ಎರಡು ತಿಂಗಳ ಬಳಿಕ ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆ ಪುನಾರಂಭ

ಸಿಬ್ಬಂದಿಗೆ ಕೊರೋನಾ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಕಳೆದ ಎರಡೂವರೆ ತಿಂಗಳಿಂದ ಬಂದ್ ಮಾಡಲಾಗಿದ್ದ ಮೈಸೂರಿನ ನಂಜನಗೂಡಿನಲ್ಲಿರುವ ಜ್ಯುಬಿಲಿಯೆಂಟ್ ಕಾರ್ಖಾನೆ ಇಂದಿನಿಂದ ಪುನಾರಂಭಗೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಸಿಬ್ಬಂದಿಗೆ ಕೊರೋನಾ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಕಳೆದ ಎರಡೂವರೆ ತಿಂಗಳಿಂದ ಬಂದ್ ಮಾಡಲಾಗಿದ್ದ ಮೈಸೂರಿನ ನಂಜನಗೂಡಿನಲ್ಲಿರುವ ಜ್ಯುಬಿಲಿಯೆಂಟ್ ಕಾರ್ಖಾನೆ ಇಂದಿನಿಂದ ಪುನಾರಂಭಗೊಂಡಿದೆ.

ಔಷಧಿ ಉತ್ಪಾದನೆ ಮಾಡುವ ಕಾರ್ಖಾನೆಯಾಗಿರುವ ಜ್ಯುಬಿಲಿಯಂಟ್‌ ಕಾರ್ಖಾನೆಯಲ್ಲಿ ಕೊರೋನಾ ವಿರುದ್ಧ ಬಳಸುವ ರೆಮ್ಡಿಸಿವಿರ್ ಔಷಧಿ ಉತ್ಪಾದಿಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು.

ಇದೀಗ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಇಂದಿನಿಂದ ಕಾರ್ಖಾನೆ ಕಾರ್ಯಾರಂಭ ಮಾಡಿದೆ. 10 ಗ್ರಾಮಗಳನ್ನು ದತ್ತು ತೆಗೆದುಕೊಳ್ಳಬೇಕು, 50 ಸಾವಿರ ಕಿಟ್ ಗಳನ್ನು ಒದಗಿಸಬೇಕು ಹಾಗೂ ಭವಿಷ್ಯದಲ್ಲಿ ಯಾವುದೇ ದೋಷ ಎಸಗುವುದಿಲ್ಲ ಎಂಬ ಷರತ್ತುಗಳೊಂದಿಗೆ ಅನುಮತಿ ನೀಡಲಾಗಿದೆ.

ಕಾರ್ಖಾನೆಯ ಸುಮಾರು 74 ಕಾರ್ಮಿಕರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಆದರೆ ಇನ್ನೂ ಸೋಂಕಿನ ಮೂಲ ಪತ್ತೆಯಾಗಿಲ್ಲ. ಮೂಲ ಪತ್ತೆ ಹಚ್ಚಲು ಐಎಎಸ್​ ಅಧಿಕಾರಿ ಹರ್ಷಗುಪ್ತ ನೇತೃತ್ವದ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿತ್ತು. ಆದರೆ ಹರ್ಷಗುಪ್ತ ಅವರು ಸರ್ಕಾರಕ್ಕೆ ಅಪೂರ್ಣ ವರದಿ ಸಲ್ಲಿಸಿದ್ದಾರೆ. ಸೋಂಕಿನ ಮೂಲದ ಬಗ್ಗೆ ಜಿಲ್ಲಾಡಳಿತ, ಸರ್ಕಾರ ನಿರ್ಲಕ್ಷ್ಯ ವಹಿಸಿತ್ತು. ಇದರ ಹಿಂದೆ ರಾಜಕೀಯ ಪ್ರಭಾವ ಇದೆ ಎನ್ನಲಾಗಿದೆ.

ಕಾರ್ಖಾನೆಯ ಶೇಕಡ 25ರಷ್ಟು ನೌಕರರು ಇಂದು ಕೆಲಸಕ್ಕೆ ಹಾಜರಾಗಿದ್ದು, ಕಾರ್ಖಾನೆಯ ಗೇಟ್ ಮುಂಭಾಗದಲ್ಲೇ ಎಲ್ಲಾ ನೌಕರರ ತಪಾಸಣೆ ನಡೆಸಿ ಒಳಗೆ ಬಿಡಲಾಗುತ್ತಿತ್ತು. ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿತ್ತು. ಪಿಪಿಇ ಕಿಟ್ ಬಳಸಿ ನೌಕರರನ್ನು ತಪಾಸಣೆಗೆ ಒಳಪಡಿಸಲಾಯಿತು. ಕಾರ್ಖಾನೆ ಒಳ ಪ್ರವೇಶಿಸುವವರಿಗೆ ಕೋವಿಡ್ ಟೆಸ್ಟ್ ವರದಿ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಕಾರ್ಖಾನೆ ಮುಂದೆ ಇಂದು ಬೆಳಗ್ಗೆ 200ಕ್ಕೂ ಅಧಿಕ ನೌಕರರು ಸರತಿ ಸಾಲಿನಲ್ಲಿ ನಿಂತು ಪರೀಕ್ಷೆಗೆ ಒಳಗಾಗುತ್ತಿದ್ದ ದೃಶ್ಯ ಕಂಡುಬಂತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com