ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ: ಅನಧಿಕೃತ ಕಟ್ಟಡಗಳ ತೆರವಿಗೆ ಜಿಲ್ಲಾಧಿಕಾರಿ ನೋಟಿಸ್

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿರುವವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಧಿಕಾರಿಯವರಾದ ಜಿಲ್ಲಾಧಿಕಾರಿ ಡಾ. ಎಂಆರ್ ರವಿ ಅವರು ಈಗಾಗಲೇ ಕಟ್ಟಡ ನಿರ್ಮಾಣ ಮಾಡಿರುವ ಸಂಬಂಧ 8 ಮಂದಿಗೆ ಕಟ್ಟಡ ತೆರವುಗೊಳಿಸಲು ಸೂಚಿಸಿ ನೋಟಿಸ್ ಜಾರಿ ಮಾಡಿದ್ದಾರೆ.
ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ
ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿರುವವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಧಿಕಾರಿಯವರಾದ ಜಿಲ್ಲಾಧಿಕಾರಿ ಡಾ. ಎಂಆರ್ ರವಿ ಅವರು ಈಗಾಗಲೇ ಕಟ್ಟಡ ನಿರ್ಮಾಣ ಮಾಡಿರುವ ಸಂಬಂಧ 8 ಮಂದಿಗೆ ಕಟ್ಟಡ ತೆರವುಗೊಳಿಸಲು ಸೂಚಿಸಿ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೇ ಇನ್ನು ಉಳಿದ 7 ಅಕ್ರಮ ಕಟ್ಟಡ ಸಂಬಂಧ ಕ್ರಮಕ್ಕೆ ಜಿಲ್ಲಾಧಿಕಾರಿಯವರು ಮುಂದಾಗಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಕೇಂದ್ರಸರ್ಕಾರ 2012ರ ಅಕ್ಟೋಬರ್ 4ರಂದು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ಪ್ರಕಾರ ಪ್ರಸ್ತುತ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರಡು ಅಧಿಸೂಚನೆ ದಿನಾಂಕ: 31-08-2010ರ ನಂತರ ಕಟ್ಟಡ ನಿರ್ಮಾಣ ಮಾಡಿರುವ 3 ಪ್ರಕರಣಗಳಲ್ಲಿ ಅನ್ಯಕ್ರಾಂತವಾಗಿರುವ ಆದೇಶವನ್ನು ರದ್ದುಪಡಿಸುವ ಕ್ರಮಕ್ಕೆ ಜಿಲ್ಲಾಧಿಕಾರಿಯವರು ಮುಂದಾಗಿದ್ದಾರೆ. 

ಪ್ರವಾಸೋದ್ಯಮ ಇಲಾಖೆಯವರು ಅನುಮತಿಸಿರುವ ಯಾವುದೇ ಅನ್ಯಕ್ರಾಂತವಾಗದೇ ನಿರ್ಮಿಸಿರುವ 3 ಹೋಮ್‍ಸ್ಟೇ ಕಟ್ಟಡಗಳಿಗೆ ನೀಡಿರುವ ಅನುಮತಿಯನ್ನು ಹಿಂಪಡೆಯುವ ಆದೇಶಕ್ಕೆ ಜಿಲ್ಲಾಧಿಕಾರಿಯವರು ಕ್ರಮ ತೆಗೆದುಕೊಂಡಿದ್ದಾರೆ. ಅನುಮತಿ ಪಡೆಯದ ಇನ್ನೊಂದು ಹೋಮ್ ಸ್ಟೇ ನಡೆಸದಂತೆ ಬೀಗಮುದ್ರೆ ಹಾಕಲಾಗಿತ್ತು. ಆದರೂ ಸಹ ಬೀಗಮುದ್ರೆ ಆದೇಶ ಉಲ್ಲಂಘಿಸಿ ಹೋಮ್ ಸ್ಟೇ ತೆರೆದು ಕಟ್ಟಡ ದುರಸ್ತಿ ಕಾರ್ಯ ಕೈಗೊಂಡಿದ್ದ ಸದರಿ ಹೋಮ್ ಸ್ಟೇ ಮಾಲೀಕರ ವಿರುದ್ಧ ಕ್ರಮಿನಲ್ ಮೊಕದ್ದಮೆ ಹೂಡಲು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. 

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಅಧಿಸೂಚನೆ ಹೊರಡಿಸಿದ್ದು, ಇದರ ಅನುಸಾರ ಬಂಡೀಪುರ ಕಾಡಂಚಿನ ಒಟ್ಟು 123 ಗ್ರಾಮಗಳು ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಗೆ ಬರುತ್ತಿದ್ದು, ಸದರಿ ಗ್ರಾಮಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಚಟುವಟಿಕೆ ಕೈಗೊಳ್ಳಲು ಅವಕಾಶವಿರುವುದಿಲ್ಲ. ಆದಾಗಿಯೂ ಅಧಿಸೂಚನೆ ಉಲ್ಲಂಘಿಸಿ ಬೃಹತ್ ಕಟ್ಟಡ ನಿರ್ಮಾಣ ಮಾಡಲಾಗಿದೆ. ಪೂರ್ವಾನುಮತಿ ಪಡೆಯದೇ ನಿರ್ಮಿಸಲಾಗಿರುವ ಅಕ್ರಮ ಕಟ್ಟಡಗಳ ತೆರವಿಗೆ ಕ್ರಮ ವಹಿಸುವಂತೆ ಬಂಡೀಪುರ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ವರದಿ ನೀಡುವಂತೆ ತಹಶೀಲ್ದಾರರಿಗೆ ಪತ್ರ ಬರೆದಿದ್ದರು. ತಹಶೀಲ್ದಾರರು ನೀಡಿದ ವರದಿ ಅನ್ವಯ ಜಿಲ್ಲಾಧಿಕಾರಿಯವರು ಕ್ರಮಕ್ಕೆ ಮುಂದಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com