ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್'ನಲ್ಲಿರಿಸಿ ಕ್ಯಾರೇ ಎನ್ನದ ಅಧಿಕಾರಿಗಳು: ಬಿಬಿಎಂಪಿ ಎಡವಟ್ಟು ಬಹಿರಂಗ

ಹೊರ ರಾಜ್ಯದಿಂದ ಬಂದ ಜನರನ್ನು ಹೋಟೆಲ್ ಗಳಲ್ಲಿ ಕ್ವಾರಂಟೈನ್ ನಲ್ಲಿರಿಸಿ, 2-3 ದಿನಗಳಾದರೂ ಆರೋಗ್ಯ ತಪಾಸಣೆ ನಡೆಸದೆ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವ ಘಟನೆಯೊಂದು ಬೆಳಕಿಗೆ ಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹೊರ ರಾಜ್ಯದಿಂದ ಬಂದ ಜನರನ್ನು ಹೋಟೆಲ್ ಗಳಲ್ಲಿ ಕ್ವಾರಂಟೈನ್ ನಲ್ಲಿರಿಸಿ, 2-3 ದಿನಗಳಾದರೂ ಆರೋಗ್ಯ ತಪಾಸಣೆ ನಡೆಸದೆ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವ ಘಟನೆಯೊಂದು ಬೆಳಕಿಗೆ ಬಂದಿದೆ. 

ಮೇ.16ರಂದು 14 ಮಂದಿ ಪ್ರಯಾಣಿಕರು ರಾಷ್ಟ್ರ ರಾಜಧಾನಿ ದೆಹಲಿಯಿಂದ ನಗರಕ್ಕೆ ಆಗಮಿಸಿದ್ದು, ಎಲ್ಲರನ್ನೂ ಬಿಬಿಎಂಪಿ ಇನ್ಫ್ಯಾಂಟ್ರಿ ರಸ್ತೆಯಲ್ಲಿರುವ ಹೋಟೆಲ್ ನಲ್ಲಿ ಕ್ವಾರಂಟೈನ್ ನಲ್ಲಿರಿಸಿದೆ. ಕ್ವಾರಂಟೈನ್ ನಲ್ಲಿರಿಸಿ 3 ದಿನಗಳಾದರೂ ಯಾವುದೇ ಅಧಿಕಾರಿಗಳೂ ಇವರ ಆರೋಗ್ಯವನ್ನು ತಪಾಸಣೆ ನಡೆಸಿಲ್ಲ. 

ಹೋಟೆಲ್ ನಲ್ಲಿ ಆಹಾರ ಸೇರಿದಂತೆ ಇತರೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದರು. ಆದರೆ, ಒಬ್ಬೇ ಒಬ್ಬ ವೈದ್ಯನಾಗಲೀ, ಶುಶ್ರುಷಕರಾಗಲೀ ನಮ್ಮ ಆರೋಗ್ಯ ತಪಾಸಣೆ ನಡೆಸಿಲ್ಲ. ಮೇ.18 ರಂದು ನಾವೇ ಸ್ಥಲೀಯ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದೇವೆ. ಬಳಿಕ ಸಂಜೆ ವೇಳೆ ಪೊಲೀಸರು ಬಿಬಿಎಂಪಿ ಅಧಿಕಾರಿಗಳೊಂದಿಗೆ ಬಂದು, ನಮ್ಮಿಂದಲೇ ತಪ್ಪಾಗಿದೆ. ಕ್ವಾರಂಟೈನ್ ಪಟ್ಟಿಯಲ್ಲಿ ಈ ಹೋಟೆಲ್ ಇಲ್ಲ. ಹೀಗಾಗಿ ಮತ್ತೊಂದು ಹೋಟೆಲ್'ಗೆ ಸ್ಥಳಾಂತರ ಮಾಡಲಾಗುತ್ತದೆ ಎಂದು ರಿಚ್'ಮಂಡ್ ಸರ್ಕಲ್ ನಲ್ಲಿರುವ ಹೋಟೆಲ್'ಗೆ ಸ್ಥಳಾಂತರಿಸಿದರು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ. 

ಮತ್ತೊಬ್ಬ ಪ್ರಯಾಣಿಕ ಮಾತನಾಡಿ, ನಮ್ಮ ಕುಟುಂಬಕ್ಕೆ ಎರಡು ರೂಮ್ ಗಳು ಬೇಕಿದ್ದು, ಪ್ರತೀನಿತ್ಯ ನಾವು ರೂ.5,000 ಖರ್ಚು ಮಾಡುತ್ತಿದ್ದೇವೆ. ಈಗಾಗಲೇ ಎರಡು ದಿನಗಳನ್ನು ಒಂದು ಹೋಟೆಲ್ ನಲ್ಲಿ ಕಳೆದಿದ್ದೇವೆ. ಇದೀಗ ಮತ್ತೊಂದು ಹೋಟೆಲ್'ಗೆ ಸ್ಥಳಾಂತರಿಸುತ್ತಿದ್ದಾರೆ. ಈಗಷ್ಟೇ ಕೊರೋನಾಗೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಿದರು. ಇದೀಗ ಅಧಿಕಾರಿಗಳು 14 ದಿನಗಳ ಕ್ವಾರಂಟೈನ್ ಇಂದಿನಿಂದ ಆರಂಭವಾಗಿದೆ ಎಂದು ಹೇಳುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ. 

ತಮ್ಮಿಂದಾದ ತಪ್ಪಿಗೆ ಬಿಬಿಎಂಪಿ ಅಧಿಕಾರಿಗಳು ಕ್ಷಮೆಕೋರಿದ್ದು, ಯಾರಿಗೂ ಈ ಕುರಿತ ಮಾಹಿತಿ ಬಹಿರಂಗಪಡಿಸದಂತೆ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿಯೇ ನಾವು ನಮ್ಮ ಹೆಸರುಗಳನ್ನು ಬಹಿರಂಗಪಡಿಸಲು ಇಚ್ಛಿಸುತ್ತಿಲ್ಲ. ಯಾವಾಗ ನಮ್ಮ 14 ದಿನಗಳ ಕ್ವಾರಂಟೈನ್ ಮುಗಿಯುತ್ತದೆ ಎಂಬುದು ನಮಗೆ ತಿಳಿಯುತ್ತಿಲ್ಲ ಎಂದು ಮತ್ತೊಬ್ಬ ಪ್ರಯಾಣಿಕ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com