ಐಎನ್‌ಎಸ್ ಸುಮೇಧಾದಲ್ಲಿ ದುರ್ಘಟನೆ: ನೌಕಾದಳದ ಸಿಬ್ಬಂದಿ ಸಾವು

ಭಾರತೀಯ ನೌಕಾಪಡೆಯ ಗಸ್ತು ಹಡಗು ‘ಐ.ಎನ್.ಎಸ್ ಸುಮೇಧಾ’ದ ಎಂಜಿನ್‌ನ ಫ್ಲೈವೀಲ್ ತುಂಡಾಗಿ ಸಿಡಿದು ಗಂಭೀರವಾಗಿ ಗಾಯಗೊಂಡಿದ್ದ ನೌಕಾಪಡೆ ಸಿಬ್ಬಂದಿ ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾರವಾರ: ಭಾರತೀಯ ನೌಕಾಪಡೆಯ ಗಸ್ತು ಹಡಗು ‘ಐ.ಎನ್.ಎಸ್ ಸುಮೇಧಾ’ದ ಎಂಜಿನ್‌ನ ಫ್ಲೈವೀಲ್ ತುಂಡಾಗಿ ಸಿಡಿದು ಗಂಭೀರವಾಗಿ ಗಾಯಗೊಂಡಿದ್ದ ನೌಕಾಪಡೆ ಸಿಬ್ಬಂದಿ ಮೃತಪಟ್ಟಿದ್ದಾರೆ.

ಹಡಗಿನ ಎಂಜಿನ್ ರೂಂ ಆರ್ಟಿಫೈಸರ್ ಆಗಿದ್ದ ಹರಿಯಾಣದ ಝಜ್ಜರ್‌ನ ಗೌರವ್ ದತ್ (27) ಮೃತರು. ಮೇ 19ರಂದು ಸಾಯಂಕಾಲ ಗಲ್ಫ್ ಆಫ್ ಏಡನ್‌ನಲ್ಲಿ ಅರಬ್ಬಿ ಸಮುದ್ರದಲ್ಲಿ ಐಎನ್‌ಎಸ್ ಸುಮೆಧಾ ಗಸ್ತು ನಡೆಸುತ್ತಿದ್ದಾಗ ನೌಕೆಯ ಮುಖ್ಯ ಇಂಜಿನ್‌ನ ನಿಯಂತ್ರಕ ಚಕ್ರದ ಬಳಿ ಕಾರ್ಯನಿರ್ವಹಿಸುತ್ತಿದ್ದಾಗ ಅದರ ರೆಕ್ಕೆಯ ಭಾಗ ಎದೆಗೆ ಬಡಿದು ಗೌರವ್ ಕೊನೆಯುಸಿರೆಳೆದಿದ್ದರು. ಈ ಪ್ರದೇಶವು ಕಾರವಾರದಿಂದ ಸುಮಾರು 1,535 ನಾಟಿಕಲ್ ಮೈಲು (3,000 ಕಿಲೋಮೀಟರ್) ದೂರದಲ್ಲಿದೆ.

ನಡು ಸಮುದ್ರದಲ್ಲಿ ಅವರು ಮೃತಪಟ್ಟಿದ್ದರಿಂದ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿ ಬಂದಿದ್ದರ ಹಿನ್ನೆಲೆಯಲ್ಲಿ ಐಎನ್‌ಎಸ್ ಸುಮೇಧಾವನ್ನು ಗಲ್ಫ್ ಆಫ್ ಏಡನ್‌ನಿಂದ ಭಾರತಕ್ಕೆ ಹೊರಡಿಸಲಾಗಿತ್ತು. ಸುಮಾರು ಐದು ದಿನಗಳ ನಿರಂತರ ಪ್ರವಾಸದ ನಂತರ ಈ ನೌಕೆಯು ಮೊನ್ನೆ ಭಾನುವಾರ ಕಾರವಾರಕ್ಕೆ ತಲುಪಿತ್ತು. ಕಾರವಾರದ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡು, ಅಲ್ಲಿ ಪಂಚನಾಮೆ ಮತ್ತಿತರ ಅಗತ್ಯ ಪ್ರಕ್ರಿಯೆಗಳನ್ನು ಮುಗಿಸಿ ನಂತರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಿದರು.

ನಿನ್ನೆ ಮೃತ ಅಧಿಕಾರಿಯ ಪಾರ್ಥಿವ ಶರೀರವನ್ನು ಹೆಲಿಕಾಪ್ಟರ್ ಮೂಲಕ ಹರಿಯಾಣಕ್ಕೆ ಕೊಂಡೊಯ್ಯಲಾಯಿತು. ಅವರ ಸ್ವಗ್ರಾಮದಲ್ಲಿ ಸಕಲ ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಪ್ರಕರಣದ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com