ಸಚಿವ ಮಾಧುಸ್ವಾಮಿ
ಸಚಿವ ಮಾಧುಸ್ವಾಮಿ

ಕೊವಿಡ್-19 ಪ್ಯಾಕೇಜ್ ಎಲ್ಲಾ ವರ್ಗಕ್ಕೂ ವಿಸ್ತರಣೆ, ಎಲ್ಲಾ ರೈತರಿಗೂ ತಲಾ 5 ಸಾವಿರ ರೂ. ಪರಿಹಾರ: ಮಾಧುಸ್ವಾಮಿ

ಕೊವಿಡ್-19 ಪರಿಹಾರ ಪ್ಯಾಕೇಜ್ ಅನ್ನು ಆಟೋ, ಕ್ಯಾಬ್ ಚಾಲಕರು ಸೇರಿದಂತೆ ಎಲ್ಲಾ ವರ್ಗದವರಿಗೂ ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಕೊರೋನಾದಿಂದ ಸಂಕಷ್ಟದಲ್ಲಿರುವ ರಾಜ್ಯದ ಎಲ್ಲಾ ರೈತರಿಗೂ ತಲಾ 5 ಸಾವಿರ ರೂಪಾಯಿ ಪರಿಹಾರ ನೀಡಲು ಮುಂದಾಗಿದೆ.

ಬೆಂಗಳೂರು: ಕೊವಿಡ್-19 ಪರಿಹಾರ ಪ್ಯಾಕೇಜ್ ಅನ್ನು ಆಟೋ, ಕ್ಯಾಬ್ ಚಾಲಕರು ಸೇರಿದಂತೆ ಎಲ್ಲಾ ವರ್ಗದವರಿಗೂ ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಕೊರೋನಾದಿಂದ ಸಂಕಷ್ಟದಲ್ಲಿರುವ ರಾಜ್ಯದ ಎಲ್ಲಾ ರೈತರಿಗೂ ತಲಾ 5 ಸಾವಿರ ರೂಪಾಯಿ ಪರಿಹಾರ ನೀಡಲು ಮುಂದಾಗಿದೆ.

ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ ಅವರು, ಆಟೋ, ಟ್ಯಾಕ್ಸಿ ಚಾಲಕರು ಸೇರಿದಂತೆ ಎಲ್ಲಾ ವರ್ಗಕ್ಕೂ ಪರಿಹಾರ ನೀಡಲಾಗುವುದು ಎಂದರು.

ಕೊರೋನಾದಿಂದ ಸಂಕಷ್ಟದಲ್ಲಿರುವ ರಾಜ್ಯದ ಎಲ್ಲಾ ರೈತರಿಗೂ ತಲಾ ಐದು ಸಾವಿರ ರೂಪಾಯಿ ನೀಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಸಚಿವರು ತಿಳಿಸಿದರು.

ರಾಜ್ಯ ಸರ್ಕಾರ ರೈತರು, ಅಸಂಘಟಿತ ಕಾರ್ಮಿಕರ ಹಿತ ರಕ್ಷಣೆಗಾಗಿ 2,173 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಇದರಡಿ ಹಿಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬೆಳೆದ ರೈತರಿಗೆ ಬೆಲೆ ಕುಸಿತವಾಗಿರುವ ಹಿನ್ನೆಲೆಯಲ್ಲಿ ಪ್ರತಿ ರೈತರಿಗ ಐದು ಸಾವಿರ ರೂಪಾಯಿ ಪರಿಹಾರ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಇದೀಗ ಮುಂಗಾರು ಅವಧಿಯಲ್ಲಿ ಮೆಕ್ಕೆ ಜೋಳ ಬೆಳೆದ ರೈತರಿಗೂ ಪರಿಹಾರ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದರು. 

ಸಲೂನ್ ಚಟುವಟಿಕೆಯಲ್ಲಿ ತೊಡಗಿರುವ, ಆಟೋ, ಟ್ಯಾಕ್ಸಿ ಚಾಲಕರಿಗೆ ಐದು ಸಾವಿರ ರೂಪಾಯಿ ಪರಿಹಾರ ಪಡೆಯಲು ಇದ್ದ ಹಲವು ನಿರ್ಬಂಧಗಳನ್ನು ತೆರವುಗೊಳಿಸಿ, ಎಲ್ಲಾ ಅರ್ಹರಿಗೂ ಸೌಲಭ್ಯ ದೊರಕಿಸಿಕೊಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.

