1 ಲಕ್ಷ ವಲಸೆ ಕಾರ್ಮಿಕರು ರಾಜ್ಯದಿಂದ ತವರಿಗೆ ಶ್ರಮಿಕ್ ರೈಲಿನಲ್ಲಿ ಪ್ರಯಾಣ
ನಗರದಲ್ಲಿರುವ ವಲಸೆ ಕಾರ್ಮಿಕರನ್ನು ಭಾನುವಾರವೂ ಅವರ ಸ್ವಂತ ಊರುಗಳಿಗೆ ಶ್ರಮಿಕ್ ರೈಲುಗಳಲ್ಲಿ ಕಳುಹಿಸಿಕೊಡಲಾಯಿತು. ಚಿಕ್ಕಬಾಣಾವರ ರೈಲು ನಿಲ್ದಾಣದಿಂದ 1,511 ಮಂದಿ ಕಾರ್ಮಿಕರು ತವರೂರಿನತ್ತ ಪ್ರಯಾಣ ಬೆಳೆಸಿದರು.
Published: 18th May 2020 08:43 AM | Last Updated: 18th May 2020 12:19 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ನಗರದಲ್ಲಿರುವ ವಲಸೆ ಕಾರ್ಮಿಕರನ್ನು ಭಾನುವಾರವೂ ಅವರ ಸ್ವಂತ ಊರುಗಳಿಗೆ ಶ್ರಮಿಕ್ ರೈಲುಗಳಲ್ಲಿ ಕಳುಹಿಸಿಕೊಡಲಾಯಿತು. ಚಿಕ್ಕಬಾಣಾವರ ರೈಲು ನಿಲ್ದಾಣದಿಂದ 1,511 ಮಂದಿ ಕಾರ್ಮಿಕರು ತವರೂರಿನತ್ತ ಪ್ರಯಾಣ ಬೆಳೆಸಿದರು.
ಕೇಂದ್ರ ಸರ್ಕಾರದ ಆದೇಶದತೆ ನಗರದಲ್ಲಿರುವ ಕಾರ್ಮಿಕರು ಸೇವಾ ಸಿಂಧು ವ್ಯವಸ್ಥೆಯಲ್ಲಿ ಹೆಸರು ನೋಂದಾಯಿಸಿ ಊರಿಗೆ ಹೊರಟಿದ್ದಾರೆ. ಕೆಲಸ ಅರಸಿಕೊಂಡು ನಗರಕ್ಕೆ ಬಂದಿದ್ದ ಮಧ್ಯಪ್ರದೇಶ, ಜೈಪುರ, ರಾಜಸ್ತಾನದ ಕಾರ್ಮಿಕರು ಲಾಕ್'ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಅವರನ್ನು ಹಂತ ಹಂತವಾಗಿ ವಿಶೇಷ ರೈಲಿನ ಮೂಲಕ ತವರಿಗೆ ಕಳುಹಿಸಲಾಗುತ್ತಿದೆ. ಬಿಎಂಟಿಸಿ ಬಸ್ ಗಳಲ್ಲಿ ಕಾರ್ಮಿಕರನ್ನು ಚಿಕ್ಕಬಾಣಾವರ ರೈಲು ನಿಲ್ದಾಣಕ್ಕೆ ಕರೆತಂದು ರೈಲಿಗೆ ಹತ್ತಿಸಲಾಗುತ್ತಿದೆ.
ಈ ವರೆಗೂ 73 ಶ್ರಮಿಕ ವಿಶೇಷ ರೈಲುಗಳ ಮೂಲಕ ಬೆಂಗಳೂರು, ಹುಬ್ಬಳ್ಳಿ ಹಾಗೂ ಮೈಸೂರು ರೈಲ್ವೇ ನಿಲ್ದಾಣಗಳಲ್ಲಿ ಸುಮಾರು 1,01,370 ವಲಸೆ ಕಾರ್ಮಿಕರನ್ನು ಅವರ ತವರಿಗೆ ಕಳುಹಿಸಿಕೊಡಲಾಗಿದೆ.
ಮೇ.3 ರಿಂದ ಮೊದಲ ರೈಲು ವಲಸೆ ಕಾರ್ಮಿಕರನ್ನು ಹೊತ್ತು ತೆರಳಿತ್ತು. ಇದಾದ ಬಳಿಕ ಎರಡು ದಿನಗಳ ಕಾಲ ವಿರಾಮ ನೀಡಿ, ಮತ್ತೆ ವಲಸೆ ಕಾರ್ಮಿಕರನ್ನು ತವರಿಗೆ ಕಳುಹಿಸುವ ಕಾರ್ಯವನ್ನು ಆರಂಭಿಸಲಾಗಿತ್ತು. ಇದರಂತೆ ಮೇ.17ರವರೆಗೂ ಒಟ್ಟು 1 ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನು ಅವರವರ ತವರಿಗೆ ಕಳುಹಿಸಲಾಗಿದೆ.