ಕೊಪ್ಪಳ: 9 ಜನ ಭಿಕ್ಷುಕರ ಕೊರೋನಾ ವರದಿ‌ ನೆಗೆಟಿವ್!

ಪೇಷೆಂಟ್-1173ಯ ಪ್ರಾಥಮಿಕ ಸಂಪರ್ಕ ಹೊಂದಿದ್ದ 9 ಜನ ಭಿಕ್ಷುಕರು ಸೇರಿದಂತೆ ಮೇ 19 ರಿಂದ ಇದುವರೆಗೂ ಕಳುಹಿಸಿದ್ದ 876 ಜನರ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಜಿಲ್ಲೆಯ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಸಂಗ್ರಹ ಚಿತ್ರd
ಸಂಗ್ರಹ ಚಿತ್ರd

ಕೊಪ್ಪಳ: ಪೇಷೆಂಟ್-1173ಯ ಪ್ರಾಥಮಿಕ ಸಂಪರ್ಕ ಹೊಂದಿದ್ದ 9 ಜನ ಭಿಕ್ಷುಕರು ಸೇರಿದಂತೆ ಮೇ 19 ರಿಂದ ಇದುವರೆಗೂ ಕಳುಹಿಸಿದ್ದ 876 ಜನರ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಜಿಲ್ಲೆಯ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಮೇ 18ರವರೆಗೂ ಗ್ರೀನ್ ಜೂನ್‌ನಲ್ಲಿ ಸೇಫ್ ಆಗಿದ್ದ ಕೊಪ್ಪಳ ಜಿಲ್ಲೆಗೆ ಮುಂಬೈನಿಂದ ಬಂದವರ ಪೈಕಿ ಇಬ್ಬರಿಗೆ ಹಾಗೂ ಚೆನೈನಿಂದ ಬಂದಿದ್ದ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದು ಜಿಲ್ಲೆಯಲ್ಲೂ ಕೊರೊನಾ ಖಾತೆ ತೆರೆದಿತ್ತು. ಅದರಲ್ಲಿ ಪೇಷೆಂಟ್-1173 ನ ಟ್ರಾವೆಲ್ ಹಿಸ್ಟರಿ ದೊಡ್ಡ ಆತಂಕವನ್ನೇ ತಂದೊಡ್ಡಿತ್ತು.

ಪೇಷೆಂಟ್-1173 ಮುಂಬೈನ ಬೇಕರಿಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು ಮೇ 12ರ ರಾತ್ರಿ ಮುಂಬೈ ಬಿಟ್ಟು ಮೇ 14ರ ಬೆಳಗ್ಗೆ ಹುಬ್ಬಳ್ಳಿಗೆ ಟ್ರಕ್‌ನಲ್ಲಿ ಆಗಮಿಸಿದ್ದ. ಮಧ್ಯಾಹ್ನದವರೆಗೂ ಹುಬ್ಬಳ್ಳಿಯಲ್ಲಿದ್ದ ಪೇಷೆಂಟ್-1173 ಮಧ್ಯಾಹ್ನ ಹುಬ್ಬಳ್ಳಿ ಬಿಟ್ಟು ಟಾಟಾ ಏಸ್ ವಾಹನದಲ್ಲಿ ಕೊಪ್ಪಳಕ್ಕೆ ಬಂದಿದ್ದ. ಆನಂತರ ಕುಷ್ಟಗಿಗೆ ಕೆಎಸ್‌ಆರ್‌ಟಿಸಿ ಬಸ್‌‌ನಲ್ಲಿ ಪ್ರಯಾಣ ಮಾಡಿದ್ದ. ಆ ಬಸ್‌ನಲ್ಲಿದ್ದ 26 ಜನರ ಪೈಕಿ 9 ಜನ ಭಿಕ್ಷುಕರು ಇದ್ದರು. ಪೇಷೆಂಟ್-1173 ಕೊಪ್ಪಳ ಬಸ್ ನಿಲ್ದಾಣಕ್ಕೆ‌‌ ಬಂದು ಕುಷ್ಟಗಿಗೆ ಹೋಗುವಾಗ ಆತನ ವಿವರ ಪಡೆದು ಕುಷ್ಟಗಿಗೆ ಕಳಿಸಿಕೊಡಲಾಗಿತ್ತು. ನಂತರ ಆತನನ್ನು ಕುಷ್ಡಗಿಯಲ್ಲಿ ಕ್ವಾರಂಟೈನ್ ಮಾಡಿ, ಸ್ವಾಬ್ ತೆಗೆದು ಪರೀಕ್ಷೆಗೆ ಕಳಿಸಲಾಗಿತ್ತು. ಪರೀಕ್ಷೆಯ ವರದಿ ಬರುವಷ್ಟರಲ್ಲಿ 9 ಜನ ಭಿಕ್ಷುಕರು‌ ಕುಷ್ಟಗಿ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಭಿಕ್ಷಾಟನೆ ಮಾಡಿದ್ದರು.

