ಕೊರೋನಾ ವೈರಸ್: ನಾಳೆ ಸಂಪೂರ್ಣ ಲಾಕ್‌ಡೌನ್; ಏನಿರುತ್ತೆ, ಏನಿರಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ

ಮಾರಕ ಕೊರೋನಾ ವೈರಸ್ ಸೋಂಕು ಪ್ರಸರಣ ತಡೆಯುವ ನಿಟ್ಟಿನಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದು, ನಾಳೆ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಹೇರಲಾಗಿದೆ. 
ಸಾಂದರ್ಭಕ ಚಿತ್ರ
ಸಾಂದರ್ಭಕ ಚಿತ್ರ

ಬೆಂಗಳೂರು: ಮಾರಕ ಕೊರೋನಾ ವೈರಸ್ ಸೋಂಕು ಪ್ರಸರಣ ತಡೆಯುವ ನಿಟ್ಟಿನಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದು, ನಾಳೆ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಹೇರಲಾಗಿದೆ. 

ನಾಲ್ಕನೇ ಹಂತದ ಲಾಕ್‌ಡೌನ್‌ ಸಡಿಲಿಕೆಯ ಮಧ್ಯೆಯೇ ಪ್ರತಿ ಭಾನುವಾರ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿ ಸರ್ಕಾರ ಘೋಷಿಸಿದ್ದು, ನಾಳೆ ಭಾನುವಾರ ರಾಜ್ಯಾದ್ಯಂತ ಕರ್ಫ್ಯೂ ಜಾರಿಯಲ್ಲಿರಲಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಶನಿವಾರ  ಸಂಜೆಯಿಂದಲೇ ಕರ್ಫ್ಯೂ ಜಾರಿಯಲ್ಲಿದ್ದು, ಮನೆಯಿಂದ ಹೊರಗೆ ಬಾರದಂತೆ ತಡೆಯಲು ಪೊಲೀಸ್ ಇಲಾಖೆ ನಿಯಮಗಳನ್ನು ರೂಪಿಸಿದೆ. ಇಂದು ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆ ವರೆಗೆ ಕರ್ಫ್ಯೂ ಜಾರಿಯಲ್ಲಿ ಇರಲಿದ್ದು, ಮೊದಲ ಹಂತದ ಲಾಕ್ ಡೌನ್ ನಲ್ಲಿನ  ನಿಯಮಗಳು ಜಾರಿಯಲ್ಲಿರಲಿವೆ.ಹಣ್ಣು, ತರಕಾರಿ, ದಿನಸಿ, ಹಾಲು, ಮಾಂಸದ ಅಂಗಡಿಗಳಿಗೆ ತೆರೆಯಲು ಅವಕಾಶ ನೀಡಲಾಗಿದ್ದು ಆಸ್ಪತ್ರೆಗಳು, ಮೆಡಿಕಲ್ ಶಾಪ್‌, ಫಾರ್ಮಸಿ ಗಳಿಗೆ ಅವಕಾಶ ನೀಡಲಾಗಿದೆ. ವೈದ್ಯರು, ನರ್ಸ್, ಆಂಬುಲೆನ್ಸ್, ಮಾಧ್ಯಮಗಳ ವಾಹನಗಳ ಓಡಾಟಕ್ಕೆ ಅವಕಾಶ ಒದಗಿಸಲಾಗಿದೆ.  ಡಯಾಲಿಸಿಸ್, ಅನಾರೋಗ್ಯ ಸಮಸ್ಯೆ ಇದ್ದವರು ಗರ್ಭಿಣಿಯರು ಆಸ್ಪತ್ರೆಗೆ ತೆರಳಲು ಅನುಮತಿ ನೀಡಲಾಗಿದೆ. ಮದುವೆ ಸಮಾರಂಭಗಳಿಗೆ ಷರತ್ತಿನ ಅನುಮತಿ ಇರಲಿದೆ‌ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಅಗತ್ಯ ವಸ್ತುಗಳನ್ನ ಹೊರತು ಪಡಿಸಿ, ಉಳಿದ ಅಂಗಡಿ ಮುಂಗಟ್ಟುಗಳು ಬಂದ್ ಸಾರ್ವಜನಿಕ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಇರಲಿದ್ದು ಬಸ್ ಸಂಚಾರ ಸಂಪೂರ್ಣ ಸ್ಥಗಿತ ಗೊಳ್ಳಲಿದೆ. ಆಟೋ ಮತ್ತು ಟ್ಯಾಕ್ಸಿ ಸೇವೆ ಕೂಡ ಬಂದ್ ಆಗಲಿದ್ದು, ಅಗತ್ಯವಲ್ಲದ ಅಂಗಡಿ ಮುಂಗಟ್ಟುಗಳು  ಸಂಪೂರ್ಣ ಬಂದ್ ಆಗಲಿದೆ. ಬ್ಯೂಟಿ ಪಾರ್ಲರ್, ಸಲೂನ್, ಸ್ಪಾ, ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಲಿವೆ. ಅಂತೆಯೇ ಗಾರ್ಮೆಂಟ್ಸ್ ಫ್ಯಾಕ್ಟರಿ ಸೇರಿದಂತೆ ಎಲ್ಲಾ ಕಾರ್ಖಾನೆಗಳು ಖಾಸಗಿ ಕಂಪನಿಗಳ ಬಾಗಿಲು ಬಂದ್ ಮಾಡಬೇಕಾಗುತ್ತದೆ. ಎಲ್ಲಾ ಪಾರ್ಕ್ ಗಳಿಗೂ  ಬೀಗ ಬೀಳಲಿದ್ದು, ಜಾಗಿಂಗ್ ವಾಕಿಂಗ್ ಗೆ ಅವಕಾಶವಿಲ್ಲ. ಚಿನ್ನದ ಅಂಗಡಿಗಳು ಮುಚ್ಚಲಿದ್ದು ಆಟೋ, ಟ್ಯಾಕ್ಸಿ ಕ್ಯಾಬ್ ಗಳು ರಸ್ತೆಗೆ ಇಳಿಯುವಂತಿಲ್ಲ. ಖಾಸಗಿ ವಾಹನ ಬಳಸಿ ಓಡಾಡುವ ಹಾಗಿಲ್ಲ. ಬೇರೆ ಜಿಲ್ಲೆಗೆ ಹೋಗಲು ಅವಕಾಶವಿಲ್ಲ. ಪ್ರತಿದಿನ ತೆರೆಯುತ್ತಿದ್ದ ಬಾರ್‌ಗಳು ಕೂಡ ನಾಳೆ  ಮುಚ್ಚಲಿವೆ.

