ಕೊಪ್ಪಳ: ಹುಡುಗಿ ಚುಡಾಯಿಸಿದ್ದಕ್ಕೆ ಕೊಲೆ; 24 ಗಂಟೆಯೊಳಗೆ ನಾಲ್ವರು ಆರೋಪಿಗಳು ಸೆರೆ

ಯುವಕನ ಕೊಲೆ ಪ್ರಕರಣವನ್ನು ಕೊಪ್ಪಳ ಪೊಲೀಸರು ಕೇವಲ 24 ಗಂಟೆಯೊಳಗೆ ಬೇದಿಸಿದ್ದು, ನಾಲ್ವರು ಆರೋಪಿಗಳು ಬಂಧಿಸಿದ್ದಾರೆ.
ಬಂಧನ (ಸಾಂದರ್ಭಿಕ ಚಿತ್ರ)
ಬಂಧನ (ಸಾಂದರ್ಭಿಕ ಚಿತ್ರ)

ಕೊಪ್ಪಳ: ಯುವಕನ ಕೊಲೆ ಪ್ರಕರಣವನ್ನು ಕೊಪ್ಪಳ ಪೊಲೀಸರು ಕೇವಲ 24 ಗಂಟೆಯೊಳಗೆ ಬೇದಿಸಿದ್ದು, ನಾಲ್ವರು ಆರೋಪಿಗಳು ಬಂಧಿಸಿದ್ದಾರೆ.

ಹೌದು.. ಯಾವುದಾದರೂ ದುರ್ಘಟನೆಗೆ ಕಾರಣವಾಗೋದು ಹೊನ್ನು, ಹೆಣ್ಣು ಮತ್ತು ಮಣ್ಣು ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇಲ್ಲಿ ನಡೆದ ಕೊಲೆಗೆ ಹುಡುಗಿಯನ್ನು ಚುಡಾಯಿಸಿದ್ದೇ ಕಾರಣ ಎಂದರೆ ನಂಬಲೇಬೇಕು. ಹಾಗೆಯೇ ಕೊಲೆ ಮಾಡಿದ ಆರೋಪಿಗಳನ್ನು 24  ಗಂಟೆಯೊಳಗೆ ಪೊಲೀಸರು ಕಂಬಿ ಹಿಂದೆ ಹಾಕಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹೂಲಗೇರಿಯಲ್ಲಿ ನಡೆದ ಕೊಲೆಯ ಆರೋಪಿಗಳನ್ನು ಪತ್ತೆ ಹಚ್ಚಲು ಕೇವಲ 24 ಗಂಟೆ ಸಮಯ ಮಾತ್ರ ವ್ಯಯಿಸಿದ್ದಾರೆ. 

ಕೊಪ್ಪಳ ಜಿಲ್ಲೆಯಲ್ಲಿ ಇಂಥಹ ಹಲವು ಪ್ರಕರಣ ನಡೆದಿದ್ದರೂ ಆರೋಪಿಗಳ ಬಂಧನ ಕಾರ್ಯ ಇಷ್ಟು ತೀವ್ರತೆ ಮತ್ತು ವೇಗ ಪಡೆದಿರಲಿಲ್ಲ. ಹೂಲಗೇರಿಯಲ್ಲಿ ನಡೆದ ಯುವಕನ ಕೊಲೆ ಬೇಧಿಸುವಲ್ಲಿ ಪೊಲೀಸರ ಕಾರ್ಯತಂತ್ರವನ್ನು ಮೆಚ್ಚಲೇಬೇಕು.

