ಕೊಪ್ಪಳ: ಬ್ಯಾಂಕ್ ಗೋಡೆ ಒಡೆದು ಕಳ್ಳತನಕ್ಕೆ ಯತ್ನ, ಮೂವರ ಬಂಧನ

ಹಣದಾಸೆಗೆ ಬ್ಯಾಂಕಿನ ಗೋಡೆ ಒಡೆದು ಕಳ್ಳತನಕ್ಕೆ ಯತ್ನಿಸಿದ್ದ ಮೂವರನ್ನು ಕೊಪ್ಪಳ ಪೋಲೀಸರು ಬಂಧಿಸಿದ್ದಾರೆ.
ಕಳ್ಳತನಕ್ಕೆ ಯತ್ನಿಸಿ ಗೋಡೆ ಒಡೆದಿರುವುದು
ಕಳ್ಳತನಕ್ಕೆ ಯತ್ನಿಸಿ ಗೋಡೆ ಒಡೆದಿರುವುದು

ಕೊಪ್ಪಳ: ಕೋವಿಡ್-19 ಜಗತ್ತನ್ನೇ ಬಾಧಿಸುತ್ತಿದೆ. ಭಾರತದಲ್ಲಿ ಕಳೆದರೆಡು ತಿಂಗಳಿನಿಂದ ಲಾಕ್‌ಡೌನ್ ಜಾರಿಯಲ್ಲಿರುವ ಪರಿಣಾಮ ಜನರೆಲ್ಲ ಮನೆಯಲ್ಲಿ ಇರುವುದು ಅನಿವಾರ್ಯವಾಗಿತ್ತು. ಹಂತಹಂತವಾಗಿ ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆಯೇ ಕಳ್ಳರೂ ಸಹ ಹೊರಬಿದ್ದು ಕೈಚಳಕ ತೋರಲು ಆರಂಭಿಸಿದ್ದಾರೆ. ಬ್ಯಾಂಕ್ ಗೋಡೆಗೆ ಕನ್ನ ಹಾಕಿದ ಮೂವರು, ಇನ್ನೇನು ಒಳನುಸುಳಬೇಕು ಎನ್ನುವಷ್ಟರಲ್ಲಿ ಆರೋಪಿಗಳು ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಶನಿವಾರ ನಸುಕಿನ ವೇಳೆ ಕೊಪ್ಪಳದಲ್ಲಿ ಘಟನೆ ನಡೆದಿದ್ದು, ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಅಶೋಕ ಸರ್ಕಲ್ ಬಳಿ ಇರುವ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನ ಗೋಡೆಗೆ ಹಾರಿ, ಕಲ್ಲುಗಳಿಂದ ಕನ್ನ ಹಾಕಿದ್ದಾರೆ. ಕನ್ನ ಹಾಕಿದ ಶಬ್ದ ಕೇಳಿದ ಸುತ್ತಮುತ್ತಲಿನ ಜನ ಹೊರಗಡೆ ಬರಲು ಭಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಬರುತ್ತಿದ್ದಂತೆಯೇ ಖತರ್ನಾಕ್ ಕಳ್ಳರು ಕಾಲ್ಕಿತ್ತಿದ್ದಾರೆ. ಪೊಲೀಸರು ಚೇಸ್ ಮಾಡಿ ಅವರನ್ನು ಹಿಡಿದು ವಿಚಾರಿಸಿದಾಗ ಬ್ಯಾಂಕ್‌ಗೆ ಕನ್ನ ಹಾಕುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.

ಪೊಲೀಸರು ಮೂವರನ್ನು ಆರೋಪಿಗಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ಮೂವರು ಆರೋಪಿಗಳನ್ನು ಕೊಪ್ಪಳ ತಾಲೂಕಿನ ಕಾಟ್ರಳ್ಳಿ ಗ್ರಾಮದ ಮಾರುತಿ ಗದ್ದಿ, ದೇವಪ್ಪ ಹೊಸಳ್ಳಿ ಹಾಗೂ ಶರಣಪ್ಪ ಬೇವಿನಹಳ್ಳಿ ಎಂದು ಗುರುತಿಸಲಾಗಿದೆ. ಈ ಬಗ್ಗೆ ಇನ್ನೂ ಪ್ರಕರಣ ದಾಖಲಾಗಿಲ್ಲ. ವಿಚಾರಣೆ ಪೂರ್ಣಗೊಂಡ ಬಳಿಕ ಪ್ರಕರಣ ದಾಖಲಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಡಿವೇಎಸ್‌ಪಿ ವೆಂಕಟಪ್ಪ ನಾಯಕ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com