ಪೊಲೀಸ್ ಇಲಾಖೆಯ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ವಯೋಮಿತಿ ಹೆಚ್ಚಿಸುವಂತೆ ಬೇಡಿಕೆ ಬಂದಿದ್ದು, ಒಂದು ಬಾರಿಗೆ ಅನ್ವಯವಾಗುವಂತೆ ನೇಮಕಾತಿ ಮತ್ತು ನೇಮಕಾತಿ ಪರೀಕ್ಷೆ ಬರೆಯಲು ವಯೋಮಿತಿ ಏರಿಕೆಮಾಡಲಾಗುತ್ತಿದೆ. ಸಾಮಾನ್ಯ ವರ್ಗಕ್ಕೆ ಈಗಿರುವ 28 ವರ್ಷವನ್ನು 30 ವರ್ಷಕ್ಕೆ, ಎಸ್.ಸಿ, ಎಸ್,ಟಿ ಸಮುದಾಯಕ್ಕೆ 30 ರಿಂದ 32 ವರ್ಷಕ್ಕೆ ಹೆಚ್ಚಿಸಲಾಗುತ್ತಿದೆ ಎಂದರು. 

ಶಿಕ್ಷಣ ಇಲಾಖೆಯಲ್ಲಿ ಬಾಕಿ ಉಳಿದಿರುವ ಕೆಲ ಹುದ್ದೆಗಳ ನೇಮಕಾತಿಗಾಗಿ ಅನುಮೋದನೆ ದೊರೆತಿದ್ದು, ಇದರ ಅನುಷ್ಠಾನಕ್ಕೆ ಪರಿಷ್ಕೃತ ನೇಮಕಾತಿ ತಿದ್ದುಪಡಿ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. 

ಬೆಂಗಳೂರಿನ ಒಂದು ಲಕ್ಷ ಬಹುಮಹಡಿ ಕಟ್ಟಡ ಯೋಜನೆಯಡಿ ನಿರ್ಮಾಣಗೊಂಡಿರುವ ಕಟ್ಟಡಗಳಿಗೆ ಮೂಲ ಸೌಲಭ್ಯ ಕಲ್ಪಿಸಲು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕುಮಾರಧಾರ ನದಿಗೆ ಶಾಂತಿ ಮಗೇರು ಬಳಿ ಸೇತುವೆ ನಿರ್ಮಾಣ ಮಾಡುವ 15.54 ಕೋಟಿ ರೂಪಾಯಿ ಮೊತ್ತದ ಪ್ರಸ್ತಾವನೆಗೂ ಸಹ ಅನುಮೋದನೆ ನೀಡಲಾಗಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು. 

ಗ್ರಾಮ ಪಂಚಾಯತ್ ಚುನಾವಣೆಯ ಅವಧಿ ಮುಗಿಯಲು ಇನ್ನೂ 15 ದಿನಗಳ ಕಾಲಾವಕಾಶವಿದ್ದು, ಚುನಾವಣೆ ನಡೆಸಬೇಕೆ, ಮುಂದೂಡಬೇಕೆ ಎನ್ನುವ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕರ್ನಾಟಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಗೆ 1500 ಕೋಟಿ ರೂ ಸಾಲ ಪಡೆಯಲು ಖಾತರಿ ಒದಗಿಸುವ, ಜೂನ್ 23 ಕ್ಕೆ ರಾಜ್ಯ ವಿಧಾನಪರಿಷತ್ತಿನ ಐದು ನಾಮನಿರ್ದೇಶನ ಸದಸ್ಯರ ಅವಧಿ ಪೂರ್ಣಗೊಳ್ಳಲಿದ್ದು, ಈ ಸ್ಥಾನಗಳ ನಾಮಕರಣ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿವೇಚನೆಗೆ ಬಿಡಲು ಸಚಿವ ಸಂಪುಟ ನಿರ್ಧರಿಸಿದೆ ಎಂದರು.

ಕುಷ್ಠ ರೋಗ ಮತ್ತು ಮಾನಸಿಕ ರೋಗಿಗಳನ್ನು ಇದೇ ಹೆಸರಿನಿಂದ ಕರೆಯಬಾರದು ಮತ್ತು ಇಲ್ಲಿ ಚಿಕಿತ್ಸೆ ನೀಡುವ ಸಂಸ್ಥೆಗಳ ಹೆಸರುಗಳನ್ನು ಬದಲಾವಣೆ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಇನ್ನು ಮುಂದೆ ಮಾನಸಿಕ ಆರೋಗ್ಯ ಆಸ್ಪತ್ರೆಗಳನ್ನು ಮಾನಸಿಕ ಆರೋಗ್ಯ ಸಂಸ್ಥೆ, ಕುಷ್ಠ ರೋಗ ಆಸ್ಪತ್ರೆಗಳನ್ನು ಸಾಂಕ್ರಾಮಿಕ ರೋಗ ಸಂಸ್ಥೆ ಎಂದು ಮರು ನಾಮಕರಣ ಮಾಡಲು ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

Related Stories

No stories found.

Advertisement

X
Kannada Prabha
www.kannadaprabha.com