ಕನ್ನಡಿಗರಿಗೆ ಕನ್ನಡ ಮಾತನಾಡುವಂತೆ ಪ್ರೇರೇಪಿಸುವ ದಯನೀಯ ಪರಿಸ್ಥಿತಿ ನಡುವೆ ರಾಜ್ಯೋತ್ಸವ

ಒಂದು ಕಾಲದಲ್ಲಿ ತಮಿಳು, ತೆಲಗು, ಮಳೆಯಾಳಿ, ಮರಾಠಿ ಭಾಷಿಕರ ವಿರುದ್ಧ ಹೋರಾಟ ನಡೆಸಿದ್ದ. ಕನ್ನಡ ಮಾತನಾಡುವಂತೆ ಚಳವಳಿ ಹಮ್ಮಿಕೊಂಡಿದ್ದ ಕನ್ನಡಿಗರು ಇದೀಗ ಕನ್ನಡಿಗರನ್ನೇ ತಮ್ಮ ಭಾಷೆ ಉಳಿಸುವಂತೆ ಬೇಡಿಕೊಳ್ಳುವ ಸನ್ನಿವೇಶ ಸೃಷ್ಟಿಯಾಗಿದೆ.
ಕನ್ನಡ ರಾಜ್ಯೋತ್ಸವ
ಕನ್ನಡ ರಾಜ್ಯೋತ್ಸವ

ಬೆಂಗಳೂರು: ಒಂದು ಕಾಲದಲ್ಲಿ ತಮಿಳು, ತೆಲಗು, ಮಳೆಯಾಳಿ, ಮರಾಠಿ ಭಾಷಿಕರ ವಿರುದ್ಧ ಹೋರಾಟ ನಡೆಸಿದ್ದ. ಕನ್ನಡ ಮಾತನಾಡುವಂತೆ ಚಳವಳಿ ಹಮ್ಮಿಕೊಂಡಿದ್ದ ಕನ್ನಡಿಗರು ಇದೀಗ ಕನ್ನಡಿಗರನ್ನೇ ತಮ್ಮ ಭಾಷೆ ಉಳಿಸುವಂತೆ ಬೇಡಿಕೊಳ್ಳುವ ಸನ್ನಿವೇಶ ಸೃಷ್ಟಿಯಾಗಿದೆ.

ಇಂದು ರಾಜ್ಯ 65ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದೆ. ಒಂದು ತಿಂಗಳ ಕಾಲ ಎಲ್ಲೆಡೆ ಕನ್ನಡದ ಡಿಂಡಿಮ ಮೊಳಗಲಿದೆ. ಆದರೆ ಇಂದು ಕನ್ನಡ ಮಾತನಾಡುವಂತೆ, ಕನ್ನಡ ಭಾಷೆ ಬಳಕೆ ಮಾಡುವಂತೆ ಕನ್ನಡಿಗರೇ ಕನ್ನಡಿಗರನ್ನು ಒತ್ತಾಯಿಸುವ ಪರಿಸ್ಥಿತಿ ಇದೆ. ಒಂದು ಕಾಲದಲ್ಲಿ ತಮಿಳು, ತೆಲಗು, ಮಳೆಯಾಳಿ,  ಮರಾಠಿ ಭಾಷಿಕರ ವಿರುದ್ಧ ಹೋರಾಟ ನಡೆಸಿದ್ದ. ಕನ್ನಡ ಮಾತನಾಡುವಂತೆ ಚಳವಳಿ ಹಮ್ಮಿಕೊಂಡಿದ್ದ ಕನ್ನಡಿಗರು ಇದೀಗ ಕನ್ನಡಿಗರನ್ನೇ ತಮ್ಮ ಭಾಷೆ ಉಳಿಸುವಂತೆ ಬೇಡಿಕೊಳ್ಳುವ ಸನ್ನಿವೇಶ ಸೃಷ್ಟಿಯಾಗಿದೆ.

