ಕೋಲಾರಕ್ಕೆ ಕಾಲಿಟ್ಟ ದೈತ್ಯ ಮಿಡತೆಗಳು, ಭಯ ಬೇಡ ಎಂದ ಅಧಿಕಾರಿಗಳು!

ಕೊರೋನಾ ಸೋಂಕಿನ ಹಾವಳಿ ನಡುವೆಯೇ ಉತ್ತರ ಭಾರತದ ರೈತರ ತಲೆನೋವಿಗೆ ಕಾರಣವಾಗಿದ್ದ ದೈತ್ಯ ಮಿಡತೆಗಳು ಇದೀಗ ಕರ್ನಾಟಕಕ್ಕೂ ಕಾಲಿಡುವ ಮೂಲಕ ರಾಜ್ಯದ ರೈತರ ಆತಂಕಕ್ಕೆ ಕಾರಣವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೋಲಾರ: ಕೊರೋನಾ ಸೋಂಕಿನ ಹಾವಳಿ ನಡುವೆಯೇ ಉತ್ತರ ಭಾರತದ ರೈತರ ತಲೆನೋವಿಗೆ ಕಾರಣವಾಗಿದ್ದ ದೈತ್ಯ ಮಿಡತೆಗಳು ಇದೀಗ ಕರ್ನಾಟಕಕ್ಕೂ ಕಾಲಿಡುವ ಮೂಲಕ ರಾಜ್ಯದ ರೈತರ ಆತಂಕಕ್ಕೆ ಕಾರಣವಾಗಿದೆ.

ಹೌದು.. ರಾಜಸ್ತಾನ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತಿತರ ಉತ್ತರ ಭಾರತದ ರಾಜ್ಯಗಳ ಮೇಲೆ ದಾಳಿ ನಡೆಸಿರುವ ದೈತ್ಯ ಮಿಡತೆಗಳು ಇದೀಗ ಕರ್ನಾಟಕದ ಕೋಲಾರಕ್ಕೂ ಕಾಲಿಟ್ಟಿವೆ. ಕೋಲಾರ ತಾಲ್ಲೂಕಿನ ಬಿಂಬ ಮತ್ತು ದೊಡ್ಡಹಸಾಳ ಗ್ರಾಮಗಳಲ್ಲಿ  ಕಾಣಿಸಿಕೊಂಡಿದೆ. ರಾತ್ರೋರಾತ್ರಿ ಸಾವಿರಾರು ಮಿಡತೆಗಳು ಗ್ರಾಮಗಳ ಹೊರವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸುತ್ತಮುತ್ತಲಿನ ಗಿಡ-ಮರಗಳು ಹಾಗೂ ವಿದ್ಯುತ್ ಕಂಬಗಳ ಮೇಲೆ ಆಶ್ರಯ ಪಡೆದಿವೆ. ಹೊರವಲಯದಲ್ಲಿರುವ ಗಿಡ-ಮರಗಳನ್ನು ನಾಶಪಡಿಸುತ್ತಿರುವ ಮಿಡತೆಗಳು ಯಾವುದೇ ಸಂದರ್ಭದಲ್ಲಿ ತೋಟಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಸ್ಥಳೀಯ ರೈತರು ಆತಂಕಕ್ಕೀಡಾಗಿದ್ದಾರೆ. ಇನ್ನು ಬಿಂಬ ಮತ್ತು ದೊಡ್ಡಹಸಾಳ ಗ್ರಾಮದ ಯುವಕರು ಮಿಡತೆಗಳಿರುವ ಗಿಡ-ಮರಗಳನ್ನು ಸುಟ್ಟುಹಾಕುತ್ತಿದ್ದಾರೆ. ಈ ಕುರಿತು ವಿಡಿಯೋಗಳು ಇದೀಗ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಸ್ಥಳೀಯ ಗ್ರಾಮಸ್ಥ ಚಂದ್ರಣ್ಣ ಅವರು, ನೀರಿನ ಕೊರತೆಯ ನಡುವೆಯೂ ನಾವು ಅತ್ಯಂತ ಕಷ್ಟದಿಂದ ಬೆಳೆ ಬೆಳೆದಿದ್ದೇವೆ. ಇಂತಹ ಸಂದರ್ಭದಲ್ಲಿ ಈ ದೈತ್ಯ ಮಿಡತೆಗಳು ದಾಳಿ ಮಾಡಿ ಬೆಳೆಯನ್ನು ನಾಶ ಮಾಡಿದರೆ ನಮ್ಮ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.

ಮಿಡತೆಗಳಿಂದ ರೈತರು ಭಯ ಪಡುವ ಅಗತ್ಯವಿಲ್ಲ
ಇನ್ನು ಮಿಡತೆ ವಿಚಾರ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದ ಬೆನ್ನಲ್ಲೇ ಸ್ಥಳಕ್ಕಾಗಮಿಸಿದ ಕೃಷಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಉಪ ಆಯುಕ್ತೆ ಸತ್ಯಭಾಮ ಅವರು, ಈ ಮಿಡತೆಗಳಿಗೆ ರೈತರು ಭಯಪಡುವ ಅಗತ್ಯವಿಲ್ಲ. ಇದು ಮಿಡತೆಗಳ ಹಿಂಡಲ್ಲ. ಜಿಲ್ಲೆಯಲ್ಲಿ  ಉತ್ತಮ ಮಳೆಯಾಗಿದ್ದು, ರೈತರು ತಮ್ಮ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳಬಹುದು ಎಂದು ಹೇಳಿದ್ದಾರೆ. ಇನ್ನು ಇದೇ ವಿಚಾರವಾಗಿ ಮಾತನಾಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೆಚ್ ಕೆ ಶಿವಕುಮಾರ್ ಅವರು, ನಮ್ಮ ತಂಡ ಮಿಡೆತಗಳಿದ್ದ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನೀಡಿದೆ.  ಇಂದು ಮಿಡತೆಗಳ ಹಿಂಡಲ್ಲ. ಹೀಗಾಗಿ ರೈತರು ಭಯಪಡುವ ಅಗತ್ಯವಿಲ್ಲ. ಈ ಮಿಡತೆಗಳ ಜೀವಿತಾವಧಿ ಒಂದೂವರೆಯಿಂದ 2 ತಿಂಗಳಗಳಷ್ಟೇ..ಇವು 100 ರಿಂದ 150 ಮೊಟ್ಟೆಗಳನ್ನಷ್ಟೇ ಇಡುತ್ತವೆ. ಆದರೆ ಈಗ ರೈತರು 500 ರಿಂದ 600 ಮೊಟ್ಟೆಗಳು ನೋಡಿ ರೈತರು ಕಂಗಾಲಾಗಿದ್ದಾರೆ  ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com