ಏನಿದು ಘಟನೆ?
ಮೇ 13 ರಂದು ಬೆಳಗ್ಗೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಬಲಕುಂದಿ ಗ್ರಾಮದ ಫಕೀರಮ್ಮ‌ ಮಡಿವಾಳರ ಎನ್ನುವವರು ಹನುಮಸಾಗರ ಪೊಲೀಸ್ ಠಾಣೆಗೆ ಬಂದು, ಠಾಣಾ ವ್ಯಾಪ್ತಿಗೆ ಬರುವ ಹೂಲಗೇರಿ ಕೆರೆಯಲ್ಲಿ ಕೆಲ ದುಷ್ಕರ್ಮಿಗಳು ಮೊಮ್ಮಗ ಮುತ್ತು ಅಲಿಯಾಸ್  ಮಡಿವಾಳಪ್ಪ ಮಡಿವಾಳರ (19) ನನ್ನು ಕೊಲೆ ಮಾಡಿ, ಅರ್ಧಂಬರ್ಧ ಮಣ್ಣು ಹಾಕಿ ಹೋಗಿದ್ದಾರೆ ಎಂದು ದೂರು ನೀಡಿದ್ದರು. ಪುಟ್ಟ ಹಳ್ಳಿ ಹೂಲಗೇರಿಯಲ್ಲಿ ಈ ಪ್ರಕರಣ ಭೀತಿ ಹುಟ್ಟಿಸಿತ್ತು. ಕೊಪ್ಪಳ ಜಿಲ್ಲಾ ಎಸ್ಪಿ ಜಿ.ಸಂಗೀತಾ, ಗಂಗಾವತಿ ಡಿಎಸ್‌ಪಿ ಬಿ.ಪಿ.ಚಂದ್ರಶೇಖರ್ ಮಾರ್ಗದರ್ಶನದಲ್ಲಿ  ಕುಷ್ಟಗಿ ಸಿಪಿಐ ಚಂದ್ರಶೇಖರ್. ಜಿ., ಹನುಮಸಾಗರ ಠಾಣೆಯ ಪಿಎಸ್ಐ ಅಮರೇಶ ಹುಬ್ಬಳ್ಳಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ದುರಗಪ್ಪ ಹಿರೇಮನಿ, ಡಿ.ಕೆ.ನಾಯಕ, ಪರಶುರಾಮ, ಬಾಳನಗೌಡ, ರವಿ ನಡುವಿನಮನಿ, ಜಯರಾಮ, ಪ್ರಶಾಂತ ಕುಂಬಾರ, ಖಾದರ ಇವರನ್ನು ಒಳಗೊಂಡ  ತನಿಖಾ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿತ್ತು.

ಪೊಲೀಸ್ ತಂಡದ ಕಾರ್ಯಾಚರಣೆಯಲ್ಲಿ ಕೊನೆಗೂ ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಕೊಲೆಗೆ ಸಂಚು ರೂಪಿಸಿದ್ದ ಬಲಕುಂದಿ ಗ್ರಾಮದ ಜಗದೀಶ ಹಿರೇಮಠ, ಪ್ರವೀಣ್ ಹಿರೇಮಠ, ದೊಡ್ಡಪ್ಪ ಅಂಗಡಿ ಹಾಗೂ ರೆಹಮಾನ್ ಮುಲ್ಲಾ ಪೊಲೀಸರ ಬಲೆಗೆ ಬಿದ್ದು, ಜಗದೀಶ್ ಮತ್ತು ಪ್ರವೀಣ್  ಹಿರೇಮಠ ಇವರ ಸಹೋದರಿಯನ್ನು ಚುಡಾಯಿಸಿದ್ದಕ್ಕೆ ಮುತ್ತು ಅಲಿಯಾಸ್ ಮಡಿವಾಳಪ್ಪನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ಕೊಲೆ ಮಾಡಲು ಬಳಸಿದ ಆಯುಧಗಳು, ಮೃತ ವ್ಯಕ್ತಿಯ ರಕ್ತಸಿಕ್ತ ಬಟ್ಟೆಗಳು, ಶವವನ್ನು ಹೂತು ಹಾಕುವುದಕ್ಕಾಗಿ  ಬಲಕುಂದಿಯಿಂದ ಹೂಲಗೇರಿಗೆ ಬಳಸಿದ ಮೋಟಾರ್ ಸೈಕಲ್ ಹಾಗೂ ನಾಲ್ವರು ಆರೋಪಿಗಳ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಹೂಲಗೇರಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟು ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com