ಅದರಲ್ಲೂ ಪ್ರಮುಖವಾಗಿ ಬೆಂಗಳೂರು ನಗರ ಹಲವು ಭಾಷೆ, ಸಂಸ್ಕೃತಿ, ಜೀವನ ಪದ್ಧತಿಗೆ ಹೆಸರಾಗಿದೆ. ಒಂದು ಕಾಲದಲ್ಲಿ ಕನ್ನಡ ಭಾಷೆಗೆ ಖ್ಯಾತವಾಗಿತ್ತು ಈನಗರ. ಕನ್ನಡ ಚಿತ್ರಗಳು ಬಿಡುಗಡೆಯಾದರೆ ಇಲ್ಲಿನ ಕನ್ನಡಿಗರು ಸಂಭ್ರಮಿಸುತ್ತಿದ್ದರು. ಈಗ ಏಳೆಂಟು ಭಾಷೆಯ ಚಿತ್ರಗಳು ಏಕಕಾಲಕ್ಕೆ ತೆರೆ ಕಾಣುತ್ತಿವೆ.  ಭಾಷೆ ಉಳಿಸುವಲ್ಲಿ ಚಿತ್ರೋದ್ಯಮ ಬಹುದೊಡ್ಡ ಕೊಡುಗೆ ನೀಡಿತ್ತು. ಇದೀಗ ಕನ್ನಡ ಭಾಷೆಯ ಚಿತ್ರಗಳು ಬಿಡುಗಡೆಯಾಗಿ ಹಾಗೆಯೇ ಮರೆಯಾಗುವ ಪರಿಸ್ಥಿತಿ ಇದೆ. ಆಧುನಿಕ ಭರಾಟೆಯಲ್ಲಿ ಬೆಂಗಳೂರಿನಲ್ಲಿ ಕನ್ನಡವನ್ನು ಹುಡುಕುವ ದಯನೀಯ ಸ್ಥಿತಿ ಇದೆ. ಬೇರೆ ನಗರಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆ. ಕನ್ನಡ ನಾಡು ಕಾವೇರಿಯಿಂದ ಗೋದಾವರಿವರೆಗೆ ಹರಡಿತ್ತು ಎನ್ನುವುದನ್ನು ಕವಿ ವಾಣಿ, ಇಂತಹ ಕನ್ನಡ ನಾಡು ಜಗತ್ತಿನ ಪ್ರಜಾತಂತ್ರ ವ್ಯವಸ್ಥೆಗೆ ಬಹುದೊಡ್ಡ ಕೊಡುಗೆ ನೀಡಿದೆ ಎಂಬುದು ಸಹ ಗಮನಾರ್ಹ. ಪ್ರಜಾಪ್ರಭುತ್ವ ವ್ಯವಸ್ಥೆ ಮೊದಲು ಸ್ಥಾಪಿತಗೊಂಡಿದ್ದೇ  ಕರ್ನಾಟಕದಲ್ಲಿ. ಪ್ರಜಾಪ್ರಭುತ್ವ ವಿಚಾರದಲ್ಲಿ ನಾವು ಇಂಗ್ಲೆಂಡ್ ಅನ್ನು ಸ್ಮರಿಸುತ್ತೇವೆ. ಮ್ಯಾಗ್ನಾಕಾರ್ಟ್ ಒಪ್ಪಂದ, ಹೌಸ್ ಆಫ್ ಕಾಮರ್ಸ್, ಹೌಸ್ ಆಫ್ ಲಾರ್ಡ್ಸ್ ಹುಟ್ಟಿಕೊಂಡ ಬಗೆ ಹೀಗೆ ಹಲವು ವಿಚಾರಗಳನ್ನು ಉದಾಹರಿಸುತ್ತೇವೆ. 

ಆದರೆ ವಾಸ್ತವದಲ್ಲಿ ಬಸವಣ್ಣನರ ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೂರ್ತ ರೂಪ ದೊರೆಯಿತು. ಬಸವಣ್ಣನ ಕಾಲದ ಚಿಂತಕರ ಚಾವಡಿ ಮೂಲಕ ಪ್ರಜಾತಂತ್ರ ವ್ಯವಸ್ಥೆಯ ಬೀಜ ಬಿತ್ತಲಾಯಿತು. ಯಾವುದೇ ಸಮಸ್ಯೆಗೆ ಚರ್ಚೆ, ಸಂವಾದದ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎನ್ನುವುದಕ್ಕೆ ಆಗಲೇ ಸ್ಪಷ್ಟ  ರೂಪ ದೊರೆಯಿತು. ಆಗಿನ ಚಿಂತಕರ ಚಾವಡಿಯ ಮೊದಲ ಸಭಾಧ್ಯಕ್ಷ ಅಲ್ಲಮ ಪ್ರಭು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವವರ ನಾವು ಅಲ್ಲಮರ ನೇತೃತ್ವದ ಸಭಾ ಮಂಟಪಗಳಲ್ಲಿ ಕನ್ನಡದಲ್ಲಿ ಚರ್ಚೆಗಳಾಗುತ್ತಿದ್ದವು. ಇದೇ ಭಾಗದ ಐಹೊಳೆ, ಪಟ್ಟದ ಕಲ್ಲಿನ ವಾಸ್ತುಶಿಲ್ಪಗಳು ಸಂಸತ್ತಿನ ಕಟ್ಟಡ ನಿರ್ಮಾಣಗೊಳ್ಳಲು  ಪ್ರೇರಣೆಯಾಗಿವೆ. ಬಳಿಕ ಮೈಸೂರಿನ ಅರಸರ ಕಾಲದ ಪ್ರಜಾಪ್ರತಿನಿಧಿ ಸಭೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪುಷ್ಠಿ ನೀಡಿತು. ಇಂತಹ ಭವ್ಯ ನಾಡು ಕನ್ನಡ ನಾಡು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ.

