ಮಲೈಮಹಾದೇಶ್ವರಸ್ವಾಮಿ ವನ್ಯಜೀವಿ ಧಾಮದ ಚೆಂಗಡಿ ಗ್ರಾಮದ ಸ್ಥಳಾಂತರಕ್ಕೆ ಜಿಲ್ಲಾಡಳಿತ ಸಿದ್ದತೆ!

ಜಿಲ್ಲೆಯ ಮಲೈಮಹಾದೇಶ್ವರಸ್ವಾಮಿ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಬರುವ ಕುಗ್ರಾಮವಾದ ಚೆಂಗಡಿಯನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಅರಣ್ಯ ಇಲಾಖೆಯ ಪ್ರಸ್ಥಾವಕ್ಕೆ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದೆ.
ಚೆಂಗಡಿ ಗ್ರಾಮ
ಚೆಂಗಡಿ ಗ್ರಾಮ

ಚಾಮರಾಜನಗರ: ಜಿಲ್ಲೆಯ ಮಲೈಮಹಾದೇಶ್ವರಸ್ವಾಮಿ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಬರುವ ಕುಗ್ರಾಮವಾದ ಚೆಂಗಡಿಯನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಅರಣ್ಯ ಇಲಾಖೆಯ ಪ್ರಸ್ಥಾವಕ್ಕೆ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದೆ.
     
ಗ್ರಾಮದಲ್ಲಿರುವ ಕುಟುಂಬಗಳನ್ನು ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಸಮಗ್ರ ಅಭಿವೃದ್ದಿ ಯೋಜನೆಯನ್ನು ಸಿದ್ದಪಡಿಸುವುದಕ್ಕಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ 13 ಸದಸ್ಯರನ್ನು ಒಳಗೊಂಡಂತಹ ಜಿಲ್ಲಾಮಟ್ಟದ ಪುನರ್ವಸತಿ ಸಮಿತಿಯನ್ನು ರಚಿಸಿ, ಮೇ 6ರಂದೇ ಆದೇಶ ಹೊರಡಿಸಿದೆ. ಜಿಲ್ಲಾಮಟ್ಟದ ಸಮಿತಿಯು ಕೆಲಸ ಆರಂಭಿಸಿದ ನಂತರ 60 ದಿನಗಳ ಒಳಗಾಗಿ ಸಮಗ್ರ ವರದಿಯನ್ನು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಬೇಕೆಂದು ಆದೇಶದಲ್ಲಿ ಹೇಳಲಾಗಿದೆ. ವನ್ಯ ಜೀವಿ ಧಾಮದ ಕೋರ್ ವಲಯದಲ್ಲಿ ಬರುವ ಚೆಂಗಡಿ ಗ್ರಾಮವು ನಾಗರೀಕ ಮೂಲ ಸೌಕರ್ಯಗಳಿಂದ ಸಾಕಷ್ಟು ವಂಚಿತವಾಗಿದೆ. 

