ಕೊಪ್ಪಳ ಜಿಲ್ಲಾ ಪಂಚಾಯಿತಿ ಗದ್ದುಗೆಗೆ ಶುರುವಾಯ್ತು ಹಗ್ಗ ಜಗ್ಗಾಟ!

ಕೊಪ್ಪಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕಾಗಿ‌ ಇಷ್ಟು ದಿನ ನಡೆದಿದ್ದ ತೆರೆಮರೆಯ ಕಸರತ್ತು ಇದೀಗ ಬಯಲಿಗೆ ಬಂದಿದೆ. ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಹಾಲಿ ಅಧ್ಯಕ್ಷ ವಿಶ್ವನಾಥರಡ್ಡಿ ಬಿಜೆಪಿ ಸಖ್ಯ ಬೆಳೆಸಿ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯುವ ಉತ್ಸಾಹದಲ್ಲಿದ್ದಾರೆ. ಬಿಜೆಪಿ ಸಖ್ಯ ಬೆಳೆಸಿದ ಕಾರಣಕ್ಕಾಗಿ ಹೇಗಾದರೂ ಸರಿ ವಿಶ್ವನಾಥರಡ್ಡಿಯನ್ನು ಅಧಿಕಾರದಿಂದ ಕೆಳ
ಜಿಪಂ ಸಿಇಒಗೆ ಮನವಿ ಸಲ್ಲಿಸುತ್ತಿರುವುದು
ಜಿಪಂ ಸಿಇಒಗೆ ಮನವಿ ಸಲ್ಲಿಸುತ್ತಿರುವುದು

ಕೊಪ್ಪಳ: ಕೊಪ್ಪಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕಾಗಿ‌ ಇಷ್ಟು ದಿನ ನಡೆದಿದ್ದ ತೆರೆಮರೆಯ ಕಸರತ್ತು ಇದೀಗ ಬಯಲಿಗೆ ಬಂದಿದೆ. ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಹಾಲಿ ಅಧ್ಯಕ್ಷ ವಿಶ್ವನಾಥರಡ್ಡಿ ಬಿಜೆಪಿ ಸಖ್ಯ ಬೆಳೆಸಿ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯುವ ಉತ್ಸಾಹದಲ್ಲಿದ್ದಾರೆ. ಬಿಜೆಪಿ ಸಖ್ಯ ಬೆಳೆಸಿದ ಕಾರಣಕ್ಕಾಗಿ ಹೇಗಾದರೂ ಸರಿ ವಿಶ್ವನಾಥರಡ್ಡಿಯನ್ನು ಅಧಿಕಾರದಿಂದ ಕೆಳಗಿಳಿಸುವ ಹವಣಿಕೆ ಕಾಂಗ್ರೆಸ್‌ನದ್ದು.

ಒಳ ಒಪ್ಪಂದ ಮುರಿದದ್ದೇ ಕಾರಣ
ವಿಶ್ವನಾಥರಡ್ಡಿ ಜಿಪಂ ಅಧ್ಯಕ್ಷರಾಗುವ ಮೊದಲು ಕಾಂಗ್ರೆಸ್‌ನ ರಾಜಶೇಖರ ಹಿಟ್ನಾಳ ಕೊಪ್ಪಳ ಜಿಪಂ ಅಧ್ಯಕ್ಷರಾಗಿದ್ದರು. ಕೊಪ್ಪಳ ಲೋಕಸಭಾ ಚುನಾವಣೆಗೆ ರಾಜಶೇಖರ ಹಿಟ್ನಾಳ ಅಭ್ಯರ್ಥಿಯಾಗಿದ್ದರಿಂದ ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಈ ವೇಳೆ ವಿಶ್ವನಾಥರಡ್ಡಿಗೆ ಜಿಪಂ ಅಧ್ಯಕ್ಷ ಸ್ಥಾನ ಬಿಟ್ಟು ಕೊಟ್ಟು 20 ತಿಂಗಳ ನಂತರ ಕಾಂಗ್ರೆಸ್‌ನ ಮತ್ತೊಬ್ಬ ಜಿಪಂ ಸದಸ್ಯ ಅಮರಪ್ಪ ಗೋನಾಳ ಅವರಿಗೆ ಅಧಿಕಾರ ಹಸ್ತಾಂತರಿಸಬೇಕು ಎಂದು ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿತ್ತು. ಇನ್ನೇನು ಒಳ ಒಪ್ಪಂದದ ಪ್ರಕಾರ ವಿಶ್ವನಾಥರಡ್ಡಿ ಅವರ ಅಧಿಕಾರಾವಧಿ ಮುಗಿಯುತ್ತದೆ ಎನ್ನುವಷ್ಟರಲ್ಲಿ ವಿಶ್ವನಾಥರಡ್ಡಿ ಬಿಜೆಪಿ ಸಖ್ಯ ಬೆಳೆಸಿ ಅಧಿಕಾರದಲ್ಲಿ‌ ಮುಂದಯವರಿಯುವ ಕನಸು ಕಂಡರು. ವಿಶ್ವನಾಥರಡ್ಡಿ ಕನಸಿಗೆ ಹೇಗಾದರೂ ಸರಿ ತಣ್ಣೀರೆರಚಬೇಕು ಎಂದು ಕಾಂಗ್ರೆಸ್‌ನ ಜಿಲ್ಲಾ ವರಿಷ್ಠರು ಬಿಜೆಪಿಯ 7 ಜನ ಜಿಪಂ ಸದಸ್ಯರನ್ನು ಆಪರೇಷನ್ ಹಸ್ತ ಮಾಡಿ ದಾಳ ಉರುಳಿಸಿದರು.

