ಎಸ್ಎಸ್ಎಲ್ ಸಿ ಪರೀಕ್ಷೆ ಬೇಡ: ರೈತ, ಸಾಮಾಜಿಕ ಸಂಘಟನೆಗಳು, ಶಿಕ್ಷಣ ಕ್ಷೇತ್ರದ ಪ್ರಮುಖರ ಒತ್ತಾಯ

ಕೋವಿಡ್ -19 ಸಂಕಷ್ಟ ಪರಿಸ್ಥಿತಿಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ನಡೆಸಬಾರದು ಎಂದು ಹಲವು ಜನಪರ ಸಂಘಟನೆಗಳ ಮುಖಂಡರು ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್ -19 ಸಂಕಷ್ಟ ಪರಿಸ್ಥಿತಿಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ನಡೆಸಬಾರದು ಎಂದು ಹಲವು ಜನಪರ ಸಂಘಟನೆಗಳ ಮುಖಂಡರು ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಡಿ.ಎಸ್.ಎಸ್.ನ ಮಾವಳ್ಳಿ ಶಂಕರ್, ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ ನ ಬಸವರಾಜ ಗುರಿಕಾರ, ಕರ್ನಾಟಕ ರಾಜ್ಯ ನಿವೃತ್ತ ಶಿಕ್ಷಣ ಅಧಿಕಾರಿಗಳ ವೇದಿಕೆ ಮುಖಂಡ ಜಗನ್ನಾಥರಾವ್ .ಡಿ, ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ ಸಂಘಟನೆ ಮುಖಂಡ ಪಿ.ವಿ. ನಿರಂಜನಾರಾಧ್ಯ, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕರ ಫೆಡರೇಷನ್ ನ ಜಯಮ್ಮ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಶುಭಂಕರ್, ರಾಜ್ಯ ಮಹಿಳಾ ಒಕ್ಕೂಟದ ವಿದ್ಯಾ ಪಾಟೀಲ್, ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಜ್ಯೋತಿ.ಕೆ, ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ, ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ನ ಮೊಹಮ್ಮದ್ ಪೀರ್ ಲಟಗೇರಿ, ಕರ್ನಾಟಕ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮೊಯ್ಯುದ್ದೀನ್ ಕುಟ್ಟಿ, ಸಮಾನ ಶಿಕ್ಷಣಕ್ಕಾಗಿ ಜನಾಂದೋಲನದ ಬಿ.ಪಾದ್ ಭಟ್, ಕರ್ನಾಟಕ ವಿದ್ಯಾರ್ಥಿ ಸಂಘದ ಸರೋವರ್, ಸಮ ಸಮಾಜಕ್ಕಾಗಿ ಗೆಳೆಯರ ಬಳಗದ ಗಂಗಾಧರ, ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕರಾದ ಗಾಯತ್ರಿ ದೇವಿ ದತ್, ಸಿದ್ಧರಾಮ ಮನೋಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಜಂಟಿ-ನಿರ್ದೇಶಕ ಸಿ.ವಿ.ತಿರುಮಲರಾವ್, ವಿಮುಕ್ತಿ ಸಂಘಟನೆಯ ಫಾದರ್ ಸತೀಸ್ ಸಹಿ ಸುದೀರ್ಘ ಪತ್ರದಲ್ಲಿ ಸಹಿ ಮಾಡಿದ್ದಾರೆ.

ಇಡೀ ಪ್ರಪಂಚವೇ ಈ ಕೋವಿಡ್ -19 ರ ಕರಾಳ ಹಸ್ತದಡಿ ನಲುಗಿ ಮುಂದೇನು ಎಂಬ ಭಯದಲ್ಲಿ ನಲುಗುತ್ತಿದ್ದು, ಇದರಲ್ಲಿ ಕರ್ನಾಟಕ ಕೂಡ ಹೊರತಾಗಿಲ್ಲ. ಈಗಿನ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸುವುದು ಸೂಕ್ತವಲ್ಲ. ವಿದ್ಯಾರ್ಥಿಗಳ ಜೀವದ ಹಿತದೃಷ್ಟಿಯಿಂದ ಹಿಂದಿನ ಶೈಕ್ಷಣಿಕ ಪ್ರತಿಭೆ, ಕಾರ್ಯಕ್ಷಮತೆ ನೋಡಿ ತೇರ್ಗಡೆ ಮಾಡಬೇಕು. ಪರೀಕ್ಷೆ ಇಲ್ಲದೆಯೂ ಎಲ್ಲಾ ಮಕ್ಕಳಿಗೆ ಎಂದಿನಂತೆ ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ ದೊರೆಯಬೇಕು. ಕೋವಿಡ್ ನ ಈ ಸಂಕಷ್ಟ ಸಂದರ್ಭದಲ್ಲಿ ಇದೊಂದು ನಿರ್ಣಾಯಕ ತೀರ್ಮಾನವಾಗಲಿದ್ದು, ಲಕ್ಷ-ಲಕ್ಷ ಮಕ್ಕಳು ಪಾಲಕರು ಆತಂಕ, ಖಿನ್ನತೆ ಮತ್ತು ಭಯದಿಂದ ಹೊರಬಂದು ಸರ್ಕಾರದ ಈ ನಿರ್ಣಯಕ್ಕೆ ಚಿರಋಣಿಗಳಾಗಲಿದ್ದಾರೆ ಎಂದು ಹೇಳಿದ್ದಾರೆ.

