ಪತಿ ಕಳೆದುಕೊಂಡ ಕೆಲವೇ ಹೊತ್ತಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮನಕಲಕುವ ಘಟನೆ

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ ತಾಲ್ಲೂಕಿನಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಕೆಲವೇ ಹೊತ್ತಿನಲ್ಲಿ ಮುಂಬೈಯಲ್ಲಿದ್ದ ಅವರ ಪತಿ ಕೊರೋನಾ ಸೋಂಕಿಗೆ ಆಸ್ಪತ್ರೆಯಲ್ಲಿ ಬಲಿಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲ್ಲೂಕಿನಲ್ಲಿ ಮಹಿಳೆಯೊಬ್ಬರು ಪತಿ ಕಳೆದುಕೊಂಡ ಕೆಲವೇ ಹೊತ್ತಿನಲ್ಲಿ ಮಗುವಿಗೆ ಜನ್ಮ ನೀಡಿದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಬೆಳ್ತಂಗಡಿ ತಾಲ್ಲೂಕಿನ ವೇಣೂರಿನವರಾದ ಮಹಿಳೆ 8 ತಿಂಗಳ ಗರ್ಭಿಣಿಯಿರುವಾಗ ಮುಂಬೈಯಿಂದ ಮೂಡಬಿದ್ರೆಗೆ ಹೆರಿಗೆಗೆ ತನ್ನೂರಿಗೆ ಬಂದಿದ್ದರು. ಅಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ನಂತರ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅವರು, ಮಹಿಳೆಯ ಪತಿ ಸಂಜಿತ್ ಪುಣೆಯ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದು ಮುಂಬೈಯಲ್ಲಿ ವಾಸಿಸುತ್ತಿದ್ದರು. ಕುಟಂಬದ ಆರ್ಥಿಕ ನಿರ್ವಹಣೆ ಹೊತ್ತಿದ್ದ ಅವರು ಗರ್ಭಿಣಿಯಾಗಿದ್ದ ಪತ್ನಿಯನ್ನು ಇತ್ತೀಚೆಗೆ ಊರಿಗೆ ಕಳುಹಿಸಿದ್ದರು.

ಸಂಜಿತ್ ಗೆ ಮೊನ್ನೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತು, ಕೊರೋನಾ ಲಕ್ಷಣವೂ ಕಂಡುಬಂತು. ಮುಂಬೈಯಲ್ಲಿ ಆಸ್ಪತ್ರೆಗೆ ಹೋದಾಗ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗಲಿಲ್ಲ, ಕೊನೆಗೆ ಕೋವಿಡ್-19 ಚಿಕಿತ್ಸೆಗೆ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದರು. ಅಲ್ಲಿ ಕಳೆದ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮಹಿಳೆಗೆ ತಕ್ಷಣಕ್ಕೆ ಪತಿ ಮರಣ ಹೊಂದಿದ್ದಾರೆ ಎಂದು ವಿಷಯ ತಿಳಿಸಿಲ್ಲ. ಆಕೆಗೆ ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಇದೆ. ಅವರಿಗೆ ಸಾಧ್ಯವಾದಷ್ಟು ಆರ್ಥಿಕ ನೆರವು ಒದಗಿಸುತ್ತೇನೆ ಎಂದರು.

ಮಹಿಳೆಯ ಸೋದರ ಕೂಡ ಮುಂಬೈಯಲ್ಲಿದ್ದು ಅವರು ನಿನ್ನೆ ಮೂಡಬಿದ್ರೆಗೆ ಬರಬೇಕಾಗಿತ್ತು. ಅವರನ್ನು ಮಹಾರಾಷ್ಟ್ರ-ಕರ್ನಾಟಕ ಗಡಿ ನಿಪ್ಪಾಣಿಯಲ್ಲಿ ಪೊಲೀಸರು ತಡೆದು ವಾಪಾಸ್ ಕಳುಹಿಸಿದ್ದಾರೆ, ಕರ್ನಾಟಕಕ್ಕೆ ಬರಲು ಬಿಡಲಿಲ್ಲ, ಅವರ ಆಗಮನಕ್ಕೆ ಪಾಸ್ ವ್ಯವಸ್ಥೆ ಮಾಡಿದ್ದರೂ ಸಹಾಯವಾಗಲಿಲ್ಲ ಎಂದು ಶಾಸಕ ಕೋಟ್ಯನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com