ಇದಕ್ಕೆ ಬೆದರಿದ ಬಿಜೆಪಿ ಕಾನೂನಾತ್ಮಕ ತಂತ್ರಗಾರಿಕೆ ರೂಪಿಸಿ ಪಂಚಾಯಿತಿ ಕಾಯ್ದೆ ತಿದ್ದುಪಡಿಗೆ ನಿಯಮ ರೂಪಿಸಿಲ್ಲ. ನಿಯಮಾವಳಿ ರೂಪಿಸುವ ಕಾರ್ಯ ನಡೆಯಬೇಕಿರುವುದರಿಂದ ಜಿಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಮಾಡುವುದು ಕಾನೂನಿಗೆ ವಿರುದ್ಧವಾದದ್ದು ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿತು.

ಕ್ಷಿಪ್ರ ಬೆಳವಣಿಗೆ
ಜಿಪಂ ಅಧ್ಯಕ್ಷ ಸ್ಥಾನಕ್ಕಾಗಿ ಎರಡೂ ಪಕ್ಷಗಳ ನಡುವೆ ಹಲವು ದಿನಗಳಿಂದ ನಡೆದ ಹಗ್ಗಜಗ್ಗಾಟ ಇಂದು ಕ್ಷಿಪ್ರರೂಪ ಪಡೆದು ಬಯಲಿಗೆ ಬಂದಿದೆ. ಒಟ್ಟು 29 ಜನ ಸದಸ್ಯರ ಬಲಾಬಲ ಹೊಂದಿರುವ ಕೊಪ್ಪಳ ಜಿಪಂನಲ್ಲಿ 17 ಜನ ಕಾಂಗ್ರೆಸ್, 11 ಜನ ಬಿಜೆಪಿ ಹಾಗೂ ಓರ್ವ ಪಕ್ಷೇತರ ಸದಸ್ಯನನ್ನು ಹೊಂದಿದೆ. ಪಕ್ಷೇತರ ಸದಸ್ಯ ಚುನಾವಣಾ ಪೂರ್ವದಲ್ಲಿ ಬಿಜೆಪಿ ಜೊತೆಗಿದ್ದು, ಇತ್ತಿಚಿನ ಬೆಳವಣಿಗೆಯಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಬಿಜೆಪಿಯ ರಿವರ್ಸ್ ಆಪರೇಷನ್‌ಗೆ ಒಳಗಾಗಿದ್ದ ಕಾಂಗ್ರೆಸ್‌ನ ಸದಸ್ಯರ ಪೈಕಿ ಇಬ್ಬರು ಮರಳಿ ಕಾಂಗ್ರೆಸ್ ಮನೆ ಸೇರಿದ್ದಾರೆ. ಇದರಿಂದ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಗಳೇ ಹೆಚ್ಚು ಗೋಚರಿಸುತ್ತಿವೆ. ಆದರೂ ಬಿಜೆಪಿ ಕಾನೂನು ಹೋರಾಟದ ಗುಟ್ಟು ಬಿಟ್ಟು ಕೊಟ್ಟಿಲ್ಲ. 

