ಬೆಂಗಳೂರು ಗಲಭೆ ಪ್ರಕರಣ: ಮಾಜಿ ಮೇಯರ್ ಸಂಪತ್ ರಾಜ್'ಗಾಗಿ ತೀವ್ರಗೊಂಡ ಹುಡುಕಾಟ, ಕೇರಳಕ್ಕೆ ತೆರಳಿದ ವಿಶೇಷ ಪೊಲೀಸ್ ಪಡೆ

ಕೆ.ಜೆ. ಹಳ್ಳಿ, ಡಿ.ಜೆ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ದೋಷಾರೋಪಪಟ್ಟಿಯಲ್ಲಿ ಹೆಸರಿರುವ ಮಾಜಿ ಮೇಯರ್ ಸಂಪತ್ ರಾಜ್ ಕೇರಳ ರಾಜ್ಯಕ್ಕೆ ಪರಾರಿಯಾಗಿರುವ ಶಂಕೆಗಳು ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಕೇರಳ ರಾಜ್ಯಕ್ಕೆ ವಿಶೇಷ ಪೊಲೀಸ್ ಪಡೆ ತೆರಳಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 
ಮಾಜಿ ಮೇಯರ್ ಸಂಪತ್ ರಾಜ್
ಮಾಜಿ ಮೇಯರ್ ಸಂಪತ್ ರಾಜ್

ಬೆಂಗಳೂರು: ಕೆ.ಜೆ. ಹಳ್ಳಿ, ಡಿ.ಜೆ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ದೋಷಾರೋಪಪಟ್ಟಿಯಲ್ಲಿ ಹೆಸರಿರುವ ಮಾಜಿ ಮೇಯರ್ ಸಂಪತ್ ರಾಜ್ ಕೇರಳ ರಾಜ್ಯಕ್ಕೆ ಪರಾರಿಯಾಗಿರುವ ಶಂಕೆಗಳು ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಕೇರಳ ರಾಜ್ಯಕ್ಕೆ ವಿಶೇಷ ಪೊಲೀಸ್ ಪಡೆ ತೆರಳಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಮಾಜಿ ಕಾರು ಚಾಲಕನೊಂದಿಗೆ ಸಂಪರ್ ರಾಜ್ ಅವರು ನಗರವನ್ನು ತೊರೆಯಲು ಯೋಜನೆ ರೂಪಿಸಿದ್ದರು. ನಂತರ ಕ್ಯಾಬ್ ವೊಂದನ್ನು ಬುಕ್ ಮಾಡಿಕೊಂಡು ನಗರ ತೊರೆದಿದ್ದಾರೆ. ಉದ್ದೇಶಪೂರ್ವಕವಾಗಿಯೇ ಆಸ್ಪತ್ರೆಯ ಸಿಬ್ಬಂದಿಗಳು ಮಧ್ಯರಾತ್ರಿ ಬಿಡುಗಡೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಶೀಘ್ರದಲ್ಲಿಯೇ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ. ಈಗಾಗಲೇ ಸಂಪತ್ ರಾಜ್ ಅವರ ಫೋನ್ ಟ್ರ್ಯಾಕ್ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಸಂಪತ್ ರಾಜ್ ಅವರನ್ನು ಬಂಧನಕ್ಕೊಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಗಲಭೆ ವೇಳೆ ಪುಲಿಕೇಶಿ ನಗರ ಕ್ಷೇತ್ರದ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಪ್ರಕರಣದಲ್ಲಿ ಮಾಜಿ ಮೇಯರ್ ಹಾಗೂ ಸ್ಥಲೀಯ ಕಾಂಗ್ರೆಸ್ ಮುಖಂಡ ಸಂಪತ್ ರಾಜ್ ಅವರು ಆರೋಪಿಯಾಗಿದ್ದಾರೆ. 

ಈ ಪ್ರಕರಣ ಸಂಬಂಧ ಒಂದು ಬಾರಿ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದ ಅವರು, 2ನೇ ಬಾರಿ ನೋಟಿಸ್ ನೀಡಿದ್ದರು. ಆದರೆ, ಕೊರೋನಾ ಸೋಂಕು ನೆಪ ಹೇಳಿ ವಿಚಾರಣೆಗೆ ಗೈರಾಗಿದ್ದ ಅವರು, ಸೆ.14ರಂದು ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಬ್ಯಾಪಿಸ್ಟ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. 

ಆ ಖಾಸಗಿ ಆಸ್ಪತ್ರೆಗೆ ಮಾಜಿ ಮೇಯರ್ ಆರೋಗ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡುವಂತೆ ಸಿಸಿಬಿ ಪತ್ರ ಬರೆದಿತ್ತು. ಆದರೆ, ಇದಕ್ಕೆ ಆಸ್ಪತ್ರೆಯ ವೈದ್ಯರು ಸೂಕ್ತವಾಗಿ ಸ್ಪಂದನೆ ನೀಡಿರಲಿಲ್ಲ. ಕೊನೆಗ ಸುದೀರ್ಘಾವಧಿ ಆಸ್ಪತ್ರೆಯಲ್ಲಿರುವ ಮಾಜಿ ಮೇಯರ್ ಆರೋಗ್ಯದ ಬಗ್ಗೆ ಐವರು ತಜ್ಞ ವೈದ್ಯರ ತಂಡದಿಂದ ಪರಿಶೀಲಿಸಿ ವರದಿ ಸಲ್ಲಿಸುವಂತೆ ರಾಜ್ಯ ಆರೋಗ್ಯ ಇಲಾಖೆಗೆ ಸಿಸಿಬಿ ಪತ್ರ ಬರೆದು ಕೋರಿತು. ಈ ಬೆಳವಣಿಗೆ ಸಂಪತ್ ರಾಜ್ ಅವರಿಗೆ ನಡುಕ ಹುಟ್ಟಿಸಿತ್ತು ಎಂದು ಹೇಳಲಾಗುತ್ತಿದೆ. 

ಆರೋಗ್ಯ ಇಲಾಖೆಗೆ ಸಿಸಿಬಿ ಪತ್ರ ಬರೆದ ಬೆನ್ನಲ್ಲೇ ಸಂಪತ್ ರಾಜ್ ಅವರು, ಅ.3ರಂದು ರಾತ್ರೋರಾತ್ರಿ ಬಿಡುಗಡೆಯಾಗಿದ್ದರು. ಅ.25ರಂದು ರಾತ್ರಿ ಎರಡನೇ ಬಾರಿಗೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಆನಂತರ ಯಾರೊಂದಿಗೂ ಸಂಪರ್ಕಕ್ಕೆ ಬಂದಿಲ್ಲ. ಬಹುಶಃ ನಗರ ತೊರೆದು ಹೊರ ರಾಜ್ಯಗಳಲ್ಲಿ ಆರೋಪಿ ತಲೆಮರೆಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಹೀಗಾಗಿ ಸಂಪತ್ ರಾಜ್ ಪತ್ತೆಗೆ ಸಿಸಿಬಿ ವಿಶೇಷ ತಂಡವನ್ನು ರಚಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com