ಕ್ವಾರಂಟೈನ್'ನಿಂದ ನಾಪತ್ತೆಯಾಗಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಮಹಿಳೆ ಪತ್ತೆ

ಗೋಕಾಕ್'ನ ಸಾಂಸ್ಥಿಕ ಕ್ವಾರಂಟೈನ್ ನಿಂದ ತಪ್ಪಿಸಿಕೊಂಡು ಪೊಲೀಸರಿಗೆ ಭಾರೀ ತಲೆನೋವು ಸೃಷ್ಟಿಸಿದ್ದ ಮಹಿಳೆ, ಪತಿಯೊಂದಿಗೆ ಸಿಕ್ಕಿಬಿದ್ದಿದ್ದಾರೆ. 
ಕ್ವಾರಂಟೈನ್ ಹೊರಗೆ ನಿಂತಿರುವ ಅಧಿಕಾರಿಗಳು
ಕ್ವಾರಂಟೈನ್ ಹೊರಗೆ ನಿಂತಿರುವ ಅಧಿಕಾರಿಗಳು

ಬೆಳಗಾವಿ: ಗೋಕಾಕ್'ನ ಸಾಂಸ್ಥಿಕ ಕ್ವಾರಂಟೈನ್ ನಿಂದ ತಪ್ಪಿಸಿಕೊಂಡು ಪೊಲೀಸರಿಗೆ ಭಾರೀ ತಲೆನೋವು ಸೃಷ್ಟಿಸಿದ್ದ ಮಹಿಳೆ, ಪತಿಯೊಂದಿಗೆ ಸಿಕ್ಕಿಬಿದ್ದಿದ್ದಾರೆ. 

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಗೃಡಹಿಂಗ್ಲಜ್ ತಾಲೂಕಿನ ನೂಲ್ ಗ್ರಾಮದ ಮಹಿಳೆ ಗೋಕಾಕ ತಾಲೂಕಿನ ಪಂಜಾನಟ್ಟಿಯಲ್ಲಿರುವ ತನ್ನ ತವರು ಮನೆಗೆ ತನ್ನ ಮಗುವಿನೊಂದಿಗೆ ಇತ್ತೀಚೆಗಷ್ಟೇ ಬಂದಿದ್ದಳು. ಅತ್ತ ಜೈಲಿನಲ್ಲಿದ್ದ ಗಂಡ ಕೂಡ ಪೆರೋಲ್ ಮೇಲೆ ಬಿಡುಗಡೆಯಾಗಿ ಬಂದಿದ್ದ. ಹೀಗಾಗಿ ಗಂಡನನ್ನು ಭೇಟಿಯಾಗಲು ಉತ್ಸುಕಳಾಗಿದ್ದ ಮಹಿಳೆ, ಗಂಡನನ್ನು ಕಾಣಲು ಕ್ವಾರಂಟೈನ್ ಬಿಟ್ಟು ಹೋಗಿದ್ದಳು. 

ಮಹಿಳೆ ನಾಪತ್ತೆಯಾಗಿದ್ದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಬಳಿಕ ಹುಡುಕಾಟ ಆರಂಭಿಸಿದ್ದ ಪೊಲೀಸರು ದಂಪತಿಯನ್ನು ಹಾಗೂ ಮಗುವನ್ನು ಹುಡುಕಾಡಿ ಮತ್ತೆ ಕ್ವಾರಂಟೈನ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ಪಂಜಾನಟ್ಟಿ ಗ್ರಾಮಕ್ಕೆ ಬಂದ ಮಹಿಳೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಆಗ ಗ್ರಾಮಸ್ಥರ ವಿರೋಧದ ಮಧ್ಯೆ ಪೊಲೀಸರು ಮಹಿಳೆಯನ್ನು ಗೋಕಾಕ ನಗರದ ಬಿಸಿಎಂ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಿದ್ದರು. ಈ ವೇಳೆ ಹೇಗಾದರೂ ಮಾಡಿ ಗಂಡನನ್ನು ಭೇಟಿ ಮಾಡಲು ನಿರ್ಧರಿಸಿ, ಕ್ವಾರಂಟೈನ್ ನಿಂದ ತಪ್ಪಿಸಿಕೊಂಡಿದ್ದಾಳೆ. ಇದೇ ವೇಳೆ ಗಂಡ ನೂಲ್ ಗ್ರಾಮದಿಂದ ಗೋಕಾಕ ಬಸ್ ನಿಲ್ದಾಣಕ್ಕೆ ಬಂದು ಹೆಂಡತಿಯನ್ನು ಭೇಟಿ ಮಾಡಿದ್ದಾನೆ. 

ಆಗ ಇಬ್ಬರೂ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಸಂಬಂಧಿಕರ ಮನೆಗೆ ಹೋಗಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಕಲೆಹಾಕುವ ಮೂಲಕ ನಂತರ ಮೊಬೈಲ್ ಮೂಲಕ ದಂಪತಿಗಳನ್ನು ಟ್ರ್ಯಾಪ್ ಮಾಡಿದ್ದಾರೆ. ಬೆಲ್ಲದ ಬಾಗೇವಾಡಿಗೆ ಹೋಗಿ ಇಬ್ಬರನ್ನು ಮತ್ತು ಮಗುವನ್ನು ಕರೆದುಕೊಂಡು ಬಂದು ಕ್ವಾರಂಟೈನ್ ಮಾಡಿ ನಿಟ್ಟುಸಿರು ಬಿಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com