ಕಳೆದ ಮುರು ವರ್ಷಗಳಿಂದ ಗ್ರಾಮಸ್ಥರು ಹಾಗೂ ರೈತ ಮುಖಂಡರು ಗ್ರಾಮವನ್ನು ಸ್ಥಳಾಂತರ ಮಾಡುವ ಬಗ್ಗೆ ಸರ್ಕಾರಕ್ಕೆ ಒತ್ತಡ ಹೇರುತ್ತಲೇ ಬಂದಿದ್ದರು. ಮಲೈಮಹಾದೇಶ್ವರಸ್ವಾಮಿ ವನ್ಯಜೀವಿ ಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡಕೊಂಡಲುರವರು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸ್ಥಳಾಂತರದ ಬಗ್ಗೆ ಸರ್ಕಾರಕ್ಕೆ ವಿಸ್ತತ ಪ್ರಸ್ಥಾವ ಸಲ್ಲಿಸಿದ್ದರು. ಒಟ್ಟು 226 ಕುಟುಂಬಗಳನ್ನು ಒಳಗೊಂಡಿರುವ ಈ ಗ್ರಾಮವು 1560ಕ್ಕೂ ಹೆಚ್ಚು ಜನಸಂಖ್ಯೆಯನ್ನೊಂದಿದ್ದು, ಈಗಾಗಲೇ 195 ಕುಟುಂಬಗಳು ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿವೆ. ಕುಟುಂಬಗಳ ಪುನರ್‌ವಸತಿಗಾಗಿ ಚಾವರಾಜನಗರ ಜಿಲ್ಲಾಡಳಿತವು ಹನೂರು ತಾಲ್ಲೂಕಿನ ಚಿಕ್ಕಲ್ಲೂರು ಸರ್ವೇ.ನಂ. 326ರಲ್ಲಿ ಕೊತ್ತನ್ನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ 400 ಎಕರೆ ಭೂಮಿಯನ್ನು ಈಗಾಗಲೇ ಗುರುತಿಸಿದ್ದು, ಸ್ಥಳಾಂತರಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ.

ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ ಮಲೈಮಹಾದೇಶ್ವರ ವನ್ಯಜೀವಿಧಾಮದ ದುರ್ಗಮ ಕಾಡಿನಲ್ಲಿ ಮೂಲಸೌಕರ್ಯಗಳಿಂದ ವಂಚಿತವಾಗಿರುವ ಚೆಂಗಡಿ ಗ್ರಾಮವನ್ನು ಗ್ರಾಮಸ್ಥರ ಮನವಿ ಮೇರೆಗೆ ಸ್ಥಳಾಂತರ ಮಾಡಲು ರಾಜ್ಯ ಸರ್ಕಾರ ಈಗಾಗಲೇ ಸಮ್ಮತಿ ಸೂಚಿಸಿದೆ. ಸರ್ಕಾರದ ನಿರ್ದೇಶನದ ಮೇರೆಗೆ ಈಗಾಗಲೇ ಜಿಲ್ಲೆಯಲ್ಲಿ ಒಂದು ಸಮಿತಿ ರಚಿಸಿದ್ದು, ಮೊದಲ ಸಭೆ ನಡೆದಿದೆ. ಗ್ರಾಮದ ಸರ್ವೇ ಕಾರ್ಯ ನಡೆಸಲು ಜಿಲ್ಲಾಡಳಿತ ಸಿದ್ದತೆ ಕೈಗೊಂಡಿದ್ದು, ಬಹುತೇಕ ಗ್ರಾಮಸ್ಥರು ಚೆಂಗಡಿಯಿಂದ ಹೊರಬರಲು ನಿರ್ದರಿಸಿದ್ದಾರೆ ಎಂದರು.

ಕೊಳ್ಳೇಗಾಲ ಉಪವಿಭಾಗಾಧಿಕಾರಿ ನಿಖಿತಾ ಎಂ ಚಿನ್ನಸ್ವಾಮಿ ಮಾತನಾಡಿ ಈಗಾಗಲೇ ತಮ್ಮ ನೇತೃತ್ವದಲ್ಲಿ ಒಂದು ಸಮಿತಿ ರಚಿಸಲಾಗಿದ್ದು, ಮುಂದಿನ ವಾರದಿಂದ ಚೆಂಗಡಿ ಗ್ರಾಮದ ಸರ್ವೇ ಕಾರ್ಯ ನಡೆಯಲಿದೆ. ಇದರಲ್ಲಿ ಗ್ರಾಮದ ಒಟ್ಟು ವಿಸ್ತೀರ್ಣ, ಭೂ ಇಡುವಳಿ, ಚರಾ-ಸ್ತಿರಾಸ್ತಿಗಳು ಸೇರಿದಂತೆ ಅವುಗಳ ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಗ್ರಾಮವು ಸ್ಥಳಾಂತರಗೊಂಡ ಮೇಲೆ ಅವರಿಗೆ ಪ್ರತ್ಯೇಕ ಸ್ಥಳಾಂತರದ ಭೂಮಿಯನ್ನು ಕೂಡ ಸರ್ವೇ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಅದಕ್ಕೂ ಮುಂಚೆ ಹೊಸ ಸ್ಥಳಾಂತರದ ಜಾಗ ಜನರ ವಾಸಕ್ಕೆ ಯೋಗ್ಯವಾಗಿದೆಯೇ ಎಂಬುದನ್ನು ಮನಗಾಣಲು ಮಣ್ಣು ಹಾಗೂ ನೀರಿನ ಪರೀಕ್ಷೆ ನಡೆಸಲಾಗುತ್ತದೆ ಎಂದರು.