ಆದರೆ ಇದೇ ಪರಂಪರೆ ಮುಂದುವರೆಸಬೇಕಾಗಿರುವ ರಾಜಕೀಯ ವ್ಯವಸ್ಥೆಯಲ್ಲೂ ಸಹ ಕನ್ನಡ ಹುಡುಕುವ  ಪರಿಸ್ಥಿತಿ ಇದೆ. ಯಾವುದೇ ರಾಜಕೀಯ ಪಕ್ಷ ಕನ್ನಡಕ್ಕೆ ಪ್ರಧಾನ ಆದ್ಯತೆ ನೀಡುತ್ತಿಲ್ಲ. ತನ್ನ ಪ್ರಣಾಳಿಕೆಗಳಲ್ಲಿ ಕನ್ನಡಪರ ಸಮಸ್ಯೆಗಳಿಗೆ ಪರಿಹಾರ ನೀಡುವ ವಾಗ್ದಾನ ಕೊಡುತ್ತಿಲ್ಲ. ಆಡಳಿತ ಭಾಷೆ ಕನ್ನಡವಾದರೂ ಅದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಮತಬ್ಯಾಂಕ್ ರಾಜಕಾರಣದಲ್ಲಿ ತೊಡಗಿರುವ  ರಾಜಕೀಯ ನಾಯಕರು ಕನ್ನಡ, ಕನ್ನಡಿಗರು ಎಂದರೆ ಅಸಡ್ಡೆಯಿಂದ ವರ್ತಿಸುವುದನ್ನು ನೋಡುತ್ತಿದ್ದಾರೆ. ದುರ್ದೈವವೆಂದರೆ ಕನ್ನಡ ಇದೀಗ ಮತಗಳನ್ನು ತಂದುಕೊಡುವ ಭಾಷೆಯಾಗಿಯೂ ಉಳಿದಿಲ್ಲ ಎಂದು ರಾಜಕಾರಣಿಗಳೇ ಸಂಕೋಚವಿಲ್ಲದೇ ಹೇಳಿಕೊಳ್ಳುತ್ತಿದ್ದಾರೆ.

ಇರಲಿ ನವೆಂಬರ್ ತಿಂಗಳಿಗೆ ಕನ್ನಡಿಗರ ಭಾವಕೋಶದಲ್ಲಿ ವಿಶಿಷ್ಠ ಸ್ಥಾನವಿದೆ. ನಾಡಾಭಿಮಾನಿಗಳಿಗೆ ನವೆಂಬರ್ ಎಂದರೆ ಕನ್ನಡ ಮಾಸ. ಕನ್ನಡಾಭಿಮಾನ ಬಹಿರಂಗವಾಗಿ ಪ್ರಕಟವಾಗುವ ತಿಂಗಳಿದು. ಎಲ್ಲೆಲ್ಲೂ ಕನ್ನಡ ಬಾವುಟಗಳು ಹಾರಾಡುತ್ತವೆ. ಕನ್ನಡ ಕಾಣುತ್ತದೆ ಆದರೆ ಬಹಿರಂಗದ ಬದಲು ಅಂತರಂಗವಾಗಿ  ಕನ್ನಡ ಡಿಂಡಿಮ ಮೊಳಗಬೇಕಾಗಿದೆ. ರಾಜ್ಯೋತ್ಸವ ಘೋಷಣೆ-ಭಾಷಣಗಳಿಗೇ ಸೀಮಿತವಾಗದೇ ಕನ್ನಡ ಜಾಗೃತಿಗೆ ವೇದಿಕೆ ಆಗಬೇಕಾಗಿದೆ.

