪಿಎಂಸಿ ತಿದ್ದುಪಡಿ ಸುಗ್ರೀವಾಜ್ಞೆ ಕೈ ಬಿಡಿ: ಎಚ್ ಕೆ ಪಾಟೀಲ್

ವಿವಾದಿತ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಕಾಂಗ್ರೆಸ್ ಹಿರಿಯ ನಾಯಕ, ಗದಗ ಶಾಸಕ ಎಚ್.ಕೆ.ಪಾಟೀಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಎಚ್. ಕೆ. ಪಾಟೀಲ್
ಎಚ್. ಕೆ. ಪಾಟೀಲ್

ಗದಗ: ವಿವಾದಿತ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಕಾಂಗ್ರೆಸ್ ಹಿರಿಯ ನಾಯಕ, ಗದಗ ಶಾಸಕ ಎಚ್.ಕೆ.ಪಾಟೀಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಎಪಿಎಂಸಿ ಬದಲಾವಣೆಗಾಗಿ ತರುತ್ತಿರುವ ಸುಗ್ರೀವಾಜ್ಞೆ ರೈತ ವಿರೋಧಿ ಸುಗ್ರಿವಾಜ್ಞೆಯಾಗಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಕಾನೂನು ಬದಲಾವಣೆ ಮಾಡುವುದು ಸರಿಯಲ್ಲ. ಹಳೆಯ ಕಾನೂನಿನಲ್ಲಿ ಎಪಿಎಂಸಿ ಯಾರ್ಡ್‌ಗಳಲ್ಲಿ ನಡೆಸುವ ವ್ಯವಹಾರಗಳ ಮೇಲೆ‌ ವಿಶೇಷ ಅಧಿಕಾರ ಇರುತ್ತದೆ. ಕಲಂಗಳ ಪ್ರಕಾರ ಅದರದೇ‌ ಆದ ನಿಯಮಗಳಿವೆ. ಇದೀಗ ಇವುಗಳನ್ನು ರದ್ದು ಪಡಿಸಲು ಮುಂದಾಗಿರುವುದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.

ರೈತರಿಗೆ ಶೋಷಣೆ, ಮೋಸ, ವಂಚನೆ ಮಾಡುವವರಿಗೆ ಈ ಕಾಯ್ದೆಯಲ್ಲಿ ಶಿಕ್ಷೆ, ದಂಡ ವಿಧಿಸಲು ಅವಕಾಶವಿದೆ. ರಾಜ್ಯ ಸರಕಾರ‌ ಇಂದು ಈ‌ ಕಾನೂನನ್ನು ಬದಲಾಯಿಸುವ ಪ್ರಯತ್ನ ನಡೆಸುತ್ತಿದೆ. ಸರಕಾರದ ಉದ್ದೇಶ ತಮಗೆ ಅರ್ಥವಾಗುತ್ತಿಲ್ಲ. ಸರಕಾರ ತರುವ ಕಾನೂನಿನಿಂದ ರೈತರ ಶೋಷಣೆಗೆ‌ ಮುಕ್ತ‌ ಅವಕಾಶ ಸಿಕ್ಕಿದಂತಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ರೈತರಿಗೆ ಮೋಸ ಮಾಡಿದವರಿಗೆ ಶಿಕ್ಷೆ, ದಂಡ ವಿಧಿಸುವುದನ್ನು ಇನ್ನು ಮುಂದೆ ಇಲ್ಲವಾಗುತ್ತದೆ. ಎಪಿಎಂಸಿ ಯಾರ್ಡ್‌ನಲ್ಲಿ ವ್ಯವಹಾರ ಮಾಡುವ ವ್ಯಾಪಾರಸ್ಥರಿಗೆ ಕಾಯ್ದೆಯ ನಿಯಮ ಅನ್ವಯವಾದರೆ, ಎಪಿಎಂಸಿ ಹೊರಗಡೆ ಅನಧಿಕೃತವಾದ ವ್ಯವಹಾರ ಮಾಡುವವರಿಗೆ ಈ ಕಾನೂನಿನಿಂದ ವಿನಾಯಿತಿ ನೀಡಲಾಗುತ್ತದೆ. ಸೆಸ್, ಪೇಮೆಂಟ್ ವಿಳಂಬ, ಲೈಸೆನ್ಸ್ ರದ್ದುಪಡಿಸುವಿಕೆ ಕಾನೂನು ಇದರಲ್ಲಿ ಇಲ್ಲ ಈ ರೀತಿಯ ಕಾನೂನು ಕಾಳಸಂತೆಗೆ ಅನುಕೂಲ ಮಾಡಿಕೊಡುತ್ತದೆ. ಇದೀಗ ಕಳ್ಳಸಂತೆಗೆಂದೆ‌ ವಿಶೇಷವಾದ ಕಾನೂನು ತಂದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸ್ವಾತಂತ್ರ್ಯ ಪೂರ್ವ ಹಾಗೂ ನಂತರ ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆಯಲ್ಲಿ ಶಿಸ್ತುಬದ್ಧ ವ್ಯವಸ್ಥೆ ಇತ್ತು. ಈ ಎಲ್ಲ ಶೋಷಣೆಮುಕ್ತ ವ್ಯವಸ್ಥೆಗೆ ತಿಲಾಂಜಲಿ ಇಡುವ ಕೆಲಸ ನಡೆಯುತ್ತಿದೆ. ಕಾನೂನುಗಳು ಯಾವಾಗಲೂ ರೈತಪರ ಹಾಗೂ ಶೋಷಣೆಮುಕ್ತ‌ ಕಾನೂನು ಆಗಿರಬೇಕು. ಸುಗ್ರೀವಾಜ್ಞೆ ಮಾಡುವ ಗೋಜಿಗೆ ಮುಖ್ಯಮಂತ್ರಿಗಳು ಹೋಗಬಾರದು. ಎಂಎನ್‌ಸಿ ಕಂಪನಿಗಳಿಗೆ‌ ಅನುಕೂಲವಾಗುವ ಈ ಕಾನೂನು ರೈತ ವಿರೋಧಿಯಾಗಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗಲಿ. ಅಲ್ಲಿವರೆಗೂ ರೈತವಿರೋಧಿ ಸುಗ್ರೀವಾಜ್ಞೆ ಹೊರಡಿಸಬಾರದು ಎಂದು ಎಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com