ಮಲೈಮಹಾದೇಶ್ವರ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡಕೊಂಡಲು ಮಾತನಾಡಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಚೆಂಗಡಿ ಗ್ರಾಮದ ಸರ್ವೇ ಕಾರ್ಯ ನಡೆಸಿ ಸಮಗ್ರ ವರದಿ ನೀಡುವಂತೆ ಸರ್ಕಾರ ಈಗಾಗಲೇ ಸೂಚಿಸಿದ್ದು, ಆ ನಿಮಿತ್ತ ಎಲ್ಲಾ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಅರಣ್ಯದೊಳಗೆ 15 ಕಿ.ಮೀ. ವ್ಯಾಪ್ತಿಯೊಳಗಿರುವ ಚೆಂಗಡಿ ಗ್ರಾಮಕ್ಕೆ ಸರಿಯಾದ ರಸ್ತೆ ಸೌಕರ್ಯವಿಲ್ಲ. ನೀರಾವರಿ ಸೌಲಭ್ಯವಿರುವ ಭೂಮಿಯಿಲ್ಲ. ಮಕ್ಕಳಿಗೆ ಸರಿಯಾದ ಶಿಕ್ಷಣವಿಲ್ಲ. ಆರೋಗ್ಯ ಹದಗೆಟ್ಟಾಗ ಅವರನ್ನು ತಪಾಸಣೆ ಮಾಡಲು ಆಸ್ಪತ್ರೆಯಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಸರ್ಕಾರಕ್ಕೆ ಅರಣ್ಯ ಇಲಾಖೆಯು ಮನದಟ್ಟು ಮಾಡಿಕೊಟ್ಟಿದ್ದು, ಗ್ರಾಮದಿಂದ ಹೊರಬರುವ ಜನರಿಗೆ 15 ಲಕ್ಷರೂ ಪರಿಹಾರ ಹಣ ಬೇಡವಾದರೆ ಮೂರು ಎಕರೆ ಭೂಮಿ ವಸತಿ ಮೂಲಸೌಕರ್ಯಗಳನ್ನು ಬೇರೆಡೆ ಕಲ್ಪಿಸಲು ಸರ್ಕಾರ ಸಿದ್ದವಿದೆ ಎಂದರು.

ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಆರ್.ನರೇಂದ್ರ ಮಾತನಾಡಿ ಆಲಂಬಾಡಿಯಿಂದ 1901ರಲ್ಲಿ ವಲಸೆ ಬಂದ ಜನರಿಂದ ಚೆಂಗಡಿ ಗ್ರಾಮವು ನಿರ್ಮಾಣವಾಗಿದೆ ಎಂಬ ಪ್ರತೀತಿ ಇತಿಹಾಸದ ಪುಟಗಳಲ್ಲಿದೆ. ಶಾಸಕನಾದ ನಾನು ಗ್ರಾಮಕ್ಕೆ ಉತ್ತಮ ಡಾಂಬರೀಕರಣ ರಸ್ತೆ ಸೌಕರ್ಯವನ್ನು ಕಲ್ಪಿಸಲು ಸರ್ಕಾರದಿಂದ ಮೂರ್ನಾಲ್ಕು ಬಾರಿ ಅನುದಾನ ಬಿಡುಗಡೆ ಮಾಡಿಸಿದ್ದರೂ ಕೂಡ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಅರಣ್ಯ ಇಲಾಖೆ ಕಾಯ್ದೆಗಳು ಅಡ್ಡಿಯಾಗಿ ಅಲ್ಲಿನ ಜನರಿಗೆ ಮೂಲಸೌಕರ್ಯಗಳನ್ನು ಒದಗಿಸಲು ವಿಫಲನಾಗಿದ್ದೇನೆ. ಇದನ್ನು ಮನಗಂಡ ಗ್ರಾಮಸ್ಥರು ಕೂಡ ಗ್ರಾಮದಿಂದ ಸ್ಥಳಾಂತರಗೊಳ್ಳಲು ಮುಂದೆ ಬಂದಿದ್ದಾರೆ. ಸರ್ಕಾರ ಈಗ ಒಪ್ಪಿಗೆ ಸೂಚಿಸಿರುವುದು ಸಂತಸದಾಯಕವಾಗಿದೆ. ಈ ಗ್ರಾಮದ ಜನರಿಗೆ ಪುನರ್ವಸತಿ ಕಲ್ಪಿಸಲು ಕೊತ್ತನೂರು ಬಳಿ ಈಗಾಗಲೇ 400 ಎಕರೆ ಭೂಮಿಯನ್ನು ಗುರುತಿಸಿದ್ದು, ಅಲ್ಲಿ ಅವರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ಭೂಮಿ ಬೇಡವಾದವರಿಗೆ ಹಣದ ನೆರವು ನೀಡಲಾಗುವುದು ಎಂದ ಅವರು ಮಲೈ ಮಹಾದೇಶ್ವರ ವನ್ಯಜೀವಿಧಾಮದಲ್ಲಿ ಇನ್ನೂ ಮುಲಸೌಕರ್ಯಗಳಿಂದ ವಂಚಿತವಾಗಿರುವ ದೊಡ್ಡಾಣೆ, ಪಡಸಲನಾಥ, ತೋಕೆರೆ, ಮೆದಗೆರೆ ಸೇರಿದಂತೆ ಇನ್ನಿತರ ಗ್ರಾಮಗಳಿದ್ದು, ಅವುಗಳನ್ನು ಕೂಡ ಮುಂದಿನ ದಿನಗಳಲ್ಲಿ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗುವುದೆಂದರು.

ಚೆಂಗಡಿ ಗ್ರಾಮದ ವಿರೇಶ್ವರ ಪುನರ್ವಸತಿ ಸಮಿತಿಯ ಅಧ್ಯಕ್ಷರಾದ ಕರಿಯಪ್ಪ ಮಾತನಾಡಿ ತಮ್ಮ ಗ್ರಾಮಕ್ಕೆ ಸರಿಯಾದ ರಸ್ತೆಯಿಲ್ಲ. ಬಸ್ಸಿನ ಸೌಲಬ್ಯವಿಲ್ಲ. ಶುದ್ದ ಕುಡಿಯುವ ನೀರಿನ ಸೌಲಬ್ಯವಿಲ್ಲ. ಮಕ್ಕಳಿಗೆ ಉನ್ನತ ಶಿಕ್ಷಣದ ಸೌಲಭ್ಯವಿಲ್ಲ. ನೀರಾವರಿ ಬೇಸಾಯದ ಜಮೀನಿಲ್ಲ ಸೇರಿದಂತೆ ಸಾಕಷ್ಟು ಮೂಲಸೌಕರ್ಯಗಳಿಂದ ಗ್ರಾಮವು ವಂಚಿತವಾಗಿದ್ದು, ಈಗ ಸರ್ಕಾರ ಗ್ರಾಮವನ್ನು ನಮ್ಮ ಮನವಿಯ ಮೇರೆಗೆ ಸ್ಥಳಾಂತರ ಮಾಡಲು ಒಪ್ಪಿಗೆ ಸೂಚಿಸಿರುವುದು ಸಂತಸ ತಂದಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com