ಸಂಕಷ್ಟ ಸಂದರ್ಭದಲ್ಲಿ ನಿಜವಾಗಿಯೂ ಪರೀಕ್ಷೆ ನಡೆಸುವುದು ಅನಿವಾರ್ಯವೇ? ಅತಿಮುಖ್ಯವೇ? ಸಮಂಜಸವೇ? ಈ ಪರೀಕ್ಷೆ ವಿದ್ಯಾರ್ಥಿಗಳ ಜೀವಕ್ಕಿಂತ ದೊಡ್ಡದೇ? ಎನ್ನುವುದನ್ನು ಸರ್ಕಾರ ಮನಗಾಣಬೇಕಿದೆ. ಈಗಾಗಲೇ ಹಲವು ರಾಜ್ಯಗಳು ಪರೀಕ್ಷೆಗಳನ್ನು ರದ್ದುಮಾಡಿವೆ. ಈ ಬಾರಿ 8.5 ಲಕ್ಷ ವಿದ್ಯಾರ್ಥಿಗಳು, 2.2 ಲಕ್ಷ ನಿರ್ವಾಹಕ ಸಿಬ್ಬಂದಿ ಪರೀಕ್ಷಾ ಚಟುವಟಿಕೆಯಲ್ಲಿ ಭಾಗಿಯಾಗಲಿದ್ದಾರೆ. ಯಾರಿಗಾದರೂ ಸೋಂಕು ಉಂಟಾಗಿ ಅವರಿಗೆ ಏನಾದರು ಆದರೆ ಇದರ ಜವಾಬ್ದಾರರು ಯಾರು ಎಂದು ಪ್ರಶ್ನಿಸಿದ್ದಾರೆ.

ಬಹುತೇಕ ಪರೀಕ್ಷಾ ಕೇಂದ್ರಗಳಿರುವುದು ಜಿಲ್ಲಾ ಕೇಂದ್ರಗಳಲ್ಲಿ. ಆದರೆ ರಾಮನಗರ ಹೊರತು ಪಡಿಸಿ ಎಲ್ಲಾ ಜಿಲ್ಲೆಗಳು ಕಂಟೈನ್ ಮೆಂಟ್ ಜೋನ್ ನಲ್ಲಿವೆ. ಇನ್ನು ಉಳಿದಿರುವ ಕೇಂದ್ರಗಳು ಹೋಬಳಿ ಮತ್ತು ತಾಲೂಕು ಮಟ್ಟದ ಕ್ಲಸ್ಟರ್ ಕೇಂದ್ರಗಳಾಗಿರುವುದರಿಂದ ಮತ್ತೊಮ್ಮೆ ಸುಮಾರು 8 ಲಕ್ಷ ವಿದ್ಯಾರ್ಥಿಗಳು ಮತ್ತು ಅಷ್ಟೇ ಸಂಖ್ಯೆಯ ಪೋಷಕರು ಪರಸ್ಪರ ಭೇಟಿಯಾದರೆ ಇದಕ್ಕಿಂತ ದುರಂತ ಮತ್ತೊಂದಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆಯ ನಂತರ ಕೇಂದ್ರೀಕೃತ ಮೌಲ್ಯಮಾಪನ ನಡೆಯಲಿದ್ದು, ಇದರಲ್ಲಿ ಭಾಗಿಯಾಗುವ ಶಿಕ್ಷಕರ ಮನೋಸ್ಥಿತಿ ಹಾಗೂ ಇದಕ್ಕೆ 15 ರಿಂದ 20 ಕೋಟಿ ರೂ ವೆಚ್ಚ ತಗಲಲದೆ, ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ 2.2 ಲಕ್ಷ ಜನತೆ ಮತ್ತೆ ಪರೀಕ್ಷೆ ಎದುರಿಸಬೇಕಾಗುತ್ತದೆ. ಪರೀಕ್ಷೆಗೆ ತಗಲುವ ಕೋಟಿ ಗಟ್ಟಲೆ ಹಣವನ್ನು ಶಿಕ್ಷಣ ಕ್ಷೇತ್ರದಲ್ಲಿನ ಪ್ರಮುಖ ಸಮಸ್ಯೆಗಳಾದ ಮೂಲಸೌಕರ್ಯ, ಪೌಷ್ಠಿಕಾಂಶ , ಮಕ್ಕಳ ಆರೋಗ್ಯ ಅಥವಾ ರಾಜ್ಯ ಭರಿಸುತ್ತಿರುವ ವೈದ್ಯಕೀಯ ವೆಚ್ಚಗಳನ್ನು ನಿರ್ವಹಿಸಲು ಇತ್ಯಾದಿಗಳಿಗೆ ಬಳಬಹುದು ಎಂದು ಸಲಹೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com