ಕಮೀಷನರೇಟ್ ವ್ಯಾಪ್ತಿಯಲ್ಲಿ ಕಮೀಷನರ್ ಮತ್ತು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಬಾರ್ ಕ್ಲೋಸ್ ಬಗ್ಗೆ ಆದೇಶ ಹೊರಡಿಸಲಿದ್ದಾರೆ. ಇಲ್ಲವಾದಲ್ಲಿ ರಾಜ್ಯ ಅಬಕಾರಿ ಆಯುಕ್ತರು ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಆದೇಶ ಹೊರಡಿಸಲಿದ್ದಾರೆ. ಇಂದು ರಾತ್ರಿ ಏಳು ಗಂಟೆಗೆ ಎಲ್ಲಾ ಬಿಎಂಟಿಸಿ  ಮತ್ತು ಕೆಎಸ್‌ಆರ್‌ಟಿಸಿ ಬಸ್‍ಗಳ ಸಂಚಾರ ನಿಲ್ಲಲಿದೆ. ಸೋಮವಾರ ಬೆಳಗ್ಗೆ 7 ಗಂಟೆಗೆ ಯಥಾಸ್ಥಿತಿಯಂತೆ ಸಂಚಾರ ಆರಂಭವಾಗಲಿದೆ. ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ರಾಜ್ಯಾದ್ಯಂತ ಭಾನುವಾರ ಸಂಪೂರ್ಣ ಲಾಕ್‍ಡೌನ್ ಇರಲಿದ್ದು, ಜನರು ಮನೆಯಿಂದ ಹೊರಬಾರದಂತೆ  ಸರ್ಕಾರ ಎಚ್ಚರಿಕೆ ನೀಡಿದೆ.

ಪೂರ್ವ ನಿಗದಿತ ಮದುವೆ ಸಮಾರಂಭಕ್ಕಿದೆ ಅನುಮತಿ, ಕಟ್ಟುನಿಟ್ಟಿನ ಕರ್ಫ್ಯೂ
ಪೂರ್ವ ನಿಗದಿತ ಮದುವೆ ಸಮಾರಂಭಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಗರಿಷ್ಠ 50 ಅತಿಥಿಗಳು ಮೀರದಂತೆ ಸರಳವಾಗಿ ಮದುವೆ ಮಾಡಲು ಅನುಮತಿ ನೀಡಲಾಗಿದೆ. ನಾಳೆ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ. ಕರ್ಫ್ಯೂ  ಅವಧಿಯಲ್ಲಿ ರಾಜ್ಯಾದ್ಯಂತ ಬಿಗಿ ಭದ್ರತೆ ಇರಲಿದೆ. ಈ ಅವಧಿಯಲ್ಲಿ ಯಾವುದೇ ಅಂಗಡಿಗಳನ್ನು ತೆರೆಯುವಂತಿಲ್ಲ. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com