ಕುಂತೂರಿನ ಬಣ್ಣಾರಿ ಅಮ್ಮನ್ ಶುಗರ್ಸ್ ಕಾರ್ಖಾನೆ
ಕುಂತೂರಿನ ಬಣ್ಣಾರಿ ಅಮ್ಮನ್ ಶುಗರ್ಸ್ ಕಾರ್ಖಾನೆ

ಲಾಕ್‌ ಡೌನ್ ಸಡಿಲಿಕೆ: ಕುಂತೂರಿನ ಬಣ್ಣಾರಿ ಅಮ್ಮನ್ ಶುಗರ್ಸ್ ಪುನಾರಂಭ; ರೈತರ ಮೊಗದಲ್ಲಿ ಮಂದಹಾಸ

ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ಮುಚ್ಚಲಾಗಿದ್ದ ಕುಂತೂರಿನ ಬಣ್ಣಾರಿ ಅಮ್ಮನ್ ಶುಗರ್ಸ್ ಕಾರ್ಖಾನೆ ಲಾಕ್ ಡೌನ್ ಸಡಿಲಿಕೆ ಹಿನ್ನಲೆಯಲ್ಲಿ ಪುನಾರಂಭಗೊಂಡಿದ್ದು, ಇಲ್ಲಿನ ರೈತರ ಮೊಗದಲ್ಲಿ ಮಂದಹಾಸ ತರಿಸಿದೆ.

ಚಾಮರಾಜನಗರ: ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ಮುಚ್ಚಲಾಗಿದ್ದ ಕುಂತೂರಿನ ಬಣ್ಣಾರಿ ಅಮ್ಮನ್ ಶುಗರ್ಸ್ ಕಾರ್ಖಾನೆ ಲಾಕ್ ಡೌನ್ ಸಡಿಲಿಕೆ ಹಿನ್ನಲೆಯಲ್ಲಿ ಪುನಾರಂಭಗೊಂಡಿದ್ದು, ಇಲ್ಲಿನ ರೈತರ ಮೊಗದಲ್ಲಿ ಮಂದಹಾಸ ತರಿಸಿದೆ.

ಕೊರೋನಾ ವೈರಸ್‌ ಅನ್ನು ತಡೆಗಟ್ಟುವ ಹಾಗೂ ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರವು ಲಾಕ್‌ಡೌನ್ ವ್ಯವಸ್ಥೆಯನ್ನು ಕೆಲವು ಕಾಲದವರೆಗೆ ಜಾರಿಗೊಳಿಸಿತ್ತು. ಇದರಿಂದ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದ ಏಕೈಕ ಸಕ್ಕರೆ ಕಾರ್ಖಾನೆಯಾದ ಕುಂತೂರು ಗ್ರಾಮದ ಬಣ್ಣಾರಿ  ಅಮ್ಮನ್ ಶುಗರ್ಸ್ ಲಿಮಿಟೆಡ್ ತನ್ನ ಕೆಲಸ ಕಾರ್ಯವನ್ನು ಸ್ಥಗಿತಗೊಳಿಸಿತ್ತು. ಇದರಿಂದ ಜಿಲ್ಲೆಯ ಕಬ್ಬು ಬೆಳೆಗಾರರು ತಮ್ಮ ಕಬ್ಬು ಕಟಾವಿಗೆ ಬಂದರೂ ಕೂಡ ಅದನ್ನು ಕಟಾವು ಮಾಡದೇ ಸಂಕಷ್ಟಕ್ಕೀಡಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರವು ತನ್ನ ಲಾಕ್‌ಡೌನ್  ನಿಯಮವನ್ನು ಸಡಿಲಗೊಳಿಸಿದ್ದರಿಂದ ಗ್ರೀನ್ ಜೋನ್‌ನಲ್ಲಿರುವ ಚಾಮರಾಜನಗರ ಜಿಲ್ಲಾಡಳಿತವು ಕೋವಿಡ್-19 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ರೈತರ ಹಿತ ಕಾಪಾಡುವ ಸದುದ್ದೇಶದಿಂದ ಕಾರ್ಖಾನೆಯನ್ನು ಪುನರ್ ಆರಂಭಿಸುವಂತೆ ಅನುಮತಿ ನೀಡಿದೆ. ಪರಿಣಾಮವಾಗಿ  ಕಳೆದೊಂದು ವಾರದಿಂದ ಕುಂತೂರಿನ ಬಣ್ಣಾರಿ ಅಮ್ಮನ್ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯು ಕಬ್ಬು ಅರೆಯುವ ಕಾರ್ಯದಲ್ಲಿ ಕಾರ್ಯೋನ್ಮುಖವಾಗಿದೆ. 