ಕನ್ನಡದ ಈಗಿನ ಪರಿಸ್ಥಿತಿ ಕುರಿತು ಯುಎನ್ಐ ಕನ್ನಡ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅಪ್ಪಟ ಕನ್ನಡ ಕಾರ್ಯಕರ್ತ, ಕನ್ನಡ ಪರ ಚಿಂತಕ, ಸಾಹಿತಿ ರಾ.ನಂ.  ಚಂದ್ರಶೇಖರ್, ಕರ್ನಾಟಕ ಏಕೀಕರಣವಾಗಿ ಆರೂವರೆ ದಶಗಳ ನಿರಂತರ ಕನ್ನಡ ಹೋರಾಟಗಳ ನಂತರವೂ ಕನ್ನಡ ಸಮಸ್ಯೆಗಳೆಲ್ಲ ಪರಿಹಾರವಾಗಿಲ್ಲ. ಕನ್ನಡ ’ಅನಾಥ’ ಕನ್ನಡಿಗ ’ಸ್ಥಳಿಯ ನಿರಾಶ್ರಿತ’ ಎನ್ನವ ಸ್ಥಿತಿ ಮುಂದುವರೆದಿದೆ. ಕನ್ನಡಪರ ಹೋರಾಟ ನಡೆಯದಿದ್ದರೆ ಸ್ಥಿತಿ ಇನ್ನಷ್ಟು ಹೀನಾಯವಾಗಿರುತ್ತಿತ್ತು.  ನಾಡಿನ ಜನಪ್ರಿಯ ಮುಖ್ಯಮಂತ್ರಿ ಯಾಗಿದ್ದ ರಾಮಕೃಷ್ಣ ಹೆಗಡೆಯವರೇ ’ಕರ್ನಾಟಕ ಸರ್ಕಾರವು ಮಾಡಿರುವ ಕನ್ನಡ ಕೆಲಸಗಳು ಕನ್ನಡ ಹೋರಾಟಗಾರ ಒತ್ತಡದಿಂದ ಅದದ್ದೆ ಹೊರತು, ಸ್ವಯಂ ಪ್ರೇರಣೆಯಿಂದಲ್ಲ’ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದರು.

ಕೇಂದ್ರ ಸರ್ಕಾರ ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಪ್ರಕಟಿಸಿ ದಶಕ ಕಳೆದಿದೆ. ಆದರೆ, ಸಿಗಬೇಕಾದ ಸವಲತ್ತುಗಳನ್ನು ಪಡೆದಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬೇಕೆಂದು ಹೋರಾಟ ನಡೆಸಿದವರು, ತಮಿಳಿಗೆ ಸಿಕ್ಕರುವ ಸವಲತ್ತಗಳು ಕನ್ನಡಕ್ಕೆ ಸಿಕ್ಕದೆಯೇ? ಎಂಬುದನ್ನು  ತಿಳಿದುಕೊಳ್ಳುವ ಗೋಜಿಗೆ ಹೋಗಲೇ ಇಲ್ಲ. ಇಂದಿಗೂ ಶಾಸ್ತ್ರೀಯ ಭಾಷೆಗೆ ಕೇಂದ್ರ ಸರ್ಕಾರ ನೀಡುವ ಸವಲತ್ತುಗಳನ್ನು ಉಪಯೋಗಿಸಿ ಕೊಂಡು ಅರ್ಥಪೂರ್ಣವಾಗಿ ಕೆಲಸ ಮಾಡಲು ಸಾದ್ಯವಾಗಲೇ ಇಲ್ಲ ಎನ್ನುವುದು ಕನ್ನಡಿಗರ ದುರ್ದೃವ ಎಂದು ವಿಷಾದ ವ್ಯಕ್ತಪಡಿಸುತ್ತಾರೆ.

ಕನ್ನಡ ಹೋರಾಟದ ಫಲವಾಗಿ  ರೂಪುಗೊಂಡ ಡಾ. ಸರೋಜಿನಿ ಮಹಿಷಿ ವರದಿ ಮೂರು ದಶಕಗಳು ಕಳೆದ ನಂತರವೂ ಅನುಷ್ಠಾನಕ್ಕೆ ಬರಲೇ ಇಲ್ಲ. ಕನ್ನಡ ಭಾಷೆಯ ಉಳಿವಿಗಾಗಿ. ಕನ್ನಡಿಗರ ಜಾಗೃತಿಗಾಗಿ 30ಕ್ಕೂ ಹೆಚ್ಚು ವರದಿಗಳು ಸರ್ಕಾರದ ಬಳಿದ್ದು, ಇವುಗಳ ಪ್ರಮಾಣಿಕ ಅನುಷ್ಠಾನವಾಗಬೇಕಾಗಿದೆ. ಜಾಗತೀಕರಣದ ಪರಿಣಾಮ ಸರೋಜಿನಿ  ಮಹಿಷಿ ವರದಿ ಅನುಷ್ಠಾನ ಸಾಧ್ಯವಿಲ್ಲ ಅನ್ನುವ ಸ್ಥಿತಿ ನಿರ್ಮಾಣವಾದಾಗ 2016ರಲ್ಲಿ ರಾಜ್ಯ ಸರ್ಕಾರ ಇಂದಿನ ಕಾಲಮಾನಕ್ಕೆ ಹೊಂದುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ತಕ್ಷರ ನೇತೃತ್ವದಲ್ಲಿ ಸಮಿತಿ ರಚಿಸಿತು. ಆ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಸಿ 3 ವರ್ಷಗಳಾಯಿತು. ಪರಿಷ್ಕೃತ ಮಹಿಷಿ ವರದಿಯನ್ನು  ಜಾರಿಗೆ ತರುವ ಮತ್ತು ಅದಕ್ಕೆ ಕಾನೂನು ಬಲತಂದು ಕೊಡುವ ಪ್ರಯತ್ನವೇ ಈವರೆಗೆ ಆಗಿಲ್ಲ ಎನ್ನುತ್ತಾರೆ ರಾ.ನಂ. ಚಂದ್ರಶೇಖರ್.