ಪೇಷೆಂಟ್-1173 ಸ್ವಾಬ್ ರಿಜಲ್ಟ್ ಪಾಸಿಟಿವ್ ಬಂದೊಡನೆ, ಆತನ ಟ್ರಾವೆಲ್ ಹಿಸ್ಟರಿ, ಪ್ರಾಥಮಿಕ ಸಂಪರ್ಕ ಹೊಂದಿದವರ ಡಿಟೇಲ್ಸ್ ಸಂಗ್ರಹಕ್ಕೆ ಜಿಲ್ಲಾಡಳಿತ ತಡಕಾಡಿದಾಗ 9 ಜನ ಭಿಕ್ಷುಕರು ಪ್ರಾಥಮಿಕ ಸಂಪರ್ಕಕ್ಕೆ ಬಂದದ್ದು, ಅವರೆಲ್ಲ ಭಿಕ್ಷಾಟನೆ ಮಾಡಿದ್ದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವನ್ನೇ ತಂದೊಡ್ಡಿತ್ತು.

ಪೇಷೆಂಟ್-1173ಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 9 ಜನ ಭಿಕ್ಷುಕರ ಸೇರಿದಂತೆ 90 ಜನರ ವರದಿ ನೆಗೆಟಿವ್ ಬಂದಿದೆ. ದ್ವಿತೀಯ ಸಂಪರ್ಕದಲ್ಲಿರುವ ಸುಮಾರು 87 ಜನರು ಸದ್ಯ ಕ್ವಾರಂಟೈನ್ ಅವಧಿಯಲ್ಲಿದ್ದಾರೆ. ಕ್ವಾರಂಟೈನ್‌ನ 12ನೇ ದಿನಕ್ಕೆ ಪೇಷೆಂಟ್-1173ಯ ದ್ವಿತೀಯ ಸಂಪರ್ಕ ಹೊಂದಿದವರ ಗಂಟಲು ದ್ರವವನ್ನು ಪರೀಕ್ಷೆಗೆ‌ ಕಳಿಸಲಾಗುವುದು. ಇವತ್ತಿನವರೆಗೆ ಜಿಲ್ಲೆಯಿಂದ ಕಳಿಸಿದ ಕೊರೊನಾ ಪರೀಕ್ಷೆಯಲ್ಲಿ 3 ಪಾಸಿಟಿವ್ ಬಂದಿದ್ದು, ಉಳಿದವೆಲ್ಲ‌ ನೆಗೆಟಿವ್ ಇದೆ. ಇಂದು ಮತ್ತೇ 173 ಸ್ವಾಬ್‌ಗಳನ್ನು ಪರೀಕ್ಷೆಗೆ ಕಳಿಸಲಾಗಿದೆ.
- ಪಿ.ಸುನೀಲ್‌ಕುಮಾರ್, ಜಿಲ್ಲಾಧಿಕಾರಿ, ಕೊಪ್ಪಳ.


ವರದಿ: ಬಸವರಾಜ ಕರುಗಲ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com