ಪ್ರತಿದಿನ 3600 ಟನ್ ಕಬ್ಬು ಅರೆಯುವ ಸಾಮರ್ಥ್ಯವನ್ನು ಹೊಂದಿರುವ ಈ ಕಾರ್ಖಾನೆಯು ಇಪ್ಪತ್ತು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ, ಕಾರ್ಖಾನೆಗೆ ಬೇಕಾದ 6.5 ಮೆಗಾವ್ಯಾಟ್ ವಿದ್ಯುತ್‌ ಅನ್ನು ಸದ್ಬಳಕೆ ಮಾಡಿಕೊಂಡು, ಸರ್ಕಾರದ ನಿಯಂತ್ರಣದಲ್ಲಿರುವ ಕೆಪಿಟಿಸಿಎಲ್ ಗೆ  12.5 ಮೆಗಾವ್ಯಾಟ್ ವಿದ್ಯುತ್‌ನ್ನು ಸರ್ಕಾರ ನಿಗದಿ ಪಡಿಸಿದ ದರದಲ್ಲಿ ನೀಡುತ್ತಿದೆ. ಸುಮಾರು 14 ಸಾವಿರದ 190 ಎಕರೆ ಮೈಸೂರು ಹಾಗೂ ಚಾಮರಾಜನಗರದ ಜಿಲ್ಲೆಯ ಪ್ರದೇಶದಲ್ಲಿ 11 ಸಾವಿರ ರೈತರು ಬೆಳೆಯುವ ವಿವಿಧ ತಳಿಯ ಕಬ್ಬುಗಳನ್ನು ಇದು ಖರೀದಿಸಿ, ದಕ್ಷಿಣ  ಕರ್ನಾಟಕದಲ್ಲಿಯೇ ಹನ್ನೊಂದು ಕಾರ್ಖಾನೆಗಳಿಗಿಂತ ಅತೀ ಹೆಚ್ಚು ಪ್ರತಿ ಟನ್ ಕಬ್ಬಿಗೆ 2874 ರೂಗಳ ಬೆಂಬಲ ನೀಡಿ ರೈತರಿಗೆ ಆಸರೆಯಾಗಿದೆ. ಸುಮಾರು 3200 ಕಾರ್ಮಿಕರ ಸಾಮರ್ಥ್ಯವನ್ನೊಂದಿರುವ ಈ ಕಾರ್ಖಾನೆಯು ಕಬ್ಬು ಅರೆದು ಸಕ್ಕರೆ, ವಿದ್ಯುತ್ ಉತ್ಪಾದನೆ ಮಾಡುವುದರ  ಜೊತೆಗೆ ಮೊಲಾಸಿಸ್, ಮಡ್ಡಿಯನ್ನು ಉತ್ಪಾದನೆ ಮಾಡುತ್ತದೆ. ಈ ಕಾರ್ಖಾನೆಯಲ್ಲಿ ಉತ್ಪಾದನೆಯಾದ ಸಕ್ಕರೆಯುವ ದೇಶವಿದೇಶಗಳಿಗೆ ರಫ್ತಾಗುತ್ತದೆ. ಕಾರ್ಖಾನೆಯು ಪುನರ್ ಆರಂಭಗೊಂಡಿರುವುದರಿಂದ ಕಬ್ಬು ಕಟಾವಿಗೆ ಬಂದ ರೈತರ ಮೊಗದಲ್ಲಿ ಮಂದಹಾಸ ಮೂಡುವುದರ  ಜೊತೆಗೆ ಕಾರ್ಖಾನೆಯ ಕಾರ್ಮಿಕರಲ್ಲಿಯೂ ಕೂಡ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. 

ಚಾಮರಾಜನಗರ ಜಿಲ್ಲೆಯು ಈಗಾಗಲೇ ಗ್ರೀನ್ ಜೋನ್ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಜಿಲ್ಲಾಡಳಿತವು ಸೂಚಿಸಿರುವ ಕೋವಿಡ್ ನಿಯಮಗಳನ್ನು ಕಾರ್ಖಾನೆಯು ಪಾಲಿಸುತ್ತಿದೆ. ಕಾರ್ಖಾನೆಗೆ ಆಗಮಿಸುವ ಪ್ರತಿಯೊಬ್ಬ ಕಾರ್ಮಿಕರನ್ನು ಆರೋಗ್ಯ ತಪಾಸಣೆ ಮಾಡುವುದರ ಜೊತೆಗೆ  ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್‌ನಿಂದ ಹಾಗೂ ಸೋಪಿನಿಂದ ಕೈತೊಳೆದುಕೊಳ್ಳುವುದನ್ನು ಕಾರ್ಮಿಕರಿಗೆ ಕಡ್ಡಾಯಗೊಳಿಸಿದೆ. ಜೊತೆಗೆ ಕಾರ್ಖಾನೆಗೆ ಒಳನುಗ್ಗುವ ಪ್ರತಿ ವಾಹನವನ್ನು ಸೋಡಿಯಂ ಹೈಪೋಕ್ಲೋರೈಡ್  ದ್ರಾವಣದಿಂದ ಸಿಂಪಡಿಸುವುದರ ಜೊತೆಗೆ ವಾಹನದ ಚಾಲಕರನ್ನು ಕೂಡ ಕಡ್ಡಾಯ ಮಾಸ್ಕ್ ಧರಿಸಿ, ಸ್ಯಾನಿಟೈಸರ್‌ನಿಂದ ಕೈತೊಳೆದು ಜ್ವರ ತಪಾಸಣೆ ಮಾಡಿ ಒಳಬಿಡಲಾಗುತ್ತಿದೆ. 

ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ ಕೇಂದ್ರ ಸರ್ಕಾರವು ಕೋವಿಡ್‌-19ನ್ನು ನಿಯಂತ್ರಿಸುವ ಸಲುವಾಗಿ ಜಾರಿಗೊಳಿಸಿದ್ದ ಲಾಕ್‌ಡೌನ್‌ನಿಂದ ಜಿಲ್ಲೆಯ ಏಕೈಕ ಸಕ್ಕರೆ ಕಾರ್ಖಾನೆಯಾದ ಬಣ್ಣಾರಿ ಅಮ್ಮನ್ ಶುಗರ್ಸ್ ಲಿಮಿಟೆಡ್ ಲಾಕ್‌ಡೌನ್ ಅವಧಿಯಲ್ಲಿ 68  ಸಾವಿರ ಮೆಟ್ರಿಕ್ ಟನ್ ಕಬ್ಬು ಅರೆಯುವ ಸಾವರ್ಥ್ಯವನ್ನು ಸ್ಥಗಿತಗೊಳಿಸಿದ್ದರಿಂದ ಕಾರ್ಖಾನೆಯ ವ್ಯಾಪ್ತಿಗೊಳಪಟ್ಟ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ರೈತರು ಸಂಕಷ್ಟಕ್ಕೀಡಾಗಿದ್ದರು. ಕೇಂದ್ರ ಸರ್ಕಾರ ಲಾಕ್‌ಡೌನ್ ನಿಯಮ ಸಡಿಲಗೊಳಿಸಿದ್ದರಿಂದ ಈಗ ಕಾರ್ಖಾನೆ ಪುನರ್  ಆರಂಭಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ. ಜೊತೆಗೆ ಕೋವಿಡ್-19 ನಿಯಮಗಳನ್ನು ಕಟ್ಟುನಿಟ್ಟಾಗಿ ಆಚರಿಸುವಂತೆ ಕಾರ್ಖಾನೆಯ ಆಡಳಿತ ಮಂಡಳಿಗೆ ಸೂಚಿಸಿರುವುದರ ಜೊತೆಗೆ ಶೇ. 50 ರಷ್ಟು ಕಾರ್ಮಿಕರನ್ನು ಮಾತ್ರ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಕೋವಿಡ್ ನಿಯಮಗಳನ್ನು  ಕಾರ್ಖಾನೆ ಆಡಳಿತ ಮಂಡಳಿ ಕಡ್ಡಾಯವಾಗಿ ಪಾಲಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಇಬ್ಬರು ನೋಡಲ್ ಅಧಿಕಾರಿಗಳನ್ನು ಪ್ರತಿನಿತ್ಯ ನೇಮಿಸಲಾಗಿದೆ. ಕಾರ್ಖಾನೆ ಪುನರ್ ಆರಂಭಗೊಂಡಿರುವುದರಿಂದ ಕಟಾವಿಗೆ ಬಂದ ಕಬ್ಬನ್ನು ರೈತರು ಕಾರ್ಖಾನೆಗೆ ಸಾಗಿಸುತ್ತಿದ್ದಾರೆ ಎಂದರು.

ಮೆಲ್ಲಹಳ್ಳಿ ಗ್ರಾಮದ ಕಬ್ಬು ಬೆಳೆಗಾರರಾದ ಚಂದ್ರಶೇಖರ್‌ಮೂರ್ತಿ ಮಾತನಾಡಿ ಲಾಕ್‌ಡೌನ್‌ನಿಂದ ಕುಂತೂರಿನ ಜಿಲ್ಲೆಯ ಏಕೈಕ ಸಕ್ಕರೆ ಕಾರ್ಖಾನೆಯಾದ ಬಣ್ಣಾರಿ ಅಮ್ಮನ್ ಶುಗರ್‌ಸ್ ಲಿಮಿಟೆಡ್ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿತ್ತು. ಇದರಿಂದ ಕಬ್ಬು ಬೆಳೆಗಾರರಾದ ಜಿಲ್ಲೆಯ ರೈತರಿಗೆ  ಸಂಕಷ್ಟ ಎದುರಾಗಿತ್ತು. ಈಗ ಜಿಲ್ಲಾಡಳಿತದ ಸಹಕಾರದಿಂದ ಕಾರ್ಖಾನೆ ಪುನರ್ ಆರಂಭಗೊಂಡಿರುವುದರಿಂದ ಕಬ್ಬು ಬೆಳೆಗಾರರಿಗೆ ತುಂಬಾ ಅನುಕೂಲಕರವಾಗಿದೆ ಎಂದರು.

ವರದಿ: ಗೂಳಿಪುರ ನಂದೀಶ. ಎಂ

Related Stories

No stories found.

Advertisement

X
Kannada Prabha
www.kannadaprabha.com