ವಿವಿಧ ಆಡಳಿತಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರನ್ನು ಒಂದುಗೂಡಿಸಲು ನಡೆಯುತ್ತಿದ್ದ ಏಕೀಕರಣ ಚಳವಳಿ ಸಂದರ್ಭದಲ್ಲಿ ಕನ್ನಡಿಗರನ್ನು ಎಚ್ಚರಿಸುವ ಅಗತ್ಯವಿತ್ತು. ಆಗ ’ಕನ್ನಡದ ಕಣ್ವ’ ಎಂದೇ ಗುರುತಿಸಲ್ಪಡುತ್ತಿದ್ದ ಬಿ.ಎಂ.ಶ್ರೀ. 1911ರಲ್ಲಿ ’ಕನ್ನಡ ಮಾತು ತಲೆ ಎತ್ತುವ ಬಗೆ’ ಎಂಬ ಉಪನ್ಯಾಸವನ್ನು ಧಾರವಾಡದ  ವಿದ್ಯಾವರ್ಧಕ ಸಂಘದಲ್ಲಿ ನೀಡಿದರು. ಅದು ಕನ್ನಡಿಗರನ್ನು ತಾಯಿನುಡಿಯ ಬಗ್ಗೆ ಚಿಂತಿಸುವಂತೆ ಮಾಡುವಲ್ಲಿ ಸಫಲವಾಯಿತು. ಆ ಭಾಷಣ ಮಾಡಿ 109 ವರ್ಷಗಳು ಕಳೆದ ನಂತರವೂ ಕನ್ನಡ ಭಾಷೆಯು ಇನ್ನೂ ಆತಂಕದ ನೆರಳಲ್ಲಿಯೇ ಇದೆ. ಪ್ರಸ್ತುತ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಳ ಅಗತ್ಯ  ಈಗಲೂ ಇದೆ. ಹೋರಾಟ ಎನ್ನುವುದಕ್ಕಿಂತಲೂ ಕನ್ನಡಪರ ಕಾಳಜಿ ಹಾಗೂ ಜಾಗೃತಿಯ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿ ಕಾಣತೊಡಗಿದೆ ಎನ್ನುತ್ತಾರೆ.

ಯಾವುದೇ ಕನ್ನಡಪರ ಚಟುವಟಿಕೆಗಳಿಗೂ ಜನರೇ ಬರುತ್ತಿಲ್ಲ. ಹಾಗೆ ಬರುವವರಲ್ಲೂ ಹಿರಿಯರೇ ಹೆಚ್ಚಿರುತ್ತಾರೆ. ಅಂತಹ ಕಡೆ ಕನ್ನಡ ಯುವಕರನ್ನು ಕಾಣುವುದು ದುಸ್ತರವಾಗುತ್ತಿದೆ. ಕನ್ನಡದ ಬಗ್ಗೆ ಯುವ ಜನತೆ ಆಸಕ್ತಿ ತೋರುತ್ತಿಲ್ಲ. ಯುವ ಜನತೆ ಕನ್ನಡದ ಕಟ್ಟಾಳುಗಳಾಗಿ ರೂಪುಗೊಳ್ಳಲು ಮುಂದಾಗಿಲ್ಲ. ನಮ್ಮ  ಮಕ್ಕಳಿಗೆ ನಮ್ಮ ತಾಯಿ ಭಾಷೆಯ ಮಹತ್ವ, ಸಂಸ್ಕೃತಿಯ ಹಿರಿಮೆಯನ್ನು ತಿಳಿಸುತ್ತಿಲ್ಲ. ಕನ್ನಡದ ಆದರ್ಶ ವ್ಯಕ್ತಿಗಳ, ಪುರಾಣ ಪುರುಷರ, ನಮ್ಮ ಭವ್ಯ ಇತಿಹಾಸಗಳನ್ನು ಮನೆಯಲ್ಲಿ ಹೇಳುತ್ತಿಲ್ಲ. ಇಂತಹ ವಾತಾವರಣದಲ್ಲಿ ಬೆಳೆದ ಮಕ್ಕಳಿಗೆ ತಮ್ಮತನ ಎಂದರೇನೆಂಬ ಅರಿವಾಗಲೀ, ಹೆಮ್ಮಯಾಗಲೀ ಇರಲು  ಸಾಧ್ಯವಾಗುತ್ತಿಲ್ಲ. ’ಕನ್ನಡವಾದರೇನು? ಇತರ ಭಾಷೆಯಾದರೇನು? ತಮಗೆ ಐಷಾರಾಮಿ ಜೀವನದ ಸವಲತ್ತುಗಳು ಸಿಕ್ಕರಾಯಿತು’ ಎಂಬ ಭಾವನೆಯನ್ನು ಈ ಜನ ಸಮೂಹ ಬೆಳೆಸಿಕೊಂಡಿದೆ.

