ಬೆಂಗಳೂರಿನಿಂದ ಮೊದಲ ಅಂತರ್ ಜಿಲ್ಲಾ ವಿಶೇಷ ರೈಲು ಸೇವೆ ಆರಂಭ: ಪ್ರಯಾಣಿಕರ ಸಂತಸ!

ಲಾಕ್ ಡೌನ್ ಸಡಿಲಿಕೆ ನಂತರ  ಇದೇ ಮೊದಲ ಬಾರಿಗೆ ಅಂತರ್ ಜಿಲ್ಲಾ ರೈಲು ಸೇವೆ ಪುನರ್ ಆರಂಭಗೊಂಡಿದ್ದು,ಶುಕ್ರವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ  ಸೂಪರ್ ಪಾಸ್ಟ್ ಎಕ್ಸ್ ಪ್ರೆಸ್ ರೈಲು ಬೆಳಗಾವಿಗೆ ನಿರ್ಗಮಿಸಿತು
ಅಂತರ ಜಿಲ್ಲಾ ವಿಶೇಷ ರೈಲಿಗೆ ಹಸಿರು ನಿಶಾನೆ
ಅಂತರ ಜಿಲ್ಲಾ ವಿಶೇಷ ರೈಲಿಗೆ ಹಸಿರು ನಿಶಾನೆ

ಬೆಂಗಳೂರು: ಲಾಕ್ ಡೌನ್ ಸಡಿಲಿಕೆ ನಂತರ  ಇದೇ ಮೊದಲ ಬಾರಿಗೆ ಅಂತರ್ ಜಿಲ್ಲಾ ರೈಲು ಸೇವೆ ಪುನರ್ ಆರಂಭಗೊಂಡಿದ್ದು,ಶುಕ್ರವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ  ಸೂಪರ್ ಪಾಸ್ಟ್ ಎಕ್ಸ್ ಪ್ರೆಸ್ ರೈಲು ಬೆಳಗಾವಿಗೆ ನಿರ್ಗಮಿಸಿತು. ರೈಲಿನಲ್ಲಿ ಒಳಗಡೆ ಇದ್ದ ಕೆಲ ಪ್ರಯಾಣಿಕರು ಹಾಗೂ ನಿಲ್ದಾಣದಲ್ಲಿದ್ದ ಅಧಿಕಾರಿಗಳು, ಪೊಲೀಸರು ಚಪ್ಪಾಳೆ ತಟ್ಟುವ ಮೂಲಕ ಈ ರೈಲು ಸೇವೆಗೆ  ಹರ್ಷ ವ್ಯಕ್ತಪಡಿಸಿದರು.

ರಾಜ್ಯದೊಳಗೆ ಸಂಚರಿಸಿದ ಮೊದಲ ರೈಲಿಗೆ ನಿಲ್ದಾಣದಲ್ಲಿನ ಹಂಗಾಮಿ ಸ್ವಚ್ಛತಾ ಕಾರ್ಯ ಸಿಬ್ಬಂದಿ ಮುನಿಯಮ್ಮಲ್ ಮತ್ತು ಪಾಯಿಂಟ್ ಮ್ಯಾನ್ ನಬಿ ಅಹ್ಮದ್ ಹಸಿರು ನಿಶಾನೆ ತೋರಿದರು. 

1484 ಆಸನ ಸಾಮರ್ಥ್ಯದ 14 ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ ಕೇವಲ 338 ಸೀಟುಗಳನ್ನು ಆನ್ ಲೈನ್ ನಲ್ಲಿ ಬುಕ್ಕಿಂಗ್ ಮಾಡಲಾಗಿತ್ತು. 220 ರೂ. ಟಿಕೆಟ್ ದರದೊಂದಿಗೆ ಎಲ್ಲವೂ  ಹವಾ ನಿಯಂತ್ರಣ ರಹಿತ ಬೋಗಿಗಳಾಗಿದ್ದು, ಒಟ್ಟು 176 ಪ್ರಯಾಣಿಕರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಪ್ರಯಾಣಿಸಿದರು. ಉಳಿದ ಪ್ರಯಾಣಿಕರು ದಾವಣಗೆರೆಯಲ್ಲಿ ರೈಲಿಗೆ ಹತ್ತಿದ್ದಾರೆ ಎನ್ನಲಾಗಿದೆ. ಎಲ್ಲಾ ಪ್ರಯಾಣಿಕರು ಮಾಸ್ಕ್ ಗಳು, ಗ್ಲೌಸ್ ಗಳು ಧರಿಸಿದ್ದರು. ಸಾಮಾಜಿಕ ಅಂತರ ನಿಯಮವನ್ನು ಕಡ್ಡಾಯ ಮಾಡಲಾಗಿತ್ತು.

