ಕೊವಿಡ್-19: ರಾಜ್ಯದಲ್ಲಿ ಇಂದು 138 ಮಂದಿಗೆ ಪಾಸಿಟಿವ್, ಸೋಂಕಿತರ ಸಂಖ್ಯೆ 1743ಕ್ಕೆ ಏರಿಕೆ

ರಾಜ್ಯದಲ್ಲಿ ಲಾಕ್ ಡೌನ್ ಸಡಿಲಗೊಳಿಸಿದ ನಂತರ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಶುಕ್ರವಾರ ಮತ್ತೆ 138 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1743ಕ್ಕೆ ಏರಿಕೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಸಡಿಲಗೊಳಿಸಿದ ನಂತರ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಶುಕ್ರವಾರ ಮತ್ತೆ 138 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1743ಕ್ಕೆ ಏರಿಕೆಯಾಗಿದೆ.

ಇಂದು ಚಿಕ್ಕಬಳ್ಳಾಪುರದಲ್ಲಿ ಕೊರೋನಾ ಮಹಾಮಾರಿ ತಾಂಡವವಾಡುತ್ತಿದ್ದು, ಒಂದೇ ದಿನ 47 ಮಂದಿಗೆ ಸೋಂಕು ವಕ್ಕರಿಸಿದೆ. ಮಹಾರಾಷ್ಟ್ರದಿಂದ ಮೇ 19 ರಂದು ಜಿಲ್ಲೆಗೆ ವಾಪಾಸಾಗಿರುವವರ 265 ಜನರ ಪೈಕಿ ಗುರುವಾರ ಗೌರಿಬಿದನೂರು ತಾಲ್ಲೂಕಿನ ನಾಲ್ಕು ಕಾರ್ಮಿಕರಲ್ಲಿ ಕೋವಿಡ್‌ ಧೃಢಪಟ್ಟಿತ್ತು. ಅದರ ಬೆನ್ನಲ್ಲೇ ಶುಕ್ರವಾರ ಒಂದೇ ದಿನಕ್ಕೆ ಮತ್ತೆ 47 ಜನರಿಗೆ ಕೊವಿಡ್‌ ತಗುಲಿರುವುದು ಪತ್ತೆಯಾಗಿದೆ.

ಇಂದು ಬೆಂಗಳೂರು ಸಂಚಾರ ಪೊಲೀಸ್ ಸಿಬ್ಬಂದಿಗೂ ಸೋಂಕು ತಗುಲಿದ್ದು, ಪೊಲೀಸ್ ವಲಯದಲ್ಲಿ ಆತಂಕ ಮೂಡಿಸಿದೆ. ರಾಮಕೃಷ್ಣ ಹೆಗಡೆ ನಗರದ ನಿವಾಸಿಯಾಗಿರುವ ಕಾನ್‌ಸ್ಟೆಬಲ್, ಕೊರೊನಾ ಕರ್ತವ್ಯದಿಂದಾಗಿ ಕಳೆದ ತಿಂಗಳೇ ಕುಟುಂಬದವರನ್ನು ಊರಿಗೆ ಕಳುಹಿಸಿದ್ದರು. ಮೇ 20ರಂದು ಇವರು ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಟ್ಟಿದ್ದರು. ವರದಿಯಲ್ಲಿ ಇವರಿಗೆ ಸೋಂಕು ದೃಢಪಡುತ್ತಿದ್ದಂತೆ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ದೃಢಪಟ್ಟಿರುವ 138 ಹೊಸ ಕೊರೋನಾ ಪ್ರಕರಣಗಳ ಪೈಕಿ 116 ಸೋಂಕಿತರು ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. 111 ಮಹಾರಾಷ್ಟ್ರದಿಂದ, 2 ತೆಲಂಗಾಣ, 2 ಜಾರ್ಖಂಡ್ ಮತ್ತು 2 ದೆಹಲಿಯಿಂದ ಆಗಮಿಸಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ಚಿಕ್ಕಬಳ್ಳಾಪುರದಲ್ಲಿ 47, ಹಾಸನದಲ್ಲಿ 14, ರಾಯಚೂರಿನಲ್ಲಿ 10, ಬೀದರ್ ನಲ್ಲಿ 9 ಮಂಡ್ಯದಲ್ಲಿ 8, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಮಗಳೂರಿನಲ್ಲಿ ತಲಾ 5 ಪ್ರಕರಣಗಳು ದೃಢಪಟ್ಟಿವೆ ಎಂದು ಮಾಹಿತಿ ನೀಡಿದ್ದಾರೆ.

ಇಲ್ಲಿಯವರೆಗೆ ರಾಜ್ಯದಲ್ಲಿ 570 ಜನರು ಗುಣಮುಖರಾಗಿದ್ದು, 42 ಜನರು ಮೃತಪಟ್ಟಿದ್ದಾರೆ. ಒಟ್ಟು 966 ಸಕ್ರಿಯ ಪ್ರಕರಣಗಳಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com