ಈಗ ಬೇಕಾಗಿರುವ ಶಿಕ್ಷಣ ಅಂದರೆ, ಅದರಿಂದ ಉದ್ಯೋಗ, ಉದ್ಯೋಗದಿಂದ ಹಣ ಹಾಗೂ ಹಣದಿಂದ ವಸ್ತುಗಳನ್ನು  ಕೊಳ್ಳುವ ಕೊಳ್ಳುಬಾಕತನದ ಹಪಾಹಪಿಯೆ ಎದ್ದು ಕಾಣುತ್ತಿದೆ. ಇವೆಲ್ಲದರ ಮಧ್ಯೆ ಕನ್ನಡ ಭಾಷೆ, ಅದರ ಮಹತ್ವ, ಅದರ ಸೊಗಡು ಯಾರಿಗೂ ಬೇಕಿಲ್ಲ. ಮರವು ರೆಂಬೆ-ಕೊಂಬೆಗಳನ್ನು ಚಾಚಿ ಬೆಳೆಯಲು ಬೇಕಾದ ಬೇರಿನ ಮಹತ್ವವನ್ನು ಯುವ ಜನಾಂಗಕ್ಕೆ ತಿಳಿಹೇಳುವ ಸಾಂಸ್ಕೃತಿಕ ಹೋರಾಟದ ಅಗತ್ಯತೆ  ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಈ ನಾಡು, ಈ ಭಾಷೆ, ಈ ಸಂಸ್ಕೃತಿ, ಈ ಜೀವನ ವಿಧಾನ, ಇಲ್ಲಿನ ಪರಿಸರ, ಇಲ್ಲಿನ ಕಲೆ, ಸಾಹಿತ್ಯ, ತ್ಯಾಗ, ಶ್ರಮ ಹಾಗೂ ಬಲಿದಾನಗಳಿಂದ ಕನ್ನಡ ಭಾಷೆ ಉಳಿದುಕೊಂಡು ಬಂದಿದೆ. ಇಂತಹ ಸಂಗತಿಗಳನ್ನು ನಮ್ಮ ಯುವ ಜನತೆಗೆ ಮನಮುಟ್ಟವ ರೀತಿಯಲ್ಲಿ ತಿಳಿ ಹೇಳುವ  ಶಿಕ್ಷಣದ ಅವಶ್ಯಕತೆಯಿದೆ.

ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡಕ್ಕೆ ಅಪಾಯ ಇದೆ ಎನ್ನುವುದು ಸಹ ಭ್ರಮೆಯಾಗುತ್ತದೆ. ಕನ್ನಡ ಉಳಿದೇ ಉಳಿಯುತ್ತದೆ. ಅದು ಯೋಚಿಸುವವರ ಆತಂಕವಷ್ಟೆ ಎಂದು ಹೇಳುವ ಆಶಾವಾದಿಗಲೂ ಇದ್ದಾರೆ. ಹಾಗೆ ಕನ್ನಡ ಭಾಷೆ ತೀವ್ರ ಆತಂಕದಲ್ಲಿದೆ, ಅಳಿವಿನ ಅಪಾಯಲ್ಲಿರುವ ಭಾಷೆಗಳ  ಪಟ್ಟಿಯಲ್ಲಿ ಕನ್ನಡವೂ ಸೇರಿದೆ ಅನ್ನವುದೂ ವಿಪರೀತ ಚಿಂತೆಗೆ ಕಾರಣವಾಗಿದೆ. ವಾಸ್ತವವಾಗಿ ಕಾಲಕಾಲಕ್ಕೆ ಆತಂಕಗಳು ಸೃಷ್ಟಿಯಾಗುತ್ತವೆ. ಅದು ಜೀವಂತಿಕೆಯ ಸಂಕೇತ ಎಂದು ರಾ.ನಂ.ಚಂದ್ರಶೇಖರ್ ಅಭಿಪ್ರಾಯಪಡುತ್ತಾರೆ.