ಸೋಮವಾರ ಕಾಂಗ್ರೆಸ್‌ನ ಜಿಪಂ ಸದಸ್ಯ ರಾಜಶೇಖರ ಹಿಟ್ನಾಳ ನೇತೃತ್ವದಲ್ಲಿ 20ಜನ ಜಿಪಂ ಸದಸ್ಯರ ತಂಡ ಜಿಪಂ ವಿಶೇಷ ಸಭೆ ಕರೆಯಬೇಕು ಎಂದು ಮನವಿ ಪತ್ರ ಹಿಡಿದು ವಿಶ್ವನಾಥರಡ್ಡಿಗೆ ಸಹಿ ಮಾಡುವಂತೆ ದುಂಬಾಲು ಬಿದ್ದಿದೆ. ವಿಶ್ವನಾಥರಡ್ಡಿ ಜಪ್ಪಯ್ಯ ಎಂದರೂ ಸಹಿ ಮಾಡಿಲ್ಲ. ಕೊನೆಗೆ ಜಿಪಂ ಅಧ್ಯಕ್ಷರ ಆಪ್ತ ಕಾರ್ಯದರ್ಶಿಗೆ ಪತ್ರವನ್ನು ತಲುಪಿಸಿ ಸ್ವೀಕೃತಿ‌ಪ್ರತಿ ಪಡೆದು ನೇರವಾಗಿ ಜಿಪಂ ಸಿಇಒ ಅವರಿಗೂ ಮನವಿ ಸಲ್ಲಿಸಿದೆ. ಈಗ ಮುಂದೇನಾಗುತ್ತೆ ಎನ್ನುವ ಕುತೂಹಲ ಮನೆ ಮಾಡಿದೆ.

ಕೊಪ್ಪಳ ಜಿಲ್ಲಾ ಪಂಚಾಯಿತಿ ಸದಸ್ಯರ ಬಗ್ಗೆ ನನಗೇನೂ ಗೊತ್ತಿಲ್ಲ. ಈ ಬಗ್ಗೆ ಕಾಂಗ್ರೆಸ್‌ನ ಜಿಪಂ ಸದಸ್ಯರೊಂದಿಗೆ ಮಾತನಾಡಿ, ವಿಷಯ ತಿಳಿದುಕೊಳ್ಳುತ್ತೇನೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದ್ದಾರೆ.

ಕಾಂಗ್ರೆಸ್‌ನವರು ಕುದುರೆ ವ್ಯಾಪಾರಕ್ಕೆ ಕೈ ಹಾಕಿದ್ದಾರೆ. ನಮ್ಮ ಯಾವ ಕುದುರೆಗಳು ಮಾರಾಟಕ್ಕಿಲ್ಲ. ಕಾನೂನಾತ್ಮಕವಾಗಿ ಜಿಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಮಾಡಲು ಬರಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಅವರು ತಿರುಗೇಟು ನೀಡಿದ್ದಾರೆ.

ಪಕ್ಷಬೇಧ ಮರೆತು ಜಿಪಂನ ಇಪ್ಪತ್ತು ಜನ ಸದಸ್ಯರು ವಿಶೇಷ ಸಭೆ ಕರೆಯುವಂತೆ ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ ಅವರ ಬಳಿ ನಿವೇದಿಸಿಕೊಂಡೇವು. ಅವರ ಪತ್ರಕ್ಕೆ ಸಹಿ ಮಾಡಲು ಕಾನೂನು ತೊಡಕಿದೆ ಎಂದು ಕುಂಟು ನೆಪ ತೆಗೆದರು. ಕೊನೆಗೆ ವಿಶೇಷ ಸಭೆ ಕರೆಯಬೇಕೆನ್ನುವ ಪತ್ರಕ್ಕೆ ಅವರ ಆಪ್ತ ಕಾರ್ಯದರ್ಶಿಯಿಂದ ಸ್ವೀಕೃತಿ ಪಡೆದು ಜಿಪಂ ಸಿಇಒ ಅವರಿಗೂ ಮನವಿ ಸಲ್ಲಿಸಿದ್ದೇವೆ. ಕೊಪ್ಪಳ ಜಿಲ್ಲಾ ಪಂಚಾಯಿತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಜನ ನಮ್ಮನ್ನ ನಿತ್ಯ ಪ್ರಶ್ನೆ ಮಾಡ್ತಾರೆ. ಹಾಗಾಗಿ ಅಧ್ಯಕ್ಷರ ವಿರುದ್ಧದ ಅವಿಶ್ವಾಸಕ್ಕಾಗಿ ವಿಶೇಷ ಸಭೆ ಕರೆಯಲು ಕೋರಿದ್ದೇವೆ. ಈಗ ಪಕ್ಷಬೇಧ ಮರೆತು 20 ಜನ ಪಕ್ಷೇತರ ಸದಸ್ಯರೂ ಸೇರಿ ಮನವಿ ಸಲ್ಲಿಸಿದ್ದೇವೆ. ಅವಿಶ್ವಾಸದ ಸಭೆಯಲ್ಲಿ ವಿಶ್ವನಾಥರಡ್ಡಿ ವಿರುದ್ಧ 25 ಜನ ಸದಸ್ಯರು ಕೈ ಎತ್ತುವುದು ಖಚಿತ ಜಿಪಂ ಸದಸ್ಯ ರಾಜಶೇಖರ ಹಿಟ್ನಾಳ್ ಹೇಳಿದ್ದಾರೆ.

-ಬಸವರಾಜ ಕರುಗಲ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com