ಬೆಂಗಳೂರು - ಮೈಸೂರು ನಡುವಿನ ವಿಶೇಷ ಎಕ್ಸ್ ಪ್ರೆಸ್ ರೈಲು ಬೆಳಗ್ಗೆ 9-20ಕ್ಕೆ ನಿರ್ಗಮಿಸಿತು. ಕೇವಲ 37 ಪ್ರಯಾಣಿಕರು ಮಾತ್ರ ಬುಕ್ಕಿಂಗ್ ಮಾಡಿಕೊಂಡಿದ್ದರು.ಈ ಮಾರ್ಗದಲ್ಲಿನ ಟಿಕೆಟ್  ದರ 80 ರೂ. ಆಗಿದ್ದು, ಮಧ್ಯದ ರೈಲು ನಿಲ್ದಾಣಗಳಲ್ಲಿ  ಕೆಲ ಪ್ರಯಾಣಿಕರು ಹತ್ತಿದ್ದರಿಂದ  ಮೈಸೂರಿಗೆ ಹೋಗುವಷ್ಟರಲ್ಲಿ ಪ್ರಯಾಣಿಕರ ಸಂಖ್ಯೆ 63 ಆಗಿತ್ತು. ಸಾಮಾನ್ಯವಾಗಿ ಈ  ಮಾರ್ಗದ ರೈಲಿನೊಳಗೆ ನಿಲ್ಲಲು ಜಾಗವಿಲ್ಲದಷ್ಟು ಪ್ರಯಾಣಿಕರು ಇರುತ್ತಾರೆ. ಆದರೆ, ಇಂದಿನ ಪ್ರಯಾಣಿಕರ ಸಂಖ್ಯೆ ಇಂತಹ ನಂಬಿಕೆಯನ್ನು ಸುಳ್ಳಾಗಿಸಿತು.

ಬೆಳಗಾವಿಗೆ ಮೊದಲು ರೈಲು ಸೇವೆ ಆರಂಭದಿಂದ ಕೆಲ ಪ್ರಯಾಣಿಕರಲ್ಲಿ ನೆಮ್ಮದಿಯ ಭಾವ ಮೂಡಿತ್ತು. ಹರಿಹರದಲ್ಲಿ ಮನೆ ಇರುವ ತಮ್ಮ ತಂಗಿ ಎಂಟು ತಿಂಗಳ ಗರ್ಭೀಣಿಯಾಗಿದ್ದು, ತಾಯಿ ತುಂಬಾ ಚಿಂತಿಸುತ್ತಿದ್ದರು.ಅಲ್ಲಿಗೆ ಹೋಗಲು  ಎರಡು ತಿಂಗಳಿಂದ ಕಾಯಲಾಗುತಿತ್ತು. ಇದೀಗ ಮೊದಲ ರೈಲು ಬಿಟ್ಟಿರುವುದರಿಂದ ತುಂಬಾ ಅನುಕೂಲವಾಗಿದೆ.ದಾವಣಗೆರೆ ನಿಲ್ದಾಣದಲ್ಲಿ ಇಳಿಯುವುದಾಗಿ ಕುಟುಂಬದೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ  ಕೆ. ಸುನೀಲ್ ತಿಳಿಸಿದರು. 

ಬೆಳಗಾವಿಗೆ ಮತ್ತೆ ರೈಲು ಸೇವೆ ಆರಂಭಗೊಂಡಿರುವುದರಿಂದ ಧಾರವಾಡದಲ್ಲಿ ಅಜ್ಜಿಯ ಜೊತೆಯಲ್ಲಿರುವ ತಮ್ಮ 7 ವರ್ಷದ ಮಗನನ್ನು ನೋಡಲು ಸಾಧ್ಯವಾಗಿದೆ ಎಂದು ಡೆಂಟಿಸ್ಟ್ ಡಾ ಭಾರತಿ ಹೇಳಿದರು. ಬೆಳಗಾವಿಗೆ ರೈಲು ಸೇವೆ ಪುನರ್ ಆರಂಭದಿಂದ  ಅತೀವ ಸಂತಸವಾಗುತ್ತಿದೆ ಎಂದು ಮತ್ತೋರ್ವ ಪ್ರಯಾಣಿಕ ರವಿ ಗೌಡ ತಿಳಿಸಿದರು. 

ಹಠಾತ್ತನೆ ರೈಲು ಸೇವೆ ಪುನರ್ ಆರಂಭದ ಘೋಷಣೆ ಹಾಗೂ ಆನ್ ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ನಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ ಕಂಡುಬರುತ್ತಿದೆ. ರಾಜ್ಯದಲ್ಲಿನ ಅನೇಕ ನಿಲ್ದಾಣಗಳಲ್ಲಿ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯ ಕೌಂಟರ್ ಗಳು ಇಂದಿನಿಂದ ಕಾರ್ಯನಿರ್ವಹಿಸಲಿವೆ. 

ಈ ಎರಡು ವಿಶೇಷ ರೈಲುಗಳು ಭಾನುವಾರ ಸಂಚರಿಸುವುದಿಲ್ಲ,ಬೆಳಗಾವಿ ರೈಲು ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಳಿಗ್ಗೆ 8 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಬೆಳಗಾವಿಗೆ ಹೊರಡಲಿದೆ.

ಮಂಗಳವಾರ, ಗುರುವಾರ ಮತ್ತು ಶನಿವಾರದಿಂದ ಬೆಳಗ್ಗೆ 8 ಗಂಟೆಗೆ ಬೆಳಗಾವಿಯಿಂದ ಹೊರಡಲಿದ್ದು, ಸಂಜೆ 6-30ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ತಲುಪಲಿದೆ. ಮೈಸೂರು ರೈಲು ವಾರದಲ್ಲಿ ಆರು ದಿನ ಸಂಚರಿಸಲಿದೆ. ಇದು ಬೆಳಗ್ಗೆ 9-20ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹೊರಡಲಿದ್ದು, ಮಧ್ಯಾಹ್ನ 12-45ಕ್ಕೆ ಮೈಸೂರು ತಲುಪಲಿದೆ. ಮೈಸೂರಿನಿಂದ ಮಧ್ಯಾಹ್ನ 1-45ಕ್ಕೆ ನಿರ್ಗಮಿಸಲಿದ್ದು, ಸಂಜೆ 5ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ತಲುಪಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com