ಏನೇ ಆದರೂ ಕನ್ನಡ ಭಾಷೆ ತುಂಬ ಆತಂಕದಲ್ಲಿರುವ ದಿನಗಳಿವು. ಸಾವಿರಾರು ವರ್ಷಗಳ ಇತಿಹಾಸವಿರುವ 4-5 ಕೋಟಿ ಜನ ಮಾತಾಡುವ ಕನ್ನಡದ ಬಗ್ಗೆ ಆಗಾಗ ಆತಂಕದ ಮಾತುಗಳು ಕೇಳಿಬರುತ್ತವೆ. ಈಗ ಕನ್ನಡ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಭಾಷೆಯ ಮಟ್ಟಿಗೆ ಬೆಳವಣಿಗೆ ಎನ್ನುವುದು  ನಿರಂತರವಾಗಿ ಪ್ರವಹಿಸುತ್ತಿರಬೇಕು. ಭಾಷೆ ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ. ಅದು ನಮ್ಮ ನೆಲದ ಹಾಗೂ ಅನೇಕ ತಲೆಮಾರುಗಳ ಸಂಸ್ಕೃತಿಯನ್ನು ಜತನದಿಂದ ಕಾಪಿಟ್ಟುಕೊಂಡು ಬಂದ ಮಾಧ್ಯಮ. ಆದ್ದರಿಂದಲೇ ಭಾಷೆಗೂ ನೆಲದ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ. ಇಂತಹದೊಂದು ಅನನ್ಯ  ಬಂಧವಿಲ್ಲದೇ ಹೋದಲ್ಲಿ ಭಾಷೆ ಮಾತನಾಡುವ ಸಂಕೇತವಾಗಿ ಮಾತ್ರ ಉಳಿದು ಜನಮಾನಸದಿಂದ ಬಹುಬೇಗ ಮರೆಯಾಗುವ ಅಪಾಯ ಇರುತ್ತದೆ ಅನ್ನುತ್ತಾರೆ. ಭಾಷಾ ವಿಜ್ಞಾನಿಗಳು.

ಬಹಳ ವರ್ಷಗಳಿಂದ ಕೇಳಿಬರುತ್ತಿರುವ ಪ್ರಶ್ನೆಯಿದು. ಉತ್ತರ ಸರಳವೂ ಹೌದು; ಸಂಕೀರ್ಣವೂ ಹೌದು. ಸರ್ಕಾರ, ಕನ್ನಡಪರ ಸಂಘ/ಸಂಸ್ಥೆಗಳು ಕನ್ನಡವನ್ನು ಉಳಿಸಿ-ಬೆಳಸಬೇಕು. ಸಾಮಾನ್ಯನಾದ ನಾನೇನು ಮಾಡಲು ಸಾಧ್ಯ? ಎಂಬ ಮನೋಭಾವಕ್ಕೆ ಅಂಟಿಕೊಂಡರೆ ವೈಯಕ್ತಿಕ ಹೊಣೆಗಾರಿಕೆ ಇರುವುದಿಲ್ಲ.  ಸಂಘಟನೆಗಳಿಂದ ಮಾತ್ರ ಕನ್ನಡ ಉದ್ದಾರ ಅನ್ನುವುದು ಸ್ವಾರ್ಥ ರಾಜಕೀಯ, ಪ್ರಚಾರದ ಗೀಳು ಇರುವವರ ಸೃಷ್ಟಿ. ಇವನ್ನು ಬಿಟ್ಟು ಯೋಚಿಸಿದಾಗ ಹಲವು ಸಾಧ್ಯತೆಗಳು ಹೊಳೆಯುತ್ತವೆ. ನಮ್ಮ ಮಾನೋಭಾವ, ಯೋಚಿಸುವ ಮಾದರಿಯನ್ನು ಬದಲಿಸಿಕೊಂಡರೆ ಸಾಕು. ಬೇರೆಯವರು ಕನ್ನಡಕ್ಕೆ ಏನು  ಮಾಡಬಹುದು ಅನ್ನುವುದಕ್ಕಿಂತ ವೈಯಕ್ತಿಕ ನೆಲೆಯಲ್ಲಿ ನಾನೇನು ಮಾಡಬಹುದು ಎಂದು ಚಿಂತಿಸಲು ಆರಂಭಿಸಿದರೆ ’ಕನ್ನಡ ಬೆಳೆಸುವುದು ಹೇಗೆ ಅನ್ನುವುದಕ್ಕೆ ಹಲವು ಮಾರ್ಗ ಹೊಳೆಯುತ್ತದೆ.

