ಸೇವಾ ಸಿಂಧು ಆ್ಯಪ್ ನಲ್ಲಿ ನೋಂದಣಿಯಾದವರನ್ನು ತವರಿಗೆ ಕಳುಹಿಸಿದ ಕುರಿತು ವಿವರ ನೀಡಿ: ಸರ್ಕಾರಕ್ಕೆ ಹೈಕೋರ್ಟ್

ಹೊರರಾಜ್ಯಗಳಿಗೆ ಹೋಗಲು ಸೇವಾ ಸಿಂಧು ಆ್ಯಪ್ ನಲ್ಲಿ ನೋಂದಾಯಿಸಿಕೊಂಡವರನ್ನು ಅವರ ತವರಿಗೆ ಕಳುಹಿಸಲು ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಹೊರರಾಜ್ಯಗಳಿಗೆ ಹೋಗಲು ಸೇವಾ ಸಿಂಧು ಆ್ಯಪ್ ನಲ್ಲಿ ನೋಂದಾಯಿಸಿಕೊಂಡವರನ್ನು ಅವರ ತವರಿಗೆ ಕಳುಹಿಸಲು ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಎಐಸಿಸಿಟಿಯು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾ. ಸಚಿನ್‌ ಶಂಕರ್‌ ಮಗ್ದಮ್‌ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. 

ವಿಚಾರಣೆ ವೇಳೆ ಲಿಖಿತ ಮಾಹಿತಿ ನೀಡಿದ ಸರ್ಕಾರಿ ವಕೀಲರು, ಇಲ್ಲಿಯವರೆಗೆ 11.60 ಲಕ್ಷ ಜನರು ಸೇವಾ ಸಿಂಧು ಆ್ಯಪ್ ನಲ್ಲಿ ನೋಂದಣಿಯಾಗಿದ್ದಾರೆ. ಈ ಪೈಕಿ ಶ್ರಮಿಕ್ ರೈಲುಗಳ ಮೂಲಕ 2,52,252 ಮಂದಿ, 933 ಬಸ್‌ಗಳ ಮೂಲಕ 25,341 ಮಂದಿಯನ್ನು ಅವರ ರಾಜ್ಯಗಳಿಗೆ  ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ನ್ಯಾಯಪೀಠ, ಆ್ಯಪ್ ನಲ್ಲಿ ನೋಂದಣಿ ಮಾಡಿಕೊಂಡವರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿತು.

ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸುವ ತುರ್ತು ಏನಿತ್ತು?
ಇದೇ ವೇಳೆ ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿತು. ಅಲ್ಲದೆ, ಆಕ್ಷೇಪಣೆ ಸಲ್ಲಿಸುವಾಗ ಅರ್ಜಿಯಲ್ಲಿ ಹೇಳಲಾಗಿರುವಂತೆ ಕೆಲಸದ ಅವಧಿ ಹೆಚ್ಚಿಸಲು ಸಾರ್ವಜನಿಕ ತುರ್ತು ಏನಿತ್ತು? ಹೆಚ್ಚುವರಿ ಕೆಲಸದ ಅವಧಿಗೆ ಹೆಚ್ಚುವರಿ  ವೇತನ ನೀಡಲಾಗುತ್ತದೆಯೇ? ಕಾರ್ಖಾನೆಗಳಲ್ಲಿ ಕೊರೋನಾ ವೈರಸ್‌ ಸೋಂಕು ಹರಡದಂತೆ ಕೈಗೊಂಡಿರುವ ಸುರಕ್ಷತಾ ಕ್ರಮಗಳೇನು? ಎಂಬ ಅಂಶಗಳ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಜೂ. 5ಕ್ಕೆ ಮುಂದೂಡಿತು. 

ಇನ್ನು ಅರ್ಜಿದಾರರ ಪರ ವಕೀಲರು, ಕಾರ್ಖಾನೆಗಳ ಕಾಯಿದೆ-1984ರ ಸೆಕ್ಷನ್‌ 51 ಮತ್ತು 54ರಿಂದ ಎಲ್ಲಾ ಕಾರ್ಖಾನೆಗಳಿಗೆ ವಿನಾಯಿತಿ ನೀಡಿ ಮೇ 22ರಂದು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪರಿಣಾಮ ಕಾರ್ಮಿಕರ ಪ್ರತಿ ದಿನದ ಕೆಲಸದ ಅವಧಿ 9 ತಾಸುಗಳಿಂದ  10 ತಾಸು ಹಾಗೂ ಒಂದು ವಾರದ ಕೆಲಸದ ಅವಧಿ 48 ತಾಸುಗಳಿಂದ 60 ತಾಸುಗಳಿಗೆ ಹೆಚ್ಚಿಸಿರುವುದು ಕಾನೂನು ಬಾಹಿರ ಎಂದು ನ್ಯಾಯಾಲಯದ ಗಮನಸೆಳೆದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com