’ಕನ್ನಡವ ಕಾಪಾಡು ಕನ್ನಡದ ಕಂದಾ; ಕನ್ನಡವ ಕಾಪಾಡು ನನ್ನ ಆನಂದ! ಜೋಗುಳದ ಹರಕೆಯಿದು ಮರೆಯದಿರು  ಚಿನ್ನಾ; ಮರತೆಯಾದರೆ ಅಯ್ಯೋ ಮರೆತಂತೆ ನನ್ನ!’ ಅನ್ನುವ ಕವಿವಾಣಿ ನಮ್ಮಲ್ಲಿ ಸದಾ ಜಾಗೃತವಾಗಿರುವಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ಕನ್ನಡದ ವಾತಾವರಣವನ್ನು ಉಳಿಸಿಕೊಳ್ಳಬೇಕು. ಮಕ್ಕಳಿಗೆ ಯಾವ ಅಳುಕು, ಕಿಳರಿಮೆಯಿಲ್ಲದೆ ಕನ್ನಡವನ್ನು ಸಹಜವಾಗಿ ಬಳಸುವ ಮನೋಭಾವವನ್ನು  ರೂಢಿಸಿಕೊಳ್ಳಲು ಮನೆಯಲ್ಲಿ ಪೂರಕವಾದ ವಾತಾವರಣ ಇರುವಂತೆ ನೋಡಿಕೊಳ್ಳಬೇಕು. ವ್ಯಕ್ತಿ ನೆಲೆಯಲ್ಲಿ ಪ್ರಜ್ಞಾಪೂರ್ವಕವಾಗಿ ದಿನ ನಿತ್ಯದ ವ್ಯವಹಾರದಲ್ಲಿ ಕನ್ನಡವನ್ನು ಬಳಸುವ ದೃಢ ನಿರ್ಧಾರ ಮಾಡಿದರೆ ಸಾಕು. ಕನ್ನಡ ಭಾಷೆಯ ಬಗೆಗೆ ಕೇಳಿಬರುತ್ತಿರುವ ಆತಂಕದ ಸೊಲ್ಲು ಅಡಗುತ್ತದೆ.


ಹೊರಗಿನಿಂದ ಬಂದ ಪರಭಾಷಿಕರು ಕನ್ನಡ ಕಲಿಯಲು ಪ್ರಯತ್ನಿಸುತ್ತಿರುವಾಗ ಅವರು ಮಾಡುವ ತಪ್ಪುಗಳಿಗೆ ಹಳಿಯಬೇಡಿ. ಇತ್ತೀಚಿನ ದಿನಗಳಲ್ಲಿ ಕರ್ನಾಟಕಕ್ಕೆ ಬಂದಿರುವ ಪರ ರಾಜ್ಯದವರು ಕನ್ನಡ ಕಲಿಯಲು ಆಸಕ್ತಿ ತೋರುತ್ತಿದ್ದಾರೆ. ಅವರು ಮಾತನಾಡುವಾಗ ಸಹಜವಾಗಿ ಅವರ ತಾಯಿ ಭಾಷೆಯ ಛಾಯೆ,  ಮಧ್ಯೆ ಪದ ಸೇರಿಸುವುದು ಇರುತ್ತದೆ. ಅದನ್ನು ನಾವು ಸಹಿಸಿಕೊಂಡು ಪ್ರೋತ್ಸಾಹಿಸಿ, ಅವರಿಗೆ ಮನನೋಯದ ರೀತಿಯಲ್ಲಿ ತಿದ್ದಬೇಕು. ಅದು ಬಿಟ್ಟು ’ನಮ್ಮ ಕನ್ನಡ ಕೊಲೆ ಮಾಡಬೇಡ’, ’ಇಂಗ್ಲಿಷ್/ಹಿಂದಿಯಲ್ಲಿ ಮಾತಾಡು’ ಎನ್ನುವುದು ಮಹಾತಪ್ಪು. ಹಾಗೇನೋಡಿದರೆ ಬಹಳಷ್ಟು ಜನ ಇಂಗ್ಲಷ್‌ನ್ನು ತಪ್ಪು  ತಪ್ಪಾಗಿಯೇ ಮಾತನಾಡುತ್ತಾರೆ. ಅದನ್ನು ಸಹಿಸಿಕೊಳ್ಳುವುದಿಲ್ಲವೆ. ಶುದ್ಧ ಕನ್ನಡ ಎನ್ನುವ ಮಡಿವಂತಿಕೆಯೂ ಬೇಡ, ಅನಗತ್ಯವಾಗಿ ಹೆಚ್ಚು ಇಂಗ್ಲಿಷ್ ಬೆರಸಿದ ಕಂಗ್ಲಿಷ್ ಬೇಡವೇ ಬೇಡ. ಒಟ್ಟಿನಲ್ಲಿ ಕನ್ನಡ ಉಳಿಸಿ ಬೆಳೆಸುವ ಮನೋಭಾವನೆಯನ್ನು ನಾವೆಲ್ಲರೂ ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎನ್ನುತ್ತಾರೆ  ರಾ.ನಂ. ಚಂದ್ರಶೇಖರ್.

-ನಂಜುಂಡಪ್ಪ.ವಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com